ಒಟ್ಟು ನೋಟಗಳು

Wednesday, October 12, 2016

ಶ್ರೀ ಸದ್ಗುರು ಮಹಿಮೆ   

 

ಗ್ರಂಥ ರಚನೆ - ಚರಣದಾಸ 

 

ಅಧ್ಯಾಯ  - 8

 

ಸದ್ಗುರು ಮಂದಿರ


ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರಿದ್ದಲ್ಲಿಗೆ ಯಾರಾದರೂ ಬಂದು ತನ್ನ ಕಷ್ಟವನ್ನು ಹೇಳಿಕೊಂಡಾಗ ಕೆಲವೊಮ್ಮೆ ಗುರುನಾಥರು ನನಗೇನು ಕೊಡುತ್ತೀಯಾ? ಕೆಲಸವಾದ್ರೆ ? ಅಂತ ಕೇಳುತ್ತಿದ್ದರು. ನಾ ಕೇಳಿದ್ದು ಕೊಡ್ತೀ ಏನಯ್ಯಾ? ಎಂದೂ ಕೇಳುತ್ತಿದ್ದರು. ಆಗ ಎದುರಿಗಿದ್ದ ವ್ಯಕ್ತಿ ಕೊಡಲೊಪ್ಪಿದರೆ, ಕೂಡಲೇ ಗುರುನಾಥರು, ನಾ ಏನ್ ಕೇಳ್ತೀನಯ್ಯಾ ? ನಿನ್ನೊಳಗಿನ ಒಳ್ಳೆಯ ಮನಸ್ಸನ್ನು ಕೊಟ್ಟುಬಿಡು ಸಾಕು ಆಯ್ತೆ? ಎಂದು ಮುಗ್ಧವಾಗಿ ಕೇಳುತ್ತಿದ್ದ ರೀತಿ ಇಂದಿಗೂ ಈ ಚರಣದಾಸನ ಕಣ್ಣಲ್ಲಿ ನೀರು ತರಿಸುತ್ತದೆ. ಅಂತೆಯೇ ಯಾರಿಗಾದರೂ ಅನುಗ್ರಹ ಮಾಡುತ್ತಿದ್ದ ರೀತಿಯೂ ತುಂಬಾ ವಿಚಿತ್ರವಾದದ್ದು. 

ಒಬ್ಬ ವ್ಯಕ್ತಿ ಬೆಂಗಳೂರಿನಲ್ಲಿ ವಾಸವಿದ್ದು ಪ್ರತಿಷ್ಠಿತ ಸಂಸ್ಥೆಯೊಂದರ ಒಡೆಯನಾಗಿದ್ದರೂ ಗುರುನಾಥರು ದೇಹ ಬಿಡುವ ಒಂದು ವರ್ಷ ಮೊದಲಿನವರಗೂ ಸ್ವಂತ ಮನೆ ಇರಲಿಲ್ಲ ಆತ ಒಂದು ವರ್ಷದಲ್ಲಿ ಇಪ್ಪತ್ತಾರು ಬಾರಿ ಮನೆ ಬದಲಿಸಿದ್ದರು. ಆತ ಅಷ್ಟು ಗಣ್ಯನಾಗಿದ್ದರೂ ಸರಳತೆ, ಕರ್ತವ್ಯ ನಿಷ್ಠರಾಗಿದ್ದರು. ಅವರಿಗೆ ಗುರುನಾಥರೇ ಖುದ್ದಾಗಿ ನಿಂತು ಒಂದು ನಿವೇಶನಕ್ಕೆ ವ್ಯವಸ್ಥೆ ಮಾಡಿಸಿ ಮನೆಕಟ್ಟಲು ಅವಕಾಶವನ್ನು ತಾವೇ ಮಾಡಿಕೊಟ್ಟರು. ಈಗ ಆ ವ್ಯಕ್ತಿ ಅಲ್ಲೇ ವಾಸವಿದ್ದು ನಾನು ಕೂಡಾ ಅಲ್ಲಿಗೆ ಹೋಗಿ ಬಂದಿರುವೆ. 

ಆ ವ್ಯಕ್ತಿ ಒಮ್ಮೆ ಸುಮಾರು ಇಪ್ಪತ್ತೆರಡು ಅವಧೂತ ಪರಂಪರೆಯ ಸಾಧುಗಳ ಪಾದುಕೆಯನ್ನು ಒಂದೆಡೆ ಸೇರಿಸಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು. ನಾನು, ಗುರುಪತ್ನಿ ಹಾಗೂ ಗುರುನಾಥರು ಒಟ್ಟಿಗೆ ಪಾದುಕಾ ದರ್ಶನಕ್ಕೆ ಬಂದೆವು. ಅಲ್ಲಿ ನೆರೆದಿದ್ದ ಸಾವಿರಾರು ಜನರೆದುರಲ್ಲಿಯೇ ಆ ವ್ಯಕ್ತಿಗೆ "ಗುರುವೆಂದರೇನು ವ್ಯಾಪಾರದ ವಸ್ತು ಅಂದ್ಕೊಂಡಿದ್ದೀಯೇನೋ ? ಈ ತರ ಮಾರುಕಟ್ಟೆ ಮಾಡ್ತಿದ್ದೀಯಲ್ಲಾ" ಎಂದು ಕಠೋರವಾಗಿ ಬಯ್ಯತೊಡಗಿದರು. ಆದರೆ ಆ ವ್ಯಕ್ತಿ ಕಿಂಚಿತ್ತೂ ಬದಲಾಗದೇ ಅದೇ ವಿನಯ, ಭಕ್ತಿಯಿಂದ ನಿಂತಿದ್ದರು. ಭಯದಿಂದ ದೂರ ನಿಂತಿದ್ದ ಈ ಚರಣದಾಸನ ಕೈ ಹಿಡಿದೆಳೆದು ಹೂ ನೀಡಿ "ನೀ ಬಂದಿರೋದೇ ಗುರುವಿನ ಮನೆಯಲ್ಲಿ ಗೇಯೋಕೆ. ಹೋಗು. ಎಲ್ಲ ಪಾದುಕೆಗಳನ್ನು ಮುಟ್ಟಿ ಹೂ ಹಾಕು" ಎಂದರು. ನಾ ಹಾಗೆಯೇ ಮಾಡಿದೆ. 

ಆ ನಂತರ ಭೋಜನಕ್ಕೆ ಕರೆದರೂ ಬಾರದ ಗುರುನಾಥರು ಗುರು ಭಕ್ತರೋರ್ವರ ಮನೆಗೆ ಹೊರಟು ಹೋದರು. ನಂತರ ತಡ ರಾತ್ರಿ ಅಲ್ಲಿಗೆ ಬಂದು ಏನಾದ್ರೂ ತಿನ್ನೋಕೆ ಕೊಡ್ರಯ್ಯ ಎನ್ನಲು ಅಲ್ಲಿದ್ದ ಸಿಬ್ಬಂದಿ, "ಬುದ್ದೀ, ಊಟ ಖಾಲಿಯಾಗಿ ಪಾತ್ರೆ ತೊಳೆಯೋಕೆ ಹಾಕಿದೀವಿ" ಎಂದರು. ಆಗ ಅಲ್ಲೇ ಪಾತ್ರೆಯಲ್ಲಿದ್ದ ನಾಲ್ಕು ಆಗಳು ಅನ್ನವನ್ನು ತೆಗೆದು ತಿಂದು ಅಲ್ಲಿಂದ ಹೊರಟು ಪಾದುಕೆ ದರ್ಶನ ಮಾಡಿಸಿದ ಭಕ್ತರ ಮನೆಗೆ ಹೋಗಿ "ಎಂಥಾ ದೊಡ್ಡ ವ್ಯಕ್ತಿಯಪ್ಪಾ ನೀನು. ನಾ ಮಾಡಬೇಕೆಂದಿದ್ದ ಕಾರ್ಯ ನೀ ಮಾಡ್ತಿದೀಯಲ್ಲ. ತುಂಬಾ ಸಂತೋಷನಪ್ಪಾ. ಈ ಕಾರ್ಯ ಮುಂದುವರಿಸಿ ಪಾದುಕಾ ಮಂದಿರವನ್ನು ಕಟ್ಟಬೇಕು ತಿಳೀತಾ" ಎಂದು ಒಂದಷ್ಟು ಹಣವನ್ನು ಅವರ ಜೇಬಿಗೆ ಹಾಕಿದರು. ಗುರುವಾಕ್ಯದಂತೆಯೇ ಎಂದು ಅವರು ಪಾದುಕಾ ಮಂದಿರ ನಿರ್ಮಿಸಿರುವರು. ನಂತರ ಆ ವ್ಯಕ್ತಿಯನ್ನು ಕರೆದು "ಅಲ್ಲಯ್ಯಾ ನಿನ್ನ ಮೇಲೆ ಸಾಕಷ್ಟು ಜನರ ದೃಷ್ಠಿ ಇತ್ತು. ಅದಕ್ಕಾಗಿಯೇ ಎಲ್ಲರೆದುರು ನಿನ್ನನ್ನು ಬಯ್ಯಬೇಕಾಯಿತು ಕಣಯ್ಯಾ" ಎಂದರು. ಗುರುನಾಥರು ಅನುಗ್ರಹಿಸುತ್ತಿದ್ದ ವಿಶಿಷ್ಟ ರೀತಿಯನ್ನು ನೋಡಿ ನಮಗೆಲ್ಲ ಆಶ್ಚರ್ಯವಾಯಿತು".

ಹಾಗೆಯೇ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆಯಲ್ಲಿ ವಾಸವಾಗಿದ್ದ ಯತಿವರೇಣ್ಯರೊಬ್ಬರು ಗುರುನಿವಾಸಕ್ಕೆ ಬರುವರಿದ್ದರು. ಆ ಯತಿಗಳು ತಮ್ಮ ಆಶ್ರಮ ನಿರ್ವಹಣೆಗೆ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿದ್ದರು.

ಯತಿಗಳ ಆಗಮನ ವಿಷಯ ತಿಳಿದ ಗುರುನಾಥರು ಪೂರ್ಣಕುಂಭ ಹಿಡಿದು ಮನೆಯ ಮುಂದೆ ರಸ್ತೆಯಲ್ಲಿ ನಿಂತಿದ್ದರು. ಕಾರು ಆಗಮಿಸಲು ಗುರುನಾಥರು ಕಾರನ್ನು ಸಮೀಪಿಸಿದರು. ಕಾರಿನಿಂದ ಮೊದಲು ಯತಿಗಳು ಇಳಿಯುವ ಬದಲಿಗೆ ಆ ಯತಿಗಳ ಓರ್ವ ಭಕ್ತೆ ಕೆಳಗಿಳಿದರು. ಆಗ ಮೌನವಾಗಿದ್ದ ಗುರುನಾಥರು ಯತಿಗಳ ಪಾದ ತೊಳೆದು ಮನೆಯೊಳಗೆ ಆಸನದಲ್ಲಿ ಕುಳ್ಳಿರಿಸಿದರು.

ಆ ನಂತರ "ಸನ್ಯಾಸಿ" ಎಂದೂ ತನ್ನ ಧರ್ಮ ತಪ್ಪಬಾರದು. ಪೂರ್ಣ ಕುಂಭ ಹಿಡಿದಾಗ ಮೊದಲು ಆ ಮಹಿಳೆ ಕೆಳಗಿಳಿದರು. ಹಾಗಾದರೆ ನಿಮ್ಮಿಬ್ಬರಲ್ಲಿ ಯಾರು ಯತಿಗಳು? ಎಂದು ಪ್ರಶ್ನಿಸಲು ಆ ಯತಿಗಳು ನಿರುತ್ತರರಾದರು.

ಆಗ ಸಿಟ್ಟಾದ ಗುರುನಾಥರು "ಸ್ವಾಮಿ, ತಾವು ಸನ್ಯಾಸಿಯಾಗಿರಲು ಅರ್ಹರಲ್ಲ. ಹೋಗಿ ಬಿಳಿ ಪಂಚೆ ಉಟ್ಕೊಳ್ಳಿ, ಸಂಸಾರಿಯಾಗಿ..... ಬರ್ರಯ್ಯಾ .... ಇವರಿಗೆ ಒಂದು ಬಿಳಿ ಪಂಚೆ ಕೊಡಿ" ಎಂದು ನಮ್ಮನ್ನು ಕರೆಯಲು, ವಿಚಲಿತರಾದ ಆ ಯತಿಗಳು ಪೀಠದಿಂದ ಇಳಿದು ಬಂದು ಗುರುನಾಥರನ್ನು ಸಮೀಪಿಸಿ "ನನ್ನಿಂದ ತಪ್ಪಾಗಿದೆ ಕ್ಷಮಿಸಿ" ಎಂದು ಕೈ ಮುಗಿದರು.

ಆಗ ಗುರುನಾಥರು "ಸರಿ ಹಾಗಾದ್ರೆ ಇನ್ನೆರಡು ದಿನ ನಾ ಹೇಳಿದಂಗೆ ಕೇಳ್ತೀರಾ"? ಎನ್ನಲು ಯತಿಗಳು "ಆಗಲಿ" ಎಂದರು.

ಕೂಡಲೇ ಗುರುನಾಥರು ಅಲ್ಲೇ ಇದ್ದ ಓರ್ವ ಬೆಂಗಳೂರು ವಾಸಿಯನ್ನು ಕರೆದು "ಇನ್ನೆರಡು ದಿನ ಈ ಯತಿಗಳನ್ನು ಭಕ್ತರ ಮನೆಗಳಿಗೆ ಕರೆದೊಯ್ದು ಆ ನಂತರ ಅವರ ಆಶ್ರಮಕ್ಕೆ ಬಿಡಬಹುದೇ"? ಎನ್ನಲು ಆತ ಕೂಡಲೇ ಸಿದ್ಧರಾದರು. ತನ್ಮೂಲಕ ಗುರುನಾಥರು ಆ ಯತಿಗಳ ತಪ್ಪನ್ನು ತಿದ್ದಿದರು ಹಾಗೂ ಅವರ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡಿದರು......... ,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment