ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 107
ಗ್ರಂಥ ರಚನೆ - ಚರಣದಾಸ
ನಮಸ್ಕಾರ ...
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ಸಾಮಾನ್ಯವಾಗಿ ಯಾರೂ ತನಗೆ ನಮಸ್ಕಾರ ಮಾಡುವುದನ್ನು ಒಪ್ಪುತ್ತಿರಲಿಲ್ಲ. ಮೊದಲು ನಿಮಗೆ ನಮಸ್ಕರಿಸಿಕೊಳ್ಳಿ ಅನ್ನುತ್ತಿದ್ದರು. ಅಂದರೆ ನಮಸ್ಕಾರ ಭಾವ ಶುದ್ಧವಿರಲಿ, ನಡವಳಿಕೆ ಹಿತವಾಗಿರಲಿ, ಸ್ವಾರ್ಥ, ಅಸೂಯೆ, ಅಹಂಕಾರರಹಿತವಾಗಿರಲಿ. ನಮ್ಮ ಈ ದುರ್ಗುಣಗಳನ್ನು ತ್ಯಜಿಸಿ ನಮ್ಮ ಶುದ್ಧ ಭಾವವನ್ನು ಗುರುವಿಗೆ ಶಿರಸಾ ಮನಸಾ ನಮಸ್ಕಾರದ ಮೂಲಕ ಸಮರ್ಪಿಸಬೇಕು. ನಮಸ್ಕಾರವೆಂಬುದು ಕೇವಲ ತೋರಿಕೆಯ ಆಂಗಿಕ ಕ್ರಿಯೆ ಆಗಬಾರದು ಎಂಬುದು ಅವರ ಮಾತಿನ ಉದ್ದೇಶವಾಗಿತ್ತು.
"ಲಾಂಛನಕೆ ಶರಣೆಂಬೆ" ಎಂಬ ಬಸವಣ್ಣನವರ ಉಕ್ತಿಯಂತೆ ಗುರುನಾಥರು ಕಾವಿ ಧರಿಸಿದ ಪ್ರತಿಯೊಬ್ಬರಿಗೂ ಗೌರವಿಸುತ್ತಿದ್ದರು. ಆಗಾಗ್ಗೆ ಈ ಕುರಿತು "ಗೌರವ ಕೊಡುವ ಉದ್ದೇಶ ಅವರಲ್ಲಿರುವ ತಪ್ಪಿನ ಅರಿವಾಗಿ ಸರಿ ದಾರಿಯಲ್ಲಿ ನಡೀಲಿ ಅಂತ ಕಣೋ" ಅನ್ನುತ್ತಿದ್ದರು. ಜೊತೆಗೆ ಅವರು ಇಂದಲ್ಲ ನಾಳೆ ಸರಿ ದಾರೀಲಿ ನಡೆದರೆ ಸಾಕು ಈ ಗೌರವ ಆ ಸನ್ಯಾಸಿಗೆ ಮಾತ್ರವಲ್ಲ. ಅದು ಅವರು ಕುಳಿತ ಪೀಠದ ಗೌರವವನ್ನು ಅವರಿಗೆ ತಿಳಿಸುವ ಕೆಲಸವನ್ನು ಮಾಡುತ್ತದೆ, ಹಿಂದಿನ ಸಾಧಕರ ಪೀಠದಲ್ಲಿ ಕುಳಿತುಕೊಳ್ಳಲು ಸುಮ್ಮನೆ ಸಾಧ್ಯವಾಗುವುದಿಲ್ಲ. ಅದಕ್ಕೂ ಪೂರ್ವ ಜನ್ಮ ಸಂಸ್ಕಾರವಿರಬೇಕು. ಇನ್ನು ದೋಷಗಳು, ತಪ್ಪುಗಳು, ಆ ಜೀವಿನ ಕರ್ಮಾನುಸಾರ ನಿರ್ಧಾರಿತವಾಗಿರುತ್ತದೆ. ಈ ಗೌರವಾದರಗಳು ಆ ವ್ಯಕ್ತಿ ಸರಿ ದಾರೀಲಿ ನಡೆಯುವಂತೆ ಮಾಡುತ್ತೆ ಕಣಯ್ಯಾ" ಎನ್ನುತ್ತಿದ್ದರು.
ಪ್ರತಿಯೊಬ್ಬರನ್ನು ಪರಿಸ್ಥಿತಿ ಮನಸ್ಥಿತಿ ಅನುಗುಣವಾಗಿ ಬದಲಿಸಲು ಗುರುನಾಥರು ಅನುಸರಿಸುತ್ತಿದ್ದ ಮಾನ ದಂಡಗಳು ಇಂದಿಗೂ ನನ್ನ ಜೀವನಕ್ಕೆ ಮಾರ್ಗ ಸೂಚಿಯಾಗಿದೆ.
ಒಮ್ಮೆ ಸನ್ಯಾಸದ ಕುರಿತು ಹೀಗೆ ಹೇಳತೊಡಗಿದರು. "ಕಾವಿಧಾರಣೆ ಸನ್ಯಾಸವಲ್ಲಪ್ಪಾ, ಸನ್ಯಾಸವೆಂಬುದು ಆಚರಣೆ, ಅದೊಂದು ಅನುಭವ . ಅದಕ್ಕೆ ಕಾವಿ ಹಾಕಲೇಬೇಕೆಂದಿಲ್ಲ. ಅದು ಅನಿವಾರ್ಯವೂ ಅಲ್ಲ. ಅದಕ್ಕೆ ಮೊದಲು ಮನಸ್ಸು ಕಾವಿಯಾಗಬೇಕು. ಕಾಷಾಯವಾಗಬೇಕು ಅಲ್ವೇ? ನಾವು ಈ ದಾರಿಯನ್ನು ಅಲ್ಲಗಳೆಯುತ್ತಿಲ್ಲ. ಸನ್ಯಾಸದಲ್ಲಿ ಹಲವು ವಿಧಗಳಿವೆ. ಅದರಲ್ಲಿ ಕಾಷಾಯ ಧಾರಣೆಯೂ ಒಂದಷ್ಟೇ" ಎಂದರು. ಮತ್ತೂ ಮುಂದುವರೆದು "attachment ಅನ್ನು detachment ನಲ್ಲಿ ಇಟ್ಕೋಬೇಕು ಕಣ್ರಯ್ಯ. ಅಂದ್ರೆ ಎಲ್ಲವೂ ನೀನೆ ಆಗಿ ಏನೂ ನೀನಲ್ಲವಾಗಿ ಕರ್ತವ್ಯ ನಿರತನಾಗಿರಬೇಕಪ್ಪಾ" ಎಂದಿದ್ದರು. ಹೀಗೆ ಮಾತಾಡ್ತಾ ಮಾತಾಡ್ತಾ ಕೊನೆಗೆ ಇದ್ಯಾವುದೂ ನಿಜವಲ್ಲ ಕಣಯ್ಯಾ ಅಂತಲೂ ಹೇಳುತ್ತಿದ್ದರು. ಅವರ ಮಾತಿನ ಅರ್ಥ ತಿಳಿಯದ ನಾನು ಸುಮ್ಮನೆ ತಲೆಯಾಡಿಸುತ್ತಿದ್ದೆ ಅಷ್ಟೇ. " ಸನ್ಯಾಸಿ ತಪ್ಪು ದಾರಿಯಲ್ಲಿ ನಡೆಯದಂತೆ ಎಚ್ಚರಿಸಲು ಕಾವಿ ಧಾರಣೆ ಮಾಡಬೇಕಷ್ಟೇ" ಎನ್ನುತ್ತಿದ್ದರು........,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Venkatachala avadootarige nanna bhakti poorvaka namanagalu. Sarvarannu uddarisi asheervadisi Kaapadi Guruvarya. Hari om tatsat.
ReplyDelete