ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 10
ಗುರು ಪತ್ನಿಯ ಖಾಯಿಲೆ ವಾಸಿಯಾಗಿದ್ದು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುವಿನ ಅಣತಿಯಂತೆ ಗುರು ನಿವಾಸದಲ್ಲೇ ವಾಸವಿದ್ದ ಈ ಚರಣದಾಸನಿಗೆ ಗುರುನಾಥರು ತೋರಿಸುತ್ತಿದ್ದ ಹಲವಾರು ಪವಾಡಗಳಿಗೆ ಸಾಕ್ಷಿಯಾಗುವ ಅವಕಾಶ ಸಿಕ್ಕಿದ್ದು ಬಹುಶಃ ನನ್ನ ಪೂರ್ವ ಜನ್ಮ ಸುಕೃತವೆನಿಸುತ್ತದೆ.
ಸಾಧನಾ ಸ್ಥಿತಿಯಲ್ಲಿರುತ್ತಿದ್ದ ಮಗ ಮತ್ತು ಸನ್ಯಾಸ ಜೀವನ ನಡೆಸುತ್ತಿದ್ದ ಗಂಡ, ಇವರಿಬ್ಬರ ನಡುವೆ ಬಂದು ಹೋಗುತ್ತಿದ್ದ ವಿಪರೀತ ಜನ ಜಂಗುಳಿ. ಒಂದೆಡೆ ಗಂಡನ ಸಾಧನೆ ಬಗ್ಗೆ ಹೆಮ್ಮೆ ಇದ್ದರೂ ಮಗ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲಿ ಎಂಬ ಬಯಕೆ ಇದ್ದ ಅಮ್ಮ (ಗುರುವಿನ ಅಣತಿಯಂತೆ ಗುರುಪತ್ನಿಯನ್ನು ಅಮ್ಮಾ ಎಂದೇ ಕರೆಯುತ್ತಿದ್ದೆ. ಅವರೂ ನನ್ನನ್ನು ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ವಿಪರೀತ ಚಿಂತೆಯಿಂದ ಹಾಗೂ ಕೆಲಸ ಕಾರ್ಯಗಳ ಒತ್ತಡದಿಂದಾಗಿ ಕೆಲವೊಮ್ಮೆ ವಿಪರೀತ ಆಯಾಸಗೊಂಡು ಕಾಲು ನೋವು, ತಲೆ ತಿರುಗುವಿಕೆ ಮುಂತಾದ್ದರಿಂದ ಆಗಾಗ್ಗೆ ಹಾಸಿಗೆ ಹಿಡಿಯುತ್ತಿದ್ದರು.
ಒಮ್ಮೆ ಹೀಗೆಯೇ ಆಗಿ ಅಮ್ಮ ವಿಪರೀತ ಸಂಕಟ, ಬೆನ್ನು ನೋವು, ಕಾಲು ನೋವಿನಿಂದ ಹಾಸಿಗೆ ಹಿಡಿದಿದ್ದರು. ಗುರುತ್ವದಲ್ಲಿ ನಂಬಿಕೆ ಇದ್ದರೂ ತನ್ನ ಪತಿಯ ಶಕ್ತಿಯ ಬಗ್ಗೆ ಸಂಶಯವಿದ್ದ ಅಮ್ಮನ ಮನಸ್ಥಿತಿಯನ್ನರಿತ ಗುರುನಾಥರು ತನ್ನಲ್ಲಿಗೆ ಬರುತ್ತಿದ್ದ ವೈದ್ಯರನ್ನು ಕರೆದು ಆರೋಗ್ಯ ಪರೀಕ್ಷಿಸಲು ಹೇಳಿದರು. ಆದರೆ ಮಾತ್ರೆಗಳ ರಾಶಿ ಬಿದ್ದಿತೇ ವಿನಹ ಅಮ್ಮನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬರಲಿಲ್ಲ.
ಮೂರ್ನಾಲ್ಕು ದಿನಗಳ ನಂತರ ನನ್ನ ಮೊಬೈಲ್ ಗೆ ಕರೆ ಮಾಡಿದ ಗುರುನಾಥರು: - "ನಿನ್ನ ಅಮ್ಮ ಬಳಸಿದ ಸೀರೆಯನ್ನು ಕೊಡವಿ ಹೊರಗೆ ಹರಡು. ನಂತರ ಎರಡು ಸಕ್ಕರೆ ಪೊಟ್ಟಣ ಮಾಡಿ ಅಮ್ಮನ ಕೈಲಿ ಮುಟ್ಟಿಸಿ ಮುಂದೆ ಕಾಲೇಜು ಸಮೀಪವಿರುವ ಮುಸ್ಲಿಂ ದರ್ಗಾದ ಮುಂದಿಟ್ಟು ಕೈ ಮುಗಿದು ಬಾ" ಎಂದರು.
ನಾನು ಹಾಗೆಯೇ ಮಾಡಲು ಹತ್ತು ಹದಿನೈದು ನಿಮಿಷಗಳಲ್ಲಿ ಅಮ್ಮ ಆರೋಗ್ಯವಾಗಿ ಎದ್ದು ಕುಳಿತರು. ಗುರುನಾಥರು ಹೇಳುತ್ತಿದ್ದ ಪರಿಹಾರಗಳು ಹಾಗೂ ಖಾಯಿಲೆಗಳಿಗೆ ಒಂದಕ್ಕೊಂದು ಸಂಬಂಧವಿರುತ್ತಿರಲಿಲ್ಲ. ಆದರೆ ಅದರೊಳಗಿನ ಮರ್ಮ ಗುರುನಾಥರಿಗೆ ಮಾತ್ರವೇ ತಿಳಿದಿತ್ತು.
ತೀರಾ ಇತ್ತೀಚೆಗೆ ಮೈಸೂರಿನಲ್ಲಿ ವಾಸವಿರುವ ಓರ್ವ ಗುರುಭಕ್ತರನ್ನು ಭೇಟಿಯಾಗುವ ಅವಕಾಶ ಬಂದಿತ್ತು. ಆತ ಗುರುನಾಥರು ಆತನ ಮೇಲೆ ತೋರುತ್ತಿದ್ದ ಪ್ರೀತಿಯನ್ನು ನೆನೆದು ಕ್ಷಣ ಕಾಲ ಗದ್ಗದಿತರಾದರು.
ಮುದ್ರಣಾಲಯವನ್ನು ನಡೆಸುತ್ತಿರುವ ಅವರ ಅನುಭವವನ್ನು ತಿಳಿಸಬೇಕಾಗಿ ಅವರನ್ನು ವಿನಂತಿಸಿದೆ. ಆತ ಹೀಗೆ ಹೇಳತೊಡಗಿದರು.
"ಸ್ವಾಮಿ, ನಮ್ಮ ಗುರುನಾಥರ ಶಕ್ತಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನನ್ನ ಸ್ವಾಮಿಯ ಸುತ್ತ ಎಷ್ಟೇ ಜನರು ಸುತ್ತುವರೆದಿದ್ದರೂ, ಅಲ್ಲಿದ್ದ ಜನರೆಲ್ಲರ ಮನದ ಭಾವನೆಗಳನ್ನು ಅರಿತು ಪ್ರತಿಯೊಬ್ಬರ ಪ್ರಶ್ನೆಗಳಿಗೂ ಒಂದೇ ವಾಕ್ಯದಲ್ಲಿ ಉತ್ತರಿಸುತ್ತಿದ್ದ ರೀತಿ ನಿಜಕ್ಕೂ ವಿಶಿಷ್ಟವಾದದ್ದು".
ನಾನು ಒಮ್ಮೆ ಗುರುನಿವಾಸಕ್ಕೆ ಬಂದಾಗ ನನ್ನನ್ನು ಕರೆದು ಹೀಗೆ ಹೇಳಿದರು. "ನೋಡಯ್ಯಾ ಇನ್ನು ಮೂರು ತಿಂಗಳ ಕಾಲ ನೀನು ಯಾವುದೇ ಸಭೆ ಸಮಾರಂಭಗಳಿಗೆ ಹೋಗಬೇಡ. ಸನ್ಮಾನ ಹಾಗೂ ಹಾರ ತುರಾಯಿ ಹಾಕಿಸಿಕೊಳ್ಳಬೇಡ" ಎಂದು ಹೇಳಿ ಕಳಿಸಿದರು.
ಗುರುವಾಕ್ಯದಂತೆಯೇ ನಾನು ಸುಮಾರು ಎರಡು ತಿಂಗಳ ಕಾಲ ನಡೆದುಕೊಂಡೆ. ಮೂರು ತಿಂಗಳು ಮುಗಿಯಲು ಕೆಲದಿನ ಬಾಕಿ ಇತ್ತು. ಆಗ ಅಂದಿನ ಮುಖ್ಯಮಂತ್ರಿಗಳು ಹಾಗೂ ಕೆಲವು ಗಣ್ಯರ ಒತ್ತಾಯಕ್ಕೆ ಮಣಿದ ನಾನು ಅನಿವಾರ್ಯವಾಗಿ ಒಂದು ಸಭೆಯಲ್ಲಿ ಭಾಗವಹಿಸಲು ಒಪ್ಪಿಕೊಂಡೆ. ಹಾಗೆಯೇ ಒಲ್ಲದ ಮನಸ್ಸಿನಿಂದ ಅಂದಿನ ಮುಖ್ಯಮಂತ್ರಿಗಳಿಂದ ಸನ್ಮಾನ ಮಾಡಿಸಿಕೊಂಡು ಬಂದು ಕುರ್ಚಿಯಲ್ಲಿ ಕುಳಿತೆ.
"ಆಗ ಇದ್ದಕ್ಕಿದ್ದಂತೆಯೇ ವೇದಿಕೆ ಕುಸಿದು ಬಿದ್ದು ನಾನು ಗಂಭೀರವಾಗಿ ಗಾಯಗೊಂಡೆ. ಇಂದಿಗೂ ಗುರುವಾಕ್ಯ ಮುರಿದ ಪರಿಣಾಮವಾಗಿ ನಾನು ಪಶ್ಚಾತ್ತಾಪ ಪಡುತ್ತಿದ್ದೇನೆ" ಎಂದು ನಿಟ್ಟುಸಿರು ಬಿಟ್ಟು ಮೌನವಾದರು........ ,,,,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment