ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 112
ಗ್ರಂಥ ರಚನೆ - ಚರಣದಾಸ
ಪರಿಪಾಲಕ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ಎಲ್ಲೆಲ್ಲಿ ಇರುತ್ತಿದ್ದರೋ ಅಲ್ಲೆಲ್ಲಾ ಅನ್ನಾಹಾರಗಳಿಗೆ ಕೊರತೆ ಇರುತ್ತಿರಲಿಲ್ಲ. ಮಾತ್ರವಲ್ಲ ಅಲ್ಲಲ್ಲಿ ಇರುತ್ತಿದ್ದ ಜನರು ಯಾವುದೇ ಕಷ್ಟದಲ್ಲಿದ್ದು ಏನನ್ನಾದರೂ ತಿನ್ನಬಯಸಿ ಸಾಧ್ಯವಾಗದೇ ಇದ್ದಲ್ಲಿ ತಕ್ಷಣವೇ ಅವರ ಭಾವನೆಗಳಿಗೆ ಸ್ಪಂದಿಸಿ ಅವರ ಇಚ್ಛೆಗಳನ್ನು ಈಡೇರಿಸುತ್ತಿದ್ದ ರೀತಿ ವಿಶಿಷ್ಟವಾದುದು.
ಗುರುನಿವಾಸದಿಂದ ಅನತಿ ದೂರ ವಾಸವಿದ್ದ ವಯೋವೃದ್ಧ ಮುದುಕಿಯೊಬ್ಬಳಿದ್ದಳು. ಆಕೆ ಜೀವನ ನಿರ್ವಹಣೆಗೆ ಹೂವು ಮಾರುತ್ತಿದ್ದಳು. ಆಕೆ ಎಷ್ಟೇ ಹೂವು ಮಾರುತ್ತಿದ್ದರೂ ವ್ಯಾಪಾರವಾಗುತ್ತಿರಲಿಲ್ಲ. ಇದನ್ನರಿತ ಗುರುನಾಥರು ಆಕೆಯನ್ನು ಕರೆದು ಹೂವು ತೆಗೆದುಕೊಳ್ಳಲಾರಂಭಿಸಿದರು. ಆಕೆ ತರುತ್ತಿದ್ದ ಹೂವಿಗಿಂತ ಹೆಚ್ಚು ಹಣವನ್ನು ನೀಡುತ್ತಿದ್ದ ಗುರುನಾಥರು ಆಕೆಯ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟರು.
ಯಾವುದೇ ದೇಗುಲಗಳಿಗೆ ಹೂವನ್ನು ಕಳಿಸಬೇಕಿದ್ದಲ್ಲಿ ಚರಣದಾಸನಾದ ನನ್ನನ್ನು ಆ ಅಜ್ಜಿಯ ಮನೆಗೆ ಕಳಿಸಿ ತರಿಸುತ್ತಿದ್ದರು. ಆಕೆಗೆ ಆಗಾಗ್ಗೆ ಸೀರೆ, ಹಣ್ಣುಗಳನ್ನು, ಸಿಹಿ ತಿನಿಸುಗಳನ್ನು ನೀಡುತ್ತಿದ್ದರು.
ಅದೇ ರೀತಿ ಊರಿನಲ್ಲಿ ಯಾರೇ ಭಕ್ತರು ಏನನ್ನಾದರೂ ತೆಗೆದುಕೊಳ್ಳಲು ಬಯಸಿ ಸಾಧ್ಯವಾಗದೆ ಇದ್ದಲ್ಲಿ ಅದನ್ನು ಮನೋವೇಗದಿಂದ ಅರಿತು ಅವರವರ ಮನೆಗೆ ತಲುಪಿಸಿ ಬಿಡುತ್ತಿದ್ದರು.
ಹಾಗೆಯೇ ಇನ್ನೊಂದು ಸಂದರ್ಭ ಓರ್ವ ವ್ಯಕ್ತಿ (ಬಹುಶಃ ಉತ್ತರ ಕನ್ನಡ ಭಾಗದವರಿರಬೇಕು) ಬಂದರು. ಎಂದಿನಂತೆ ಗುರುಗಳು ವಿಚಾರಿಸಲಾಗಿ ಆತ ಹೀಗೆ ಹೇಳತೊಡಗಿದರು. "ಸ್ವಾಮಿ, ನಾನು ಸಂಸಾರಾಂದಿಗನಾಗಿದ್ದು ಮಕ್ಕಳಿದ್ದಾರೆ. ಈಗ ನನಗೆ ಸಂಸಾರ ಬೇಡವೆನಿಸಿದೆ. ಆದ್ದರಿಂದ ನಾನು ಸನ್ಯಾಸಿಯಾಗಬೇಕೆಂದಿರುವೆ. ತಾವು ದಯಮಾಡಿ ಅನುಗ್ರಹಿಸಿ" ಎಂದರು.
ಆಗ ತುಸು ಸಿಟ್ಟಾದ ಗುರುನಾಥರು "ಸನ್ಯಾಸಿ" ಪದದ ಅರ್ಥ ಗೊತ್ತೇನಯ್ಯಾ ನಿನಗೆ?" ಎನ್ನಲು ಆತ ನಿರುತ್ತರರಾದರು. ಆಗ ಗುರುನಾಥರು ಹೀಗೆ ಹೇಳಿದರು. "ನಿಂಗೆ ಸನ್ಯಾಸ ಬೇಕೆಂದಲ್ಲಿ ನನ್ನಂತೆ ಎಲ್ಲವನ್ನೂ ದಾನ ಮಾಡಿ ರಸ್ತೆಯಲ್ಲಿ ನಿಂತುಕೋ. ಆಗ ಸನ್ಯಾಸದ ಅರ್ಥ ಗೊತ್ತಾಗುತ್ತೆ" ಅಂದ್ರು. ಆತ ಏನೂ ಮಾತನಾಡದೇ ಕುಳಿತಿದ್ದರು.
ಕೆಲ ಹೊತ್ತಿನ ನಂತರ ಗುರುನಾಥರಿಗೆ ನಮಸ್ಕರಿಸಿ ಹೊರ ಹೋದ ಆ ವ್ಯಕ್ತಿ ತನ್ನ ವಾಚು, ಉಂಗುರ, ಅಂಗಿ ಹಾಗೂ ಕೈಯಲ್ಲಿದ್ದ ಹಣ ಎಲ್ಲವನ್ನೂ ಅಲ್ಲೇ ದಾರಿಯಲ್ಲಿ ಹೋಗುತ್ತಿದವರಿಗೆ ನೀಡಿ ಬರಿಗೈ ಆದರು. ಕೈಯಲ್ಲಿ ಊಟಕ್ಕೂ ಕಾಸಿಲ್ಲದ ಆ ವ್ಯಕ್ತಿ ಹೀಗೆ ಒಂದು ದಿನ ಕಳೆದರು. ನಂತರ ಹಸಿವು ತಾಳಲಾರದೇ ಗುರುನಿವಾಸಕ್ಕೆ ಬಂದರು. ಅಲ್ಲಿ ಅನ್ನಾಹಾರ ದೊರಕಿತು.
ಆದರೆ ಉಳಿದುಕೊಳ್ಳಲು ಅವಕಾಶ ಸಿಗಲಿಲ್ಲ. ಆತ ಆ ಚಳಿಯ ಕಾಲದಲ್ಲಿ ಗುರುನಿವಾಸದ ಪಕ್ಕವಿದ್ದ ಬಾವಿಯ ಸಮೀಪ ಮಲಗಬೇಕಾಯಿತು.
ಹೀಗೆ ಎರಡು ದಿನ ಕಳೆದ ನಂತರ ಆ ವ್ಯಕ್ತಿಯನ್ನು ಒಳಗೆ ಕರೆದ ಗುರುನಾಥರು ಹೀಗೆ ಹೇಳಿದರು.
"ನೋಡಯ್ಯಾ ನೀ ಸನ್ಯಾಸಿ ಆಗಬೇಕೆಂದಿದ್ರೆ ಅದನ್ನು ನಿನ್ನ ವಿವಾಹದ ಮೊದಲೇ ಯೋಚಿಸಬೇಕಿತ್ತು. ಈಗ ನಿನ್ನನ್ನೇ ನಂಬಿ ಬಂದಿರುವ ನಿನ್ನ ಪತ್ನಿ ಹಾಗೂ ಮಕ್ಕಳನ್ನು ನಾಡು ದಾರಿಯಲ್ಲಿ ಕೈ ಬಿಟ್ಟರೆ ಅದು ಧಾರ್ಮ ವಿರುದ್ಧವಾಗುತ್ತದೆ. ಹಾಗೂ ಅವರ ನೋವು ನಿನ್ನ ಸನ್ಯಾಸ ಧರ್ಮಕ್ಕೆ ಚ್ಯುತಿ ತರುತ್ತದೆ ಅಲ್ಲವೇ?" ಎನ್ನಲು ಆತ ತಲೆ ತಗ್ಗಿಸಿ ನಿಂತರು.
"ಸಂಸಾರದಿಂದ ನೀನು ಕರ್ತವ್ಯದಿಂದ ಮಿಮುಖವಾಗುವುದು ಸನ್ಯಾಸವಲ್ಲ. ಸಂಸಾರದಲ್ಲೇ ಇದ್ದು ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಾ ಫಲಾಫಲವನ್ನು ಭಗವಂತನಿಗೆ ಸಮರ್ಪಿಸಿ ಬದುಕುವುದೇ ನಿಜವಾದ ಸನ್ಯಾಸ. ಹೇಗೆ ಕಮಲ ಕೆಸರಿನಲ್ಲಿ ಹುಟ್ಟಿದರೂ ಒಂದಿನಿತೂ ಕೆಸರು ಅಂಟಿಸಿಕೊಳ್ಳದೇ ಇರುವುದೋ ಹಾಗೆಯೇ ಜೀವನ ಹೋಗು" ಎಂದು ಹೇಳಿ ಆತನಿಗೆ ಹಣ ಹಾಗೂ ವಸ್ತ್ರವನ್ನು ನೀಡಿ ಕಳಿಸಿಕೊಟ್ಟರು.....,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Parama poojya venkatachala swamy Avara Divya charanamruta galige nanna bhakti poorvaka namanagalu. Yellarigu nimma aashirvaada haagu krupe sadaa kaala doreyali. Sarve jano sukinobavantu.
ReplyDelete