ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 7
ಗುರುವಿನ ಗುಲಾಮ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಘಟನೆ ನಡೆದದ್ದು ಚರಣದಾಸನು ಗುರುನಾಥರ ಸಂಪರ್ಕಕ್ಕೆ ಬರುವ ಮೊದಲು. ಆದರೂ ನಂತರದ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಚಿಕ್ಕಮಗಳೂರಿನ ಓರ್ವ ವ್ಯಕ್ತಿಯ ಮನೆಯಲ್ಲಿ ಹಲವಾರು ಸಮಸ್ಯೆಗಳಿತ್ತು. ಆತನಿಗೂ ಉದ್ಯೋಗವಿರಲಿಲ್ಲ.
ಪ್ರತಿದಿನವೂ ಆತ ಗುರುನಾಥರ ಮನೆಗೆ ಬಂದು ಅಲ್ಲಿನ ದನದ ಸಗಣಿ ತೆಗೆದು ಕೊಟ್ಟಿಗೆ ಶುಚಿಗೊಳಿಸಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದರು. ಅಪರಿಚಿತ ವ್ಯಕ್ತಿ ದಿನವೂ ಮನೆಗೆ ಬರುವುದನ್ನು ಸಹಿಸದ ಕುಟುಂಬದ ಇತರರು ಆತನ ಮೇಲೆ ರೇಗಾಡಿದರಾದರೂ ಪ್ರಯೋಜನವಾಗಲಿಲ್ಲ.
ಹೀಗೆ ಹಲವು ದಿನಗಳು ಕಳೆದ ನಂತರ ಪ್ರಸನ್ನರಾದ ಗುರುನಾಥರು ಆ ವ್ಯಕ್ತಿಯನ್ನು ಅನುಗ್ರಹಿಸಿದರು. ಇದೀಗ ಆ ವ್ಯಕ್ತಿ ಒಂದು ದೊಡ್ಡ ತಿಂಡಿ ಮಾಡುವ ಫ್ಯಾಕ್ಟರಿ ಒಡೆಯನಾಗಿದ್ದಾರೆ.
ಒಮ್ಮೆ ಬೆಂಗಳೂರಿನಿಂದ ಬಂದ ಓರ್ವ ವ್ಯಕ್ತಿಯನ್ನು ಕರೆದ ಗುರುನಾಥರು ಸ್ವಲ್ಪ ಹಣ್ಣನ್ನು ತರುವಂತೆ ತಿಳಿಸಿದರು. ಆ ವ್ಯಕ್ತಿ ನೂರು ರೂಪಾಯಿ ನೀಡಿ ಹಣ್ಣನ್ನು ತಂದು ಗುರುನಾಥರ ಆದೇಶದಂತೆ ಒಂದು ಕಾರ್ಯಕ್ರಮಕ್ಕೆ ಬಂದ ಕೆಲವರಿಗೆ ನೀಡಿ ಕೈ ಮುಗಿದು ಗುರುನಾಥರ ಸಮೀಪ ನಿಂತರು.
ಆಗ ಆ ವ್ಯಕ್ತಿಯನ್ನು ಕರೆದ ಗುರುನಾಥರು ಹೀಗೆ ಹೇಳಿದರು. "ಅಯ್ಯಾ ಆ ವ್ಯಕ್ತಿ ಎಷ್ಟು ಹಣ್ಣು ತಂದಿರುವರು ಗೊತ್ತೇ?. ಸುಮಾರು ಎಂಟು ಸಾವಿರ ರೂಪಾಯಿಗಳಿಗೂ ಮೀರಿ ಹಣ್ಣು ತಂದಿರುವರು. ಇಲ್ಲಿ ಹಣದ ಪ್ರಶ್ನೆ ಬರುವುದಿಲ್ಲ. ಆತ ಗುರು ವಾಕ್ಯದ ಮೇಲಿಟ್ಟ ಗೌರವ ಹೆಚ್ಚಿನದು ಅಲ್ಲವೇ?" ಎಂದು ಅಭಿಮಾನದಿಂದ ನುಡಿದರು. ಇಂದು ಆತ ಸಮಾಜದ ಪ್ರತಿಷ್ಠಿತ ವ್ಯಕ್ತಿಯಾಗಿ ಬೆಳೆದಿದ್ದರೂ ತಾನು ಆರಂಭಿಸಿದ ಹಲವಾರು ಉದ್ಯಮಗಳನ್ನು ಸೋದರರ ಕೈಗೆ ನೀಡಿ ಹೃದಯ ವೈಶಾಲ್ಯತೆಯನ್ನು ಮೆರೆದಿರುವರು.
ಮಾತ್ರವಲ್ಲ ಗುರುನಾಥರು ದೇಹದಲ್ಲಿದ್ದಾಗ ಏನೇ ಬೇಕೆಂದು ಹೇಳಿದರೂ ಮರು ಮಾತಾಡದೇ ಮನಃಪೂರ್ವಕವಾಗಿ ಖರ್ಚು ಮಾಡುತ್ತಿದ್ದ ಆ ವ್ಯಕ್ತಿಯನ್ನು ನೋಡಿದಾಗಲೆಲ್ಲ ಗುರುನಾಥರು ಹೇಳುತ್ತಿದ್ದ "ಶಿಷ್ಯನಿಂದಾಗಿ ಗುರು ಕಣಯ್ಯಾ ಗುರುವಿನಿಂದಾಗಿ ಅಲ್ಲ" ಎಂಬ ಮಾತು ನೆನಪಿಗೆ ಬರುತ್ತದೆ.
ಹಾಗೆಯೇ ಇನ್ನೊಮ್ಮೆ ಗುರುನಾಥರು ಅದ್ವೈತ ಪೀಠದ ಯತಿಗಳ ದರ್ಶನಕ್ಕೆಂದು ಹೋಗಿದ್ದರು. ಆಗ ಆ ಯತಿಗಳು ಗುರುನಾಥರನ್ನು ಕುರಿತು ಹೀಗೆ ಹೇಳಿದರು. "ನೋಡಿ ಅವಧೂತರೇ, ಈ ಭಟ್ಟರಿಗೆ ಎಷ್ಟು ಹೇಳುವುದು ಈ ಬೆಳ್ಳಿ ಪಾತ್ರೆಗಳನ್ನೆಲ್ಲ ಹೇಗೆ ಬೇಕಾಬಿಟ್ಟಿ ಎಸೆದಿರುವರು ನೋಡಿ" ಎಂದು ತೋರಿಸುತ್ತಾ ಆಕ್ಷೇಪ ವ್ಯಕ್ತಪಡಿಸಿದರು.
ಆಗ ಗುರುನಾಥರು ನಗುತ್ತಾ "ಏನ್ ಸ್ವಾಮಿ, ತಾವು ಈ ಪೀಠದ ಮೇಲೆ ಏಕೆ ಕುಳಿತುಕೊಂಡಿರುವಿರಿ ಎಂಬ ಅರಿವು ನಿಮಗಿದೆಯೇ? ತಾವಿಲ್ಲಿ ಇರುವುದು ಭಕ್ತಾದಿಗಳು ನೀಡಿದ ಹಣ, ಬೆಳ್ಳಿ, ಬಂಗಾರವನ್ನು ಕಾಯಲಿಕ್ಕಾಗಿಯೋ? ಅಥವಾ ಸಾಧನೆಗಾಗಿಯೋ?" ಎಂದು ನೇರವಾಗಿ ಪ್ರಶ್ನಿಸಿದರು. ಗುರುನಾಥರ ಈ ಮಾತಿನಲ್ಲಿ ಪ್ರತಿಯೊಬ್ಬರೂ ಸಾಧನೆ ಮಾಡಬೇಕೆ ವಿನಃ ಬಾಹ್ಯಾಡಂಬರಕ್ಕೆ ಬಲಿಯಾಗಿ ಕರ್ತವ್ಯ ಮರೆಯಬಾರದು ಎಂಬ ಕಾಳಜಿ ಎದ್ದು ಕಾಣುತ್ತದೆ......... ,,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment