ಒಟ್ಟು ನೋಟಗಳು

Thursday, October 20, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 16

 

  ಅಗೋಚರ ವ್ಯಕ್ತಿಗಳಿಗೆ ಸೀರೆ ಕೊಡಿಸಿದ್ದು 

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
 
 
 
 
 
ಕೊಪ್ಪ ಸಮೀಪದ ಹಳ್ಳಿಯ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ಈ ವ್ಯಕ್ತಿಯ ಮೂಲಕವೇ ಗುರುನಾಥರು ಹೆಚ್ಚಿನ ಪವಾಡಗಳನ್ನು ತೋರಿಸುತ್ತಿದ್ದರು. ಅದರ ಅರ್ಥ ಅವರು ಗುರುನಾಥರಿಗೆ ಪರಮಾಪ್ತರೆಂದಲ್ಲ. ಆದರೆ, ಅವರ ಮೂಲಕವೇ ತನ್ನ ಪವಾಡಗಳನ್ನು ಪ್ರಕಟಿಸಬೇಕೆಂದು ಗುರುನಾಥರಿಗೆ ದತ್ತನಿಂದ ಬಂದ ಆದೇಶವಾಗಿತ್ತು. 

ಗುರು ಬಂಧುಗಳಲ್ಲಿ ಯಾರೋ ಒಬ್ಬರ "ಯಾಕೆ ಅವರಿಗೆ ಮಾತ್ರ ಪವಾಡ ತೋರಿಸುವರು. ನಮಗೂ ತೋರಿಸಬಹುದಲ್ವಾ?" ಎಂಬ ಪ್ರಶ್ನೆಗೆ ಗುರುನಾಥರಿಂದ ಬಂದ ಉತ್ತರ ಇದೆ ಆಗಿತ್ತು. ಒಮ್ಮೆ ಗುರುನಾಥರು ಬೆಳಿಗ್ಗೆ ಬ್ಯಾಂಕ್ ಉದ್ಯೋಗಿಗೆ ಕರೆ ಮಾಡಿ ಹೀಗೆ ಹೇಳಿದರು. 

"ಸ್ವಾಮಿ, ಇವತ್ತು ಒಂದು ವಿಶೇಷವಾದ ಅನುಭವ ನಿಮಗಾಗುವುದು. ನಿಮ್ಮ ವಾಹನದಲ್ಲಿ ಎರಡು ಸೀರೆ, ಎರಡು ರವಿಕೆ, ಒಳಬಟ್ಟೆ ತೆಗೆದುಕೊಂಡು ಹೋಗಿ" ಎಂದರು. 

ಅಂತೆಯೇ ಆ ವ್ಯಕ್ತಿ ಕಛೇರಿಗೆ ಹೋಗಿ ಅಲ್ಲಿಂದ ಹಣ ತರಲು ತಾಲೂಕು ಕೇಂದ್ರಕ್ಕೆ ಹೋಗಿ ವಾಪಸಾಗುತ್ತಿರುವಾಗ ದಾರಿ ಮಧ್ಯದಲ್ಲಿ ಎರಡೂ ಕಡೆ ಜನ ಗುಂಪು ಸೇರಿದ್ದನ್ನು ಕಂಡು ವಾಹನದಿಂದ ಇಳಿದು ಬಂದು ನೋಡಲು, ರಸ್ತೆಯ ಎರಡೂ ಬದಿಯಲ್ಲಿ ಇಬ್ಬರು ಮಹಿಳೆಯರು ಸಂಪೂರ್ಣವಾಗಿ ವಿವಸ್ತ್ರರಾಗಿ ಲೋಕವನ್ನೇ ಮರೆತು ಶೇಷಶಯನ ರೀತಿಯಲ್ಲಿ ಮಲಗಿದ್ದರು. ಅವರನ್ನು ನೋಡಲು ಜನ ಜಮಾಯಿಸಿದ್ದರು. 

ಇದನ್ನು ಕಂಡ ಆ ವ್ಯಕ್ತಿ ಗುರುನಾಥರು ಸೀರೆ ಇಟ್ಟುಕೊಳ್ಳಲು ಹೇಳಿದ್ದು ಇವರಿಗೆ ಕೊಡಲೆಂದೇ ಎಂಬುವುದನ್ನರಿತು, ಸೀರೆ ತಂದು ಒಂದು ಬದಿ ಮಲಗಿದ್ದ ಸ್ತ್ರೀಗೆ ಸೇರಿ ನೀಡಿದರು. 

ಆಕೆ "ಈ ಬಣ್ಣ ನನ್ನದಲ್ಲ ಅವಳದ್ದು" ಎಂದರು. ಅಂತೆಯೇ ಅವರು ಆ ಸೀರೆಯನ್ನು ಈ ಬದಿಯ ಸ್ತ್ರೀಗೆ ನೀಡಲು ಆಕೆ ಅದನ್ನು ಸ್ವೀಕರಿಸಿ ತನ್ನ ಕೈ ಮೇಲೆತ್ತಿ "ಈ ದಿನ ನನಗೆ ಗುರು ಪ್ರಸಾದವಾಯ್ತು" ಎಂದು ಮೂರು ಬಾರಿ ಕೂಗಿದಳಂತೆ. ಅಂತೆಯೇ ಇನ್ನೊಂದು ಬದಿಯ ಸ್ತ್ರೀ ಕೂಡಾ ಅದೇ ರೀತಿ ಹೇಳಿದಳಂತೆ. 

ನಂತರ ಈ ವ್ಯಕ್ತಿ ಅಲ್ಲಿಂದ ಹೊರಟು ಕೆಲ ನಿಮಿಷಕ್ಕೆ ತಾನು ರವಿಕೆ ಕೊಡಲು ಮರೆತೆನಲ್ಲ ಎಂದು ವಾಹನ ಹಿಂತಿರುಗಿಸಿ ಬಂದು ನೋಡಲು, ಅಲ್ಲಿ ಸೇರಿದ್ದವರು ಯಾರೂ ಇರಲಿಲ್ಲ. ಆ ಮಹಿಳೆಯರೂ ಅದೃಶ್ಯರಾಗಿದ್ದರು. ಅದು ನೇರ ರಸ್ತೆಯಾಗಿದ್ದು ಯಾರು ನಡೆದಾಡಿದರೂ ಕಾಣಿಸಬೇಕಿತ್ತು. ಆದರೂ ಕೆಲ ದೂರ ಹೋಗಿ ನೋಡಿದರೂ ಯಾರೂ ಗೋಚರಿಸಲಿಲ್ಲ. ಆಗ ಎಲ್ಲವೂ ಗುರುವಿನ ಲೀಲೆ ಎಂದುಕೊಂಡ ಅವರು ಅಲ್ಲಿಂದ ಕಛೇರಿಗೆ ಹಿಂತಿರುಗಿದರು. 

ಅದೇ ರೀತಿ ಮತ್ತೊಂದು ದಿನ ಕರೆ ಮಾಡಿದ ಗುರುನಾಥರು "ಇಂದು ಮೂರು ಸಕ್ಕರೆ ಪೊಟ್ಟಣ ಹಾಗೂ ಮಕ್ಕಳು ಬಳಸುವ ಟೇಪು, ಬಲೇ, ಆಟಿಕೆಗಳನ್ನು ತೆಗೆದುಕೊಂಡು ಹೋಗಿ" ಎಂದು ತಿಳಿಸಿದರು. 

ಅಂತೆಯೇ ಮಾಡಿದ ಆ ವ್ಯಕ್ತಿ ಕಛೇರಿಗೆ ಹೊರಟು ಇನ್ನೇನು ಕೆಲವೇ ದೂರದಲ್ಲಿದ್ದಾಗ ಒಂದು ಸೇತುವೆ ಸಮೀಪ ಮೂರು ಜನ ಉತ್ತರ ಭಾರತದ ಸನ್ಯಾಸಿಗಳು ಹೋಗುತ್ತಾ ಇದ್ದುದನ್ನು ಕಂಡ ಈ ವ್ಯಕ್ತಿ ಆ ಸನ್ಯಾಸಿಗಳತ್ತ ನಡೆದರು. ಕೈಯಲ್ಲಿದ್ದ ಸಕ್ಕರೆ ಪೊಟ್ಟಣವನ್ನು ಕಂಡ ಅವರು ತಾವಾಗಿಯೇ ಕೈ ಚಾಚಿದರು. 

ಇವರು ಸಕ್ಕರೆ ಪೊಟ್ಟಣವನ್ನು ನೀಡಲು ಗೌರವದಿಂದ ಸ್ವೀಕರಿಸಿದ ಆ ಸನ್ಯಾಸಿಗಳು "ಈ ಸಕ್ಕರೆ ಪೊಟ್ಟಣ ಪಡೆಯಲು ಎಷ್ಟೋ ಕಾಲದಿಂದ ಪ್ರಯತ್ನಿಸುತ್ತಿದ್ದೆವು. ಇಂದು ನಮ್ಮ ಜೀವನ ಸಾರ್ಥಕವಾಯಿತು" ಎಂದು ನುಡಿದು ಕೂಡಲೇ ಆ ಬಲೇ, ಆಟಿಕೆಗಳನ್ನು ಅಲ್ಲೇ ಸಮೀಪವಿರುವ ಮಕ್ಕಳಿಗೆ ನೀಡಿ ಎಂದು ತಿಳಿಸಿ ಕೈ ಮುಗಿದು ಹೋದರಂತೆ. ಮುಂದೆ ಕೆಲ ದೂರ ಹೋಗಿ ನೋಡಲು ಅವರು ಯಾರೂ ಅಲ್ಲಿರಲಿಲ್ಲವಂತೆ. 

ಇದನ್ನೆಲ್ಲಾ ನೋಡಿದಾಗ ಗುರುನಾಥರು ಹೇಳುತ್ತಿದ್ದ "ನಾ ನಿಮ್ ಹತ್ರ ಇದ್ದೀನಿ ಅನ್ನೋದ್ರಿಂದ ನಿಮಗೆ ನನ್ನ ಬೆಲೆ ಗೊತ್ತಾಗ್ತಿಲ್ಲ ಅಲ್ವೇ? ಹಿಮಾಲಯದಲ್ಲಿ ನನ್ನ ಒಂದು ಸಾಕ್ಷಾತ್ಕಾರಕ್ಕಾಗಿ ನೂರಾ ಐವತ್ತು ಜನ ಶಿಷ್ಯರು ಹಲವಾರು ವರ್ಷಗಳಿಂದ ಕಾಯ್ತಾ ಇದ್ದಾರೆ ಗೊತ್ತೇ?" ಎಂಬ ಮಾತುಗಳು ನೆನಪಿಗೆ ಬರುತ್ತದೆ. 

ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಕರೆ ಮಾಡಿದ ಗುರುನಾಥರು "ಇಂದು ಹೋಗುವಾಗ ಎರಡು ಕೆ.ಜಿ. ಸಕ್ಕರೆ ತಗೊಂಡು ಹೋಗು" ಎಂದರು. 

ಅಂತೆಯೇ ಅವರು ಹೊರಟು ಸ್ವಲ್ಪ ದೂರ ತೆರಳುವಷ್ಟರಲ್ಲಿ ದಾರಿಯಲ್ಲಿ ಸಿಕ್ಕ ಅಯ್ಯಪ್ಪ ಮಾಲಾಧಾರಿಯೊಬ್ಬ ಪ್ರಸಾದ ತಯಾರಿಸಲು ಸಕ್ಕರೆ ಮರೆತು ಬಿಟ್ಟಿದ್ದು ಎಲ್ಲೆಲ್ಲಾದರೂ  ಅಂಗಡಿ ಇದೆಯೇ ಎಂದು ವಿಚಾರಿಸಿದರು. ಕೂಡಲೇ ಅವರು ತಾವು ತಂದಿದ್ದ ಸಕ್ಕರೆಯನ್ನು ಅವರಿಗೆ ನೀಡಿದರು. ಇದು ಅಲ್ಲಿದ್ದ ಮಾಲಾಧಾರಿಗಳೆಲ್ಲರಿಗೂ ಆಶ್ಚರ್ಯ ಉಂಟು ಮಾಡಿತು. ಇಂತಹ ಪವಾಡಗಳು ಹೇಳ ಹೊರಟರೆ ಬಹುಶಃ ಸಮಯವೇ ಸಾಕಾಗುವುದಿಲ್ಲವೆನಿಸುತ್ತದೆ...... , , , , , , , 


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


 

No comments:

Post a Comment