ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 110
ಗ್ರಂಥ ರಚನೆ - ಚರಣದಾಸ
ಮರ್ಮ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಿವಾಸದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಿಂದ ಒಬ್ಬ ಹುಡುಗ ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದನು. ತನ್ನ ಭಕ್ತಿ ಹಾಗೂ ನಡವಳಿಕೆಯಿಂದ ಗುರುನಾಥರಿಗೆ ಸಮೀಪದವನಾಗಿದ್ದ ಆತ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದನು. ಒಮ್ಮೆ ಓರ್ವ ಯತಿವೇಷಧಾರಿಯೊಬ್ಬರು ಅವನಲ್ಲಿಗೆ ಬಂದರು.
ಪ್ರತಿ ಸನ್ಯಾಸಿಗಳನ್ನು ಗೌರವಿಸಬೇಕೆಂಬ ಗುರುವಾಕ್ಯದಂತೆ ಆ ಹುಡುಗನು ಆ ಯತಿವೇಷಧಾರಿಯನ್ನು ಆದರಿಸಿ ಉಪಚರಿಸಿದನು. ಸಂತುಷ್ಟರಾದ ಆ ಯತಿವೇಷಧಾರಿಯು ಆ ಹುಡುಗನನ್ನು ಹೀಗೆ ಕೇಳಿದರು.
"ನಾವು ಇಲ್ಲಿಂದ ಆಶ್ರಮ ತಲುಪಬೇಕಾಗಿದೆ. ವಾಹನ ಸೌಲಭ್ಯವಿಲ್ಲ. ಸೌಲಭ್ಯ ಮಾಡಿ ಕೊಡಬಹುದೇ?"
ಆ ಹುಡುಗ ಎರಡೆಣಿಸದೇ ತನ್ನ ಸ್ವಂತ ಕಾರನ್ನೇ ಅವರಿಗೆ ನೀಡಿ ನಮಸ್ಕರಿಸಿ ಕಳಿಸಿಕೊಟ್ಟನು.
ಇದಾಗಿ ಕೆಲ ಸಮಯದ ನಂತರ ಅವನ ಅಂಗಡಿಗೆ ಬಂದ ಗುರುನಾಥರು ಈ ವಿಷಯ ತಿಳಿದು "ಏನಯ್ಯಾ ಯತಿವೇಷಧಾರಿ ಬಂದು ಏನ್ ಕೇಳಿದ್ರು ಕೊಡ್ತೀಯಾ? ನಿನ್ ಜೀವನದ ಬಗ್ಗೆ ಕಾಳಜಿ ಬೇಡ್ವೇ?" ಎಂದು ಗದರಿಸಿದರು.
ಆಗ ಆ ಹುಡುಗ "ಏನ್ ಗುರುಗಳೇ ಎಲ್ಲ ಸನ್ಯಾಸಿಗಳನ್ನು ಗೌರವಿಸಲು ನೀವೇ ಹೇಳಿಕೊಟ್ಟು ಈಗ ಬೈತೀರಲ್ಲ?" ಎಂದನು ಸಲುಗೆಯಿಂದ.
ಆಗ ಗುರುನಾಥರು ನಗುತ್ತಾ ಹೀಗೆ ಹೇಳಿದರು: "ಅಯ್ಯಾ, ನೀನು ಮಾಡಿದ್ದು ಸರಿಯಾಗಿದೆ ಕಣಯ್ಯಾ. ಆದರೆ ನಿನ್ನ ಜೀವನದ ಬಗ್ಗೆ ಯೋಚಿಸಿ ಹಾಗೆ ಹೇಳಿದೆ" ಎಂದರು.
ಇದಾಗಿ ಕೆಲ ದಿನಗಳ ನಂತರ ಓರ್ವ ಮಹಿಳೆಯು ಬಂದು ಆ ಹುಡುಗನಿಗೆ 60,000 ರೂಪಾಯಿ ಹಣವನ್ನು ನೀಡಲು ಬಂದರು. ಆಗ ಚಕಿತನಾದ ಆ ಹುಡುಗ ಈ ಹಣ ನನಗೇಕೆ? ತಾವು ಯಾರು?" ಎಂದು ವಿಚಾರಿಸಲು:
ಆಕೆ ನೋವಿನಿಂದ ಹೀಗೆ ಹೇಳಿದರು: "ನಾನು ಕೆಲ ದಿನಗಳ ಹಿಂದೆ ತಮ್ಮಲ್ಲಿಗೆ ಬಂದಿದ್ದ ಯತಿವರೇಣ್ಯರ ತಾಯಿ. ಈ ಹಣ ತಾವು ಕೊಟ್ಟ ಕಾರಿನ ಬಾಬ್ತು. ಪೂರ್ತಿ ಹಣ ನೀಡಲು ನಾನು ಶಕ್ತನಲ್ಲ" ಎಂದಳು.
ಆಗ ಆತ "ಈ ಹಣವನ್ನು ಹೇಗೆ ಹೊಂದಿಸಿದಿರಿ?" ಎನ್ನಲು, ಆಕೆ "ನನ್ನ ತಾಳಿ ಮಾರಿ ತಂದಿರುವೆ" ಎಂದಳು.
ಇದರಿಂದ ಆಘಾತಗೊಂಡ ಆತ "ನನಗೆ ಈ ಹಣ ನೀಡಬೇಡಿ. ಅನುಕೂಲವಾದಾಗ ಕೊಡುವಿರಂತೆ ತಿಳೀತಾ... " ಎಂದು ಆ ಹಣವನ್ನು ಆಕೆಗೆ ಹಿಂತಿರುಗಿಸಿದರು. ವಾಸ್ತವವಾಗಿ ಅದು ಆತನ ಅತ್ಯಂತ ಆರ್ಥಿಕ ಮುಗ್ಗಟ್ಟಿನ ದಿನಗಳಾಗಿತ್ತು. ಹಾಗಿದ್ದೂ ಆತ ಗುರು ಮಾರ್ಗದಲ್ಲಿ ನಡೆದು ಮಾನವೀಯತೆಯನ್ನು ಮೆರೆದಿದ್ದ.
ಮತ್ತೊಮ್ಮೆ ಅದೇ ವ್ಯಕ್ತಿಯಿಂದ ಶೇಷಯ್ಯ ಎಂಬಾತ ಬಂದು ತನ್ನ ಆರ್ಥಿಕ ಮುಗ್ಗಟ್ಟಿನ ಬಗ್ಗೆ ತಿಳಿಸಿ ತನಗೆ ತುರ್ತಾಗಿ ಐದು ಲಕ್ಷ ರೂಪಾಯಿ ಅವಶ್ಯಕತೆ ಇದೆಯೆಂದೂ, ತಾವು ನೀಡಿದಲ್ಲಿ ಸಕಾಲದಲ್ಲಿ ಹಿಂತಿರುಗಿಸುವೆನೆಂದು ಭರವಸೆ ನೀಡಿದನು.
ಅವರ ಕಷ್ಟವನ್ನು ಕೇಳಿ ಕರಗಿದ ಆ ಹುಡುಗ ಹಿಂದು-ಮುಂದು ವಿಚಾರಿಸದೇ ಕೇಳಿದಷ್ಟು ಹಣವನ್ನು ಸಾಲವಾಗಿ ನೀಡಿದನು.
ಆದರೆ ಆ ನಂತರ ಆ ಹುಡುಗ ವ್ಯವಹಾರದಲ್ಲಿ ನಷ್ಟವುಂಟಾಗಿ ವಿಪರೀತವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದನು. ಇತ್ತ ಹಣ ತೆಗೆದುಕೊಂಡ ಆ ವ್ಯಕ್ತಿ ಹಲವು ತಿಂಗಳಾದರೂ ಹಣ ಹಿಂತಿರುಗಿಸಲಿಲ್ಲ. ಮಾತ್ರವಲ್ಲ ನಾಪತ್ತೆಯಾಗಿ ಬಿಟ್ಟನು. ಏನು ಮಾಡಲು ತಿಳಿಯದ ಆ ಹುಡುಗ ನೇರವಾಗಿ ಗುರುನಾಥರಲ್ಲಿಗೆ ಬಂದು ತನ್ನ ಸಂಕಷ್ಟವನ್ನು ತಿಳಿಸಿದನು.
ಆಗ ಗುರುನಾಥರು ಆತನಲ್ಲಿ ವಿಶ್ವಾಸ ತುಂಬಿ ಅವನ ಕೈಗೆ ಎರಡು ವಿಳ್ಳೇದೆಲೆಯನ್ನು ನೀಡಿ ಕಳುಹಿಸಿಕೊಟ್ಟರು.
ಆಶ್ಚರ್ಯವೆಂದರೆ ಹಲವು ತಿಂಗಳಿಂದ ನಾಪತ್ತೆಯಾಗಿದ್ದ ಆ ವ್ಯಕ್ತಿ ಮರುದಿನ ಬೆಳಿಗ್ಗೆ ನೇರವಾಗಿ ಆ ಹುಡುಗನ ಕಛೇರಿಗೆ ಬಂದು ತಾನು ತೆಗೆದುಕೊಂಡ ಐದು ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸಿ ತಡವಾಗಿದ್ದಕ್ಕೆ ಕ್ಷಮೆಯಾಚಿಸಿ ಆ ಹುಡುಗ ತರಿಸಿಕೊಟ್ಟ ಕಾಫಿಯನ್ನು ಕುಡಿದು ಅಲ್ಲಿಂದ ನಿರ್ಗಮಿಸಿದನು.
ಅದೇ ಕೊನೆ. ಆ ವ್ಯಕ್ತಿ ಎಲ್ಲಿರುವನೆಂದು ಇಂದಿಗೂ ತಿಳಿದುಬಂದಿಲ್ಲ. ಹಣ ತಂದು ಕೊಟ್ಟವನು ಯಾರು? ಗುರುವೇ ಆ ರೂಪದಲ್ಲಿ ಬಂದು ತನ್ನ ಕಷ್ಟ ಪರಿಹರಿಸಿದನೇ? ಎಂದು ಯೋಚಿಸಿ ಉತ್ತರ ತಿಳಿಯದ ಆ ಹುಡುಗ ಸುಮ್ಮನಾಗಿಬಿಟ್ಟನು. ಗುರುವಿನ ಮರ್ಮ ತಿಳಿಯುವುದು ಅಷ್ಟು ಸುಲಭವಲ್ಲ ಎಂಬುದು ಚರಣದಾಸನಾದ ನನ್ನ ಅನುಭವ......,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Parama poojya venkatachala avadootarige nanna bhakti poorvaka namanagalu. Sadaa kaala Yellaranu Harasi asheervadisi Kaapadi Guruvarya. Sarve jano sukinobavantu.
ReplyDelete