ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 6
ಅಹಂಭಾವ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಆಗಿನ್ನೂ ಚರಣದಾಸನಾದ ನಾನು ಗುರುನಿವಾಸಕ್ಕೆ ಆಗಾಗ್ಗೆ ಬಂದು ಕೆಲ ದಿನವಿದ್ದು ನಂತರ ವಾಪಸಾಗುತ್ತಿದ್ದ ಕಾಲ.
ನನ್ನಲ್ಲಿ ನಾನೊಬ್ಬನೇ ಸರಿಯಾಗಿರುವವ ಎಂಬ ಭಾವವಿತ್ತು. ಒಮ್ಮೆ ಊರಿನ ರಾಜಕೀಯ ವ್ಯವಸ್ಥೆಗಳ ಬಗ್ಗೆ ಅಸಮಾಧಾನಗೊಂಡ ನಾನು ಮನೆಯಿಂದ ನೇರವಾಗಿ ಗುರು ನಿವಾಸಕ್ಕೆ ಬಂದವನೇ ಗುರುಗಳಲ್ಲಿ, "ನೋಡಿ ಸಾರ್, ಈ ಜಗತ್ತಿನಲ್ಲಿ ಸತ್ಯ-ಪ್ರಾಮಾಣಿಕತೆ, ಧರ್ಮವೆಂಬುದೆಲ್ಲ ಕೇವಲ ಪದಗಳು, ಸಿದ್ಧಾಂತಗಳಷ್ಟೇ. ಇಲ್ಲಿ ಅವ್ಯಾವುದಕ್ಕೂ ಬೆಲೆ ಇಲ್ಲ. ಇಷ್ಟು ದಿನ ಪ್ರಾಯಾಣಿಕವಾಗಿ ಬದುಕಿದೆ. ಇನ್ನು ಈ ಕ್ಷಣದಿಂದ ಅದಕ್ಕೆ ವಿರುದ್ಧವಾಗಿ ಬದುಕಿ ತೋರಿಸುತ್ತೇನೆ" ಎಂದೆ ಭಾವೋದ್ವೇಗದಿಂದ.
ನನ್ನತ್ತ ಸುಮ್ಮನೆ ದೃಷ್ಟಿ ಹಾಯಿಸಿದ ಗುರುನಾಥರು, ಆ ಕ್ಷಣದಿಂದ ನನ್ನನ್ನು ಮೂರು ದಿನಗಳ ಕಾಲ ಒಂದು ಕ್ಷಣವೂ ಬಿಡದಂತೆ ಅವರ ಜತೆಯಲ್ಲೇ ಇರಿಸಿಕೊಂಡಿದ್ದರು.
ಗುರುವಿನ ಮರ್ಮವನ್ನರಿಯದ ನಾನು ಗೆದ್ದೆನೆಂಬ ಭಾವದಲ್ಲಿ ಗುರುಗಳೊಂದಿಗೆ ಇರುತ್ತಿದ್ದೆ. ಆ ಕಾಲದಲ್ಲಿ ಅಟ್ಟದ ಮೇಲೆ ಮಲಗುತ್ತಿದ್ದ ನನ್ನೊಡೆಯ ರಾತ್ರಿ ಎಷ್ಟೊತ್ತಿಗೆ ಎದ್ದರೂ ಕೂಡಲೇ ನಾನು ಏಳುತ್ತಿದ್ದೆ ಹಾಗೂ ಅವರ ಎಲ್ಲಾ ಕೆಲಸಗಳಲ್ಲೂ ಜೊತೆಯಾಗಿರುತ್ತಿದ್ದೆ. ಗುರುನಾಥರು ನನ್ನ ಕೈ ಹಿಡಿದು ನಡೆಯುತ್ತಿದ್ದರೆ ನಾನು ಸಿಟ್ಟು ಹಾಗೂ ಅಸಮಾಧಾನದಿಂದ ಅವರ ಕೈಗಳನ್ನು ಬಿಗಿಯಾಗಿ ಹಿಡಿದಿರುತ್ತಿದ್ದೆ. ಆದರೆ ಆ ಕರುಣಾಳುವಿನ ಮೌನವನ್ನು ನಾನು ಅರ್ಥೈಸಿಕೊಳ್ಳಲಿಲ್ಲವಲ್ಲಾ ಎಂದು ನೆನೆದು ಇಂದು ಕಣ್ಣೀರಿಡುತ್ತೇನೆ.
ಹೀಗೆ ಎರಡು ದಿನ ಕಳೆಯಿತು. ಎರಡನೇ ದಿನ ರಾತ್ರಿ ಮಲಗುವ ಮುನ್ನ ಗುರುನಾಥರು ಒಂದು ತುಂಬು ಕಾಯಿಯನ್ನು ನನಗೆ ನೀಡಿ "ಇಟ್ಕೋ ಇದನ್ನು" .. ಅಂದ್ರು. ನಾ ಮತ್ತದೇ ಸಿಟ್ಟಿನಿಂದ ಆ ಕಾಯಿಯನ್ನು ನೆಲದ ಮೇಲೆ ಕುಕ್ಕಿದೆ. ಮರುದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದವರೇ ಗುರುನಾಥರು ಹೀಗೆ ಹೇಳಿದರು:
"ಅಯ್ಯಾ ನನ್ನದೊಂದು ಮಾತು ನಡೆಸಿ ಕೊಡ್ತೀಯಾ?" ಎಂದರು. ನಾನು "ಹೂಂ" ಎಂದು ತಲೆಯಾಡಿಸಿದೆ. ಮುಂದುವರಿಸಿದ ಗುರುನಾಥರು "ನೋಡು ನೀನು ನಡೀತಿರೋ ದಾರಿ ಈಗ ಸರಿ ಇದೆ. ದಯಮಾಡಿ ದಾರಿ ಬದಲಿಸಬೇಡ ಆಯ್ತಾ? ನಾ ಭರವಸೆ ಕೊಡ್ತೀನಿ. ನೀ ಸೋಲೊದಿಲ್ಲ. ಗೆದ್ದೇ ಗೆಲ್ಲುತ್ತೀಯಾ...... ಆಯಿತೆನೆಯ್ಯಾ?" ಎಂದು ಕೈ ಮುಗಿದರು.
ಕೂಡಲೇ ನಾನು "ಆಯ್ತು" ಎಂದಷ್ಟೇ ಹೇಳಿ ಗುರುನಾಥರ ಕಾಲಿಗೆರಗಿದೆ. ಈಗ ನಾನು ನಡೆದು ಬಂದ ಹಾದಿಯನ್ನು ಅವಲೋಕಿಸಿದಾಗ, ಅಂದು ನನ್ನೊಡೆಯನ ಕರುಣೆ ಇರದಿದ್ದಲ್ಲಿ ನಾನು ಇಂದು ಸಮಾಜ ಘಾತಕ ಶಕ್ತಿಯಾಗಿ ಬೆಳೆದಿರುತ್ತಿದ್ದೆ. ಹೀಗೆ ತನಗಾಗಿ ಏನನ್ನೂ ಅಪೇಕ್ಷಿಸದೇ ಅವರಿಗೆ ಯಾವ ರೀತಿಯಲ್ಲೂ (ಲೌಕಿಕವಾಗಿ) ಸಂಬಂಧವಿರದ ನಮ್ಮಂತವರ ಮನಃ ಪರಿವರ್ತನೆ ಹಾಗೂ ಏಳಿಗೆಗಾಗಿಯೇ ಪೂರ್ಣ ಜೀವನ ಸವೆಸಿದ ಆ ನನ್ನೊಡೆಯನ ಪ್ರೀತಿಯನ್ನು ನೆನೆದಾಗಲೆಲ್ಲಾ ನಾನು ಭಾವಪರವಶನಾಗುತ್ತೇನೆ.
ಹಾಗೆಯೇ ಒಮ್ಮೆ ಗುರುನಾಥರು ತಮ್ಮ ಇನ್ನೊಂದು ಮನೆಯಲ್ಲಿ ಆಸೀನರಾಗಿದ್ದರು. ಎಂದಿನಂತೆ ಭಕ್ತಾದಿಗಳು ಬಂದಿದ್ದರು. ಅದು ಸಂಜೆಯ ಹೊತ್ತು. ಗುರು ದರ್ಶನಕ್ಕಾಗಿ ಬಂದ ಓರ್ವ ವ್ಯಕ್ತಿ ಕುಳಿತಲ್ಲೇ ಚಡಪಡಿಸುತ್ತಿದ್ದರು. ಕಾರಣ ಆತ ಯಾವುದೋ ಸಮಸ್ಯೆ ಹೊತ್ತು ಬಂದಿದ್ದರು. ಆದರೆ ಗುರುನಾಥರಿನ್ನೂ ಅವರತ್ತ ತಿರುಗಿರಲಿಲ್ಲ. ಆ ವ್ಯಕ್ತಿ ಪ್ರತಿ ದಿನ ಸಂಜೆ ಹೊತ್ತಿಗೆ ಮದ್ಯ ಸೇವನೆ ಹಾಗೂ ಧೂಮಪಾನ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದು ಅಂದು ಹೋಗಲಾಗದೆ ಚಡಪಡಿಸುತ್ತಿದ್ದರು.
ಇದನ್ನು ಅಂತಃಚಕ್ಷುವಿನಿಂದ ಅರಿತ ಗುರುನಾಥರು ತಮ್ಮೊಬ್ಬ ಶಿಷ್ಯನನ್ನು ಕರೆದು ಆ ವ್ಯಕ್ತಿ ಬಳಸುತ್ತಿದ್ದ ಬ್ರಾಂಡ್ ನ ಮದ್ಯೆ ಹಾಗೂ ಸಿಗರೇಟನ್ನು ತರಿಸಿ ಆ ವ್ಯಕ್ತಿಯನ್ನು ಬದಿಗೆ ಕರೆದು ಅವರಿಗೆ ನೀಡಿದರು. ಈ ಘಟನೆಯಿಂದ ಆ ವ್ಯಕ್ತಿ ವಿಚಲಿತರಾದರು. ಆಗ ಗುರುನಾಥರು "ಇರಲಿ ಇರಲಿ ಸ್ವಾಮಿ ..... ಈ ಹೊತ್ತಿಗೆ ದಿನವೂ ಇದನ್ನು ಸೇವಿಸಿ ಅಭ್ಯಾಸವಾಗಿದೆ ಅಲ್ಲವೇ? ತಗೊಳ್ಳಿ ತಗೊಳ್ಳಿ" ಎಂದು ನುಡಿದರು ನಗುತ್ತಾ ........ ಅದೇ ಕೊನೆ ಮತ್ತೆಂದೂ ಆ ವ್ಯಕ್ತಿ ಮದ್ಯೆ ಹಾಗೂ ಸಿಗರೇಟನ್ನು ಮುಟ್ಟಲಿಲ್ಲ.
ಹಾಗೆಯೇ ಮತ್ತೊಮ್ಮೆ ಅದ್ವೈತ ಪೀಠದ ಶ್ರೀ ಶ್ರೀ ಶ್ರೀಗಳವರು ಗುರು ನಿವಾಸಕ್ಕೆ ಬಂದ ಸಂದರ್ಭ ಭಕ್ತರೆಲ್ಲರೂ ಕೂಡಿ ಮೈ ಮರೆತು ಕುಣಿಯುತ್ತಿದ್ದರು.
ಆಗ ಅಲ್ಲಿಗೆ ಬಂದ ಅದೇ ಊರಿನ ವ್ಯಕ್ತಿಯೊಬ್ಬ ತಾವೂ ಅವರೊಂದಿಗೆ ಸೇರಿ ಕುಣಿಯಲಾರಂಭಿಸಿದರು. ಆತ ಕಂಠಪೂರ್ತಿ ಮದ್ಯ ಸೇವಿಸಿ ಬಂದಿದ್ದನು. ತುಸು ಹೊತ್ತಾದ ಬಳಿಕ ತನ್ನ ಸೊಂಟದಿಂದ ಒಂದಷ್ಟು ಹಣವನ್ನು ತೆಗೆದು ಗುರುನಾಥರು ಆ ಹಣವನ್ನು ಆ ಮದ್ಯವ್ಯಸನಿಯ ಕಿಸೆಗೆ ತುರುಕಿ "ಇನ್ನಷ್ಟು ಕುಡಿದು ಬಂದು ಕುಣಿಯಬೇಕು ಹೋಗಿ ಬಾ" ಎಂದರು.
ಅಲ್ಲಿಂದ ಹೊರಟ ಆ ವ್ಯಕ್ತಿ ಅಂದು ಅಲ್ಲಿಗೆ ಬರಲೇ ಇಲ್ಲ. ಮರುದಿನ ಬೆಳಿಗ್ಗೆ ಶ್ವೇತ ವಸ್ತ್ರಧಾರಿಯಾಗಿ ತನ್ನ ಪತ್ನಿಯೊಂದಿಗೆ ಗುರುನಿವಾಸಕ್ಕೆ ಬಂದ ಆ ವ್ಯಕ್ತಿ ಗುರುಚರಣಗಳಿಗೆ ನಮಸ್ಕರಿಸಿ ಸ್ವಾಮಿ, ತಾನಿನ್ನು ಮದ್ಯ ಕುಡಿಯುವುದಿಲ್ಲವೆಂದೂ ತನಗೆ ಆಶೀರ್ವದಿಸಬೇಕೆಂದೂ ಪ್ರಾರ್ಥಿಸಿದನು ಹಾಗೂ ಅಂತೆಯೇ ನಡೆದುಕೊಂಡನು.
ಹೀಗೆ ಕೇವಲ ತನ್ನ ದೃಷ್ಟಿ ಮಾತ್ರದಿಂದ ಜಾತಿ ಮತ ಪಂಥಗಳನ್ನು ಮೀರಿ ಶರಣಾಗಿ ಬಂದ ಪ್ರತಿ ಜೀವಿಯನ್ನು ಸನ್ಮಾರ್ಗಕ್ಕೆ ತರುತ್ತಿದ್ದ ನಮ್ಮ ಗುರುನಾಥರ ಕಾರುಣ್ಯ ಪ್ರೀತಿಗೆ ಸರಿಸಾಟಿ ಗುರುನಾಥರು ಮಾತ್ರವೇ ತಾನೇ ..... ? ...... ,,,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment