ಒಟ್ಟು ನೋಟಗಳು

Wednesday, October 19, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 15

 

  ಸೇವೆ ...... ಎಲ್ಲರೊಳೊಂದಾಗಿ 

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಕಣ್ಮುಚ್ಚಿ ಬಿಡುವಷ್ಟರಲ್ಲಿ ತನ್ನ ಮನದ ಎಲ್ಲಾ ಬೇಕು-ಬೇಡಗಳನ್ನು ಪೂರೈಸಬಲ್ಲ ಶಕ್ತಿ ಇದ್ದರೂ ತನಗೇನೂ ಗೊತ್ತಿಲ್ಲದವರಂತೆ ಲೋಕ ವ್ಯವಹಾರಗಳಿಂದ ದೂರವಿರುತ್ತಿದ್ದ ಗುರುನಾಥರ ಮುಗ್ಧತೆ ಹಾಗೂ ಸರಳತೆಗೆ ಸರಿಸಾಟಿ ಗುರುನಾಥರು ಮಾತ್ರವೇ ಎನಿಸುತ್ತದೆ.

ಏಕೆಂದರೆ ಗುರುನಾಥರ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಭಕ್ತರು ಬಂದು ಹೋಗುತ್ತಿದ್ದರಾದರೂ ಗುರುನಾಥರ ಜೀವನ ಶೈಲಿಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ತಾನು ಗುರುವೆಂಬ ಅಹಂಭಾವವೂ ನನ್ನೊಡೆಯನಲ್ಲಿರಲಿಲ್ಲ. ಇಂತಹ ಮೇರು ನಡವಳಿಕೆ, ಸರಳತೆಯನ್ನು ನೆನೆದಾಗಲೆಲ್ಲ ನನ್ನ ಕಣ್ಣುಗಳು ನನ್ನೊಡೆಯನಿಗಾಗಿ ಹುಡುಕಿ ಕಣ್ಣೀರಿಗೆ ಶರಣಾಗುತ್ತವೆ. ನಾನು ನನ್ನವರೆಲ್ಲರೂ ಇದ್ದಾಗ್ಯೂ, ಯಾವುದೋ ಪರಿಸ್ಥಿತಿ ಕಾರಣವಾಗಿ ಬಸವಳಿದು ಒಂಟಿಯಾಗಿ ಬದುಕುತ್ತಿದ್ದ ಎಷ್ಟೋ ಜೀವಿಗಳಿಗೆ ಗುರುನಾಥರೇ ಆಸರೆಯಾಗಿದ್ದರು. ಮಾತ್ರವಲ್ಲ, ಗುರುಕರುಣೆಯಿಂದಾಗಿ ನನಗೂ ಅಂತಹವರ ಸೇವೆ ಮಾಡುವ ಯೋಗ ಲಭಿಸಿತ್ತು.

ಸಖರಾಯಪಟ್ಟಣದ ಈಶ್ವರ ದೇಗುಲದ ಸಮೀಪ ಓರ್ವ ನಿವೃತ್ತ ಶಿಕ್ಷಕರಿದ್ದರು. ಮಕ್ಕಳಿರದ ಅವರು ತನ್ನ ಮಡದಿ ಮಡಿದ ನಂತರ ಒಂಟಿ ಬಾಳು ಸಾಗಿಸುತ್ತಿದ್ದರು. ಅವರಿಗೆ ಪ್ರತಿನಿತ್ಯ ಬೆಳಿಗ್ಗೆ ಹಾಲು ಹಾಗೂ ತಿಂಡಿ ನೀಡಿ ಬರುವ ಜವಾಬ್ದಾರಿ ಹಾಗೂ ಅವರು ಗುರು ನಿವಾಸಕ್ಕೆ ಬಂದಾಗಲೆಲ್ಲ ಪಾದ ಪೂಜೆ ಮಾಡಿ ಗೌರವಿಸಿ, ಮನೆತನಕ ತಲುಪಿಸುವ ಅವಕಾಶವನ್ನು ಗುರುನಾಥರು ಈ ಚರಣದಾಸನಿಗೆ ಕಲ್ಪಿಸಿದ್ದರು.

ಹಾಗೆಯೇ ಊರೊಳಗೆ ಒಂದು ಸಣ್ಣ ಗುಡಿಸಿಲಿನಲ್ಲಿ ವಾಸವಾಗಿದ್ದ ಓರ್ವ ಅಜ್ಜಿಗೂ ಪ್ರತಿನಿತ್ಯ ಆಹಾರ ನೀಡಬೇಕಿತ್ತು. ಆ ಅಜ್ಜಿ ಗುರುನಿವಾಸಕ್ಕೆ ಬಂದಾಗಲೆಲ್ಲ ಸೀರೆ ಹಣ್ಣು ಹಾಲು ನೀಡಿ ಗುರುನಾಥರು ಆದರಿಸುತ್ತಿದ್ದರು. ಗುರುನಾಥರು ದೇಹ ಬಿಟ್ಟ ನಂತರವೂ ನಾನು ಆ ಅಜ್ಜಿಯನ್ನು ಭೇಟಿ ಆದಾಗಲೆಲ್ಲ ಕಣ್ಣು ಕಾಣದ ಆಕೆ ನನ್ನ ದನಿ ಕೇಳಿದಾಕ್ಷಣ "ಬಂದ್ಯಾ ನನ್ನಪ್ಪಾ ...... " ಎಂದು ಗುರುನಾಥರನ್ನು ನೆನೆದು ಬಿಕ್ಕಳಿಸುತ್ತಿದ್ದುದು, ಎಲ್ಲ ಬೇಧಗಳನ್ನು ಮೀರಿ ನಿಂತಿದ್ದ ನನ್ನೊಡೆಯನ ಸೇವಾ ಭಾವವನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಹೀಗೆ ಎಲ್ಲರೊಳೊಂದಾಗಿ ಬದುಕಿದ ನನ್ನೊಡೆಯನ ಪ್ರೀತಿ ಎಲ್ಲ ಜೀವಿಗಳಿಗೂ ಸಮಾನವಾಗಿ ಹಂಚಿಕೆಯಾಗಿತ್ತು.

ಸಖರಾಯಪಟ್ಟಣದಲ್ಲಿ ಕತ್ತೆಗಳ ಮೇಲೆ ಅಡಿಕೆ, ಸೌದೆ ಹೊತ್ತು ತರುವ ಅಭ್ಯಾಸವಿತ್ತು. ಕೆಲಸದ ನಂತರ ಕೆಲವು ತುಂಟ ಕಟ್ಟೆಗಳನ್ನು ನಿಯಂತ್ರಿಸಲು ಅಗಸರು ಮುಂದಿನ ಎರಡು ಕಾಲುಗಳನ್ನು ಸೇರಿಸಿ ಕಟ್ಟಿಹಾಕುತ್ತಿದ್ದರು. ಹೀಗೆ ಕಟ್ಟಲ್ಪಟ್ಟ ಕತ್ತೆಯೊಂದು ಒಂದು ದಿನ ಬೆಳಿಗ್ಗೆ ಗುರುನಿವಾಸದ ಮುಂದೆ ಬಂತು ನಿಂತಿತ್ತು. ಹೀಗೆ ಸುಮಾರು ಎಂಟು-ಹತ್ತು ಕತ್ತೆಗಳು  ಬಂದು ನಿಲ್ಲುತ್ತಿದ್ದವು. ಆಗ ಅವಕ್ಕೆ ಹಣ್ಣು ತರಕಾರಿಗಳನ್ನು ಗುರುನಾಥರೇ ನೀಡುತ್ತಿದ್ದರು. ಅಲ್ಲೇ ಓಡಾಡುತ್ತಿದ್ದ  ನಾನು ಏನೋ ವಾಸನೆ ಬಂದಂತಾಗಿ ಆ ಕಟ್ಟೆಯನ್ನು ಗಮನಿಸಲು, ಅದರ ಕಾಲಲ್ಲಿ ಗಾಯವಾಗಿ ಹುಳು ಬೀಳುತ್ತಿರುವುದನ್ನು ನೋಡಿ ಗುರುಗಳಿಗೆ ತಿಳಿಸಲು, ಔಷಧಿ ಮಾಡೆಂದು ತಿಳಿಸಿದರು. ನಂತರ ಕಾಲಿನ ಹುಳವನ್ನೆಲ್ಲಾ ತೆಗೆದು ಔಷಧ ಮಾಡಿದ್ದಾಯ್ತು.

ಈ ರೀತಿ ಭಿಕ್ಷುಕ ವೃತ್ತಿಯವರನ್ನೂ, ಎಲ್ಲ ಕೆಲಸಗಾರರನ್ನೂ ಗೌರವಿಸುತ್ತಿದ್ದ ನನ್ನೊಡೆಯನ ರೀತಿ, ಸರಳತೆ ಹಾಗೂ ಸೇವೆ ಎಂಬ ಪದಗಳ ನಿಜಾರ್ಥವನ್ನು ಮತ್ತಷ್ಟು ಪರಿಪೂರ್ಣಗೊಳಿಸುತ್ತವೆ ಎನಿಸುವುದು........,,,,,,,,,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment