ಒಟ್ಟು ನೋಟಗಳು

Friday, October 21, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 17

 

  ಸತ್ತ ನಾಯಿಗೆ ಜೀವ

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರು ಸಾಮಾನ್ಯವಾಗಿ ಅವರ ಮನೆಯ ಅಣತಿ ದೂರದಲ್ಲಿರುವ ಈಶ್ವರ ದೇಗುಲದ ಮುಂದಿನ ಅರಳಿ ಮರದ ಕೆಳಗೆ ಕುಳಿತು ಜನರ ಈತಿಬಾಧೆಗಳಿಗೆ ಪರಿಹಾರ ನೀಡುತ್ತಿದ್ದರು. ಕೆಲವೊಮ್ಮೆ ಅದೇ ಅವರ ದರ್ಬಾರ್ ಕೂಡ ಆಗಿರುತ್ತಿತ್ತು. ಊಟ, ಕಾಫಿ, ಎಲ್ಲವೂ ಭಕ್ತಾಧಿಗಳ ಮನೆಯಿಂದ, ಹೋಟೆಲ್ ಗಳಿಂದ ಬರುತ್ತಿತ್ತು.

ಒಮ್ಮೆ ಹೀಗೆ ಕುಳಿತಿದ್ದಾಗ ಒಬ್ಬ ವ್ಯಕ್ತಿ ಬಂದು ಹೀಗೆ ನುಡಿದರು: "ಸ್ವಾಮಿ, ಈಗ ಎಲ್ಲೆಡೆ ಹುಚ್ಚು ನಾಯಿ ಕಾಟ ವಿಪರೀತವಿದೆ. ನಿಮ್ಮ ಮನೆಯ ನಾಯಿಗಳಿಗೂ ಹುಚ್ಚು ನಾಯಿ ಕಡಿಯಬಹುದು.  ನೀವು ಹೂಂ ಅಂದ್ರೆ ಈ ನಾಯಿಗಳಿಗೆ ವಿಷ ಹಾಕಿ ಸಾಯಿಸಿ ಬಿಡ್ತೇನೆ. ಆಗ ತೊಂದರೆ ಇರುವುದಿಲ್ಲ" ಎಂದರು. 

ಸಾಮಾನ್ಯವಾಗಿ ಗುರುನಾಥರು ಇರುವೆಡೆ ನಾಲ್ಕು ನಾಯಿಗಳು ಸದಾ ಇರುತ್ತಿದ್ದವು. ಗುರುನಾಥರು ತೀಕ್ಷ್ಣವಾಗಿ ಆ ವ್ಯಕ್ತಿಯನ್ನೊಮ್ಮೆ ದಿಟ್ಟಿಸಿ ನೋಡಿ "ನಿನ್ನ ಮನಸ್ಸು ಹೇಗೆ ಹೇಳುತ್ತೋ ಹಾಗೆ ಮಾಡಪ್ಪಾ" ಎಂದರು. 

ಕೂಡಲೇ ಆ ವ್ಯಕ್ತಿ ಹೋಟೆಲ್ ನಿಂದ ಅನ್ನ ತಂದು ಅದರೊಂದಿಗೆ ವಿಷಯುಕ್ತವಾದ ಕೀಟನಾಶಕವನ್ನು ಹಾಕಿ ಕಲೆಸಿ, ಆ ನಾಲ್ಕು ನಾಯಿಗಳಿಗೂ ನೀಡಿದನು. ಇದ್ಯಾವುದರ ಅರಿವಿರದ ಆ ನಾಯಿಗಳು ಅದನ್ನು ಚೆನ್ನಾಗಿ ತಿಂದು ಅಲ್ಲೇ ಅರಳಿ ಮರದ ಕೆಳಗೆ ಮಲಗಿದವು. 

ಗುರುನಾಥರು ಅಲ್ಲೇ ಮಲಗಿದರು. ಇದಾಗಿ ಸುಮಾರು ಒಂದು ಗಂಟೆಗಳ ನಂತರ ಎದ್ದ ನಾಯಿಗಳು ಆ ತಿಂದ ಅನ್ನವನ್ನೆಲ್ಲ ವಾಂತಿ ಮಾಡಿಕೊಂಡು ಮೈ ಕೊಡವಿಕೊಂಡು ಹೊರಟವು. ಇದನ್ನು ಕಂಡ ಆ ವಿಷ ಉಣಿಸಿದ ವ್ಯಕ್ತಿ ಹಾಗೂ ಅಲ್ಲಿದ್ದವರು ದಿಗ್ಭ್ರಮೆಗೊಂಡರು. 

ಆಗ ಗುರುನಾಥರು "ಹುಟ್ಟಿಸಿದ ಆ ಸೃಷ್ಟಿಕರ್ತನಿಗೆ ಮಾತ್ರ ಸಾಯಿಸುವ ಅಧಿಕಾರವಿರುತ್ತೆ ಕಣಯ್ಯಾ. ನಿನ್ನಿಚ್ಛೆಯಂತೆ ಯಾವುದೂ ನಡೆಯೋಲ್ಲ ತಿಳೀತಾ?. ನೀನು ಇಲ್ಲಿಗೆ ಬಂದು ಮಾಡಿದ್ದಾದ್ರೂ ಏನು?" ಎಂದು ಕೇಳಿದಾಗ ಆ ವ್ಯಕ್ತಿ ನಿರುತ್ತರರಾದರು. 

ನಂತರ ಆ ವ್ಯಕ್ತಿ ತಾವೊಂದು ಬಾವಿ ತೋಡಿಸಬೇಕೆಂದೂ , ಎಲ್ಲಿ ತೋಡಿಸಿದರೆ ಎಷ್ಟು ಅಡಿ ಆಳದಲ್ಲಿ ನೀರು ಬರುವುದೆಂದು ಕೇಳಲು ಗುರುನಾಥರು ಅದಕ್ಕುತ್ತರ ನೀಡಿ ಒಂದು ದೊಡ್ಡ ಕಲ್ಲನ್ನು ನೀಡಿ "ಇದನ್ನು ಆ ಬಾವಿಯೊಳಗೆ ಹಾಕು. ನಿನ್ನ ಜೀವ ಉಳಿಸುತ್ತೆ" ಅಂದರು. 

ಅಲ್ಲಿಂದ ಹೊರಟ ಆ ವ್ಯಕ್ತಿ ಗುರುನಾಥರು ಅಂದಂತೆಯೇ ಆ ಕಲ್ಲನ್ನು ತಾನು ತೊಡಿಸುತ್ತಿದ್ದ ಬಾವಿಯೊಳಗೆ ಹಾಕಿದರು. 

ಒಮ್ಮೆ ತಾವು ತೋಡಿಸಿದ ಬಾವಿಗಿಳಿದ ಅವರು ನೀರು ಎಷ್ಟು ಬರುತ್ತಿದೆ ಎಂದು ವೀಕ್ಷಿಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ನೀರಿನ ಹರಿವು ಜಾಸ್ತಿಯಾಗಿ ಮುಳುಗಿ ಹೋಗುವ ಸ್ಥಿತಿ ನಿರ್ಮಾಣವಾಯಿತು. ಆಗ ಗುರುನಾಥರು ಅಂದು ನೀಡಿದ್ದ ಕಲ್ಲಿನ ಮೇಲೆ ಕಾಲಿಟ್ಟು ಮೇಲೇರಿ ಬಂದು ತನ್ನ ಜೀವ ಉಳಿಸಿಕೊಂಡರು. 

ಈ ಘಟನೆಯನ್ನು ನೋಡಿದಾಗ "ಯಾರನ್ನೂ  ಯಾವ ರೀತಿಯಲ್ಲಿಯೂ ನಿರ್ದೇಶನ ಮಾಡುವ ಹಕ್ಕು ನಿನಗಿಲ್ಲ. ಯಾರಾದರೂ ಮಾಡುತ್ತಿರುವ ಕೆಲಸದಲ್ಲಿ ನಿನ್ನ ಮೂಗು ತೂರಿಸಬೇಡ ಮತ್ತು ಸೃಷ್ಠಿಸುವ ಅರ್ಹತೆ ನಿನಗಿಲ್ಲವೆಂದ ಮೇಲೆ ಸಾಯಿಸುವ ಅಧಿಕಾರವೂ ನಿನಗಿಲ್ಲ" ಎಂಬ ಗುರುನಾಥರ ಮಾತು ನೆನಪಿಗೆ ಬರುತ್ತದೆ.......,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment