ಒಟ್ಟು ನೋಟಗಳು

Thursday, January 5, 2017

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 92


    ಗ್ರಂಥ ರಚನೆ - ಚರಣದಾಸ 


ಗುರು ಮುನಿದರೆ......... 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಹರ  ಮುನಿದರೆ ಗುರು ಕಾಯಬಲ್ಲ. ಆದರೆ ಗುರು ಮುನಿದರೆ ಹರನೂ ಕಾಯಲಾರ. ಗುರು ಎಂದೂ ಯಾರನ್ನೂ ಬನ್ನಿ ಎಂದು ಕರೆಯೋಲ್ಲ. ಸದ್ಗುರುವೆಂದರೆ ಸಿಹಿ ಸಕ್ಕರೆಯಂತೆ. ಆದರೆ ಬಂದ ಮೇಲೆ ಗುರುವಾಕ್ಯಕ್ಕೆ ನಿಷ್ಠರಾಗಿರಬೇಕು. ತಪ್ಪಿದರೆ ಅನಾಹುತ ಕಟ್ಟಿಟ್ಟಬುತ್ತಿ. 

ಒಮ್ಮೆ ಬೆಳಗಿನ ಹೊತ್ತು ಸಾಗರದ ಕಡೆಯವರಾದ ಒಬ್ಬರು ಮದುವೆ ವಯಸ್ಸಿಗೆ ಬಂದ ತನ್ನ ಮಗಳೊಂದಿಗೆ ಗುರುನಿವಾಸ ಪ್ರವೇಶಿಸಿದರು. ಎಂದಿನಂತೆ ಅವರಿಗೂ ಬೆಳಗಿನ ತಿಂಡಿ-ಕಾಫಿ ವ್ಯವಸ್ಥೆ ಆಯಿತು. ಆ ಹುಡುಗಿಯು ಹಲವಾರು ಬಾರಿ ತನ್ನ ದುರ್ನಡತೆಯಿಂದ ಗುರುನಾಥರ ತಾಳ್ಮೆ ಪರೀಕ್ಷಿಸುತ್ತಿದ್ದಳು. 

ಬಹಳ ಹೊತ್ತು ಆ ಹುಡುಗಿಯ ದುರ್ನಡತೆಯನ್ನು ಸಹಿಸಿಕೊಂಡು ಬದಲಾಗಲು ಅವಕಾಶ ನೀಡಿದರೂ ಆಕೆ ತನ್ನ ಗುಣ ಬಿಡಲಿಲ್ಲ. 

ಆಗ ಅಲ್ಲೇ ಇದ್ದ ನನ್ನ ಹಾಗೂ ಇತರರನ್ನು ಕರೆದು ಅಯ್ಯಾ "ಈ ಬಳೆ, ಟೇಪು, ಉಂಗುರ, ಬಾಚಣಿಗೆ, ಹಣೆಬೊಟ್ಟು ಇದನ್ನೆಲ್ಲ ಮಾರುತ್ತಾರಲ್ಲ ಆ ಅಂಗಡಿಗೆ ಎನ್ ಕರೀತಾರಯ್ಯಾ?"  ಎಂದು ಪ್ರಶ್ನಿಸಿದರು. 

ತಕ್ಷಣಕ್ಕೆ ಉತ್ತರ ಹೊಳೆಯದ  ನಾವು ಒಂದೊಂದು ಉತ್ತರ ನೀಡಿದೆವು. 

ಆಗ ಆ ಹುಡುಗಿ "ಫ್ಯಾನ್ಸಿ ಅಂಗಡಿ" ಎಂದಳು. 

ತಕ್ಷಣ ಆ ಕಡೆ ತಿರುಗಿದ ಗುರುನಾಥರು "ಹಾಂ.. ಫ್ಯಾನ್ಸಿ ಅಂಗಡಿ ಮಾಲೀಕನೊಂದಿಗೆ ಧರ್ಮ ವಿರುದ್ಧವಾದ ದೇಹ ಸಂಬಂಧ ಹೊಂದಿರುವಾಗ ನಿನಗೆ ನೀನೊಂದು 'ಗರತಿ' ಎಂಬುದು ಮರೆತು ಹೋಗಿತ್ತೇನೋ ಅಲ್ವಾ? ಈಗ ನನ್ನೆದುರು ಬಂದು ನಾಟಕ ಮಾಡ್ತಿದ್ದೀಯಾ?" ಎಂದು ಗದರಿಸಿದರು. ಈ ಮಾತಿನಿಂದ ವಿಚಲಿತಳಾದ ಆಕೆ ತಲೆ ಬಗ್ಗಿಸಿ ನಿಂತಳು. 

ಆಗ ಮುಂದುವರೆದ ಗುರುನಾಥರು "ತಪ್ಪು ಮಾಡದವರಾರೂ ಇಲ್ಲ. ಆದರೆ ತಪ್ಪನ್ನು ಅರಿತು ಸರಿ ದಾರೀಲಿ ನಡೆಯೋ ಅಭ್ಯಾಸ ಮಾಡು. ಅದು ಬಿಟ್ಟು ನನ್ನ ಹತ್ತಿರ ನಿನ್ನ ಆಟ ತೋರಿಸ ಬಂದರೆ ನಿನ್ನ ಒಳಗಿನ ರಹಸ್ಯವೆಲ್ಲವನ್ನೂ ಬಯಲು ಮಾಡಬೇಕಾದೀತು ಎಚ್ಚರ....."

"ನಿನಗೇನು? ಮದುವೆ ಆಗಬೇಕಲ್ವಾ? ಇಂಥಾ ದಿನ, ಇಂಥಾ ಕಡೆಯಿಂದ ಇಂತಹ ವಾರ ಬರುವನು. ಅವನೊಂದಿಗೆ ವಿವಾಹವಾಗು. ಇನ್ನಾದರೂ ಚೆನ್ನಾಗಿ ಬಾಳ್ವೆ ಮಾಡು" ಎಂದು ಹೇಳಿ ಕಳುಹಿಸಿದರು. ಹೀಗೆ ಗುರುನಾಥರು ವ್ಯಕ್ತಿಯ ದೋಷವನ್ನು ತಿದ್ದಿ ಪರಿಹಾರವನ್ನು ನೀಡಿದರು. 

ಮೈಸೂರು ಮೂಲದ ವ್ಯಕ್ತಿಯೋರ್ವ ಖಾಸಗೀ ಕಂಪೆನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದರೂ ಆತನಿಗಿನ್ನೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಆತನ ತಂದೆ-ತಾಯಿಗಳು ಆಗಾಗ್ಗೆ ಗುರುನಿವಾಸಕ್ಕೆ ಬಂದು ಗುರುನಾಥರಲ್ಲಿ ಪ್ರಾರ್ಥಿಸುತ್ತಿದ್ದರು. 

ಒಂದು ದಿನ ಗುರುನಾಥರ ದೂರದ ಬಂಧುಗಳೂ ಆಗಿದ್ದ ಒಬ್ಬರು ತನ್ನ ಹೆಂಡತಿ ಹಾಗೂ ಮಗಳೊಂದಿಗೆ ಗುರುನಿವಾಸಕ್ಕೆ ಬಂದರು. 

ಗುರುನಾಥರು ಅವರನ್ನು  ಕುರಿತು ಹೀಗೆ ಕೇಳಿದರು. "ಏನಯ್ಯಾ, ನಿನ್ನ ಮಗಳಿಗೆ ಮದುವೆ ಮಾಡಲ್ವೇ? ಎನ್ನಲು ಅವರು "ವರನಿಗಾಗಿ ಶೋಧಿಸುತ್ತಿದ್ದೇವೆ ಗುರುಗಳೇ......" ಎಂದರು. 

ಅದಕ್ಕೆ ಗುರುನಾಥರು "ನಾನು ತೋರಿಸಿದ ಹುಡುಗನನ್ನು ಒಪ್ತೀರಾ?" ಎಂದರು. ಅವರು ಹೂಂ ಎಂದರು. ಕೂಡಲೇ ಗುರುನಾಥರು ಮೈಸೂರಿನ ಆ ಬಂಧುಗಳಿಗೆ ನಿವಾಸಕ್ಕೆ ಬರುವಂತೆ ತಿಳಿಸಿದರು. 

ಅವರು ಮೈಸೂರಿನಿಂದ ಬರುವ ಮೊದಲು ಗುರುನಾಥರು ಹುಡುಗಿಯನ್ನು ಹೀಗೆ ಕೇಳಿದರು. "ಏನಮ್ಮಾ ಒಂದು ಮಾತು ಕೇಳ್ತೇನೆ. ನಿಜ ಹೇಳಮ್ಮಾ" ಅಂದ್ರು. 

ಹೂಂ ಅಂದ ಆಕೆಯನ್ನು ಗುರುನಾಥರು, "ನೀನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೀಯಲ್ಲ ಅದರ ಕತೆ ಏನಾಯಿತು?" 

ಆಕೆ ಅಳುಕುತ್ತಲೇ "ಯಾಕೋ ಸರಿ ಬರಲಿಲ್ಲ. ಅದಕ್ಕೆ ಬಿಟ್ಟು ಬಿಟ್ಟೆ" ಅಂದಳು. 

ಆಗ ಗುರುನಾಥರು, "ನಿಮ್ಮ ಪ್ರೀತಿ ಸ್ನೇಹಕ್ಕೆ ಮಾತ್ರವೇ ಸೀಮಿತವಾಗಿತ್ತೋ... ಅಥವಾ ಅದಕ್ಕಿಂತ ಮುಂದುವರೆದಿತ್ತೋ?" ಎಂದರು. 

ಆಕೆ "ಇಲ್ಲ ಇಲ್ಲ ಎಂದೂ ಸ್ನೇಹದ ಮಿತಿ ದಾಟಿರಲಿಲ್ಲ" ಎಂದುತ್ತರಿಸಿದಳು. ಆಗ ಮತ್ತೆ ಗುರುನಾಥರು "ನಿಜ ಹೇಳು ತಾಯಿ" ಎಂದು ವಿನಂತಿಸಿದರೂ ಪ್ರಯೋಜನವಾಗಲಿಲ್ಲ. 

ಗುರುನಾಥರು ಸುಳ್ಳನ್ನು ಎಂದೂ ಸಹಿಸುತ್ತಿರಲಿಲ್ಲ. 

ಆಗ ಸಿಟ್ಟಿಗೆದ್ದ ಗುರುನಾಥರು "ನೋಡಮ್ಮಾ ನೀನೇ ಹೇಳುತ್ತೀಯೋ ಇಲ್ಲಾ ನಾನೇ ಹೇಳಲೋ?" ಎಂದು ಪ್ರಶ್ನಿಸಿದರು. 

ಆಕೆ:- "ಇಲ್ಲ ನಾನು ಸತ್ಯವನ್ನೇ ಹೇಳುತ್ತಿದ್ದೇನೆ" ಎಂದಳು. 

ಆಗ ಗುರುನಾಥರು "ಏನಮ್ಮಾ ಇಂಥಾ ದಿನ, ಇಷ್ಟು ಗಂಟೆ ಇಷ್ಟು ಮಿಮಿಷಕ್ಕೆ ನೀವಿಬ್ಬರೂ ಇಂತಹ ಊರಿನ ಇಂತಹ ಕೋಣೆಯಲ್ಲಿ ಒಟ್ಟಿಗಿದ್ದಿದ್ದು ಸುಳ್ಳೇ?" ಇಷ್ಟೇ ಬಾರಿ ನೀವಿಬ್ಬರೂ ಸೇರಿದ್ದು ಸತ್ಯವಲ್ಲವೇ?.... ಒಪ್ಕೋತೀಯಾ ಇಲ್ಲಾ.....? ಎಂದು ಕೇಳಿದರು. 

ಆಕೆ ಬೆದರಿ ನೀರಾಗಿ ತಲೆತಗ್ಗಿಸಿಕೊಂಡು ಆ ನಿಜವನ್ನು ಒಪ್ಪಿಕೊಂಡು ಗುರುನಾಥರ ಕಾಲಿಗೆರಗಿದಳು. ಆಗ ಪ್ರಶಾಂತರಾದ ಗುರುನಾಥರು, "ಹೋಗಲೀ  ಇನ್ನಾದರೂ ಮರ್ಯಾದೆಯಾಗಿ ಜೀವನ ನಿರ್ವಹಿಸುತ್ತೀಯಾ?" ಎನ್ನಲು ಆಕೆ ಆಯಿತೆಂದಳು. 

ಅಂದು ರಾತ್ರಿಯೇ ಮೈಸೂರಿನಿಂದ  ಬಂಡ ಆ ಗುರುಭಕ್ತರನ್ನು ಕರೆದು ಈ ಹುಡುಗಿಯೊಂದಿಗೆ ವಿವಾಹ ಬಂಧನಕ್ಕೆ ನಿಶ್ಚಯಿಸಿದರು. ಮುಂದೆ ಗುರುವಿನ ಅಣತಿಯಂತೆಯೇ ಅವರಿಬ್ಬ್ಬರ ವಿವಾಹವೂ ನೆರವೇರಿತು. ಇಂದು ಆ ಕುಟುಂಬ ಸುಖ ಜೀವನ ನಡೆಸುತ್ತಿದ್ದಾರೆ. 

ಅಂತೆಯೇ ನೆರೆ ರಾಜ್ಯದಲ್ಲಿ ನೆಲೆಸಿ ಖಾಸಗಿ ಕಂಪೆನಿ ಸ್ಥಾಪಿಸಿದ್ದ ಓರ್ವರು ಆಗಾಗ್ಗೆ ಗುರುನಾಥರ ದರ್ಶನಕ್ಕೆ ಬರುತ್ತಿದ್ದರು. ಅವರು ಅದಾಗಲೇ ಬಹುಕಾಲದಿಂದ ಗುರುಭಕ್ತರಾಗಿದ್ದರು. ಒಮ್ಮೆ ಗುರುನಿವಾಸಕ್ಕೆ ಬಂದ  ಅವರು ಗುರುನಾಥರಲ್ಲಿ ಹೀಗೆ ಹೇಳಿದರು. "ಗುರುಗಳೇ ನಾನು ಈಗ ಕೋಟ್ಯಾಂತರ ರೂಪಾಯಿ ಸಾಲದಲ್ಲಿ ಮುಳುಗಿ ಹೋಗಿದ್ದೇನೆ. ಕಂಪೆನಿ ಕೂಡ ಸರಿಯಾಗಿ ನಡೆಯುತ್ತಿಲ್ಲ. ಜೀವನ ನಿರ್ವಹಣೆ ಬಗ್ಗೆ ಆತಂಕವಾಗುತ್ತಿದೆ. ತಾವು ದಯಮಾಡಿ ನನ್ನ ಸಮಸ್ಯೆ ಪರಿಹರಿಸಿ ಉದ್ಧರಿಸಬೇಕು" ಎಂದು ಪ್ರಾರ್ಥಿಸಿದರು. 

ಆಗ ಗುರುನಾಥರು ಕೆಲ ಕ್ಷಣ ಸುಮ್ಮನಿದ್ದು ನಂತರ ಹೀಗೆ ಪ್ರಶ್ನಿಸಿದರು. "ಅಯ್ಯಾ, ನಿನಗೆ ಸಾಲ ತೀರಿಸಿ ನೆಮ್ಮದಿಯ ಜೀವನ ಬೇಕೋ ಅಥವಾ ಹಣ ಬೇಕೋ" ಎನ್ನಲು ಆತ ತಕ್ಷಣವೇ "ಎಲ್ಲ ನನಗೆ ಹಣ ಬೇಕು" ಎಂದರು. 

ಆಗ ಗುರುನಾಥರು "ಆಗಲಿ" ಎಂದು ಆಶೀರ್ವದಿಸಿ ಕಳಿಸಿದರು. ಇದಾಗಿ ಕೆಲವೇ ವರ್ಷಗಳಲ್ಲಿ (ಎರಡು) ಆತ ತನ್ನೆಲ್ಲಾ ಸಾಲದಿಂದ ಮುಕ್ತರಾದರು. ಮಾತ್ರವಲ್ಲ, ಕೈ ತುಂಬಾ ಯಥೇಚ್ಛ ಹಣ ಸಂಪಾದಿಸಿದರು. 

"ಇನ್ನೇನು ನನ್ನ ಜೀವನಕ್ಕೆ ತೊಂದರೆ ಇಲ್ಲ" ಎಂದುಕೊಂಡಿದ್ದ ಅವರು ಒಂದು ದಿನ ಇದ್ದಕ್ಕಿದ್ದಂತೆಯೇ ಹೃದಯ ತೊಂದರೆಯಿಂದ ಹಠಾತ್ತನೆ ನಿಧನರಾದರು. ಗುರುನಾಥರು  ಕೇಳಿದಾಗ ಜೀವ ಬೇಕೆಂದು ಕೇಳಿದ್ದರೆ  ಆ ವ್ಯಕ್ತಿ ಇನ್ನೂ ಬದುಕಿರುತ್ತಿದ್ದರೇನೋ......... ,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya Guruvarya venkatachala Yellaranu sadaa kaala Harasi asheervadisi kaapaduthare. Sarve jano sukinobavantu.

    ReplyDelete