ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 20
ಎರಡು ದೇಹ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಘಟನೆ ಮೊದಲು ನಡೆದದ್ದು ಚರಣದಾಸನಾದ ನಾನು ಗುರುನಿವಾಸಕ್ಕೆ ಬಂದ ಮೊದಲ ದಿನಗಳಲ್ಲಿ ಗುರುನಾಥರು ಊರಿನಲ್ಲಿದ್ದಾಗ ಅಲ್ಲಿ ಸೌಂದರ್ಯ ಲಹರಿ ಅಭ್ಯಾಸ ಮಾಡುತ್ತಿದ್ದ ಹತ್ತು- ಹನ್ನೆರಡು ಮನೆಗಳಿಗೆ ಬೆಳಿಗ್ಗೆ ಅಥವಾ ಯಾವಾಗಲಾದರೂ ಒಮ್ಮೆ ಹೋಗಿ ಅರಿಶಿನ, ಕುಂಕುಮ, ಹಣ್ಣು, ತಿಂಡಿ ನೀಡಿ ಭಜನೆ ಮಾಡಿಸಿ ಬರುವ ಪರಿಪಾಠವಿದ್ದಿತು.
ಒಮ್ಮೆ ಗುರುನಾಥರು ಭಕ್ತರೊಬ್ಬರ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಆ ಮನೆಯವರ ಪತ್ನಿ "ಯೋಗಿಯ ಆತ್ಮಕಥೆ" ಯಲ್ಲಿ ಬರುವ "ಎರಡು ದೇಹದ ಸಂತ" ಎಂಬ ಕಥೆಯನ್ನು ಓದಿ "ಹೀಗಾಗಲು ಸಾಧ್ಯವೇ?" ಎಂದು ಸಂಶಯ ಹೊಂದಿದ್ದರು ಹಾಗೂ ಆ ಸಂಶಯವನ್ನು ಅಲ್ಲಿಯೇ ಇದ್ದ ಗುರುನಾಥರ ಮುಂದೆ ಹೇಳಿದರು.
ಆಗ ಆಕೆಯನ್ನು ಕರೆದ ಗುರುನಾಥರು ಸಖರಾಯಪಟ್ಟಣದಲ್ಲಿ ತಾನು ನಿತ್ಯವೂ ಹೋಗುತ್ತಿದ್ದ ಒಬ್ಬರ ಮನೆಗೆ ಕರೆ ಮಾಡಿ ಗುರುನಾಥರು ಇದ್ದಾರಾ? ಎಂದು ವಿಚಾರಿಸುವಂತೆ ತಿಳಿಸಿದರು. ಆಕೆ ಹಾಗೆಯೇ ಕರೆ ಮಾಡಿದರು. ಗುರುನಾಥರು ನಗುತ್ತಾ ಆಕೆಯ ಮನೆಯಲ್ಲಿಯೇ ಕುಳಿತಿದ್ದರು.
ಅತ್ತಲಿಂದ ಕರೆ ಸ್ವೀಕರಿಸಿದ ಮಹಿಳೆ "ಗುರುಗಳು ಈಗ ತಾನೇ ನಮಗೆಲ್ಲಾ ಹೂವು, ಹಣ್ಣು ನೀಡಿ ಆ ಕಡೆ ಹೋಗ್ತಾ ಇದ್ದಾರೆ, ಕರೆಯಲಾ, ಮಾತಾಡ್ತೀರಾ?" ಎಂದು ಕೇಳಿದರು. ಇತ್ತಲಿದ್ದ ಮಹಿಳೆ ಆಶ್ಚರ್ಯಗೊಂಡು ಆ ವಿಷಯವನ್ನು ಗುರುನಾಥರಿಗೆ ತಿಳಿಸಲು ಗುರುಗಳು "ಸರಿ, ಫೋನ್ ಇಡಮ್ಮಾ" ಎಂದು ತಿಳಿಸಿದರು. ಅಲ್ಲಿಗೆ ಪುಸ್ತಕ ಓದಿ ಆಕೆಯ ಮನದಲ್ಲಿ ಮೂಡಿದ್ದ ಸಂಶಯ ಪರಿಹಾರವಾಗಿತ್ತು.
ಇನ್ನೊಮ್ಮೆ ಗುರುಗಳಿಗೆ ಕುರುವಾಗಿ ಅವರು ಮಲಗಿದ್ದಲ್ಲಿಂದ ಏಳುವ ಸ್ಥಿತಿ ಇರಲಿಲ್ಲ. ಎತ್ತಿಕೊಂಡೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಸಖರಾಯಪಟ್ಟಣದಿಂದ ಸುಮಾರು ಮೂರೂವರೇ ಗಂಟೆ ಕ್ರಮಿಸುವಷ್ಟು ದೂರದಲ್ಲಿರುವ ಒಂದು ಪ್ರಸಿದ್ಧ ದಟ್ಟ ಕ್ಷೇತ್ರಕ್ಕೆ ಹೋದ ಗುರುನಾಥರು ಆ ದಿನ ಮಧ್ಯಾನ್ಹ ಅಲ್ಲಿ ತಯಾರಾದ ಆಹಾರ ವಿಷಯುಕ್ತವಾಗಿದ್ದು "ದಯಮಾಡಿ ಅದನ್ನು ಬಡಿಸಬೇಡಿ"ಎಂದು ವಿನಂತಿಸಿದರು.
ಆದರೆ ಅಲ್ಲಿನ ಆಡಳಿತಗಾರರು "ಇಂದು ಎರಡು ಸಾವಿರ ಜನರಿಗೆ ಆಹಾರ ಸಿದ್ಧವಾಗಿದ್ದು ಮತ್ತೊಮ್ಮೆ ತಯಾರಿಸುವುದು ಕಷ್ಟವೆಂದೂ ತಾವು ಹೇಳಿದ ಮಾತನ್ನು ಹೇಗೆ ನಂಬುವುದು?" ಎಂದೂ ಕೇಳಿದರು. ಅದಕ್ಕೆ ಗುರುನಾಥರು ಬೇಕಾದಲ್ಲಿ ನಾಯಿಗೆ ಹಾಕಿ ಪರೀಕ್ಷಿಸಿ ಎನ್ನಲು ಅವರು ಹಾಗೆಯೇ ಮಾಡಿದರು. ಅದನ್ನು ತಿಂದ ನಾಯಿ ಅಸ್ವಸ್ಥಗೊಂಡಿತು. ನಂತರ ಗುರುನಾಥರು ಅಲ್ಲಿಂದ ತೆರಳಿದರು.
ಕ್ಷೇತ್ರದ ಘನತೆ ಕಾಪಾಡಿದ ಗುರುನಾಥರಿಗೆ ಒಂದು ಕೃತಜ್ಞತೆಯನ್ನು ತಿಳಿಸಲಿಲ್ಲವಲ್ಲಾ ಎಂದು ಅಲ್ಲಿಂದ ಹೊರಟ ಆಶ್ರಮದ ವ್ಯಕ್ತಿಯೊಬ್ಬರು ನೇರವಾಗಿ ಆಶ್ರಮದಿಂದ ಎಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಗುರುನಾಥರ ಸಂಬಂಧಿಕರ ಮನೆಗೆ ಬಂದು ನಡೆದ ಘಟನೆಯನ್ನು ವಿವರಿಸಿ "ಎಲ್ಲಿದ್ದಾರೆ ಗುರುನಾಥರು?" ಎಂದು ಕೇಳಿದರು.
ಇದನ್ನು ಕೇಳಿ ಆಶ್ಚರ್ಯಗೊಂಡ ಅವರ ಬಂಧುಗಳು "ಗುರುನಾಥರು ಕುರುವಾಗಿ ಮಲಗಿದ್ದು ನಡೆಯುವ ಸ್ಥಿತಿಯಲ್ಲಿಯೇ ಇಲ್ಲ. ಅವರು ಊರು ಬಿಡದೆ ಬಹಳ ಕಾಲವಾಯ್ತು. ಇನ್ನು ಇಲ್ಲಿಗೆ ಬರಲು ಅದೆಂತು ಸಾಧ್ಯ" ಎಂದು ಪ್ರಶ್ನಿಸಿದರು. ಇದನ್ನು ಕೇಳಿದ ಆ ವ್ಯಕ್ತಿ ದಿಗ್ಭ್ರಮೆಗೊಂಡರು. ಸರ್ವಶಕ್ತ ಗುರು ಮಾತ್ರವೇ ಇಂತಹ ಘಟನೆಗಳನ್ನು ನಡೆಸಲು ಸಾಧ್ಯ ಅಲ್ಲವೇ? ....... , , , , , ,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment