ಒಟ್ಟು ನೋಟಗಳು

Friday, October 28, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 24


 

ಮೂರು ವರ್ಷದಿಂದ ನಡೆಯದವ ನಡೆದಾಡಿದರು 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಅಂದು ಚರಣದಾಸನಾದ ನಾನು ಗುರುಗಳ ಮನೆಯ ಕೆಲಸ ಕಾರ್ಯಗಳನ್ನು ಮುಗಿಸಿ ತೋಟಕ್ಕೆ ಹೋಗಿ ಬರುವ ಹೊತ್ತಿಗೆ ಒಂದು ಕಾರು ಬಂದಿತ್ತು. ಗುರುನಾಥರಿಗೆ ಎರಡು ಮನೆಗಳಿದ್ದು ಒಂದನ್ನು ಖಾಲಿ ಬಿಟ್ಟಿದ್ದರು. ಅದರಲ್ಲಿ ಮತ್ತೆ ಮೂರು ಮನೆಗಳಿದ್ದವು. ಮಧ್ಯದ ಭಾಗವನ್ನು ಬಾಡಿಗೆಗೆ ನೀಡಿದ್ದು ಉಳಿದೆರಡು ಭಾಗಗಳು ಖಾಲಿ ಇದ್ದವು. ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಒಂದು ಭಾಗದ ಮನೆಯಲ್ಲಿ ಒಂದು ದಿನ ಮಲಗಲು ಹೇಳುತ್ತಿದ್ದರು. ನಂತರ ಅವರ ಸಮಸ್ಯೆ ಪರಿಹಾರವಾಗುತ್ತಿತ್ತು. ಇತರೆ ಸಾಂಸಾರಿಕ ಸಮಸ್ಯೆಗಳು, ಮಕ್ಕಳಾಗದಿರುವಿಕೆ, ಮುಂತಾದ ಸಮಸ್ಯೆಗಳಿರುವವರನ್ನು ಇನ್ನೊಂದು ಭಾಗದ ಮನೆಯಲ್ಲಿ ಕೆಲಕಾಲ ಕೂರಿಸುತ್ತಿದ್ದರು, ಇಲ್ಲವೇ ಮಲಗಲು ಹೇಳುತ್ತಿದ್ದರು. 

ಆ ಕಾರಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಇಬ್ಬರು ಎತ್ತಿಕೊಂಡು ಬಂದು ಒಳಗೆ ಕರೆದೊಯ್ದರು. ಚರಣದಾಸನಾದ ನಾನು ತೋಟದಿಂದ ನೇರವಾಗಿ ಹಳೆಯ ಮನೆಗೆ ಹೋದೆ. ಆ ನಂತರ ಈ ಮನೆಗೆ (ಗುರುನಾಥರು ಕುಳಿತಿದ್ದ ಮನೆ) ಬಂದಾಗ ಆ ವ್ಯಕ್ತಿಗೆ ಕಾಲು ಬಿದ್ದು ಹೋಗಿ ಮೂರು ವರ್ಷಗಳಾಗಿದ್ದು ಯಾವುದೇ ಔಷಧಗಳು ಫಲ ನೀಡಿರಲಿಲ್ಲ ಎಂದು ತಿಳಿದು ಬಂತು. ಗುರುನಾಥರು ಅವರ ಬಳಿ ಮಾತನಾಡುತ್ತಾ ಏನನ್ನೋ ಕೊಡುತ್ತಿರುವುದನ್ನು ನೋಡಿ ಚರಣದಾಸನಾದ ನಾನು ಹೊರಬಂದೆನು. 

ಇದಾಗಿ ಬಹುಶಃ ಎರಡು-ಮೂರು ಗಂಟೆಗಳ ನಂತರ ಆ ಮೂವರಿಗೆ ಆ ವ್ಯಕ್ತಿಯ ಕಾಲು ತೊಂದರೆ ಸರಿ ಆಗುವುದೆಂದು ಅಭಯ ನೀಡಿ ಕಳಿಸಿದರು. ಆಶ್ಚರ್ಯವೆಂದರೆ ಮೂರು ವರ್ಷಗಳ ಕಾಲ ನಡೆಯಲಾರದೆ ಮಲಗಿದ್ದ ಆ ವ್ಯಕ್ತಿ ಆರಾಮವಾಗಿ ಎದ್ದು ನಡೆದು ಮನೆಯಿಂದ ಹೊರಬಂದರು. 

ಹಾಗೆಯೇ ವಿಪರೀತ ಮನೋಚಾಂಚಲ್ಯತೆ, ಭಯ ಇತ್ಯಾದಿ ತೊಂದರೆಗಳಿದ್ದವರನ್ನು ಕೆಲಕಾಲ ಹಳೆ ಮನೆಯ ದನದ ಕೊಟ್ಟಿಗೆಯಲ್ಲಿ ಓಡಾಡಲು ಅಥವಾ ಕುಳಿತು ಬರಲು ತಿಳಿಸುತ್ತಿದ್ದರು. 

ಅಂತೆಯೇ ಚರಣದಾಸನಾದ ನಾನು ನೋಡಿದ ಇನ್ನೊಂದು ಘಟನೆ ಎಂದರೆ ಅಂದು ಗುರುನಾಥರ ತಂದೆಯ ಶ್ರಾದ್ಧ ಕಾರ್ಯ ನಡೆದಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಓರ್ವ ಖ್ಯಾತ ಸಂಗೀತಗಾರ್ತಿಯೊಬ್ಬರು ಆಗಾಗ್ಗೆ ಗುರುನಿವಾಸಕ್ಕೆ ಬಂದು ಅನುಗ್ರಹ ಪಡೆದು ವಾಪಸಾಗುತ್ತಿದ್ದರು. 

ಅಂದು ಆಕೆ ಗುರು ದರ್ಶನಕ್ಕಾಗಿ ಗುರುನಿವಾಸಕ್ಕೆ ಬಂದಿದ್ದರು. ಆಕೆಯ ಆರೋಗ್ಯದಲ್ಲಿ ಆಗಾಗ್ಗೆ ವಿಪರೀತ ಏರುಪೇರಾಗುತ್ತಿದ್ದು ಆಕೆ ವೈದ್ಯರಲ್ಲಿ ಪರೀಕ್ಷಿಸಿದಾಗ ಒಂದು ಖಾಯಿಲೆಯಿಂದ ಬಳಲುತ್ತಿರುವುದಾಗಿಯೂ, ಔಷಧ ಬಳಕೆ ಪರಿಣಾಮಕಾರಿಯಾದರೂ ಪೂರ್ಣ ಗುಣಮುಖವಾಗುವುದು ಅಸಾಧ್ಯವೆಂಬುದನ್ನು ವೈದ್ಯರು ತಿಳಿಸಿದರು. ಗಾಬರಿಗೊಂಡ ಆ ಮಹಿಳೆ ಗುರುಗಳ ಆಶೀರ್ವಾದಕ್ಕಾಗಿ ಬಂದಿದ್ದರು. ಗುರುನಾಥರು ಆಗ ತಾನೇ ಶ್ರಾದ್ಧ ಕಾರ್ಯ ಮುಗಿಸಿ ಹೊರಬಂದಿದ್ದರಷ್ಟೆ. 

ಆಕೆಯ ಸಮಸ್ಯೆಯನ್ನು ಕೇಳಿ ತಿಳಿದ ಗುರುನಾಥರು "ಅಯ್ಯಾ, ಒಂದು ಪಂಚೆ ಕೊಡ್ರಯ್ಯಾ" ಎಂದರು. ನಾವು ಪಂಚೆ ನೀಡಿದಾಕ್ಷಣ ಅದನ್ನು ಉಟ್ಟು, ಮೊದಲು ಉಟ್ಟಿದ್ದನ್ನು ಬಿಚ್ಚಿ ಆ ಮಹಿಳೆಯ ಕಡೆಗೆ ಎಸೆದು "ಇದನ್ನ ಇಟ್ಕೋ ಅದು ಯಾವ ಖಾಯಿಲೆ ನಿನ್ನ ಮೇಲೆ ಎರಗುತ್ತೋ ನೋಡೋಣ" ಎಂದು ನುಡಿದು ಒಳ ಹೋದರು. ಇಂದಿಗೂ ಆ ಮಹಿಳೆ ಆರೋಗ್ಯಪೂರ್ಣ ಜೀವನ ನಡೆಸುತ್ತಿರುವರು. 

ಹಾಗೆಯೇ ಮತ್ತೊಂದು ಸಂದರ್ಭ. ಗುರುದರ್ಶನಕ್ಕಾಗಿ ಬೆಂಗಳೂರಿನಿಂದ ಒಬ್ಬ ಸಿರಿವಂತರು ಬಂದಿದ್ದರು. ಅವರ ಸಮಸ್ಯೆಯನ್ನು ಆಲಿಸಿ ಪರಿಹಾರ ಸೂಚಿಸಿದ ಗುರುನಾಥರು ಹೀಗೆ ಹೇಳಿದರು: "ನೀವು ಹೋಗುವಾಗ ಒಬ್ಬ ಭಿಕ್ಷುಕ ನಿಮ್ಮ ಕಾರಿಗೆ ಕೈ ತೋರಿಸುತ್ತಾನೆ. ಅವನನ್ನು ಕೂರಿಸಿಕೊಂಡು ಹೋಗಿ, ಆ ಭಿಕ್ಷುಕನ ಪುಣ್ಯದಿಂದ ಅಪಘಾತದಿಂದ ಪಾರಾಗುವಿರಿ. ಹಾಸನ ಮಾರ್ಗವಾಗಿ ಹೋಗಬೇಡಿ. ಕಡೂರು ಮಾರ್ಗವಾಗಿ ಹೋಗಿ ಎಂದು ವಿನಂತಿಸಿ ಕಳಿಸಿಕೊಟ್ಟರು. 

ಆದರೆ ಗುರುವಾಕ್ಯದ ಮೇಲೆ ಅಸಡ್ಡೆಯೋ ಅಥವಾ "ತಾನು ಸಿರಿವಂತನಾಗಿದ್ದು ಆ ಭಿಕ್ಷುಕನನ್ನು ನನ್ನ ಕಾರಿನಲ್ಲಿ ಹೇಗೆ ಕೂರಿಸಲಿ" ಎಂಬ ಅಹಂಕಾರವೋ ಕಾರಣವಾಗಿ ಆತ ಗುರುವಾಕ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಹಾಸನ ಮಾರ್ಗವಾಗಿ ಬೆಂಗಳೂರು ಕಡೆಗೆ ಹೊರಟರು. ಈ ಕಾರಣವಾಗಿ ಭೀಕರ ಅಪಘಾತಕ್ಕೂ ತುತ್ತಾದರು. 

"ಗುರುವೆಂದರೆ ಬೆಂಕಿಯಪ್ಪಾ. ಆ ಪದವನ್ನು ನಿಮ್ಮ ಇಚ್ಛೆಯಂತೆ ಹಗುರವಾಗಿ ಬಳಸಬೇಡಿ" ಎಂಬ ಗುರುನಾಥರ ಮಾತು ಇಂತಹ ಘಟನೆಯನ್ನು ನೋಡಿದಾಗ ನಿಜವೆನಿಸುತ್ತದೆ....... ,,,,,,,,,,  


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।



No comments:

Post a Comment