ಒಟ್ಟು ನೋಟಗಳು

Tuesday, October 18, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 14

 

  ನಕ್ಸಲ್ ನಿಗ್ರಹ ಪಡೆಗೆ ಎಳನೀರು ತಲುಪಿಸಿದ್ದು

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಬ್ಯಾಂಕ್ ಒಂದರಲ್ಲಿ ವೃತ್ತಿಯಲ್ಲಿದ್ದ ವ್ಯಕ್ತಿಯೋರ್ವರು ಗುರುನಾಥರ ಸಂಪರ್ಕದಲ್ಲಿದ್ದರು. ಗುರುನಾಥರು ಪ್ರತಿದಿನ ಕರೆಮಾಡಿ ಬ್ಯಾಂಕ್ ಗೆ ಯಾರು ಯಾರು ಬರುವರು, ಎಷ್ಟು ಹಣ ಬರುವುದು ಎಂಬಿತ್ಯಾದಿ ವಿಚಾರಗಳನ್ನು ಅವರಿಗೆ ತಿಳಿಸುತ್ತಿದ್ದರು. 

ಒಮ್ಮೆ  ಈ ವ್ಯಕ್ತಿ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಬ್ಯಾಂಕ್ ನಲ್ಲಿ ವ್ಯವಹಾರವಿದ್ದ ವ್ಯಕ್ತಿಯ ಮನೆಗೆ ಹೋಗಬೇಕಾಗಿ ಬಂತು. 

ಆಗ ಕರೆಮಾಡಿದ ಗುರುನಾಥರು, "ಹೋಗುವಾಗ ಸ್ವಲ್ಪ ಎಳನೀರು ತೆಗೆದುಕೊಂಡು ಹೋಗಿ" ಎಂದು ತಿಳಿಸಿದರು. ಅದು ಮಲೆನಾಡಿನಲ್ಲಿ ನಕ್ಸಲ್ ಹೋರಾಟ ಪ್ರಬಲವಾಗಿದ್ದ ಕಾಲ. ಕಾಕತಾಳೀಯವೆಂಬಂತೆ ಇವರು ಹೋಗಬೇಕಾಗಿದ್ದ ಜಾಗವೂ ನಕ್ಸಲ್ ಪ್ರಭಾವಿತವಾಗಿತ್ತು. 

ಇವರು  ಹೋಗುತ್ತಿದ್ದ ದಾರಿಯಲ್ಲೇ ಓರ್ವ ಎಳನೀರು ಮಾರುತ್ತಿದ್ದನು. ಕೂಡಲೇ ವಾಹನ ನಿಲ್ಲಿಸಿದ ಇವರು ಐವತ್ತು ಎಳನೀರನ್ನು ತೆಗೆದುಕೊಂಡು ಅಲ್ಲಿಂದ ಹೊರಟರು. 

ತಾವು ಹೋಗಬೇಕಾಗಿದ್ದ ವ್ಯಕ್ತಿಯ ಮನೆಗೆ ತಲುಪಿ ಮಾತನಾಡುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ರಕ್ಷಣಾ ಪಡೆ ಇವರಿದ್ದ ಮನೆಯನ್ನು ಸುತ್ತುವರೆದಿದ್ದು ಗಮನಕ್ಕೆ ಬಂತು. ಸ್ಥಳೀಯ ಜನರ ಪರಿಚಯವೂ ಇರದ ರಕ್ಷಣಾ ಪಡೆಯ ಯೋಧರು ಇವರನ್ನು ನಕ್ಸಲರೆಂದೇ ಭಾವಿಸಿ ಅಲ್ಲಿಂದ ಕದಲಲೂ ಬಿಡಲಿಲ್ಲ. ಇದೆಂತಾ ಸ್ಥಿತಿ ಬಂತಪ್ಪಾ ಎಂದು ಚಿಂತಿಸಿದ ಅವರು ಗುರುನಾಥರನ್ನು ಪ್ರಾರ್ಥಿಸಿದರು. ಅಂದು ಅವರಿದ್ದ ಜಾಗದ ಸಮೀಪ ನಕ್ಸಲರಿಟ್ಟಿದ್ದ ಬಾಂಬ್ ಒಂದು ಸ್ಫೋಟಗೊಂಡಿದ್ದರಿಂದ ರಕ್ಷಣಾ ಪಡೆಯವರು ಆ ಜಾಗವನ್ನು ಸುತ್ತುವರೆದಿದ್ದರೆಂದು ಅವರಿಗೆ ತಿಳಿದು ಬಂತು. ಸರಿಯಾಗಿ ಇದೇ  ಸಮಯಕ್ಕೆ ಆ ವ್ಯಕ್ತಿಯನ್ನು ಸಂಪರ್ಕಿಸಲು ಗುರುನಾಥರು ಯತ್ನಿಸಿದರಾದರೂ ಅದು ಸಫಲವಾಗಲಿಲ್ಲ. ಆಗ ಕೂಡಲೇ ಅವರ ಪತ್ನಿಗೆ ಕರೆ ಮಾಡಿಸಿದ ಗುರುನಾಥರು ಅಂದು ಆ ವ್ಯಕ್ತಿ ಎದುರಿಸುತ್ತಿದ್ದ ಸಮಸ್ಯೆಯನ್ನು ತಿಳಿಸಿದರು, ಮಾತ್ರವಲ್ಲ ಪರಿಹಾರವನ್ನೂ ಸೂಚಿಸಿದರು. 

ಇದಾಗಿ ಕೆಲವೇ ಸಮಯದಲ್ಲಿ ನಕ್ಸಲ್ ರಕ್ಷಣಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪನಿರೀಕ್ಷಕ ಹುದ್ದೆಯ ವ್ಯಕ್ತಿಯೋರ್ವರು ಈ ವ್ಯಕ್ತಿಯ ಬಳಿ ಬಂದು ನಮಸ್ಕಾರ ತಿಳಿಸಿ "ತಾವೇನು ಇಲ್ಲಿ?" ಎಂದು ಕೇಳಿದರು. 

ಆಗ ಅವರು ಬ್ಯಾಂಕ್ ವ್ಯವಹಾರಕ್ಕಾಗಿ ಬಂದು ಸಿಕ್ಕಿ ಹಾಕಿಕೊಂಡಿರುವ ಸ್ಥಿತಿಯನ್ನು ವಿವರಿಸಿ "ತಮಗೆ ಹೇಗೆ ನನ್ನ ಪರಿಚಯ" ಎಂದು ಕೇಳಿದರು.

ಆಗ ಆ ರಕ್ಷಣಾಪಡೆ ಉಪನಿರೀಕ್ಷಕರು ಹೀಗೆ ತಿಳಿಸಿದರು. "ಸ್ವಾಮಿ ನನ್ನ ಊರು ಗುರುನಾಥರ ಊರಿನ ಸಮೀಪವೇ. ನಾನು ಮದುವೆಯಾಗಿ ಬಹಳ ಕಾಲವಾದರೂ ಮಕ್ಕಳಾಗಿರಲಿಲ್ಲ. ಆಗ ಗುರುನಾಥರಲ್ಲಿ ಬಂದು ವಿನಂತಿಸಿದಾಗ ಗುರುನಾಥರ ಮನೆಯಲ್ಲಿಯೇ ಇದ್ದ ನಿಮ್ಮ ಹಸ್ತದಿಂದ ನನಗೆ ಒಂದು ಹಣ್ಣನ್ನು ಕೊಡಿಸಿದ್ದರು. ಅದರ ಫಲವಾಗಿ ನನಗೀಗ ಒಂದು ಮಗುವಿದೆ. ಆ ಗುರು ಕೃಪೆಯಿಂದಾಗಿ ನಾವಿಂದು ನೆಮ್ಮದಿಯಿಂದ ಇದ್ದೇವೆ ಸ್ವಾಮಿ" ಎಂದು ತಿಳಿಸಿ ನೀವೇನೂ ಚಿಂತಿಸಬೇಡಿ, ನಾನು ನಿಮಗೆ ಇಲ್ಲಿಂದ ಹೊರ ಹೋಗಲು ವ್ಯವಸ್ಥೆ ಮಾಡುತ್ತೇನೆಂದು ತಿಳಿಸಿ ತನ್ನ ಮೇಲಧಿಕಾರಿಯೊಡನೆ ಮಾತನಾಡಿ ಇವರಿಗೆ ಹೊರಹೋಗಲು ಅನುಕೂಲ ಮಾಡಿಕೊಟ್ಟರು.

ಅದು ಸುಡು ಬೇಸಿಗೆ ಕಾಲವಾಗಿದ್ದು ರಕ್ಷಣಾಪಡೆಯವರು ನೀರಿಗಾಗಿ ಪರಿತಪಿಸುತ್ತಿದ್ದರು. ಇದನ್ನು ಅರಿತ ಆ ಬ್ಯಾಂಕ್ ನೌಕರರು ಕೂಡಲೇ ಆ ಉಪನಿರೀಕ್ಷಕರನ್ನು ಕರೆದು ತಾನು ಎಳನೀರು ತಂದಿರುವ ವಿಚಾರ ತಿಳಿಸಿದರು. ದಾಹದಿಂದ ದಣಿದಿದ್ದ ಎಲ್ಲ ಯೋಧರು ಅದನ್ನು ಕುಡಿದು ಸಮಾಧಾನಗೊಂಡರು.

ಆಗ ಆ ಉಪನಿರೀಕ್ಷಕರು "ನೀವು ಬ್ಯಾಂಕ್ ವೃತ್ತಿಯಲ್ಲಿದ್ದವರು ಇಂದು ಏಕೆ ಇಷ್ಟೊಂದು ಎಳನೀರು ತಂದಿರಿ?" ಎಂದು ಕೇಳಲು, ಗುರುನಾಥರ ಆದೇಶವಿತ್ತು ಅದನ್ನು ಪಾಲಿಸಿದೆ ಅಷ್ಟೇ. ಅದು ಏಕೆಂದು ಈಗ ಅರ್ಥವಾಯಿತೆಂದು ಬ್ಯಾಂಕ್ ನೌಕರರು ತಿಳಿಸಿದರು.

ಅವರಿಬ್ಬರೂ "ಜಗದ ಎಲ್ಲ ಜೀವಿಗಳ ಬೇಕು ಬೇಡಗಳನ್ನು ಪೂರೈಸುತ್ತಿರುವ ಗುರುನಾಥರ ಕೃಪಾದೃಷ್ಟಿಗೆ ಮನಸಾರೆ ವಂದಿಸಿದರು"....... ,,,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment