ಒಟ್ಟು ನೋಟಗಳು

Monday, January 16, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 104


    ಗ್ರಂಥ ರಚನೆ - ಚರಣದಾಸ 


ವಿದ್ಯಾತೀರ್ಥ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಖಾಸಗಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ಒಬ್ಬರು ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದರು. ಒಮ್ಮೆ ಅವರು ಕಛೇರಿಯಲ್ಲಿ ಹಣದ ದುರುಪಯೋಗದ ಆಪಾದನೆಗೆ ಗುರಿಯಾದರು. ಅವರು ಕೆಲಸದಿಂದ ವಜಾ ಆಗುವ ಪರಿಸ್ಥಿತಿ ಬಂದಿತ್ತು. ತನ್ನದಲ್ಲದ ತಪ್ಪಿಗೆ ತನಗೆ ಶಿಕ್ಷೆ ಆಗುವುದಲ್ಲ ಎಂದು ಚಿಂತಿಸುತ್ತಾ ಗುರುನಿವಾಸಕ್ಕೆ ಬಂದು ಗುರುಗಳಲ್ಲಿ ತನ್ನ ಸಮಸ್ಯೆಯನ್ನು ಭಿನ್ನವಿಸಿಕೊಂಡರು.

ಆಗ ಗುರುನಾಥರು: - "ನೋಡಯ್ಯಾ ಚಿಂತಿಸಬೇಡ. ನಿನಗೇನೂ ತೊಂದರೆ ಆಗುವುದಿಲ್ಲ. ನೀನು ಬಾಲ್ಯದಲ್ಲಿ ಒಬ್ಬ ಗುರುವಿನ ಸಂಘದಲ್ಲಿ ಬೆಳೆದೆ ಅಲ್ಲವೇ? . ನಿನಗೆ ಈಜು ಕಲಿಸಿದವರು ಅವರೇ ಅಲ್ಲವೇ? ಅವರೇ ನಿನ್ನನ್ನು ಕಾಯುವರು" ಎಂದರು.

ಆಗ ಆ ವ್ಯಕ್ತಿ ತಾವು ಹೇಳಿದ್ದು ನಿಜ ಎಂದರು. ಅಂದು ಅವರು ಮುಖ್ಯ ಕಛೇರಿಗೆ ತನ್ನ ಮೇಲೆ ಬಂದ ಆಪಾದನೆ ಮೇಲೆ ವಿವರಣೆ ನೀಡಲು ತೆರಳಬೇಕಿತ್ತು.

ಇದನ್ನು ತಿಳಿದ ಗುರುನಾಥರು ಹೀಗೆ ಹೇಳಿದರು:- "ನೀವು ಇಲ್ಲಿಂದ ಹೊರಡುವ ಮುನ್ನ ಎರಡು ಕಹಿ ಬೇವಿನ ಕಡ್ಡಿಯನ್ನು ನಿನ್ನ ವಾಹನದಲ್ಲಿಟ್ಟು (ದ್ವಿಚಕ್ರ ವಾಹನ) ಕೊಂಡು ಹೊರಡಿ. ಇಲ್ಲಿಂದ ಮುಂದೆ ಒಂದು ಹಳ್ಳಿ ಸಿಗುತ್ತದೆ. ಅಲ್ಲಿ (ಹಳ್ಳಿಯ ಹೆಸರನ್ನು ಹೇಳಿದ್ದರು) ಉದ್ದನೆಯ ಒಬ್ಬ ವ್ಯಕ್ತಿ ಕೈಯನ್ನು ಬೀಸಿ ಬೀಸಿ ಅಡ್ಡ ಹಾಕುತ್ತಾನೆ. ಅಲ್ಲಿ ನಿಲ್ಲಿಸಿ ಆ ವ್ಯಕ್ತಿ ಎಲ್ಲಿಗೆ ಹೋಗುತ್ತಾನೋ ಅಲ್ಲಿಗೆ ಅವರನ್ನು ತಲುಪಿಸು. ನಿನ್ನ ಕೆಲಸವೆಲ್ಲ ಸುಖವಾಗಿ ನಡೆಯುವುದು.

ಆ ವ್ಯಕ್ತಿ ಸಿಗುವ ಮೊದಲು ಇಲ್ಲಿಂದ ಹೊರಟ ಮೇಲೆ ಎಲ್ಲಿಯೂ ಗಾಡಿ ನಿಲ್ಲಿಸಕೂಡದು ಎಂದಿದ್ದರು. ಅಂತೆಯೇ ಗುರುನಾಥರ ಆಶೀರ್ವಾದ ಪಡೆದ ಆ ವ್ಯಕ್ತಿ ತನ್ನ ವಾಹನವನ್ನೇರಿ ಹೊರಟರು.

ತುಸು ದೂರ ಬಂದ ನಂತರ ತಾನು ಕಹಿ ಬೇವಿನ ಕಡ್ಡಿಯನ್ನು ತಂದಿಲ್ಲವಲ್ಲ ಎಂದು ನೆನಪಾಗಿ ಗಾಬರಿಗೊಂಡರು. ಎಲ್ಲಾದರೂ ಕುಯ್ಯೋಣವೆಂದರೆ ಗಾಡಿ ನಿಲ್ಲಿಸಕೂಡದು ಎಂದಿದ್ದಾರೆ. ಈಗೇನು ಮಾಡುವುದಪ್ಪಾ ಎಂದು ಯೋಚಿಸಿ ಗುರುವನ್ನು ಧ್ಯಾನಿಸುತ್ತಾ ನಿಧಾನವಾಗಿ ಸಾಗುತ್ತಿದ್ದರು.

ಅದು ಮಳೆಗಾಲ. ನಿಧಾನವಾಗಿ ಗಾಳಿ ಬೀಸುತ್ತಿತ್ತು.

ಆಗ ಇದ್ದಕ್ಕಿದ್ದಂತೆ ಒಂದು ಮರದ ಸಣ್ಣ ಹರೆ ಬಂದು ಇವರ ವಾಹನದ ಮೇಲೆ ಬಿದ್ದಿತು. ಗಮನಿಸಿ ನೋಡಿದರೆ ಅದು ಬೇವಿನ ಕಡ್ಡಿಯೇ ಆಗಿತ್ತು. ಆಶ್ಚರ್ಯ ಹಾಗೂ ಭಕ್ತಿಯಿಂದ ಗುರು ಕೃಪೆಗೆ ಕೃತಜ್ಞತೆ ಸಲ್ಲಿಸುತ್ತಾ ಆ ಕಡ್ಡಿಯನ್ನು ಜೋಪಾನವಾಗಿ ಇಟ್ಟುಕೊಂಡು ಗಾಡಿ ಓಡಿಸತೊಡಗಿದರು.

ಗುರುಗಳು ಹೇಳಿದಂತೆಯೇ ಆ ಹಳ್ಳಿಯ ಸಮೀಪ ಬರುತ್ತಿದ್ದಂತೆಯೇ ಒಬ್ಬ ವ್ಯಕ್ತಿ ಕೈ ಬೀಸಿ ಇವರ ವಾಹನವನ್ನು ಅಡ್ಡ ಹಾಕಿದನು. ಇವರು ವಾಹನ ನಿಲ್ಲಿಸಲು ಆತ ಒಂದೂ ಮಾತನಾಡದೇ, ಪೂರ್ವ ಪರಿಚಿತರೆಂಬಂತೆ ವಾಹನವನ್ನೇರಿದರು. ಅಲ್ಲಿಂದ ಈ ವ್ಯಕ್ತಿಯ ಕಛೇರಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರವಿಟ್ಟು. ಆ ಊರನ್ನು ಸಮೀಪಿಸುವವರೆಗೂ ಒಬ್ಬರನ್ನೊಬ್ಬರು ಮಾತಾಡಿಸಲಿಲ್ಲ.

ಇನ್ನೇನು ಊರು ಕೆಲವೇ ಕಿಲೋಮೀಟರ್ ದೂರವಿದೆ ಎನ್ನುವಾಗ ಆ ವ್ಯಕ್ತಿ ಹೀಗೆ ಯೋಚಿಸಿದರು. "ಇವರು ಎಲ್ಲಿ ಇಳೀತಾರೋ ಗೊತ್ತಿಲ್ಲ. ಎಲ್ಲಿಗೆ ನಾನೇ ಕೇಳಿ ಅವರನ್ನು ತಲುಪಿಸಿ ಆ ನಂತರ ಮುಂದುವರೆಯುತ್ತೇನೆ" ಎಂದು ಯೋಚಿಸಿ ನಿಲ್ಲಿಸುವಷ್ಟರಲ್ಲಿ ಹಿಂದೆ ಕುಳಿತಿದ್ದ ಆ ವ್ಯಕ್ತಿ ಇವರ ಮನದ ಆಲೋಚನೆಯನ್ನು ಗ್ರಹಿಸಿದವರಂತೆ "ಹೂಂ ಇಲ್ಲಿ ನಿಲ್ಲಿಸು ಗಾಡೀನ" ಅಂದ್ರು. ಇವರು ಗಾಡಿಯನ್ನು ನಿಲ್ಲಿಸಿದರು.

ಗಾಡಿಯಿಂದ ಇಳಿದ ಆ ವ್ಯಕ್ತಿಯನ್ನು ಕುರಿತು ಇವರು, ಸ್ವಾಮಿ, ತಮ್ಮ ಹೆಸರೇನು? ಎಂದು ಕೇಳಲು

ಆ ವ್ಯಕ್ತಿ ಒಂದು ಹೆಸರನ್ನು ಹೇಳಿ ಹೊರಟರು (ಹೆಸರನ್ನು ಕೂಡಾ ಗುರುನಾಥರು ತಿಳಿಸಿದ್ದರು). ಆ ಹೆಸರನ್ನು ಕೇಳಿದ ಇವರು ಒಂದು ಕ್ಷಣ ತಬ್ಬಿಬ್ಬಾದರು. ಕಾರಣ ಆ ಹೆಸರು ತನ್ನನ್ನು ಸಾಕಿ ಬೆಳಿಸಿದ ಗುರುವಿನದೇ ಆಗಿತ್ತು.

ಮರುದಿನ ತನ್ನ ಮೇಲಿನ ಆಪಾದನೆಗೆ ಮೇಲಧಿಕಾರಿಯ ಆದೇಶದಂತೆ ಒಂದು ಪುಟದಷ್ಟು ವಿವರಣೆಯನ್ನು ಬರೆದುಕೊಂಡು ಕಛೇರಿಯತ್ತ ತೆರಳಿದರು. ಒಳಗೆ ಹೋದ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಮೇಲಧಿಕಾರಿಗಳ ಎದುರು ಕುಳಿತ ಇವರು ತಾನು ಬರೆದು ತಂದಿದ್ದ ಒಂದು ಪುಟದ ವಿವರಣೆಯನ್ನು ನಿಯಮದಂತೆ ಅಧಿಕಾರಿಗೆ ನೀಡಿದರು.

ಆದರೆ ಅದಾಗಲೇ ಹಸನ್ಮುಖಿಗಳಾಗಿದ್ದ ಅಧಿಕಾರಿಗಳು ಹೀಗೆ ಹೇಳಿದರು. "ಇರಲಿ ಸ್ವಾಮಿ. ನೀವೇಕೆ ಇಷ್ಟೆಲ್ಲಾ ಬರೆದಿದ್ದೀರಾ? ನಮಗೆ ನೀವೇನೂ ಕೊಡಬೇಕಾಗಿಲ್ಲ. ನಿಮ್ಮ ಉತ್ತರದಿಂದ ನಾವು ಸಂತುಷ್ಟರಾಗಿದ್ದೇವೆ. ನಮಗೇನು ಹೇಳಬೇಕಾಗಿಲ್ಲ. ನೀವಿನ್ನು ಹೋಗಿ ಬನ್ನಿ" ಎಂದು ಹೇಳಿ ಅಲ್ಲಿಂದ ಹೊರಟರು.

ಆಗ ಆ ವ್ಯಕ್ತಿ ಹೀಗೆ ಕೇಳಿದರು: "ಸ್ವಾಮಿ, ನಾನಿನ್ನೂ ತಮಗೆ ಯಾವುದೇ ವಿವರಣಾ ಪತ್ರವನ್ನು ನೀಡಿರುವುದಿಲ್ಲ. ಅದಿನ್ನೂ ನನ್ನ ಕೈಯಲ್ಲೇ ಇದೆ" ಎಂದರು. 

ಆಗ ಮೇಲಧಿಕಾರಿಗಳು ಅದಾಗಲೇ ತಮ್ಮ ಕೈ ಸೇರಿದ್ದ ಈ ವ್ಯಕ್ತಿಯ ಸಹಿ ಹಾಗೂ ಹೆಸರಿನಲ್ಲಿರುವ ಏಳು ಪುಟದ ವಿವರಣಾ ಪತ್ರವನ್ನು ತೋರಿಸಿದರು. ಕೂಡಲೇ ಅದನ್ನು ಕೂಲಂಕಷವಾಗಿ ಗಮನಿಸಿದ ಅವರು ಗದ್ಗದಿತರಾಗಿ ಕಛೇರಿಯಿಂದ ಹೊರ ಬಂದರು. ಕಾರಣ ಆ ಏಳು ಪುಟದ  ವಿವರಣಾ ಪಾತ್ರವನ್ನು ಅವರು ಇಂದಿಗೂ ಬರೆದಿರಲಿಲ್ಲ. ಆದರೆ ಅದರಲ್ಲಿರುವ ಸಹಿ ಹಾಗೂ ಬರವಣಿಗೆ ಅವರದ್ದೇ ಆಗಿತ್ತು. ಇದು ಗುರು ಕೃಪೆಯಲ್ಲದೇ ಮತ್ತೇನು ಆಗಿರಲು ಸಾಧ್ಯವಿಲ್ಲ ಎಂಬ ವಿಚಾರ ಅವರ ಮನಸ್ಸಿನಲ್ಲಿ ದೃಢವಾಗಿ ನೆಲೆಗೊಂಡಿತು.......,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Sakaraayapurada Dore venkatachala avadootarige nanna bhakti poorvaka namanagalu. Yellaranu sadaa kaala Kaapadi Harasi haagu asheervadisi Guruvarya. Sarve jano sukinobavantu.

    ReplyDelete