ಒಟ್ಟು ನೋಟಗಳು

Sunday, October 23, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 19

 

    ಪರಮ ಗುರುಗಳ ಸಮಾಧಿ ದರ್ಶನ ಮಾಡಿ ಬರುವಾಗ ಆದ ಅನುಭವ


ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಒಮ್ಮೆ ಗುರುವಿನ ಅಣತಿಯಂತೆ ನಾವು ಹದಿನೆಂಟು ಮಂದಿ ಸೇರಿ ಆಂಧ್ರಪ್ರದೇಶ ವಿಶಾಖಪಟ್ಟಣದಲ್ಲಿರುವ ಪರಮ ಗುರುಗಳ ಸಮಾಧಿ ದರ್ಶನಕ್ಕೆ ರೈಲಿನಲ್ಲಿ ಹೊರಟೆವು. ದಾರಿಯುದ್ದಕ್ಕೂ ಆಗಾಗ್ಗೆ ಕರೆ ಮಾಡಿಸುತ್ತಿದ್ದ ಗುರುನಾಥರು ಕುಶಲ ವಿಚಾರಿಸುತ್ತಿದ್ದರು. ವಿಶಾಖಪಟ್ಟಣದ ಸಮುದ್ರ ತೀರದಲ್ಲಿರುವ ಪರಮ ಗುರುಗಳ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ರಾತ್ರಿ ರೈಲಿನಲ್ಲಿ ಬಂದು ಕುಳಿತಿದ್ದೂ ಆಯಿತು.

ಆಗ ಕರೆ ಮಾಡಿಸಿದ ಗುರುನಾಥರು "ನಿಮ್ಮಿಂದ ಮುಂದೆ ಕುಳಿತಿರುವ ಐದನೇ ವ್ಯಕ್ತಿ ಕಪ್ಪು ಅಂಗಿ ತೊಟ್ಟಿರುವನು. ಅವನು ಪ್ರಯಾಣಿಕನಲ್ಲ. ಕಳ್ಳತನಕ್ಕಾಗಿ ಬಂದಿರುವನು. ಅವನ ಮೇಲೆ ಕಣ್ಣಿಡಿ. ಅವನನ್ನು ಅಲ್ಲಿಂದ ಕಳಿಸಿ" ಎಂದರು. ಅವರು ಹೇಳಿದ್ದು ನಿಜವಾಗಿತ್ತು. ಆತನಿಗೆ ಆ ಬೋಗಿಯಲ್ಲಿ ಸೀಟು ಇರಲಿಲ್ಲ. ಅವನನ್ನ ಅಲ್ಲಿಂದ ಕಳಿಸಿದೆವು.

ನಂತರ ಮತ್ತೆ ಕರೆ ಮಾಡಿಸಿದ ಗುರುನಾಥರು "ರಾತ್ರಿ ಒಬ್ಬ ಪ್ರಯಾಣಿಕ ಕೈಗೆ ಏಟು ಮಾಡಿಕೊಂಡು ವಿಪರೀತ ಕೂಗುವನು. ರಕ್ತಸ್ರಾವವಾಗುವುದು. ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆ ತಂದಿರಿಸಿಕೊಳ್ಳಿ" ಎಂದರು. ನಾವು ಹಾಗೆಯೇ ಮಾಡಿದೆವು.

ಅಂತೆಯೇ ರಾತ್ರಿ ಕಿಟಕಿಯ ಗಾಜಿನ ಬಾಗಿಲು ಒಬ್ಬ ಪ್ರಯಾಣಿಕನ ಕೈ ಮೇಲೆ ಬಿದ್ದು ಬೆರಳು ಸಿಕ್ಕಿ ಹಾಕಿಕೊಂಡು ವಿಪರೀತ ಕೂಗತೊಡಗಿದನು. ರಕ್ತಸ್ರಾವವಾಗುತ್ತಿತ್ತು. ಆತ ಸಹಾಯಕ್ಕಾಗಿ ಕೂಗುತ್ತಿದ್ದನು. ನಾನು ಅವರಿಂದ ಅಣತಿ ದೂರದಲ್ಲಿದ್ದು ಆಗಲೇ ಆಯಾಸಗೊಂಡಿದ್ದೆ. ಆದ ಕಾರಣ ಈ ಘಟನೆಯನ್ನು ಕಣ್ಣಾರೆ ನೋಡಿದರೂ ಏಳಲು ಮನಸ್ಸಾಗದೆ ಹಾಗೆಯೇ ಮಲಗಿದೆ. ಬಹುಶಃ ನಂತರ ಯಾರೋ ಗುರುಭಕ್ತರು ಅವನಿಗೆ ಚಿಕಿತ್ಸೆ ನೀಡಿದರೆನಿಸುತ್ತದೆ.

"ಒಂದು ಬಾರಿ ಗುರುವೆಂದು ಕರೆದರೆ ನಿಮ್ಮ ಭಾರವೆಲ್ಲ ಗುರುವಿನದಾಗುವುದು ಕಣಯ್ಯಾ. ಗುರು ಸದಾ ನಿಮ್ಮೊಂದಿಗೇ  ಇದ್ದು ಕಾಪಾಡುವನು" ಎಂಬ ಗುರುನಾಥರ ಮಾತು ಈ ಘಟನೆ ನೋಡಿದಾಗ ಸದಾ ನೆನಪಾಗುವುದು.

ಹಾಗೆಯೇ ಒಮ್ಮೆ ನಾನು ಹಾಗೂ ಸಾಧನಾ ಸ್ಥಿತಿಯಲ್ಲಿದ್ದ ಗುರು ಬಂಧುವೊಬ್ಬರು ಗುರು ಭಕ್ತರೋರ್ವರ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರಿನ ಚಕ್ರದೊಳಗಿನಿಂದ ವಿಚಿತ್ರವಾದ ಶಬ್ದ ಬರತೊಡಗಿತು. ಕಾರಿನಲ್ಲಿ ಕಾರಿನ ಮಾಲೀಕ ದಂಪತಿಗಳು, ನಾನು ಹಾಗೂ ಗುರು ಬಂಧು ಹೀಗೆ ಒಟ್ಟು ನಾಲ್ಕು ಜನರಿದ್ದೆವು. ನಾವು ಸಾಗುತ್ತಿದ್ದ ದಾರಿಯಲ್ಲಿ ಯಾವುದೇ ಗ್ಯಾರೇಜುಗಳೂ ಇರಲಿಲ್ಲ ಹಾಗೂ ಕತ್ತಲಾಗಿತ್ತು.

ಆಗ ಕರೆ ಮಾಡಿದ ಗುರುನಾಥರು ಎಲ್ಲರ ಕುಶಲ ವಿಚಾರಿಸಿ ನಂತರ "ಕಾರಿನ ಹಿಂಬದಿಯ ಚಕ್ರದಲ್ಲಿ ಸದ್ದು ಬರ್ತಿದೆ ಅಲ್ವೇ?" ಎಂದರು. ಅದಕ್ಕೆ ನಾ ಹೌದು ಎಂದೆ. ತಕ್ಷಣ ಕರೆ ನಿಲ್ಲಿಸಿದ ಗುರುನಾಥರು ಮತ್ತೆ ಹತ್ತು ನಿಮಿಷದ ನಂತರ ಕರೆಮಾಡಿ ಈಗ ಸದ್ದು ಬರುತ್ತಿಲ್ಲವಲ್ಲಾ?" ಎಂದು ಕೇಳಿದರು. ಅಂತೆಯೇ ಸದ್ದು ಬರುವುದು ನಿಂತಿತ್ತು. ಈ ಘಟನೆಯನ್ನು ಅವಲೋಕಿಸಿದಾಗ "ಗುರುವಿನ ಅರಿವಿಗೆ ಬಾರದ ಜ್ಞಾನ ಇನ್ಯಾವುದಿರಲು ಸಾಧ್ಯ" ಎಂದು ನನಗನಿಸಿತು. 

ಹಾಗೆಯೇ ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ಒಮ್ಮೆ ಬೆಂಗಳೂರಿನಿಂದ ಕರೆ ಮಾಡಿದ ಮಹಿಳೆಯೊಬ್ಬರು ನನಗೆ ಹೀಗೆ ಹೇಳಿದರು: "ಇಂದು  ನನ್ನ ಮಗನಿಗೆ ಹತ್ತು ಇಯತ್ತೆ ಪರೀಕ್ಷೆಯಿರುತ್ತದೆ. ಆದರೆ ಅವನು ವಿಪರೀತ ಕಟ್ಟು ನೋವಿನಿಂದ ಬಳಲುತ್ತಿದ್ದಾನೆ" ಎಂದು ನುಡಿದರು. 

"ಏನಂತಯ್ಯಾ .... ಅವಳದ್ದು?" ಎಂಬ ಗುರುನಾಥರ ಪ್ರಶ್ನೆಗೆ ನಾನು ಆಕೆಯ ಮಗನ ಸಮಸ್ಯೆಯನ್ನು ವಿವರಿಸಿದೆ. ಸುಮ್ಮನೆ ತಲೆಯಾಡಿಸಿದ ಗುರುನಾಥರು ಬೇರೆ ಕೆಲಸದಲ್ಲಿ ಮಗ್ನರಾದರು. 

ಬೆಳಿಗ್ಗೆ ಹತ್ತು ಗಂಟೆಗೆ ನನ್ನನ್ನು ಕರೆದುಕೊಂಡು ಮನೆಯಿಂದ ಅಣತಿ ದೂರದಲ್ಲಿರುವ ಈಶ್ವರ ದೇಗುಲದ ಮುಂದೆ ಬಂದು ಎಂದಿನಂತೆ ಅರಳೀ ಮರದ ಕೆಳಗೆ ಕುಳಿತರು. ತುಸು ಹೊತ್ತಿನ ನಂತರ "ನಮ್ಮ ಇವಳ ಮಗನಿಗೆ ಕತ್ತು  ನೋವು ಅಂದ್ಯಲ್ವಾ? ಹೋಗಿ ಸ್ವಲ್ಪ ತುಂಬೆ ಸೊಪ್ಪು ಕಿತ್ತುಕೊಂಡು ಬಾ" ಅಂದ್ರು. ನಾ ಕಿತ್ತು ತಂದೆ. 

ಗುರುನಾಥರು ಅವರ ಕುತ್ತಿಗೆಗೆ ತುಂಬೆ ಸೊಪ್ಪನ್ನು ಹಚ್ಚಲು ತಿಳಿಸಿದರು. ನಾನು ಅದಕ್ಕೆ "ಏನು ನಿಮ್ಮ ಕುತ್ತಿಗೆಗೆ ಇದನ್ನು ಹಚ್ಚಿದ್ರೆ ಅಲ್ಲಿ ಅವನ ಕಟ್ಟು ನೋವು ವಾಸಿಯಾಗುತ್ತಾ?" ಎಂದು ಅಹಂಕಾರದಿಂದ ಪ್ರಶ್ನಿಸಿದೆ. 

ಅದಕ್ಕೆ ಗುರುನಾಥರು "ಸರಿ, ನಂಗ್ಯಾಕೆ? ನೀನ್ ಕುತ್ತಿಗೆಗೆ ಹಚ್ಕೋ... ಏನ್ ನಡೆಯುತ್ತೆ ನೋಡುವೆಯಂತೆ" ಎಂದರು. ಚರಣದಾಸನಾದ ನಾನು ಸಂಶಯದಿಂದಲೇ ಹಚ್ಚಿಕೊಂಡೆ. 

ಅದಾಗಿ ಬಹುಶಃ ಅರ್ಧ ಗಂಟೆಯಲ್ಲಿ ಬೆಳಿಗ್ಗೆ ಕರೆ ಮಾಡಿದ ಅದೇ ಮಹಿಳೆ ಮತ್ತೆ ಕರೆ ಮಾಡಿ "ನನ್ನ ಮಗನ ಕತ್ತು ನೋವು ವಾಸಿಯಾಗಿದೆ. ಅವನು ಪರೀಕ್ಷೆಗೆ ಹೋಗುತ್ತಿದ್ದಾನೆ" ಎಂದು ಹೇಳಿ ಗುರುಕೃಪೆಯನ್ನು ನೆನೆದು ಭಾವಪರವಶರಾದರು. ನಾನು ಇದೆಂತಹ ವಿದ್ಯೆಯಪ್ಪಾ ಎಂದು ಚಕಿತನಾದೆ.......,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment