ಒಟ್ಟು ನೋಟಗಳು

Wednesday, January 18, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 106


    ಗ್ರಂಥ ರಚನೆ - ಚರಣದಾಸ 


ವಾಕ್ಯ ಪರಿಪಾಲನೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಒಮ್ಮೆ ಹಾಸನ ಸಮೀಪದ ಹಳ್ಳಿಯ ವ್ಯಕ್ತಿಯೊಬ್ಬರು ಗುರುದರ್ಶನಕ್ಕಾಗಿ ಬಂದಿದ್ದರು. ಚರಣದಾಸನಾದ ನಾನು ಗುರುನಿವಾಸಕ್ಕೆ ಬರುವ ಮುಂಚಿನಿಂದಲೂ ಗುರುನಾಥರ ಪರಿಚಯವಿದ್ದ ಅವರನ್ನು ನಾನು ಗುರುನಾಥರ ಕುರಿತ ತಮ್ಮ ಅನುಭವವನ್ನು ತಿಳಿಸುವಂತೆ ವಿನಂತಿಸಿದೆ. ವಯಸ್ಸು ಹಾಗೂ ಅನುಭವದಲ್ಲೂ ಹಿರಿಯರಾದ ಅವರು ಹೀಗೆ ಹೇಳತೊಡಗಿದರು. 

ಸ್ವಾಮಿ, ನನ್ನ ಗುರುವಿನ ಬಗ್ಗೆ ಹೇಳಲು ಪದಗಳು ಸಾಕಾಗುವುದಿಲ್ಲ. ಅದೊಂದು ಅನುಭವ ಅಷ್ಟೇ... ಆದರೂ ಗುರುನಾಥರು ನನ್ನನ್ನು ಹೇಗೆ ಸದಾ ಕಾಯುತ್ತಿರುವರೆಂಬುದನ್ನು ಮಾತ್ರ ತಿಳಿಸುತ್ತೇನೆ ಎಂದು ಮುಂದುವರೆಸಿದರು. 

ಸ್ವಾಮಿ ನಾನು ಮೊದಲ ಬಾರಿ ಗುರುನಾಥರ ದರ್ಶನ ಮಾಡಿದ್ದು 1992 ರ ಫೆಬ್ರವರಿ ತಿಂಗಳಲ್ಲಿ . ನನ್ನ ಭಾವನವರೊಂದಿಗೆ ಗುರುನಿವಾಸಕ್ಕೆ ಹೋದ ನನ್ನನ್ನು ಕುಳಿತುಕೊಳ್ಳಲು ತಿಳಿಸಿದ ಗುರುನಾಥರು ಔಪಚಾರಿಕವಾಗಿ 'ಯಾವ ಊರು? ಹೆಸರೇನು?' ಎಂದು ಕೇಳಲು ನಾನು ತಿಳಿಸಿದೆ. ಕೂಡಲೇ ಪಕ್ಕದಲ್ಲಿದ್ದ ಒಬ್ಬಾತನನ್ನು ಕರೆದು ಗೋಡೆಯಲ್ಲಿ ನೇತು ಹಾಕಿದ್ದ ಕ್ಯಾಲೆಂಡರ್ ತರಿಸಿ ಅದರಲ್ಲಿದ್ದ ದಿನಾಂಕ ಹಾಗೂ ಅದರ ಮೇಲೆ ಗುರುನಾಥರೇ ಹೇಳಿ ಬರೆಸಿದ ನನ್ನ ಹೆಸರನ್ನು ತೋರಿಸಿ, 'ನೋಡು ಈ ದಿನ ಇವರು ಬರುವರೆಂದು ಅಂದೇ ನಿನ್ನ ಕೈಯಲ್ಲಿ ಬರೆಸಿದ್ದೆ ಅಲ್ಲವೇ? ನೋಡು ಅವರೇ ಬಂದಿರುವರು' ಎಂದರು. ಇದನ್ನು ಕಂಡು ಅಲ್ಲಿದ್ದವರೆಲ್ಲಾ ಆಶ್ಚರ್ಯಚಕಿತರಾದರು". 

ನಂತರ ನನ್ನನ್ನು ಕುರಿತು ಬಂದ ಕಾರಣವೇನೆಂದು ಕೇಳಲು ನಾನು, ತವರು ಮನೆಗೆ ಹೋಗಿದ್ದ ನನ್ನ ಪತ್ನಿ ಅನಾರೋಗ್ಯವಾಗಿ ಆಸ್ಪತ್ರೆಗೆ ಸೇರಿರುವ ವಿಚಾರವನ್ನು ಅವರಲ್ಲಿ ತಿಳಿಸಿದೆ. 

ಕೂಡಲೇ ಗುರುನಾಥರು ನನ್ನ ಪತ್ನಿ ದಾಖಲಾಗಿರುವ ಆಸ್ಪತ್ರೆಯ ಹೆಸರು ಹಾಗೂ ರೂಮ್ ನಂಬರನ್ನು ತಿಳಿಸಿ, 'ಹೋಗಿ ನೋಡು' ಎಂದರು. 

ಆಗ ನಾನು "ನನ್ನ ಹೆಂಡತಿ ನರ ದೌರ್ಬಲ್ಯದಿಂದಾಗಿ ನನ್ನನ್ನು ಗುರುತಿಸುತ್ತಿಲ್ಲ. ನನ್ನನ್ನು ಬೇಡ ಎನ್ನುತ್ತಿದ್ದಾಳೆ. ಈ ಮಧ್ಯೆ ಆಕೆ ಗರ್ಭಿಣಿಯೂ ಆಗಿರುವಳು. ಈಗ ನನಗೇನು ಮಾಡಬೇಕೆಂದು ತಿಳಿಯುತ್ತಿಲ್ಲ" ಎಂದು ತಿಳಿಸಿದೆನು. 

ಕೂಡಲೇ ಒಂದು ವಸ್ತುವನ್ನು ತಂದು ನನ್ನ ಕೈಗಿತ್ತು, "ಇದನ್ನು ನಿನ್ನ ಮನೆಯಲ್ಲಿಡು. ಎಲ್ಲವೂ ಸರಿ ಹೋಗುವುದು" ಎಂದರು. ನಾನು ಗುರುಗಳಿಗೆ ನಮಸ್ಕರಿಸಿ ಅಲ್ಲಿಂದ ತೆರಳಿದೆ. ಗುರುನಾಥರು ಹೇಳಿದಂತೆಯೇ ಮಾಡಿದೆ. ಇಂದು ನನ್ನ ಪತ್ನಿ ಆರೋಗ್ಯವಂತಳಾಗಿದ್ದು ನನಗೀಗ ಎರಡು ಮಕ್ಕಳಿದ್ದಾರೆ. ಎಲ್ಲವೂ ಗುರುವಿನ ಭಿಕ್ಷೆ ಎಂದು ಕೃತಜ್ಞತೆಯಿಂದ ಸ್ಮರಿಸಿದರು. 

ಮತ್ತೊಮ್ಮೆ ನಮ್ಮೂರಿನಲ್ಲಿರುವ ಒಬ್ಬ ಭಕ್ತರ ಮನೆಗೆ ಬಂದಿದ್ದ ಗುರುನಾಥರ ದರ್ಶನಕ್ಕೆ ನನ್ನ ಪತ್ನಿಯೊಡನೆ ಹೋದೆ. 

ನನ್ನನ್ನು ಗುರುತಿಸಿ ಕುಳಿತುಕೊಳ್ಳಲು ಹೇಳಿದ ಗುರುಗಳು ನನ್ನ ಪತ್ನಿಯ ಕಡೆ ತಿರುಗಿ, "ಏನು ಮನೆಯಲ್ಲಿ ಅಣ್ಣ ತಂಬುಳಿ ಮಾಡಿ, ತಂದ್ರೆ ತಿನ್ನುತ್ತಾರೋ ಇಲ್ಲವೋ ಅಂತ ಯೋಚಿಸಿ ಹಾಗೆಯೇ ಮುಚ್ಚಿಟ್ಟು ಬಂದಿದ್ದೀಯಲ್ಲಾ?" ಎನ್ನಲು ಆಕೆ ತಲೆ ತಗ್ಗಿಸಿ ಹೌದೆಂದಳು. 

ಕೂಡಲೇ ತಾನಿದ್ದ ಗುರುಭಕ್ತರ ಮನೆಯಾಕೆಯನ್ನು ಕರೆದು "ನೀನೊಬ್ಬಳೇ ಇವರ ಮನೆಗೆ ಹೋಗಿ ಮುಚ್ಚಿಟ್ಟಿರುವ ಅಣ್ಣ ತಂಬುಳಿಯನ್ನು ತಾ, ನಾನು ತಿನ್ನಬೇಕು" ಎಂದರು. 

ನಾನು ಮನೆಯ ಕೀಲಿಯನ್ನು ನೀಡಿದೆ. ಆ ಮನೆಯಾಕೆ ನಮ್ಮ ಮನೆಗೆ ಹೋಗಿ ಅನ್ನ, ತಂಬುಳಿ ತಂದರು. ಗುರುನಾಥರು ಅದನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದರು. 

ಮತ್ತೊಮ್ಮೆ ನಮ್ಮ ಮನೆಯ ದೂರವಾಣಿಗೆ ಕರೆ ಮಾಡಿದ ಗುರುನಾಥರು ಹೀಗೆ ಹೇಳಿದರು. "ಇಂಥಾ ದಿನ ಮೂರು ಜನ ನಕಲಿ ಸನ್ಯಾಸಿಗಳು ನಿನ್ನಲ್ಲಿಗೆ ಬರುವರು. ಅವರು ಒಂದು ಪೊಟ್ಟಣವನ್ನು ತೋರಿಸಿ ಇದರಲ್ಲೇನಿದೆ? ಸಿಂಧೂರವೋ ಅಥವಾ ಭಸ್ಮವೋ ತಿಳಿಸು ಎಂದು ಮೂರು ಬಾರಿ ಕೇಳುವರು. ನೀನು "ಸಿಂಧೂರ" ವಂದೇ ಹೇಳು" ಎಂದರು. 

ಗುರುವಾಕ್ಯದಂತೆಯೇ ಅದೇ ದಿನಾಂಕದಂದು ಮೂರು ಜನ ಸನ್ಯಾಸಿಗಳು ಗುರುನಾಥರಂದಂತೆಯೇ ನನ್ನನ್ನು ಪರೀಕ್ಷಿಸಿದರು. ನಾನು ಗುರುನಾಥರು ಹೇಳಿದಂತೆಯೇ ಹೇಳಿದೆ. ನನ್ನನು ಪರೀಕ್ಷಿಸಲು ಬಂದು ಸೋಲುಂಡ ಅವರು "ತಪ್ಪಾಯಿತೆಂದು" ಹೇಳಿ ನಮ್ಮಲ್ಲಿಂದ ತೆರಳಿದರು. ಗುರು ಹೇಗೆ ನಮ್ಮನ್ನು ಕ್ಷಣವೂ ಬಿಡದೇ ಕಾಯುತ್ತಿರುವನೆಂಬ ಅರಿವು ಇದರಿಂದ ನನಗಾಯಿತು. 

ನಾನು ಪ್ರತೀ ಬಾರಿ ಗುರುನಿವಾಸಕ್ಕೆ ಬಂದು ಹೊರಡುವಾಗಲೂ "ಇಷ್ಟೊತ್ತಿಗೆ ಬಸ್ ಬರುತ್ತೆ. ಅದು ನೇರವಾಗಿ ನಿಮ್ಮೂರಿಗೆ ಹೋಗುವುದು ಹೋಗಿ ಬಾ" ಎನ್ನುತ್ತಿದ್ದರು. ಅಂತೆಯೇ ಅದೇ ಬಸ್ ಸಿಗುತ್ತಿತ್ತು. ಒಂದೆರಡು ಬಾರಿ ಆ ಬಸ್ ನಲ್ಲಿ ಕೂರಲು ಜಾಗವಿಲ್ಲವೆಂದು ನಾನು ಬೇರೆ ಬಸ್ ನಲ್ಲಿ ಪ್ರಯಾಣಿಸಿದೆ. ಹಾಗೆ ಮಾಡಿದಾಗಲೆಲ್ಲಾ ನಾ ಪ್ರಯಾಣಿಸಿದ ಬಸ್ ರಸ್ತೆ ಮಧ್ಯೆ ಹಾಳಾಗಿ ನಿಂತು ಬಿಡುತ್ತಿತ್ತು. ಇದರಿಂದ ಗುರುವಾಕ್ಯವನ್ನು ಪರಿಪಾಲಿಸದೇ ನನ್ನ ಸ್ವಂತಿಕೆ ತೋರಿಸ ಹೊರಟಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂಬುದು ನನ್ನ ಅರಿವಿಗೆ ಬಂತು. 

ಮತ್ತೊಮ್ಮೆ ನನ್ನ ಮಗನ ಉಪನಯನ ಕಾರ್ಯ ನಡೆಸಲೋಸುಗ ಗುರುನಾಥರಲ್ಲಿ ಅನುಮತಿ ಬೇಡಿದೆ. ಆಗ ಗುರುನಾಥರು ಕಾರ್ಯಕ್ರಮವನ್ನು ನಮ್ಮ ಮನೆಯಲ್ಲಿಯೇ ಮಾಡುವಂತೆ ತಿಳಿಸಿದರು. ಮಾತ್ರವಲ್ಲ ಕಾರ್ಯಕ್ರಮದ ದಿನ ಸಂಜೆ ನಮ್ಮ ಮನೆಗೇ ಬಂದು ನಮ್ಮೆಲ್ಲರನ್ನು ಹರಸಿ, ಮಗನಿಗೆ ಉಪದೇಶ ನೀಡಿ ಅಲ್ಲಿಂದ ತೆರಳಿದರು (ಚರಣದಾಸನಾದ ನಾನು ಅಂದು ಗುರುಗಳೊಂದಿಗೆ ಅಲ್ಲಿಗೆ ಹೋಗಿದ್ದೆ). 

ಇನ್ನೂ ಏನಾದರೂ ಹೇಳಿ ಎಂದು ನಾನು ಅವರನ್ನು ಕೇಳಲು ಅವರು ಹೀಗೆ ಹೇಳತೊಡಗಿದರು. 

"ನಾವು ಎರಡನೇ ಬಾರಿ ಗುರುನಾಥರ ದರ್ಶನಕ್ಕೆ ಬರುವಾಗ ನನ್ನ ನೆರೆಮನೆಯವರಾದ ಓರ್ವ ಮುಸ್ಲಿಂ ಧರ್ಮೀಯ ನನ್ನೊಂದಿಗೆ ಬರುವೆನೆಂದು ತಿಳಿಸಿದನು. ಆತ ನನ್ನ ಸ್ನೇಹಿತನಾಗಿದ್ದು ಆತನಿಗೆ ದುಬೈನಲ್ಲಿ ಕೆಲಸ ಸಿಕ್ಕಿದ್ದು, ವೀಸಾಗಾಗಿ ಕಾಯುತ್ತಿದ್ದರು. ಅದು ಬರುವುದು ತಡವಾದುದ್ದರಿಂದ ಆತಂಕಗೊಂಡಿದ್ದ ಆತ ಗುರುಕೃಪೆ ಗಳಿಸಲು ನನ್ನೊಂದಿಗೆ ಬಂದರು. 

ಗುರುನಿವಾಸ ಪ್ರವೇಶಿಸಿದ ನನ್ನ ಸ್ನೇಹಿತನನ್ನು ಕುರಿತು ಗುರುನಾಥರು ಹೇಗೆ ಹೇಳಿದರು. 

"ಇವತ್ತು ಯಾಕೆ ಇಲ್ಲಿಗೆ ಬಂದೆ ನೀನು? ನಿಂಗೆ ನಾಳೆ ವೀಸಾ ಬರಲಿದೆ. ನೀನು ದುಬೈಗೆ ಹೋಗಬೇಕು ಅಲ್ಲವೇ?" ಎಂದರು. 

ತಾನು ಕೇಳುವ ಮೊದಲೇ ನನ್ನ ಮನದ ಯೋಚನೆಯನ್ನು ಹೇಳಿದ ಗುರುನಾಥರ ಶಕ್ತಿಯನ್ನು ತಿಳಿದು ಆತ ಅಲ್ಲಿಯೇ ಅವರ ಚರಣಕ್ಕೆರಗಿದನು. 

ನಮ್ಮ ತಂದೆಯವರಿಂದ ನನಗೆ ಪಟ್ಟಣದಲ್ಲಿ ಕೆಲ ಜಾಗವು ಬಂದಿತ್ತು. ಒಮ್ಮೆ ನಮ್ಮ ಮನೆಗೆ ಬಂದ ಗುರುನಾಥರು ನೇರವಾಗಿ ಅಲ್ಲಿಗೆ ಬಂದು ಹೀಗೆ ಹೇಳಿದರು... "ಏನು ಖಾಲಿ ಜಾಗ ಸಿಕ್ಕಿದೆ. ಏನು ಮಾಡಬೇಕೆಂದಿರುವೆ?" ಎನ್ನಲು ನಾನು "ಗುರು ಚಿತ್ತ" ಎಂದೆ. ಅದಕ್ಕವರು ಕಲ್ಯಾಣ ಮಂಟಪ ನಿರ್ಮಿಸು" ಎಂದರು. 

ಅಂದು ಆರ್ಥಿಕವಾಗಿ ಅಷ್ಟು ಸಬಲನಾಗಿಲ್ಲದಿದ್ದರೂ ಬ್ಯಾಂಕ್ ಸಾಲ ಮಾಡಿ ಗುರುವಿನ ಆದೇಶದಂತೆ ಕಲ್ಯಾಣ ಮಂಟಪ ನಿರ್ಮಿಸಿದೆ. ಆದರೆ ತೀವ್ರ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸಕಾಲದಲ್ಲಿ ಬ್ಯಾಂಕ್ ಬಡ್ಡಿ ನೀಡಲಾಗಲಿಲ್ಲ. ಇದರಿಂದ ಬ್ಯಾಂಕ್ ಸಿಬ್ಬಂದಿ ನಮ್ಮ ಕಲ್ಯಾಣ ಮಂಟಪಕ್ಕೆ ಬೀಗ ಹಾಕಿದರು. ಚಿಂತಾಕ್ರಾಂತನಾದ ನಾನು ಗುರುಗಳಲ್ಲಿ ಈ ಬಗ್ಗೆ ತಿಳಿಸಲು ಗುರುನಾಥರು "ನಾನಿದೀನಲ್ಲಾ ಭಯ ಬಿಡು" ಎಂದು ಧೈರ್ಯ ನೀಡಿ ಕಳಿಸಿದರು. 

ಇಂದು ಗುರುಕೃಪೆಯಿಂದಾಗಿ ಸಾಲಮುಕ್ತನಾಗಿದ್ದು ಎಲ್ಲವೂ ಸುಖವಾಗಿ ನಡೆಯುತ್ತಿದೆ. ಅಂದು ಅವರಿತ್ತ ಆದೇಶದ ಪಾಲನೆಯಷ್ಟೇ ನಮ್ಮ ಕೆಲಸವೆಂದು ದೃಢವಾಗಿ ನಂಬಿ ಜೀವನ ನಡೆಸುತ್ತಿದ್ದೇನೆ. ಪ್ರತೀ ಬಾರಿ ಏನೇ ಆಪತ್ತು ಬರುವ ಸಂದರ್ಭದಲ್ಲಿ ಮುಂಚಿತವಾಗಿ ಸ್ವಪ್ನದಲ್ಲಿ ಬಂದು ನಮ್ಮನ್ನು ಈ ಕುರಿತು ಎಚ್ಚರಿಸಿ ಕಾಪಾಡುತ್ತಿರುವರು ನನ್ನೊಡೆಯ. ಅದಕ್ಕಿಂತ ಹೆಚ್ಚಿನದೇನು ಬೇಕು ನಮಗೆ? ಎಂದು ಹೇಳಿ ಕಣ್ತುಂಬಿಕೊಂಡು ತನ್ನ ಕತೆಯನ್ನು ಮುಗಿಸಿದರು.......,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya gurugalaada venkatachala Avara Divya charanamruta galige nanna bhakti poorvaka namanagalu. Swamy Yellaranu ee kantaka dinda mukthi kottu manashanti honduvante asheervadisi. Sarvarannu uddarisi swamy. Hari om tatsat.

    ReplyDelete