ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 12
ಸಹೋದರಿಗೆ ವರ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅದು 2002 ಅಕ್ಟೊಬರ್ ಸಮಯ. ಚರಣದಾಸನಾದ ನಾನು ಮುಖ್ಯ ಪರೀಕ್ಷೆ ಬರೆಯಲು ಅಣಿಯಾಗುತ್ತಿದ್ದ ಸಂದರ್ಭ. ಬೆಂಗಳೂರಿನ ಕೂಡಲೀ ಶಾಖಾ ಮಠದಲ್ಲಿ ಗುರುನಾಥರು ಇರುವರೆಂದು ತಿಳಿದ ಚರಣದಾಸನಾದ ನಾನು ಮುಖ್ಯಪರೀಕ್ಷೆಯ ಅರ್ಜಿಯೊಂದಿಗೆ ಅಲ್ಲಿಗೆ ತೆರಳಿದೆನು.
ಇದೀಗ ವಿದೇಶದಲ್ಲಿರುವ ಓರ್ವ ವೈದ್ಯರೊಡನೆ ಮಠದ ಬಾಗಿಲಿನಲ್ಲಿ ಕುಳಿತಿದ್ದ ಗುರುನಾಥರು ಚರಣದಾಸನಾದ ನನ್ನನ್ನು ಪೂರ್ತಿಯಾಗಿ ಆಶೀರ್ವದಿಸಿ, ನಿನಗೆ ಪೋಲಿಸ್ ವೃತ್ತಿ ಬೇಡ, ಕಂದಾಯ ಅಧಿಕಾರಿ (a.c.) ಆಗು, ಆಗ್ತೀಯಾ, ಆಯ್ತಾ ಎಂದು ಹೇಳಿ ಕಳಿಸಿದರು. ನಂತರ ನನ್ನ ಮುಖ್ಯ ಪರೀಕ್ಷೆ ಮುಗಿದ ದಿನ ಸಂಜೆ
(18-10-2002) ಬೆಂಗಳೂರಿನ ಮತ್ತೀಕೆರೆಯಲ್ಲಿ ಭಕ್ತರೊಬ್ಬರ ಮನೆಗೆ ಬಂದಿರುವರೆಂಬ ಮಾಹಿತಿ ಪಡೆದ ನಾನು ಅಲ್ಲಿಗೆ ದೂರವಾಣಿ ಕರೆ ಮಾಡಲು, "ನನ್ನ ನೋಡೋಕೆ ಬರಲ್ವೇನಯ್ಯಾ?" ಎಂದು ಅಕ್ಕರೆಯಿಂದ ಕೇಳಿದ ಗುರುನಾಥರು ಕೂಡಲೇ ಸುಮ್ಮನಿರು, ನಾನೇ ಅಲ್ಲಿಗೆ ಬರ್ತೀನಿ ಎಂದು ಹೇಳಿದರು ಚರಣದಾಸನಲ್ಲಿ ವಾಹನ ಸೌಲಭ್ಯ ಅಥವಾ ಹಣಕಾಸು ಇರಲಿಲ್ಲ ಎಂಬ ಸತ್ಯ ಅವರಿಗೆ ತಿಳಿದಿತ್ತು.
ನಂತರ ಮರುದಿನ (19 -10-2002) ಬನಶಂಕರಿಯಲ್ಲಿನ ಚರಣದಾಸನ ಅಕ್ಕನ ಮನೆ ಇರುವ ಬೀದಿಯಲ್ಲಿಯೇ ವಾಸವಿರುವ ಒಬ್ಬರ ಮನೆಗೆ ಕೂಡಲೀ ಮಠಾಧಿಪತಿ ಬರುವರೆಂದೂ ನಾವೆಲ್ಲರೂ ಅಲ್ಲಿಗೆ ಹೋಗಬೇಕೆಂದು ತಿಳಿಸಿದರು.
ಅಲ್ಲಿ ಕೂಡಲೀ ಗುರುಗಳ ದರುಶನವಾಯ್ತು. ಕೂಡಲೀ ಸನ್ಯಾಸಿಗಳು ಅಲ್ಲಿಂದ ಹೊರಟು ಕಾರನ್ನೇರುವ ಸಮಯಕ್ಕೆ ಸರಿಯಾಗಿ ಗುರುನಾಥರು ಬಂದರು.
ಕಾಕತಾಳೀಯವೊ ಎಂಬಂತೆ ನನ್ನ ಅಕ್ಕನ ಮಗ ಖ.ಖ.ಐ.ಅ.ಯ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದಿದ್ದನು.ಚರಣದಾಸನಾದ ನನ್ನ ಭಾವನವರಿಗೆ ತಿಳಿಯದ ಕೆಲಸ ಯಾವುದೂ ಇರಲಿಲ್ಲ. ಆದರೆ, ದುರಾದೃಷ್ಟ ಯಾವ ಕೆಲಸವೂ ಕೈ ಹಿಡಿಯುತ್ತಿರಲಿಲ್ಲ. ಅಕ್ಕ ಎಲ್ಲ ಹಿಂಸೆ, ಅವಮಾನಗಳನ್ನು ಮೆಟ್ಟಿ ನಿಂತು ತನ್ನ ಸತತ ಪರಿಶ್ರಮದಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಳು. ಭಾವನವರು ಕೊನೆಯ ಪ್ರಯತ್ನವೆಂಬಂತೆ ಕಷಾಯ ಪುಡಿ ಮಾಡಿ ವ್ಯಾಪಾರ ಆರಂಭಿಸಿದ್ದರಾದರೂ ಮಾರಾಟವಾಗುತ್ತಿರಲಿಲ್ಲ.
ಗುರುನಾಥರು ಸುಮಾರು ಹತ್ತು ಹದಿನೈದು ಶಿಷ್ಯರೊಡನೆ ನೇರವಾಗಿ ಅಕ್ಕನ ಮನೆಗೆ ಬಂದು ಒಂದು-ಒಂದೂವರೆ ಗಂಟೆ ಕಾಲ ಕುಳಿತು ಅಕ್ಕ ಮಾಡಿಕೊಟ್ಟ ಕಷಾಯವನ್ನು ಕುಡಿದರು. ಜೊತೆಗೆ ನನ್ನ ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿ ಇಷ್ಟು ಅಂಕ ಬರುತ್ತೆ ಚಿಂತಿಸಬೇಡ ಎಂದು ಹೇಳಿ ಅಕ್ಕ ಹಾಗೂ ಅಕ್ಕನ ಮಕ್ಕಳನ್ನು ಆಶೀರ್ವದಿಸಿ ಅಲ್ಲಿಂದ ಹೊರಟರು. ನಾನೂ ಹಿಂಬಾಲಿಸಿದೆ.
ಆಶ್ಚರ್ಯವೆಂದರೆ ಅಲ್ಲಿಯವರೆಗೂ ವ್ಯಾಪಾರವೇ ಆಗದಿದ್ದ ಕಷಾಯ ಪುಡಿ ಬಿಸಿ ದೋಸೆಯಂತೆ ಖರ್ಚಾಗತೊಡಗಿತು. ಕೆಲವೇ ದಿನಗಳಲ್ಲಿ ಭಾವನವರು ಸ್ವಂತ ಮನೆ ಕಟ್ಟಿಸಿದರು. ಇಂದಿಗೂ ವ್ಯಾಪಾರ ದಿನೇ ದಿನೇ ಏರುಮುಖವಾಗುತ್ತಲೇ ಇದೆ. "ಗುರು ಒಲಿದರೆ ಏನು ಬೇಕಾದರೂ ಸಾಧ್ಯವೆಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ?" .
ಅಂತೆಯೇ ಗುರುನಾಥರು ತೋರಿದ ಇನ್ನೊಂದು ಪವಾಡವೆಂದರೆ ಗುರುನಾಥರ ದೂರದ ಬಂಧು ಒಬ್ಬರ ಮಗ ಓದಿನಲ್ಲಿ ಮಾತ್ರವಲ್ಲ ಹಾಡುಗಾರಿಕೆಯಲ್ಲಿಯೂ ಪ್ರತಿಭಾವಂತನಾಗಿದ್ದನು. ಇದನ್ನು ಗಮನಿಸಿದ ಗುರುನಾಥರು ಆ ಬಾಲಕನಿಗೆ ಊಟ ಮಾಡಿಸಿ "ನೀನು ಸಂಗೀತ ಕಲಿ. ನಾನು ನಿನ್ನ ಪರವಾಗಿ ಇಂಜಿನಿಯರಿಂಗ್ ಓದುತ್ತೇನೆ ಆಯ್ತಾ?" ಎಂದು ಕಳಿಸಿದರು.
ಆತ ಗುರುನಿವಾಸಕ್ಕೆ ಬಂದಾಗಲೆಲ್ಲ ಗುರುನಾಥರು ಏನಾದರೂ ತಿನ್ನಿಸಿ ಕಳಿಸುತ್ತಿದ್ದರು. ಆತ ನಾಡಿನ ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸರಲ್ಲಿ ಸಂಗೀತ ಕಲಿಯಲಾರಂಭಿಸಿದನು. ಆತನ ತನ್ಮಯತೆ ಎಷ್ಟಿತ್ತೆಂದರೆ ಕಾಲೇಜಿನಲ್ಲಿ ಅವನ ಹಾಜರಿ ಬಹಳ ಕಡಿಮೆ ಇರುತ್ತಿತ್ತು. ಆದರೂ ಹೇಗೋ ಅಂತಿಮ ಪರೀಕ್ಷೆಯಲ್ಲಿ ಶೇಕಡಾ ಎಪ್ಪತ್ತೈದಕ್ಕೂ ಹೆಚ್ಚು ಅಂಕ ಗಳಿಸಿದನು. ಮಾತ್ರವಲ್ಲ ಕರ್ನಾಟಕ ಸಂಗೀತ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಶ್ರೇಣಿ ಪಡೆದನು. ಇಂದು ಆತ ನಾಡಿನ ಹೆಸರಾಂತ ಸಂಗೀತ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಅಷ್ಟಿದ್ದರೂ ತನ್ನ ವಿನಯ, ಸರಳ, ಮೃದು ನಡತೆಯಿಂದ ಗುರುನಾಥರು ಹಾಕಿಕೊಟ್ಟ ಮಾರ್ಗಕ್ಕೆ ಕಳಶವಿಟ್ಟಂತೆ ಇರುವನು.
"ಗುರು ಮಾತನಾಡಲೇ ಬೇಕೆಂದಿಲ್ಲ. ತನ್ನ ದೃಷ್ಟಿ ಮಾತ್ರದಿಂದ ಏನು ಬೇಕಾದರೂ ನೀಡಬಲ್ಲನೆಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ"........ ,,,,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment