ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 13
ಶಿವನ ಶಾಪದಿಂದ ಖಾಯಿಲೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
"ನಾವು ಎಂದೂ ದೇಗುಲ, ಮಠಗಳಿಂದ ಏನನ್ನೂ ತರಬಾರದು ಕಣಯ್ಯಾ. ಅಲ್ಲಿಗೆ ನೀಡಿ ಬರಬೇಕು" ಅಂತ ಸದಾ ಹೇಳುತ್ತಿದ್ದ ಗುರುನಾಥರ ಮಾತಿಗೆ ಈ ಘಟನೆ ನಿದರ್ಶನವೆನಿಸುತ್ತದೆ.
ಗುರುನಾಥರು ಹಲವು ದೇಗುಲ ಮಠಗಳಿಗೆ ತಾನು ಹೋಗುವಾಗ ಹಾಗೂ ತನ್ನ ಭಕ್ತರನ್ನು ಕಳಿಸುವಾಗಲೂ ಕೈ ತುಂಬಾ ಚೀಲಗಟ್ಟಲೆ ಅಕ್ಕಿ, ದಿನಸಿ, ಹೂವು, ಹಣ್ಣುಗಳನ್ನು ಸಮರ್ಪಿಸುತ್ತಿದ್ದರು.
ಹೀಗಿರಲು ಒಂದು ದಿನ ಸಖರಾಯಪಟ್ಟಣದಲ್ಲಿರುವ ಸುಮಾರು 400
ವರ್ಷ ಪ್ರಾಚೀನ ಶಿವ ದೇಗುಲದಲ್ಲಿ ವಾಸವಿದ್ದು ಪೂಜೆಯಲ್ಲಿ ನಿರತರಾಗಿದ್ದ ದಂಪತಿಗಳಿದ್ದರು. ಆ ಅರ್ಚಕರ ಪತ್ನಿಗೆ ಇದ್ದಕ್ಕಿದ್ದಂತೆ ಹಾವಿನ ಪೊರೆ ಬಿಡುವ ರೀತಿ ಚರ್ಮ ಸುಳಿಯತೊಡಗಿತು. ಎಲ್ಲ ವೈದ್ಯರು ಚರ್ಮ ತಜ್ಞರಿಗೆ ತೋರಿಸಿದರಾದರೂ ಗುಣಮುಖರಾಗಲಿಲ್ಲ. ಗುರುನಾಥರ ಪರಿಚಯವಿದ್ದ ಅವರು ಗುರುನಾಥರಲ್ಲಿ ಈ ಸಮಸ್ಯೆಯನ್ನು ಬಿನ್ನವಿಸಿಕೊಂಡರು.
ಆಗ ಗುರುನಾಥರು "ದೇಗುಲ, ಮಠಗಳಿಗೆ ನಾವು ನೀಡಬೇಕೆ ವಿನಃ ಅಲ್ಲಿಂದ ಏನನ್ನೂ ತರಬಾರದು ಅಲ್ವೇ" ಎಂದು ಸೂಚ್ಯವಾಗಿ ತಿಳಿಸಿದರಾದರೂ ಜಿಪುಣ ಸ್ವಭಾವದ ಅರ್ಚಕ ದಂಪತಿಗಳು ಅವರ ಮಾತಿನ ಮರ್ಮವನ್ನು ಅರಿತುಕೊಳ್ಳಲಿಲ್ಲ. ಆದರೂ ಗುರುಕೃಪೆಯಿಂದಾಗಿ ಕೆಲಕಾಲ ಚರ್ಮ ಖಾಯಿಲೆ ವಾಸಿಯಾಗಿತ್ತು. ಮತ್ತೆ ಇದ್ದಕ್ಕಿದ್ದಂತೆ ಖಾಯಿಲೆ ಜಾಸ್ತಿಯಾಯಿತು.
ಈ ವಿಷಯ ತಿಳಿದ ಗುರುನಾಥರು ನನ್ನನ್ನು ಕರೆದು "ಆ ಮಹಿಳೆಗೆ ಏನೂ ಸಮಸ್ಯೆ ಇಲ್ಲ. ಆದರೆ, ಈಶ್ವರ ದೇಗುಲದೊಳಗಿರುವ ತೆಂಗಿನಮರದ ಕಾಯಿಯನ್ನು ಈಶ್ವರ ನೈವೇದ್ಯಕ್ಕೆ ಬಳಸುವುದನ್ನು ಬಿಟ್ಟು ವ್ಯಾಪಾರ ಮಾಡಿದ್ದಾರೆ ಕಣಯ್ಯಾ ತಪ್ಪಲ್ವೇ ಅದು? ಇನ್ನು ಖಾಯಿಲೆ ವಾಸಿಯಾಗಲೆಂತು ಸಾಧ್ಯ?" ಎಂದು ಪ್ರಶ್ನಿಸಿದರು. ಇಂದಿಗೂ ಅವರ ಸಮಸ್ಯೆ ಹಾಗೇ ಇದೆ.
ಬಹುಶಃ ಗುರುನಾಥರ ಮಾತಿನ ಮರ್ಮ ಅರಿತಿದ್ದಲ್ಲಿ ಅವರ ಈ ಸಮಸ್ಯೆ ಎಂದೋ ಪರಿಹಾರ ಕಾಣುತ್ತಿತ್ತೇನೋ? ಇದೀಗ ತೀರಾ ಇತ್ತೀಚೆಗೆ ಚರಣದಾಸನ ಭೇಟಿಯಾಗಿದ್ದ ಆ ದಂಪತಿಗಳು "ಗುರುವಾಕ್ಯದಂತೆ ನಾವೀಗ ನಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದು ನಿತ್ಯವೂ ಔದುಂಬರ ಪ್ರದಕ್ಷಿಣೆ ಹಾಕುತ್ತಿದ್ದು ಖಾಯಿಲೆ ನಿಧಾನವಾಗಿ ವಾಸಿಯಾಗುತ್ತಿದೆ" ಎಂದು ಹೇಳಿ ಹರ್ಷ ವ್ಯಕ್ತಪಡಿಸಿದರು ..... ,,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment