ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 11
ಗುರು ಗೋಪ್ಯ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಘಟನೆ ನಾನು ಗುರು ನಿವಾಸಕ್ಕೆ ಬಂದು ಹೋಗುತ್ತಿದ್ದ ಸಂದರ್ಭದಲ್ಲಿ ನಡೆದದ್ದು. ಆಗಿನ್ನೂ ನಾನು ಬಂದು ವಾರ-ಹದಿನೈದು ದಿನವಿದ್ದು ವಾಪಸಾಗುತ್ತಿದ್ದ ಕಾಲ.
ಒಮ್ಮೆ ಗುರುನಾಥರು ನನ್ನನ್ನು ಕೆಲ ಭಕ್ತರೊಡನೆ ಓರ್ವರ ಕಾರಿನಲ್ಲಿ ಬಾಣಾವರದ ವೇದಿಕೆಗೆ ಹೋಗಿ ಬರುವಂತೆ ಹೇಳಿದರು. ಇದಕ್ಕೂ ಮೊದಲು ನಾನು ಗುರುನಿವಾಸಕ್ಕೆ ಬರುತ್ತಿದ್ದಾಗ ಅವಕಾಶ ಸಿಕ್ಕಾಗ ಬಾಣಾವರದ ವೇದಿಕೆಯಲ್ಲಿ ಉಳಿದು ಬೆಳಗಿನ ಜಾವದವರೆಗೆ ವೇದಿಕೆಗೆ ಪ್ರದಕ್ಷಿಣೆ ಹಾಕಿ ಕೆಲ ಹೊತ್ತು ಅಲ್ಲಿಯೇ ಮಲಗಿ ನಂತರ ದಾರಿಯಲ್ಲಿ ಸಿಕ್ಕ ವಾಹನಕ್ಕೆ ಕೈ ತೋರಿಸಿ ಸಖರಾಯಪಟ್ಟಣಕ್ಕೆ ಬರುತ್ತಿದ್ದೆ. ಹೀಗೆ ಮಲಗಿರುತ್ತಿದ್ದಾಗ ಆ ವೇದಿಕೆಯೊಳಗಿನಿಂದ ಹಲವಾರು ಅಗೋಚರ ಅನುಭವವಾಗುತ್ತಿತ್ತು.
ಹೀಗೆ ಭಕ್ತರ ಕಾರಿನಲ್ಲಿ ಬಾಣಾವರಕ್ಕೆ ಬಂದ ಸಂದರ್ಭ. ನಾನು ಕುತೂಹಲ ತಡೆಯಲಾರದೆ ಆ ಕಾರಿನ ಮಾಲೀಕರಲ್ಲಿ "ಈ ವೇದಿಕೆ ಸಮೀಪವಿದ್ದಾಗ ಹಲವಾರು ಅನುಭವವಾಯ್ತು" ಎಂದೆ. ಕೂಡಲೇ ಆ ವ್ಯಕ್ತಿ "ಅದೇನೆಂದು ಹೇಳಿ" ಎಂದು ಒತ್ತಾಯಿಸತೊಡಗಿದರು. ನಾನು ಹೇಳಲಿಲ್ಲ. ಆಗ ಆತ ಆಧ್ಯಾತ್ಮ ವಿಚಾರಗಳನ್ನು ಬೇರೆಯವರಲ್ಲಿ ಹಂಚಿಕೊಳ್ಳಬಾರದು. ಆದರೆ, ಗುರುಭಕ್ತರು ಹಂಚಿಕೊಂಡರೆ ಪರವಾಗಿಲ್ಲ ಹೇಳಿ.. ಎಂದು ಒತ್ತಾಯಿಸತೊಡಗಿದರು. ಗುರುವೆಂದರೇನೆಂದು ಅರಿವಿರದ ನಾನು ನನಗಾದ ಅನುಭವವನ್ನು ಅವರಲ್ಲಿ ಹಂಚಿಕೊಂಡೆ. ನಂತರ ವೇದಿಕೆಗೆ ನಮಸ್ಕರಿಸಿ ಅಲ್ಲಿಂದ ಗುರುನಿವಾಸಕ್ಕೆ ಬಂದೆನು.
ನನ್ನನ್ನು ಕಂಡಾಕ್ಷಣ ಗುರುದೇವರು ಕೇಳಿದ ಮೊದಲ ಪ್ರಶ್ನೆ - "ಏನಯ್ಯಾ, ನಿನ್ನ ಬ್ಯಾಂಕ್ ಆಕೌಂಟ್ ನಂಬರ್, ಹಣ ಎಷ್ಟಿದೆ ಅಂತ ಯಾರಾದ್ರೂ ಬೇರೆಯವರಿಗೆ ಹೇಳ್ತೀಯೇನಯ್ಯಾ?" ಎಂದರು. ಮೊದಲು ಅವರಾಡಿದ ಈ ಮಾತಿನ ಅರ್ಥ ನನಗೆ ತಿಳಿಯಲಿಲ್ಲ. ಆದರೆ, ತಡ ನಂತರ ದಿನಕ್ಕೆ ಒಂದು ಬಾರಿಯಾದರೂ ಈ ಪ್ರಶ್ನೆ ಕೇಳತೊಡಗಿದರು. ಆಗ ನನಗೆ ನಾ ಮಾಡಿದ ತಪ್ಪಿನ ಅರಿವಾಯ್ತು. ಆ ಮೇಲೆ ಒಂದು ಶುಕ್ರವಾರ ರಾತ್ರಿ ನಾನು ಬೆಂಗಳೂರಿಗೆ ಹೊರಡುವ ಮುನ್ನ ಗುರುಚರಣಕ್ಕೆ ನಮಸ್ಕರಿಸಲು ನನ್ನ ತಲೆ ಮೇಲೆ ಕೈ ಇಟ್ಟ ಗುರುನಾಥರು "ಗುರು ಅಂದ್ರೆ ಒಂದು ಖಜಾನೆ. ಆ ಖಜಾನೆಯ ಕೀಲಿ ಕೈಯನ್ನು ಯಾರಿಗೂ ಕೊಡಬಾರದು ತಿಳಿತಾ?" ಎಂದು ಹೇಳಿದರು. ಅನಂತರ ಬಾಣಾವರದಲ್ಲಿ ಈ ಮೊದಲು ನನಗಾಗುತ್ತಿದ್ದ ಅನುಭವವನ್ನು ಮತ್ತೆ ಗಳಿಸಲು ಬಹಳ ಶ್ರಮ ಪಡಬೇಕಾಯ್ತು. ಅದನ್ನು ನೆನಪಿಸಿಕೊಂಡಾಗಲೆಲ್ಲಾ "ಗುರುಗೋಪ್ಯ ಆ ಆಂತರ್ಯದ ಅನುಭವ ಕೇವಲ ದರ್ಶನಕ್ಕಷ್ಟೇ ವಿನಃ ಪ್ರದರ್ಶನಕ್ಕಲ್ಲ" ಎಂಬ ನನ್ನೊಡೆಯನ ಮಾತು ನೆನಪಾಗುತ್ತದೆ........ ,,,,,,,,,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment