ಒಟ್ಟು ನೋಟಗಳು

Sunday, October 9, 2016

ಶ್ರೀ ಸದ್ಗುರು ಮಹಿಮೆ  

ಗ್ರಂಥ ರಚನೆ - ಚರಣದಾಸ

ಅಧ್ಯಾಯ  - 5

ರಾಷ್ಟ್ರಾಧ್ಯಕ್ಷೆಗೆ ಬಾಗಿನ

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಘಟನೆ ನಡೆದ ಸಮಯದಲ್ಲಿ ಮಹಿಳೆಯೊಬ್ಬರು ರಾಷ್ಟ್ರಾಧ್ಯಕ್ಷೆಯಾಗಿದ್ದರು. ಅಂದು ಅವರು ಶೃಂಗೇರಿಗೆ ಬಂದು ಗುರುದರ್ಶನ ಮಾಡುವವರಿದ್ದರು. ಸುರಕ್ಷತೆ ದೃಷ್ಠಿಯಿಂದ ಕೇವಲ 40 ಗಣ್ಯರಿಗೆ ಮಾತ್ರ ರಾಷ್ಟ್ರಾಧ್ಯಕ್ಷರ ಭೇಟಿಗೆ ಅವಕಾಶ ನೀಡಲಾಗಿತ್ತು. ಸುರಕ್ಷತಾ ಸಿಬ್ಬಂದಿ ಶೃಂಗೇರಿಯಲ್ಲಿ ಬೀಡು ಬಿಟ್ಟಿದ್ದು ರಾಷ್ಟ್ರಪತಿಗಳು ಓಡಾಡುವ ದಾರಿಯಲ್ಲಿ ಕಣ್ಗಾವಲಾಗಿ ನಿಂತಿದ್ದು ಅವರ ದರ್ಶನವೂ ದುಸ್ತರವಾಗಿತ್ತು. 
ಆಗ ಗುರುನಾಥರು ಸಖರಾಯ ಪಟ್ಟಣದಲ್ಲಿದ್ದರು. ನನ್ನನ್ನು ಕರೆದು ಶೃಂಗೇರಿಯಲ್ಲಿ ವಾಸವಿದ್ದ ದಂಪತಿ ಗುರು ಭಕ್ತರಿಗೆ ದೂರವಾಣಿ ಕರೆ ಮಾಡಿಸಿ, ರಾಷ್ಟ್ರಾಧ್ಯಕ್ಷೆಗೆ ಆರತಿ ಮಾಡಿ ಒಂದು ಸೀರೆ, ಖಣ  ಬಾಗಿನ ನೀಡಬೇಕೆಂದು ತಿಳಿಸಿದರು. ಆಗ ಆ ದಂಪತಿಗಳು ಭೇಟಿಗೆ ಈಗಾಗಲೇ ಅವಕಾಶವಿದ್ದವರನ್ನು ಹೊರತುಪಡಿಸಿ ಬೇರಾರಿಗೂ ಏನನ್ನು ನೀಡಲು ಸಾಧ್ಯವಿಲ್ಲವೆಂದು ತಿಳಿಸಿದರು. ಆಗ ಗುರುನಾಥರು ಎಂತ ಕಡೆ ನಿಂತುಕೊಳ್ಳಿ. ರಾಷ್ಟ್ರಾಧ್ಯಕ್ಷೆ ಬರುವರು. ಆಗ ಆರತಿ ಮಾಡಿ ಬಾಗಿನ ನೀಡಿ ಎಂದರು. ಮಾತ್ರವಲ್ಲ ಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ಆ ದಂಪತಿಗಳ ಸಂಪರ್ಕದಲ್ಲಿದ್ದರು. 
ಎರಡು ಬಾರಿ ಬಾಗಿನ ನೀಡುವ ಅವಕಾಶ ತಪ್ಪಿ ಹೋಗಲು ಈ ದಂಪತಿಗಳು ನಿರಾಶರಾಗಿ ನಿಂತಿರಲು ಕರೆ ಮಾಡಿಸಿದ ಗುರುನಾಥರು "ಶಾರದಾ ದೇಗುಲದಲ್ಲಿದ್ದ ವ್ಯಕ್ತಿಯೋರ್ವರಿಗೆ ತಲುಪಿಸು. ಅದು ಅಧ್ಯಕ್ಷೆಗೆ ತಲುಪುವುದು" ಎಂದರು. ಈ ದಂಪತಿಗಳು ಹಾಗೆಯೇ ಮಾಡಲು ಅದನ್ನು  ಪರೀಕ್ಷಿಸಿದ ಸುರಕ್ಷತಾ ಸಿಬ್ಬಂದಿ ಅದನ್ನು ಸ್ವೀಕರಿಸಲು ನಿರಾಕರಿಸಿದರು. ಆಗ ಇದ್ದಕ್ಕಿದ್ದಂತೆ ಹೊರಬಂದ ರಾಷ್ಟ್ರಾಧ್ಯಕ್ಷರು ಬಾಗಿನವನ್ನು ಸ್ವೀಕರಿಸಿದರು. 

ಈ ವಿಷಯವನ್ನು ತಿಳಿದ ಗುರುನಾಥರು "ಅದನ್ನೇ ಅಲ್ವೇನಯ್ಯಾ ಗುರು ಅನ್ನೋದು" ಎಂದರು. ಹಾಗೆಯೇ ಗುರುನಾಥರು ಚರಣದಾಸನಾದ ನನ್ನನ್ನು ಕಾರ್ಯ ನಿಮಿತ್ತ ತೋಟಕ್ಕೆ ಕಳಿಸಿದಾಗ ಹಾಗೂ ಇತರರನ್ನು ಮಠ-ಮಂದಿರಗಳಿಗೆ ಕಳಿಸಿದಾಗ ನಾವು ನಮ್ಮ ಕೆಲಸ ಮುಗಿಸಿ ಬರುವ ತನಕ ಅಥವಾ ಕೆಲಸವಾಯಿತೆಂದು ತಿಳಿಸುವ ತನಕ ಕುಳಿತ ಜಾಗದಿಂದ ಅಲುಗಾಡುತ್ತಿರಲಿಲ್ಲ. 

ಆ ಒಂದೂವರೆ ಗಂಟೆ ಅವರಲ್ಲಿದ್ದ ತಾಳ್ಮೆ ನಿಜವಾಗಿಯೂ ಸಿಡುಕು ಸ್ವಭಾವದವನಾಗಿದ್ದ ನನಗೆ ಒಂದು ಪಾಠವೆನಿಸುತ್ತದೆ  ......... ......... , , , , , , , ,  

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment