ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 1
ಶ್ರೀ. ವೆಂಕಟಾಚಲ ಅವಧೂತರ ಜನನ
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅದು ಮಾರ್ಗಶೀರ್ಷ ಬಹುಳ ಷಷ್ಠಿ 1940 ನೇ ಇಸವಿ. ಕುಡ್ಲೂರು ಶ್ರೀನಿವಾಸಯ್ಯ ಸಾವಿತ್ರಮ್ಮನವರ 6ನೇ ಮಗನಾಗಿ ಭೂಮಿಗೆ ಬಂದ ನಮ್ಮ ಗುರುನಾಥರಿಗೆ 4 ಜನ ಅಕ್ಕಂದಿರು, ಒಬ್ಬ ತಂಗಿ ಹಾಗೂ ಒಬ್ಬ ತಮ್ಮ ಇವರ ಕುಟುಂಬ. ಇವರ ಮೂಲಸ್ಥಾನ ಕಡೂರು ತರೀಕೆರೆ ಮಧ್ಯೆಯಿರುವ ಕುಡ್ಲೂರು ಆಗಿದ್ದು ಅಲ್ಲಿಂದ ವಲಸೆ ಬಂದು ಸಖರಾಯ ಪಟ್ಟಣದಲ್ಲಿ ನೆಲೆಸಿ 4 ತಲೆಮಾರುಗಳಾಗಿದ್ದವು.
ಆಗರ್ಭ ಸಿರಿವಂತರಾಗಿದ್ದರೂ ಕೂಡಾ ನಿಗರ್ವಿಗಳಾಗಿ ಅನ್ನದಾನ, ದೀನ ದಲಿತರ ಸೇವೆಯಲ್ಲಿ ಕುಟುಂಬ ಸದಾ ಮುಂದಿತ್ತು. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಓದಲು ತೆರಳಿದ್ದ ಇವರು ಪ್ರೊ.ಜಿ. ವೆಂಕಟಸುಬ್ಬಯ್ಯನವರ ಶಿಷ್ಯ. ತಂದೆಯ ಅನಾರೋಗ್ಯ ಕಾರಣವಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಬರುವಂತಾಗಿತ್ತು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ತಂದೆ ಶಿಸ್ತಿಗೆ ಹೆಸರುವಾಸಿ. ಅವರಾಡುತ್ತಿದ್ದ ಒಂದೊಂದು ಮಾತು ಕೂಡಾ ವಿವೇಕಯುತವಾಗಿರುತ್ತಿತ್ತು ಎಂದು ಗುರುಗಳು ಆಗಾಗ್ಗೆ ಹೇಳುತ್ತಿದ್ದರು.
ಸಖರಾಯ ಪಟ್ಟಣವಾಸಿಗಳಾದ ಕನ್ಯೆಯೊಂದಿಗೆ ವಿವಾಹವಾಗಿದ್ದು ಅವರಿಂದ ಎರಡು ಹೆಣ್ಣು, ಒಂದು ಗಂಡು ಮಕ್ಕಳನ್ನು ಪಡೆದು ತುಂಬು ಕುಟುಂಬ ನಡೆಸುತ್ತಿದ್ದರೂ ಜೀವಾನಂದ ಪ್ರತಿಯೊಂದು ಘಟನೆಗಳನ್ನು ಏಕೆ? ಹೇಗೆ? ಎಂದು ತನ್ನಲ್ಲೇ ಪ್ರಶ್ನಿಸಿಕೊಳ್ಳುವ ಸ್ವಭಾವ ಇವರದಾಗಿತ್ತು. ಬಾಲ್ಯದಲ್ಲಿ ತಂದೆಯವರು ಹೇಳುತ್ತಿದ್ದ ಧ್ರುವ ಹಾಗೂ ಇನ್ನಿತರರ ಬಗ್ಗೆ ಹೇಳುತ್ತಿದ್ದ ನೀತಿಕಥೆಗಳು ಇವರನ್ನು ಪ್ರಭಾವಿತವಾಗಿಸಿತು ಎಂಬುದು ಗುರುನಾಥರೇ ಆಗಾಗ್ಗೆ ನನ್ನ ಹತ್ತಿರ ಹೇಳುತ್ತಿದ್ದರಿಂದ ತಿಳಿಯಬಹುದು.
"ನಾಳೆ ನಾಲ್ಕು ಜನ ನಿನ್ನ ಮನೆ ಮೆಟ್ಟಿಲು ಹತ್ತಿ ಇಳೀತಾರೆ ಕಣೋ. ಈ ಮನೆ ಮೆಟ್ಟಿಲು ಹತ್ತಿ ಬಂದವರು ನೊಂದು ಬರಿಗೈಲಿ ಹೋಗಬಾರದಪ್ಪಾ. ಆ ಹೊಣೆಗಾರಿಕೆ ನಿಂದು ತಿಳೀತಾ?" ಎಂಬ ಗುರುನಾಥರ ತಂದೆಯವರ ಮಾತುಗಳನ್ನು ಜೀವನದ ಕೊನೆಯವರೆಗೂ ಪಾಲಿಸಿಕೊಂಡು ಬಂದಿದ್ದರು. ತಂದೆಯ ಮರಣ ನಂತರದಲ್ಲಿ ಕುಟುಂಬ ನಿರ್ವಹಣೆ ಹೊಣೆ ಹೊತ್ತಿದ್ದರೂ, ಮನಸ್ಸು ಸದಾ ಬದುಕಿನ ವಾಸ್ತವಿಕತೆಯತ್ತ ತುಡಿಯುತ್ತಿತ್ತು. ಈ ಮಧ್ಯೆ ತಾನು ಬಹಳ ಪ್ರೀತಿಸುತ್ತಿದ್ದ ಸಹೋದರನ ಅಕಾಲಿಕ ಮರಣದಿಂದ ಇವರ ಬದುಕು ಇನ್ನೊಂದು ತಿರುವು ಪಡೆದುಕೊಂಡಿತು.
ಮನೆ, ಮಠ, ಆಸ್ತಿಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳಲಾರಂಭಿಸಿದರು. ಅಲ್ಲಿಯವರೆಗೂ ಒಬ್ಬ ಅತ್ಯುತ್ತಮ ಕೃಷಿಕರಾಗಿದ್ದವರು ಬರ ಬರುತ್ತಾ ಆಸಕ್ತಿ ಕಳೆದುಕೊಂಡರು. ಈ ನಡುವೆ ಕೆಲಕಾಲ ಸಗುಣ ರಂಗನಾಥಸ್ವಾಮಿ ದೇಗುಲ ಹಾಗೂ ಬಲ್ಲಾಳೇಶ್ವರ ದೇಗುಲಗಳಲ್ಲಿ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿದರು. ಅವರು ಬೆಂಗಳೂರಿನಲ್ಲಿ ಕೆಲಕಾಲ ಟೇಪು ಬಾಚಣಿಗೆಗಳನ್ನು ಕೂಡಾ ಮಾರುತ್ತಿದ್ದರಂತೆ. ಆ ಕಾಲದಲ್ಲಿ ಸಂಬಂಧಿಕರೋರ್ವರ ಮನಯಲ್ಲಿದ್ದ ಅವರು ಅಲ್ಲಿದ ಹಿರಿಯರ ಬಟ್ಟೆಗಳನ್ನು ತೊಳೆಯುತ್ತಿದ್ದರಂತೆ. ಈ ಎಲ್ಲ ವಿಚಾರಗಳು ಅವರೇ ಆಗಾಗ್ಗೆ ಹೇಳುತ್ತಿದ್ದರಾದ್ದರಿಂದ ಇಲ್ಲಿ ದಾಖಲಿಸುತ್ತಿದ್ದೇನೆ.
"ಆಧ್ಯಾತ್ಮವೆಂದರೆ ಕೇವಲ ಮೂಗು ಹಿಡಿದುಕೊಂಡು ಕೂರುವುದಲ್ಲ ಕಣಯ್ಯಾ", ಬದುಕಿನ ಕರ್ತವ್ಯಗಳನ್ನು ಅದೆಂತಹ ಅಡಚಣೆ ಬಂದರೂ, ಅವಮಾನಗಳನ್ನು ಲೆಕ್ಕಿಸದೆ ನಿಷ್ಕಾಮ ಭಾವದಿಂದ ಮಾಡುತ್ತಾ ಎಲ್ಲಾ ಭಾರವನ್ನು ಈಶ್ವರನ ಮೇಲೆ ಹಾಕಿ ನಡೆಯುವುದೇ ನಿಜವಾದ ಆಧ್ಯಾತ್ಮ. ವಿನಃ ಕರ್ತವ್ಯ ವಂಚನೆಯಿಂದ ನಾನು ಸಿಗೋಲ್ಲ" ಎಂಬ ಗುರುನಾಥರ ಮಾತಿಗೆ ಅವರೇ ಹೇಳುತ್ತಿದ್ದ ಒಂದು ನಿದರ್ಶನವನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
"ಗುರುವಿಗೆ ಪ್ರೀತ್ಯವಾದುದು ಭಕ್ತನ ಶುದ್ಧ ನಡವಳಿಕೆಯೇ ವಿನಃ, ಈ ಜಾತಿ ಮತಗಳೆಲ್ಲ ಮನುಜ ಸೃಷ್ಠಿ. ಅದರಿಂದ ಗುರುವಿಗೆ ಏನೂ ಆಗಬೇಕಾದ್ದಿಲ್ಲ, ಎಂಬ ಮಾತಿಗೆ ಈ ಕೆಳಗಿನ ಘಟನೆ ನಿರ್ದರ್ಶನ".
ಅವರ ತಂದೆ ಜೀವಿತ ಕಾಲದಿಂದಲೂ, ಅನ್ಯ ಜಾತಿಗೆ ಸೇರಿದ ವ್ಯಕ್ತಿಯೋರ್ವ ಅವರಲ್ಲಿ ಕೆಲಸ ಮಾಡುತ್ತಿದ್ದರು. ಗುರುನಾಥರ ತಂದೆ ಪ್ರತಿನಿತ್ಯ ರಾಮಾಯಣ, ಮಹಾಭಾರತ, ಪಾರಾಯಣ ಮಾಡುತ್ತಿದ್ದು ಈತ ಕಿಟಕಿ ಸಮೀಪ ಕುಳಿತು ತನ್ಮಯನಾಗಿ ಕೇಳುತ್ತಿದ್ದರಂತೆ. ನಿರಕ್ಷರ ಕುಕ್ಷಿಯಾಗಿದ್ದ ಆತ ವೈರಾಗ್ಯ ತಾಳಿ ತನ್ನ ಮನೆಗೆ ಬಂದು ಎಲ್ಲವನ್ನೂ ಬಿಟ್ಟು ಹೋಗಲು ತೀರ್ಮಾನಿಸಿ, ಒಂದು ಕಂಬಳಿ ತೆಗೆದುಕೊಂಡು ಹೊರಬಂದು ಮನೆ ಬಾಗಿಲು ಹಾಕ ಹೋದವರು ಉಹೂಂ, ಇದು ವೈರಾಗ್ಯವಲ್ಲವೆಂದು ಯೋಚಿಸಿ ಮನೆ ಬಾಗಿಲನ್ನು ಹಾಗೆಯೇ ತೆರೆದಿಟ್ಟು ಅಲ್ಲಿಂದ ಹೊರ ನಡೆದರಂತೆ. ಆ ನಂತರವೂ ಗುರುನಾಥರ ಮನೆಯಲ್ಲಿ ಕೆಲಸ ಕಾರ್ಯ ಮಾಡುತ್ತಾ ಅಂತ್ಯ ಕಾಲದವರೆಗೂ ವಿರಕ್ತ ಜೀವನ ನಡೆಸಿದರಂತೆ. ಆ ಮನೆಯ ಕಣಕಣಗಳಲ್ಲೂ ಕರ್ತವ್ಯ ಹಾಗೂ ಆಧ್ಯಾತ್ಮಗಳು ತುಂಬಿರುವುದು ಇಂತಹ ನಿದರ್ಶನಗಳಿಂದ ತಿಳಿದು ಬರುವುದು.
ಕಾಲಾಂತರದಲ್ಲಿ ವಿಪರೀತ ಸಾಧನೆಗಳಿದ್ದರೂ, ಮನೆಯವರಿಗಾಗಲಿ, ಊರಿನವರಿಗಾಗಲಿ ಈ ಬಗ್ಗೆ ಒಂದಿನಿತು ತಿಳಿದು ಬರಲಿಲ್ಲ. ಧ್ಯಾನಾಸಕ್ತರಾಗಿ ಆಗಾಗ್ಗೆ ಮನೆಯ ಹುಲ್ಲಿನ ಅಟ್ಟದಲ್ಲಿ ಮಲಗುತ್ತಿದ್ದರಂತೆ. ಕೇವಲ ಒಂದು ಅಂಗಿ, ಒಂದು ಪಂಚೆ, ಒಂದು ಟವೆಲ್ ಇದರೊಂದಿಗೆ ಸದಾ ಬಗಲಲ್ಲಿ ಒಂದು ಚೀಲ ಇವಿಷ್ಟೇ ಅವರ ಸಂಗಾತಿಯಾಗಿತ್ತು.
ಅವರು ಸ್ನಾನ ಮಾಡಿ ಪೂಜೆ ಮಾಡಿ ಬರುವಷ್ಟರಲ್ಲಿ ಗುರು ಪತ್ನಿ ಅವನ್ನು ತೊಳೆದು ಹಾಕುತ್ತಿದ್ದರಂತೆ. ಶೃಂಗೇರಿ, ಕೂಡಲಿ ಹಾಗೂ ಇತರ ದೇಗುಲ ದರ್ಶನ ನಿರಂತರವಾಗಿ ಮಾಡುತ್ತಾ, ಜೊತೆ ಜೊತೆಗೆ ಸಂಸಾರ ರಥವನ್ನು ಮುನ್ನೆಡೆಸುತ್ತಿದ್ದರಂತೆ. ಎರಡು ಮೂರು ಬಾರಿ ನಾಗರ ಹಾವು ಇವರು ಮಲಗಿದ್ದಾಗ ಮೈಮೇಲೆ ಹರಿದಾಡಿತ್ತೆಂದು ಸ್ವತಃ ಗುರುನಾಥರೇ ತಿಳಿಸಿದ್ದರು. ಬಹುಶಃ 1980 ರಲ್ಲಿ ಆತ್ಮಜ್ಞಾನವನ್ನು ಪಡೆದ ಗುರುನಾಥರು ಪ್ರಕಟಗೊಂಡರೆಂದು ತಿಳಿದು ಬರುತ್ತದೆ.
"ಈಶ್ವರ ಎಂದರೆ ಬೇಡಿದ್ದನ್ನು ನೀಡುವಾತ ಎಂದರ್ಥ ಕಣಯ್ಯಾ. ಸದಾ ಅವನ ಸೇವೆಯಲ್ಲಿದ್ದು ಕರ್ತವ್ಯ ನಿರತನಾಗು. ಅವನನ್ನು ಏನೂ ಕೇಳಬೇಡ. ಅವನೇ ಎಲ್ಲವನ್ನು ನೀಡುವನು" ಎಂಬ ಅವರ ಮಾತು ಅವರ ಈಶ್ವರ ಭಕ್ತಿಯನ್ನು ಬೆಂಬಲಿಸುತ್ತದೆ. ಹೀಗಿದ್ದ ಗುರುನಾಥರು ಸುಮಾರು 48ನೇ ವಯಸ್ಸಿನಲ್ಲಿ ಪ್ರಕಟಗೊಂಡರು".
🙏🙏🙏
ReplyDeletewhere can i get this book pls give contact number
ReplyDeleteIs these blogs have been published in book format. If so please give us details.
ReplyDelete