ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 97
ಗ್ರಂಥ ರಚನೆ - ಚರಣದಾಸ
ನಡವಳಿಕೆಯೇ ಜಾತಿ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಜಾತಿಯೊಳಗೆ ಹುಟ್ಟಿ ಅಜಾತನಾದವನು ಸದ್ಗುರು. ಸದ್ಗುರುವಿಗೆ ನಡವಳಿಕೆಯೊಂದೇ ನಿಜವಾದ ಜಾತಿ. ಪರಿಶುದ್ಧ ಭಾವನೆಯೇ ಅವನ ಪೂಜೆ. ಶುದ್ಧ ಭಾವವಿರುವ ಭಕ್ತರೆಲ್ಲರೂ ಸದಾಕಾಲ ಗುರುವಿನ ರಕ್ಷಣೆಯಲ್ಲಿರುವರು.
ಗುರುನಾಥರು ಕೆಲವೊಮ್ಮೆ ಭಕ್ತರ ಕಾರಿನಲ್ಲಿ ಹೋಗುವಾಗ ರಸ್ತೆ ಬದಿಯಲ್ಲಿ ಕಾಫಿ-ಟೀ ಮಾರುವ ಸಣ್ಣ ಅಂಗಡಿ ಹತ್ತಿರ ಕಾರನ್ನು ನಿಲ್ಲಿಸಿ ಅಲ್ಲಿಂದ ಕಾಫಿ ತರಿಸಿ ಕುಡಿದು ಹೋಗುತ್ತಿದ್ದರು.
ಒಮ್ಮೆ ಗುರುನಾಥರು ನಿವಾಸದಲ್ಲಿದ್ದ ಸಮಯ. ಓರ್ವ ವ್ಯಕ್ತಿ ಅಂಜುತ್ತಲೇ ಒಳಗೆ ಪ್ರವೇಶಿಸಿ ನಮಸ್ಕರಿಸಿ ಕುಳಿತುಕೊಂಡರು.
ಆತನ ಕಡೆ ತಿರುಗಿದ ಗುರುನಾಥರು ಬಂಡ ಕಾರಣವೇನೆಂದು ಕೇಳಲು ಆತ ಹೀಗೆ ಹೇಳತೊಡಗಿದನು.
"ಸ್ವಾಮಿ, ಯಾವ ವ್ಯಾಪಾರ, ಕೆಲಸಕ್ಕೆ ಕೈ ಹಾಕಿದರೂ ಸರಿಯಾಗಿ ನೆಲೆ ನಿಲ್ಲಲು ಆಗುತ್ತಿಲ್ಲ. ನಮ್ಮದೊಂದು ಗಿರಣಿ ಅಂಗಡಿ ಇದೆ. ಅದರ ಆದಾಯ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ".
"ಹತ್ತು ಲಕ್ಷಕ್ಕೂ ಅಧಿಕ ಸಾಲವಾಗಿದೆ. ಆದರೆ ವಾಸಕ್ಕೆ ಸ್ವಂತ ಮನೆ ಇಲ್ಲ. ಈ ಮಧ್ಯೆ ವಿಗ್ರಹಗಳನ್ನು ನಿರ್ಮಿಸಿ ಮಾರುವ ಕಸುಬನ್ನು ಆರಂಭಿಸಿರುವೆ. ಆದರೆ ಯಾವುದೂ ಕೈ ಹಿಡಿಯುತ್ತಿಲ್ಲ. ಇನ್ನು ಜೀವನ ನಿರ್ವಹಣೆ ಹೇಗೆಂದು ತಿಳಿಯದೇ ನಿಮ್ಮ ಬಳಿಗೆ ಬಂದಿರುವೆ" ಎಂದು ಪ್ರಾರ್ಥಿಸಿದನು.
ಕೆಲಕಾಲ ಸುಮ್ಮನಿದ್ದ ಗುರುನಾಥರು "ನೀನು ಈಗ ಆರಂಭಿಸಿದ ಕೆಲಸದಲ್ಲಿಯೇ ನಿನ್ನ ಸಾಲವೆಲ್ಲವೂ ತೀರಿ ಹೋಗುವುದು. ನೀನೇ ನಿಂತು ಸ್ವಂತ ಮನೆ ಕಟ್ಟುತ್ತೀಯಾ?" ಎಂದು ಧೈರ್ಯ ತುಂಬಿ ಕಳಿಸಿದರು.
ಗುರುನಾಥರು ಹೇಳಿದಂತೆಯೇ ಇಂದು ಆ ವ್ಯಕ್ತಿ ನಾಡಿನ ಹೆಸರಾಂತ ಶಿಲ್ಪಿ ಎನಿಸಿರುವರು. ಮಾತ್ರವಲ್ಲ ತೀರಾ ಇತ್ತೀಚೆಗೆ ಸ್ವಂತ ಮನೆಯನ್ನು ನಿರ್ಮಿಸಿದ್ದು ಎಲ್ಲ ಆರ್ಥಿಕ ಭಾದೆಯಿಂದ ಮುಕ್ತರಾಗಿರುವರು.
ಆ ವ್ಯಕ್ತಿ ಪ್ರತೀ ವರ್ಷ ತಾನು ನಿರ್ಮಿಸಿದ ಮೊದಲ ವಿಗ್ರಹಗಳನ್ನು ಗುರುನಿವಾಸಕ್ಕೆ ಸಮರ್ಪಿಸುವ ಪರಿಪಾಠ ಇಟ್ಟುಕೊಂಡಿರುವರು.
ಒಮ್ಮೆ ಆ ವ್ಯಕ್ತಿಯ ಊರಿಗೆ ಹೋಗಿದ್ದ ಗುರುನಾಥರು ನೇರವಾಗಿ ಆ ವ್ಯಕ್ತಿಯ ಮನೆಗೆ ಹೋಗಿ ಎಲ್ಲರನ್ನು ಮಾತನಾಡಿಸಿ ಹೀಗೆ ಹೇಳಿದರು. "ಅಯ್ಯಾ, ಗುರುವಿಗೆ ಬೇಕಾಗಿದ್ದು ನಿಜ ಭಕ್ತಿಯೇ ವಿನಃ ಬಾಹ್ಯಾಡಂಬರವಲ್ಲ. ನಿನ್ನಿಂದ ಇನ್ನು ಮುಂದೆಯೂ ಬಹಳಷ್ಟು ಕೆಲಸ ಮಾಡಿಸಿಕೊಳ್ಳುವುದಿದೆ. ಅದನ್ನು ಕಾಲ ಬಂದಾಗ ಮಾಡಿಸಿಕೊಳ್ಳುತ್ತೇನೆ, ಯೋಚಿಸಬೇಡ, ಧೈರ್ಯವಾಗಿರು" ಎಂದು ಹರಸಿ ಕಳಿಸಿದರು.
ಇಂದು ಗುರುನಾಥರ ದೇಹಾಂತ್ಯವಾಗಿದ್ದಾಗ್ಯೂ ಹಲವಾರು ವಿಗ್ರಹ ನಿರ್ಮಾಣ ಕಾರ್ಯವನ್ನು ಗುರುಗಳೇ ನಿಂತು ಮಾಡಿಸಿಕೊಳ್ಳುತ್ತಿರುವರು.
ಗುರುನಾಥರ ದೇಹಾಂತ್ಯವಾದ ನಂತರ ನನಗೆ ಸಿಕ್ಕಿದ ಆ ವ್ಯಕ್ತಿ "ಸ್ವಾಮೀ, ಇಂದು ಗುರುನಾಥರ ಅನುಗ್ರಹದಿಂದ ಬರಿಗೈಲ್ಲಿದ್ದ ನಾನು ಎಲ್ಲವನ್ನು ಪಡೆದಿರುವೆ. ಅವರೇ ಮುಂದೆ ನಿಂತು ಎಲ್ಲವನ್ನೂ ನಡೆಸುತ್ತಿರುವರು" ಎಂದು ಕಣ್ಣು ತುಂಬಿಕೊಂಡು ಗುರುನಾಥರನ್ನು ಸ್ಮರಿಸಿದರು.
ಗುರು ತನ್ನ ನಿಜ ಭಕ್ತರನ್ನು ನೇರವಾಗಿ ಬಂದು ರಕ್ಷಿಸಬೇಕೆಂದಿಲ್ಲ. ಸ್ವಪ್ನದಲ್ಲೂ ಸಹ ಬಂದು ಕಾಪಾಡುವನು. ಏಕೆಂದರೆ, ಆತ ಕಾಲಾತೀತ, ದೇಶಾತೀತ, ಸಮಾಯಾತೀತ.
ದಕ್ಷಿಣ ಕನ್ನಡ ಜಿಲ್ಲೆಯವರಾದ ಒಬ್ಬ ವ್ಯಕ್ತಿ ಗುರುನಾಥರ ಬಗ್ಗೆ ತಿಳಿದು ಗುರುನಿವಾಸಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದರು.
ಗುರುವಿನ ಪರಮ ಭಕ್ತರಾದ ಆತ ಚರಣದಾಸನಾದ ನನ್ನ ಸಹಪಾಠಿಯ ಪತಿಯೆಂದು ಆ ನಂತರ ಅವರೇ ಹೇಳಿದಾಗ ತಿಳಿದುಬಂತು. ಒಮ್ಮೆ ಗುರುನಿವಾಸಕ್ಕೆ ಬಂದಿದ್ದ ಅವರು ನನ್ನೊಂದಿಗೆ, ಅವರಿಗೆ ಗುರುನಾಥರು ಸಿಕ್ಕ ಕಥೆಯನ್ನು ಹೀಗೆ ಹೇಳಿದರು.
"ದಕ್ಷಿಣ ಕನ್ನಡ ಜಿಲ್ಲೆಯವನಾದ ನನಗೆ ಕುಟುಂಬದಲ್ಲಿ ಸಹಕಾರವಿಲ್ಲದ ಕಾರಣ ಹೆಚ್ಚು ಓದಲಾಗಲಿಲ್ಲ. ಆದರೆ ನಾನು ನನ್ನ ಸ್ನೇಹಿತರ ತಂಡ ಕಟ್ಟಿಕೊಂಡು ಯಕ್ಷಗಾನ ಕಲಿತು ಉತ್ತರ ಭಾರತದ ಕಡೆ ಪ್ರದರ್ಶನ ನೀಡತೊಡಗಿದೆನು. ಅದರಿಂದ ಬದುಕು ಹಾಗೂ ಪ್ರಸಿದ್ಧಿಯೂ ಬಂದಿತು. ಜೊತೆಗೆ ಜ್ಯೋತಿಷ್ಯವನ್ನು ಕಲಿತು ಹೇಳುವ ಅಭ್ಯಾಸವಿಟ್ಟುಕೊಂಡಿದ್ದೇನೆ. ಇದಕ್ಕೂ ಮೊದಲು ನನಗೆ ಗಾಣಗಾಪುರಕ್ಕೆ ಹೋಗಬೇಕೆಂದು ಆಗಾಗ್ಗೆ ಅನಿಸುತ್ತಿತ್ತು. ಜೊತೆಗೆ ನನಗೂ ಒಬ್ಬ ಸಮರ್ಥ ಸದ್ಗುರು ಸಿಕ್ಕಬಾರದೇ ಎಂದು ಮನಸ್ಸು ಬಹಳವಾಗಿ ಹಂಬಲಿಸುತ್ತಿತ್ತು. ಹೀಗೆ ಕಾಲಕೂಡಿ ಬಂದು ಗಾಣಗಾಪುರ ತಲುಪಿದ ನಾನು ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದೆ. ರಾತ್ರಿ ಕನಸಿನಲ್ಲಿ ಒಬ್ಬ ಗಡ್ಡಧಾರಿ ಸನ್ಯಾಸಿಯ ದರುಶನವಾಯಿತು. ಬೆಳಿಗ್ಗೆ ಎದ್ದು ಸಿದ್ಧನಾಗಿ ನರಸಿಂಹ ಸರಸ್ವತಿಗಳ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದೆ. ಆಗ ಹಿಂದಿನ ರಾತ್ರಿ ಕನಸಿನಲ್ಲಿ ಬಂದಿದ್ದ ಆ ಗಡ್ಡಧಾರಿ ಸನ್ಯಾಸಿ ನನ್ನೆದುರು ನಿಂತಿರುವುದನ್ನು ನೋಡಿ ಆಶ್ಚರ್ಯವಾಯಿತು. ನನ್ನನ್ನು ಸಮೀಪಿಸಿದ ಅವರು 'ಏನಪ್ಪಾ, ಒಬ್ಬ ಗುರು ಬೇಕೂಂತ ಊರೆಲ್ಲ ಹುಡುಕುತ್ತಾ ಇದ್ಯಲ್ಲಾ ಸಿಕ್ಕಿದನೇ? ಚೆನ್ನಾಗಿದ್ಯಾ?" ಎಂದು ಒಮ್ಮೆ ನನ್ನ ತಲೆಯನ್ನು ಸವರಿದರು".
"ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದು ಇವರು ಹೇಗೆ ತಿಳಿದರು ಎಂದು ಆಶ್ಚರ್ಯ ಹಾಗೂ ಶರಣಾಗತ ಭಾವದಿಂದ ನಾನು ಅವರ ಚರಣಗಳಿಗೆ ಎರಗಿದೆ. ಇಂದು ನನ್ನ ಬದುಕು ಗುರು ಕರುಣೆಯಿಂದ ಚೆನ್ನಾಗಿದೆ" ಎಂದು ತಮ್ಮ ಕಥೆಯನ್ನು ಮುಗಿಸಿದರು......,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna bhakti poorvaka namanagalu. Sarvarigu arogya ayasu rakshe sadaa doreyali haagu yellara yelige honduvante asheervadisi. Sarve jano sukinobavantu.
ReplyDelete