ಒಟ್ಟು ನೋಟಗಳು

Saturday, October 8, 2016

ಶ್ರೀ ಸದ್ಗುರು ಮಹಿಮೆ  

ಗ್ರಂಥ ರಚನೆ - ಚರಣದಾಸ

ಅಧ್ಯಾಯ  - 4

ದಾರಿಯ ಮೇಲೆ ..... ಅದೃಷ್ಟ

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ತುಸು ಹೊತ್ತಿನ ನಂತರ ಮತ್ತೆ ಇನ್ನೊಂದು ಘಟನೆಯನ್ನು ಹೇಳತೊಡಗಿದರು. ಮತ್ತೊಮ್ಮೆ ನಾವು ನನ್ನ ಸ್ನೇಹಿತರೊಂದಿಗೆ ತುಮಕೂರು ಸಮೀಪದ ಅದ್ವೈತ ಪೀಠದ ದರ್ಶನ ಮಾಡಿ ಅಲ್ಲಿಂದ ಶೃಂಗೇರಿಯ ಕಡೆಗೆ ಹೊರಟಿದ್ದೆವು. ದಾರಿಯಲ್ಲಿ ನಮ್ಮ ಮಾತೆಲ್ಲವೂ ಗುರುನಾಥರ ಕುರಿತಾಗಿತ್ತು. ಆಗ ಜೊತೆಯಲ್ಲಿದ್ದ ನನ್ನ ಸ್ನೇಹಿತೆ "ನೋಡಿ ನೀವು ಈ ಹಿಂದೆ ಎರಡು ಬಾರಿ ಬಂದಾಗ ಗುರುನಾಥರು ಸಿಗಲಿಲ್ಲ ಎಂದಿರಿ. ನಾನು ಹೊಸಬಳು. ನನಗೆ ಗುರುನಾಥರ ದರ್ಶನ ಸಾಧ್ಯವೇ" ಎಂದು ಪ್ರಶ್ನಿಸಿದರು. ನಾದಕ್ಕೆ "ಅದು ನಿನ್ನ ಅದೃಷ್ಟ. ದಾರೀಲೇ ಗುರುದರ್ಶನ ಆಗಬಹುದು" ಅಂದೆ. 

ಈ ಮಧ್ಯೆ ನಡೆದ ಘಟನೆಯನ್ನು ಅಂದು ಚಿಕ್ಕಮಗಳೂರಿನಲ್ಲಿ ಗುರುನಾಥರೊಂದಿಗಿದ್ದ ಭಕ್ತರೊಬ್ಬರು ಆನಂತರ ಹೀಗೆ ಹೇಳಿದರು. "ಅಂದು ಭಾನುವಾರ ಗುರುನಾಥರು ನಮ್ಮ ಮನೆಯಲ್ಲಿಯೇ ಇದ್ದರು. ಕಾಫಿ ಮಾಡಲು ಹೇಳಿದವರು ಇದ್ದಕ್ಕಿದ್ದಂತೆ ಮನೆಯಿಂದ ಹೊರ ನಡೆದು ಓಡೋಡಿ ಮುಖ್ಯ ರಸ್ತೆಗೆ ಬಂದರು". ಅದೇ ಸಮಯಕ್ಕೆ ನಮ್ಮ ಕಾರು ಗುರುನಾಥರಿದ್ದಲ್ಲಿಗೆ ಬಂತು. ಅಲ್ಲಿ ಗುರುನಾಥರಿದ್ದದ್ದನ್ನು ಕಂಡು ನಮಗೇನು ಹೇಳಬೇಕೆಂದು ತಿಳಿಯಲಿಲ್ಲ. ಕಾರಿನಿಂದಿಳಿದು ಓಡೋಡಿ ಬಂದು ಆ ಕಾರುಣ್ಯಮೂರ್ತಿಗೆರಗಿ, "ಗುರುಗಳೇ ಎದೆಂತು ಸಾಧ್ಯ?" ಎಂದು ಕೇಳಲು "ಅದೆಲ್ಲಾ ನಿಂಗೇ ಗೊತ್ತು... ನೀನೇ ಹೇಳಿದ್ದು... " ಎಂದು ನಕ್ಕು ಸುಮ್ಮನಾದರು ಗುರುನಾಥರು. 

ನಾವು ಮಾತಿಗಾಗಿ ನುಡಿದ ಮಾತನ್ನೂ ನಿಜವಾಗಿಸಿದ ಆ ಗುರುಕಾರುಣ್ಯ ಇನ್ಯಾರಲ್ಲಿ ಕಾಣಲು ಸಾಧ್ಯ? ಅಲ್ಲವೇ? ..... 

ಗುರು ಕಾಯಲೇ ಬೇಕು 

ಹೀಗೆ ಹೇಳಿ ಕಾಲ ಹೊತ್ತು ಮೌನವಾದ ಆ ತಾಯಿ ನಂತರ ಹೀಗೆ ಮುಂದುವರಿಸಿದರು. ಮತ್ತೊಮ್ಮೆ ನಾವು ಗುರುನಿವಾಸಕ್ಕೆ ಬಂದು ಅಲ್ಲಿಂದ ಗುರುನಾಥರೊಂದಿಗೆ ಚಿಕ್ಕಮಗಳೂರಿಗೆ ಬಂದೆವು. ನಾವು ಅಲ್ಲಿಂದ ಅದ್ವೈತ ಪೀಠದ ಯತಿವರೇಣ್ಯರ ದರ್ಶನಕ್ಕೆ ತೆರಳುವ ಉದ್ದೇಶವಿತ್ತು. ಆದರೆ ಗುರುನಾಥರು ನಮ್ಮನ್ನು ಹೊರಡಲು ಬಿಡಲೇ ಇಲ್ಲ. ಕೊನೆಗೆ ನಾವು "ಗುರುಗಳೇ ನಾವು ಅದ್ವೈತ ಪೀಠದ ಯತಿವರೇಣ್ಯರ ದರ್ಶನ ಮಾಡಬೇಕಿದೆ. ಯತಿವರೇಣ್ಯರು ನಮಗಾಗಿ ಕಾಯುತ್ತಿರುತ್ತಾರೆ. ಈಗ್ಲೇ ತಡವಾಯ್ತು.." ಎಂದು ವಿನಂತಿಸಿದೆವು.

ಕೂಡಲೇ ಗುರುಗಳು "ಗುರು ಕಾಯಬೇಕು... ಕಾಯ್ಲೇಬೇಕು.... ಕಣಮ್ಮಾ.... ಒಂದ್ಸಾರಿ ಶಿಷ್ಯರು ಗುರುವೆಂದು ಒಪ್ಪಿ ನಮಸ್ಕರಿಸಿದ ಮೇಲೆ ಶಿಷ್ಯರನ್ನು ಕಾಯೋದೇ ಗುರುವಿನ ಕೆಲಸ... " ಎಂದು ನುಡಿದು ನಮ್ಮನ್ನು ಕಳಿಸಿಕೊಟ್ಟರು. ಆಗಲೇ ಬಹಳ ತಡವಾಗಿತ್ತು. ಸುಮಾರು ಮೂರು ಗಂಟೆ ಪಯಣಿಸಿ ಅದ್ವೈತ ಪೀಠಕ್ಕೆ ಬಂದೆವು. ಅಲ್ಲಿ ಶ್ರೀ ಶ್ರೀ ಶ್ರೀಗಳು ನಮ್ಮನ್ನು ಕಂಡಾಕ್ಷಣ "ಬನ್ನಿ ಬನ್ನಿ ನಿಮಗಾಗೇ ಕಾಯ್ತಿದ್ದೆ ... ಈ ಹೊತ್ತಿಗೆ ಮಠವೂ ಮುಚ್ಚಿರುತ್ತೆ" ಎಂದು ಹೇಳಿ ನಮಗೆ ಊಟದ ವ್ಯವಸ್ಥೆಯನ್ನು ಗುರುಭವನದಲ್ಲೇ ಮಾಡಲು ತಿಳಿಸಿದರು. ಗುರುನಾಥರು ಅಲ್ಲಿ ಆಡಿದ ಮಾತು ಇಲ್ಲಿ ಈ ರೀತಿ ವಿಶ್ವ ವಿಖ್ಯಾತ ಜಗದ್ಗುರುಗಳಲ್ಲಿ ವ್ಯಕ್ತವಾಗಲು ಹೇಗೆ ಸಾಧ್ಯವೆಂದು ನಮಗಾಶ್ಚರ್ಯವಾಯಿತು. ಅಂದ ಹಾಗೆ ಆಗ ಸುಮಾರು ರಾತ್ರಿ ಹನ್ನೊಂದು ಗಂಟೆ.....

ನೋಡಿ, ಜಗತ್ತಿನಲ್ಲಿ ಸಾಕಷ್ಟು ಮಂದಿ ಸನ್ಯಾಸಿಗಳು ಪೀಠಾಧಿಪತಿಗಳ ಕೃಪೆ ನನ್ನ ಮೇಲಿದ್ದರೂ ನಮ್ಮ ಸುಖ ದುಃಖದ ಕಾಲದಲ್ಲೂ ನಮ್ಮೊಂದಿಗೆ ಹೆಜ್ಜೆ ಹಾಕಿ ಕೈ ಹಿಡಿದು ನಡೆಸುವ ಏಕೈಕ ಶಕ್ತಿ ಎಂದರೆ ನಮ್ಮ ಗುರುನಾಥರು ಮಾತ್ರವೇ... ಇದು ನನ್ನ ಅನುಭವ ಮತ್ತು ನಂಬಿಕೆ ಎಂದು ಹೇಳಿ ಆ ಪರಾಶಕ್ತಿಗೆ ಮನಸಾರೆ ವಂದಿಸಿದರು ...... ..... ,,,,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।



No comments:

Post a Comment