ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 21
ಗುರು ಒಂದು ಅನುಭವ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಂದು ದಿನ ಬೆಳಿಗ್ಗೆ ಎಂದಿನಂತೆ 5.30 ಕ್ಕೆ ಎದ್ದ ಚರಣದಾಸನಾದ ನಾನು ಹಾಲು ಕರೆದು, ಹೂ ಕೊಯ್ಯಲು ಅಣಿಯಾಗುತ್ತಿದ್ದೆ. ಆಗ ಯಾರೋ ಬಾಗಿಲು ಬಡಿದಂತಾಗಿ ಹೊರಬಂದೆ. ಗುರುನಾಥರು ಆ ವ್ಯಕ್ತಿಯನ್ನು ಇನ್ನೂ ನೋಡಿಯೇ ಇರಲಿಲ್ಲ. ಆದರೂ ಬಾಗಿಲು ತೆಗೆದು ಒಳ ಬರಹೇಳು ಎಂದರು. ನಾನು ಅಂತೆಯೇ ಮಾಡಿದೆ. ಕೂಡಲೇ ಆ ವ್ಯಕ್ತಿಗೆ ಕಾಫಿ ಕೊಡಲು ಹೇಳಿದರು. ನಂತರ ಹೋಟೆಲ್ ನಿಂದ ತಿಂಡಿ ತರಿಸಿ ನೀಡಿದರು.
ಆ ವ್ಯಕ್ತಿ ಜೀವನದಲ್ಲಿ ಹಲವು ಪರೀಕ್ಷೆ, ಆರ್ಥಿಕ ಸಂಕಷ್ಟಗಳನ್ನೆದುರಿಸಿ ಹೈರಾಣಾಗಿ ಒಮ್ಮೆ ಗುರುನಾಥರನ್ನು ದರ್ಶನ ಮಾಡಿ ಹೋಗಲು ಬಂದಿದ್ದರು. ನಂತರ ಆ ವ್ಯಕ್ತಿಯನ್ನು ವಿಚಾರಿಸಲಾಗಿ ಆತ ತನ್ನ ದಾರಿದ್ರ್ಯ ನಿವಾರಣೆಗಾಗಿ ಕೈಯಲ್ಲಿ ಬಿಡಿಗಾಸು ಇಲ್ಲದೇ ಸುಮಾರು ನಲವತ್ತು ಕಿಲೋಮೀಟರ್ ದೂರವನ್ನು ರಾತ್ರಿ ಈಡೀ ನಡೆದು ಬಂದು ಗುರುನಿವಾಸಕ್ಕೆ ಬಂದಿದ್ದರು.
ಇದನ್ನು ಕಂಡು ಕರಗಿದ ಗುರುನಾಥರು "ಇನ್ನು ಜೀವನದಲ್ಲಿ ನೀನು ಗೆದ್ದೆ ಕಣಪ್ಪಾ. ಫೋಟೋ ಸ್ಟುಡಿಯೋ ಆರಂಭಿಸು. ಒಳ್ಳೆಯದಾಗುವುದು" ಎಂದು ಹೇಳಿ ಕಳಿಸಿದರು. ಆ ನಂತರ ಗುರು ವಾಕ್ಯದಂತೆಯೇ ಆ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸಿತು.
ಗುರುನಾಥರು ಫೋಟೋ, ವಿಡಿಯೋ ತೆಗೆಯುವಿಕೆಯನ್ನು ಒಪ್ಪುತ್ತಿರಲಿಲ್ಲ. ಅನುಮತಿ ಪಡೆದು ಬೇಕಾದಲ್ಲಿ ತೆಗೆಯಬಹುದಿತ್ತು. ಆದರೆ ಅನುಮತಿ ಸಿಗುವುದೇ ವಿರಳವಾಗಿತ್ತು. ಗುರುನಾಥರು ಸಾಮಾನ್ಯವಾಗಿ ಎಲ್ಲರಿಂದ ಮೈ ಮುಟ್ಟಿಸಿಕೊಳ್ಳುವುದಾಗಲಿ ಅಥವಾ ಜೊತೆಗಿರಿಸಿಕೊಳ್ಳುವುದಾಗಲೀ ಮಾಡುತ್ತಿರಲಿಲ್ಲ.
ಅಂದು ಗುರುನಾಥರು ಕುರ್ಚಿ ಮೇಲೆ ಕುಳಿತು ಮಾತನಾಡುತ್ತಿದ್ದರು. ಆಗ ಒಳ ಬಂದ ಅದೇ ವ್ಯಕ್ತಿ ಗುರುನಾಥರ ಅನುಮತಿ ಕೇಳದೆಯೇ ಗುರುನಾಥರ ಫೋಟೋ ತೆಗೆದನು. ಇದನ್ನು ಕಂಡು ಗೊಂದಲಗೊಂಡು ಗುರುನಾಥರು "ಯಾರನ್ನು ಕೇಳಿ ಫೋಟೋ ತೆಗೆದೆ?. ಅನುಮತಿ ಇರದೇ ಇಂತಹ ಕೆಲಸ ಮಾಡಬೇಡಿ. ನೀ ಬದುಕುತ್ತೀಯೋ ಇಲ್ಲವೋ ಗೊತ್ತಿಲ್ಲ. ತೊಂದರೆ ಮಾಡ್ಕೊತೀಯಾ" ಎಂದು ಗುಡುಗಿದರು. ಇದರಿಂದ ಆ ವ್ಯಕ್ತಿ ಬೆವತು ಹೋದನು.
ಅದಾಗಿ ಕಾಲ ದಿನಗಳ ನಂತರ ಬೆಂಗಳೂರಿನಿಂದ ಕೆಲವು ಗುರು ಬಂಧುಗಳು ಬಂದಿದ್ದರು. ಆ ವ್ಯಕ್ತಿಯೂ ಜೊತೆಗೆ ಬಂದಿದ್ದನು. ಗುರುನಾಥರು ಎಲ್ಲರನ್ನು ಶೃಂಗೇರಿಗೆ ಹೋಗಿ ಗುರುದರ್ಶನ ಮಾಡಿ ಬನ್ನಿರೆಂದು ಕಳಿಸಿದರು. ಅವರಲ್ಲಿ ಬಾಣಾವರದಿಂದ ಬಂದ ವ್ಯಕ್ತಿಯೊಬ್ಬನಿಗೆ "ನೀನು ಶೃಂಗೇರಿಯಲ್ಲೇ ಕೆಲಕಾಲ ಇರಬೇಕೆಂದೂ ಯಾವುದೇ ಕಾರಣಕ್ಕೂ ಯಾವುದೇ ಕಾರನ್ನು ಹತ್ತಬೇಡ" ಎಂದು ತಿಳಿಸಿದರು
ಅವರೆಲ್ಲರೂ ಜಗದ್ಗುರುಗಳ ದರ್ಶನ ಮಾಡಿ ಅಲ್ಲಿಂದ ಹೊರಟರು. ಬಾಣಾವರದ ಆ ವ್ಯಕ್ತಿ ಗುರುವಾಕ್ಯವನ್ನು ಹಗುರವಾಗಿ ಪರಿಗಣಿಸಿ ಬೆಂಗಳೂರಿನಿಂದ ಬಂದ ಕಾರಿನಲ್ಲಿ ವಾಪಸ್ ಹೊರಟನು. ಜೊತೆಗೆ ಅಂದು ಫೋಟೋ ತೆಗೆದ ಆ ವ್ಯಕ್ತಿಯೂ ಅದೇ ಕಾರಿನಲ್ಲಿದ್ದರು.
ಕಾರು ಆಲ್ದೂರಿಗಿಂತ ಸ್ವಲ್ಪ ಹಿಂದೆ ಬರುತ್ತಿರುವಾಗ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು ನೂರು ಅಡಿ ಪ್ರಪಾತಕ್ಕೆ ಐದು ಬಾರಿ ಉರುಳಿ ಬಿತ್ತು.
ಭಕ್ತರು ಮೈ ಮರೆಯಬಹುದು. ಆದರೆ, ನಿಜವಾದ ಗುರು ಕೈ ಬಿಡುವುದುಂಟೆ? ಕಾರಿನಲ್ಲಿದ್ದ ಎಲ್ಲರಿಗೂ ಕೇವಲ ತರಚಿದ ಗಾಯಗಳಾಗಿತ್ತು. ಎಲ್ಲರೂ ಕಾರಿನಿಂದ ನುಸುಳಿ ಹೊರಬಂದು ಪರಿಚಿತ ವ್ಯಕ್ತಿಯೋರ್ವರಿಗೆ ಕರೆ ಮಾಡಿ ಬೇರೆ ವಾಹನದಲ್ಲಿ ಊರು ತಲುಪಿದರು.
ಆ ವಿಷಯ ತಿಳಿದ ಗುರುನಾಥರು ಅಂದು ಫೋಟೋ ತೆಗೆದ ಆ ವ್ಯಕ್ತಿಯನ್ನು ಕರೆದು "ಇಂದಿಗೆ ಜೀವ ಉಳಿಸಿದ್ದೀನಿ. ಮುಂದೆಂದೂ ಅನುಮತಿ ಇರದೇ ಫೋಟೋ ತೆಗೆಯಬೇಡ ತಿಳೀತಾ..... " ಎಂದರು. ಆತ ತಲೆ ಬಾಗಿ ನಮಸ್ಕರಿಸಿದನು.
ಅಂದಿನಿಂದ ಬಾಣಾವರದ ಆ ವ್ಯಕ್ತಿಗೆ ಗುರುವಾಕ್ಯವನ್ನು ಧಿಕ್ಕರಿಸಿದ ಪರಿಣಾಮ ಮೊದಲಿನಂತೆ ಗುರುನಿವಾಸಕ್ಕೆ ಬರಲು ಸಾಧ್ಯವಾಗಲಿಲ್ಲ. "ವಸ್ತು, ವ್ಯಕ್ತಿಗಳ ಬೆಲೆ ಇರುವಾಗ ತಿಳಿಯೋಲ್ಲಪ್ಪ. ಅದು ಇಲ್ಲವಾದಾಗ ಇರುವಿಕೆಯ ಬೆಲೆ ಅರಿವಾಗುವುದು" ಎಂಬ ಹಾಗೂ "ಗುರುವೆಂದು ಕರೆಯಬೇಡ. ಕರೆದ ಮೇಲೆ ಗುರುವಾಕ್ಯ ನಡೆಸಲು ಸಿದ್ಧವಾಗಿರು" ಎಂಬ ಗುರುಗಳ ಮಾತು ಇಂತಹ ಘಟನೆಗಳನ್ನು ನೋಡಿದಾಗ ಸದಾ ನೆನಪಾಗುತ್ತದೆ.
ಗುರು ಹಿರಿಯರ ಸೇವೆ
ಒಮ್ಮೆ ಗುರುನಾಥರಲ್ಲಿ ಓರ್ವ ವೃದ್ಧರು ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ "ನನ್ನ ಮಗ ಅಮೇರಿಕಾದಲ್ಲಿ ನೆಲೆಸಿರುವನು. ವಯಸ್ಸಾದ ನಾವು ಇಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ. ನನ್ನ ಹೆಂಡತಿಗಂತೂ ಕೀಲು ಮತ್ತು ಮೂಳೆ ನೋವಿನಿಂದ ಓಡಾಡಲು ಕಷ್ಟವಾಗಿ ಹಾಸಿಗೆ ಹಿಡಿದಿದ್ದಾಳೆ. ನನ್ನ ಆರೋಗ್ಯ ಅಷ್ಟೊಂದು ಸರಿ ಇಲ್ಲ. ನಮ್ಮನ್ನು ನೋಡಿಕೊಳ್ಳುವವರು ಇಲ್ಲಿ ಇಲ್ಲ. ಹೀಗಾಗಿ ಈಗ ನಮ್ಮ ಮಗ ವಾಪಸ್ಸು ಬೆಂಗಳೂರಿಗೆ ಬಂದು ನಮ್ಮ ಜೊತೆ ಉಳಿದರೆ ವಯಸ್ಸಾದ ನಮಗೆ ಬಹಳ ಉಪಕಾರವಾದಂತೆ ಆಗುತ್ತದೆ. ಅವನು ಬೆಂಗಳೂರಿಗೆ ಬರುವ ಹಾಗೆ ಏನಾದರೂ ತಾವು ಅವನಿಗೆ ಮನಸ್ಸು ಬರುವಂತೆ ಮಾಡಬೇಕು" ಎಂದು ವಿನಂತಿಸಿಕೊಂಡರು.
ಸುಮ್ಮನೆ ಆಲಿಸಿದ ಗುರುನಾಥರು "ಹೌದು. ಇದರಲ್ಲಿ ನಿಮ್ಮ ಮಗನದೇನೂ ತಪ್ಪಿಲ್ಲವಲ್ಲ. ನಿಮ್ಮ ಆಸೆಯಂತೆ ಆತ ಅಲ್ಲಿ ಹೋಗಿ ನೆಲೆಸಿದ್ದಾನೆ. ನಿಮಗೆ ಇರಲು ಮನೆ, ಹಣ ಎಲ್ಲವೂ ಇದೆಯಲ್ಲಾ. ಈಗ ಅವನು ಏಕೆ ಬೇಕು?" ಎಂದರು. ಸ್ವಲ್ಪ ಗಲಿಬಿಲಿಗೊಂಡ ಆ ವೃದ್ಧರು ಅರ್ಧವಾಗದವರಂತೆ ಸುಮ್ಮನೆ ಕಣ್ಣು ಕಣ್ಣು ಬಿಡುತ್ತಾ ನಿಂತರು. "ಅಲ್ಲಪ್ಪಾ, ನೀವು ನಿಮ್ಮ ಮಗನಿಗೆ ನೀನು ಚೆನ್ನಾಗಿ ಓದಬೇಕು. ದೊಡ್ಡ ಕೆಲಸ ಹಿಡಿಯಬೇಕು, ಅಮೆರಿಕಾಕ್ಕೆ ಹೋಗಿ ಲಕ್ಷಾಂತರ ದುಡ್ಡು ಸಂಪಾದನೆ ಮಾಡಬೇಕು ಎಂದೆಲ್ಲ ಹೇಳಿದವರು ನೀವೇ ಅಲ್ಲವೇ?. ಈಗ ಅವನು ನೀವು ಹೇಳಿದಷ್ಟನ್ನು ಚಾಚೂ ತಪ್ಪದೆ ಮಾಡುತ್ತಿದ್ದಾನೆ. ನಿಮ್ಮ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾನೆ. ಅಮೆರಿಕಾದಲ್ಲಿ ನೆಲೆಸಿದ್ದಾನೆ, ಚೆನ್ನಾಗಿ ಓದಿದ್ದಾನೆ, ದೊಡ್ಡ ಕೆಲಸ ಹಿಡಿದಿದ್ದಾನೆ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾನೆ, ತಪ್ಪೇನಿದೆ?".
"ಆತನಿಗೆ, ನೀವು ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು, ಗುರು ಹಿರಿಯರ ಸೇವೆ ಮಾಡಬೇಕು ಎಂದು ಯಾವತ್ತೂ ಹೇಳಿಕೊಡಲಿಲ್ಲ ಅಥವಾ ಅದನ್ನು ನೀವು ಎಂದು ನಿಮ್ಮ ಹಿರಿಯರಿಗೆ ಮಾಡಿ ತೋರಿಸಲಿಲ್ಲ. ವಾಸ್ತವ ಹೀಗಿರಬೇಕಾದರೆ ನಿಮ್ಮ ಮಗ ಕಲಿಯುವುದಾಗಲಿ ಅಥವಾ ಮಾಡುವುದಾಗಲಿ ಹೇಗೆ? ಅಲ್ಲವೇ ಸಾರ್ ? ನೀವು ಏನು ಹೇಳಿ ಕೊಟ್ಟಿದ್ದೀರೋ ಅದನ್ನು ಅವನು ಮಾಡುತ್ತಿದ್ದಾನೆ. ಅವನು ನಿಮ್ಮ ಮಗ ಅಲ್ಲವೇ ಸಾರ್? ಮಾಡಲಿ ಬಿಡಿ, ಈಗ ಯಾವ ಮಂತ್ರ ತಂತ್ರವೂ ಅವನನ್ನು ಬರುವ ಹಾಗೆ ಮನಸ್ಸು ಕೊಡಲು ಸಾಧ್ಯವಾಗುವುದಿಲ್ಲ. ಭಗವಂತನನ್ನು ಬೇಡಿಕೊಳ್ಳಿ. ಭಗವಂತ ಅವನಿಗೆ ಮನಸ್ಸು ಕೊಟ್ಟರೆ ಕೊಡಬಹುದು" ಎಂದು ನಸುನಗುತ್ತಾ ಹೇಳಿ ಅವರನ್ನು ಕಳುಹಿಸಿಕೊಟ್ಟರು.
ಹೌದು. ಇಲ್ಲಿ ನಾವು ಚಿಂತನೆ ಮಾಡಬೇಕಾದುದನ್ನು ಗುರುನಾಥರು ಅವರ ಮೂಲಕ ನಮಗೆಲ್ಲ ಒಂದು ಪಾಠ ಹೇಳಿದ್ದಾರೆ. ನಾವು ನಮ್ಮ ಮಕ್ಕಳಿಗೆ ಯಾವುದನ್ನು ಹೇಳಬೇಕು? ಯಾವುದರ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು ? ಮತ್ತು ಹೇಗೆ ಹಿರಿಯರ ಸೇವೆ ಮಾಡಬೇಕು ಎನ್ನುವುದನ್ನು ನಾವೇ ಮಾಡಿ ತೋರಿಸಬೇಕು. ಎಳೆಯ ವಯಸ್ಸಿನಲ್ಲಿಯೇ ನೋಡಿ ಕಲಿತ ಇಂತಹ ವಿಚಾರಗಳು ಮನಸ್ಸಿನ ಆಳದಲ್ಲಿ ಗಟ್ಟಿಯಾಗಿ ಉಳಿಯುತ್ತವೆ. ಆ ನಂತರ ಹೆಚ್ಚಿನ ಅಂಶ ಮಕ್ಕಳು ಪಾಲನೆ ಮಾಡುತ್ತಾರೆ. ಇಷ್ಟರ ಮೇಲೂ ಮಕ್ಕಳು ಅಪ್ಪ ಅಮ್ಮನ ಮತ್ತು ಗುರು ಹಿರಿಯರ ಸೇವೆಯನ್ನು ವೃದ್ಧಾಪ್ಯದಲ್ಲಿ ನಿರ್ವಹಿಸಲಿಲ್ಲ ಎಂದರೆ ಅದು ಅವರವರ ಪ್ರಾರಬ್ಧ ಕರ್ಮವೆಂದೇ ಹೇಳಬೇಕಾಗುತ್ತದೆ, ಅಲ್ಲವೇ? ....... , , , , , , , ,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment