ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 26
ತೃಣಮಪಿ ನಚಲತಿ ತೇನಾವಿನಾ ....
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುವಿನ ಅಣತಿ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡದು. ಹಾಗಾದ್ರೆ ನಮ್ಮ ಜೀವನದಲ್ಲಿ ಕಷ್ಟ-ಸುಖಗಳೆರಡೂ ಅವನ ಅಣತಿಯಿಂದಲೇ ನಡೆಯುವುದು ಹಾಗೂ ಕಷ್ಟ-ಸಮಸ್ಯೆಗಳು ಒಳ್ಳೆಯ ಕಾರಣಕ್ಕಾಗಿಯೇ ಬರುವುದು.
"ಪರಮ ಲೌಕಿಕರಾದ ನಮಗೆ ಅವರು ಯಾರೆಂದು ತಿಳಿಯದು. ನಮ್ಮ ಸಮಸ್ಯೆಗೆ ಪರಿಹಾರ ಕೇಳಲು ಹೋದರೆ ನಮಗೆ ಸಿಕ್ಕಿದ್ದು ಜನ್ಮಾಂತರಕ್ಕೆ ಸಾಕಾಗುವಷ್ಟು ಅಭಯ ಹಾಗೂ ಜಾತಿ, ಮತ, ಅಂತಸ್ತುಗಳನ್ನು ಮೀರಿದ ಆತ್ಮೀಯತೆ".
ಇದು ಚಿಕ್ಕಮಗಳೂರು ಸಮೀಪ ವಾಸಿಸುತ್ತಿದ್ದ ದಂಪತಿಗಳ ಮನದಾಳದ ಮಾತು. ಗುರು ನಿವಾಸಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದ ಆ ದಂಪತಿಗಳು ಮಿತಭಾಷಿಗಳು. ತೀರಾ ಇತ್ತೀಚಿಗೆ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆಗಲೂ ಹಿಂದಿನ ಆತ್ಮೀಯತೆ, ಸರಳತೆ ಅವರಲ್ಲಿ ಕಂಡು ಬಂತು. ನನ್ನ ನೋಡಿದಾಗ ಅವರ ಮೊದಲ ಮಾತು "ನಾವು ಗುರುದೇವನ ಭೇಟಿಯಾದ ದಿನದಿಂದ ಇವತ್ತಿನವರೆಗೂ ಬೇರೆ ಕಡೆಗೆ ತಿರುಗಿಲ್ಲ. ಅವ ತೋರಿದ ದಾರಿ ಮರೆತಿಲ್ಲ" ಎಂದರು ವಿನಮ್ರವಾಗಿ. ಇದು ನನ್ನ ಚಂಚಲತೆಗೆ ಪಾಠವೆಂದುಕೊಂಡು ಗುರುನಾಥರೊಂದಿಗೆ ನಿಮ್ಮ ಒಡನಾಟದ ಬಗ್ಗೆ ಹೇಳ್ತೀರಾ? ... ಎಂದೇ. ನಸುನಕ್ಕು ಕಣ್ಮುಚ್ಚಿ ನೆನಪಿನಾಳಕ್ಕಿಳಿದ ಆ ತಾಯಿ ಹೀಗೆ ಹೇಳತೊಡಗಿದರು.
"ನಮಗೆ ಗುರುದರ್ಶನವಾಗಲು ಕಾರಣವಾಗಿದ್ದು ನಮಗಿದ್ದ ವಿಪರೀತ ಸಾಲಬಾಧೆ. ಅದು ನಮಗಾಗಿ ಮಾಡಿಕೊಂಡಿದ್ದಲ್ಲ. ಯಾರದೋ ತಪ್ಪಿಗೆ ನಾವು ತಲೆ ಕೊಡಬೇಕಾಯ್ತು. ಈ ಸಮಸ್ಯೆಯೂ ನಮಗೆ ಗುರುಕರುಣೆಯನ್ನು ದೊರಕಿಸಿತು. ಅದು 1991-92 ರ ಕಾಲ. ಸಖರಾಯಪಟ್ಟಣದಲ್ಲಿ ಯಾರೋ ಜ್ಯೋತಿಷ್ಯ ಹೇಳ್ತಾರಂತೆ ಅಂತ ತಿಳ್ಕೊಂಡು ಗುರುನಿವಾಸಕ್ಕ್ ಬಂದು "ಇಲ್ಲಿ ಯಾರೋ ಜ್ಯೋತಿಷ್ಯ ಹೇಳ್ತಾರಂತಲ್ಲಾ.... " ಎಂದು ವಿಚಾರಿಸಿದೆ". ಯಾರಮ್ಮಾ, ಏನಮ್ಮ.... ಒಳಗೆ ಏನು ಹೇಳು" ಎಂಬ ಗುರುವಾಕ್ಯ ಕೇಳಿಸಿತು.
ಮನೆತುಂಬಾ ಭಕ್ತಾದಿಗಳು ತುಂಬಿದ್ದರು. ಎಲ್ಲರೆದುರು ನಮ್ಮ ವಿಚಾರ ಹೇಳಲು ಮುಜುಗರ. ಆದ್ರೆ ಗುರುಗಳ ಮಾತಿಗೆ ಎದುರಾಡಲು ಧೈರ್ಯ ಸಾಲದೇ ವಿಚಾರ ತಿಳಿಸಿ ನಮ್ಮ ಮಾನ ಕಾಪಾಡಿ... ಎಂದು ಪ್ರಾರ್ಥಿಸಿದೆವು . ಕೂಡಲೇ ಒಂದು ವಿಳ್ಳೇದೆಲೆ ತರಿಸಿ ಜೊತೆಗೆ ಸ್ವಲ್ಪ ಸಕ್ಕರೆ ನೀಡಿ ಕಳಿಸಿದರು. ಅಂದಿನಿಂದ ಆಶ್ಚರ್ಯಕರ ರೀತಿಯಲ್ಲಿ ನಮ್ಮ ಸಮಸ್ಯೆಗಳು ಬಗೆಹರಿಯತೊಡಗಿದವು. ಜೊತೆಗೆ ನಮಗೇ ಅರಿವಿರದಂತೆ ನಮ್ಮಲ್ಲಿದ್ದ ದೋಷಗಳೂ ನಾಶವಾಗಿ ನಮ್ಮ ಜೀವನದ ಗತಿಯೇ ಬದಲಾಯ್ತು.
ಸಮಸ್ಯೆಗಳಿಗೆ ಪರಿಹಾರ ಎಲ್ಲಾದರೂ ಸಿಗಬಹುದು. ಆದರೆ ಒಂದು ದರುಶನ ಮಾತ್ರದಿಂದ ನಮ್ಮ ಬದುಕನ್ನೇ ಬದಲಿಸಿ ಯಾರಿಂದಲೂ ಏನನ್ನೂ ಅಪೇಕ್ಷಿಸದೆ ನಿತ್ಯಾನಂದವನ್ನು ನೀಡುವ ಶಕ್ತಿ ಸದ್ಗುರುವಿಗೆ ಮಾತ್ರವಿದೆ.... ಆ ಶಕ್ತಿಯನ್ನು ನಾವು ಗುರುದೇವನಲ್ಲಿ ಕಂಡೆವು.
ಇಂದು ಗುರು ಶರೀರವಾಗಿ ನಮ್ಮೊಂದಿಗಿಲ್ಲವೆಂಬ ಶೂನ್ಯತೆ ನಮ್ಮನ್ನು ಕಾಡಿದರೂ ಆ ಶುದ್ಧ ಭಾವ ಸದಾ ನಮ್ಮನ್ನು ಮುನ್ನೆಡೆಸುತ್ತಿದೆ ಎಂಬ ನಂಬಿಕೆಯಲ್ಲಿ ಜೀವಿಸುತ್ತಿದ್ದೇವೆ. ಎಂದು ನುಡಿದು ಕಣ್ತುಂಬಿಕೊಂಡರು..........,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment