ಒಟ್ಟು ನೋಟಗಳು

Saturday, October 29, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 25


 

ಚರಣದಾಸನ ತಂಗಿಯ ಮದುವೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇದಕ್ಕೂ ಮುನ್ನ ನಡೆದ ಒಂದು ಘಟನೆ ಹೇಳುತ್ತೇನೆ. ಗುರುಪತ್ನಿಯ ಸಂಬಂಧಿಕರ ಓರ್ವ ಕನ್ಯೆಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಎಲ್ಲೆಡೆ ವರಶೋಧ ನಡೆದಿತ್ತು. ಕೊನೆಗೊಂದು ದಿನ ಗುರು ಬಂಧುಗಳಲ್ಲೇ ಓರ್ವ ವ್ಯಕ್ತಿಯನ್ನು ಕರೆಸಿ ಮಾತನಾಡಿ ಎರಡು ಮೂರು ದಿನಗಳಲ್ಲಿ ಮದುವೆಯೂ ನಡೆದು ಹೋಯ್ತು. 

ಆ ನಂತರ ಬೆಂಗಳೂರಿನಿಂದ ವಾಪಸಾದ ಗುರುನಾಥರು "ಚಿಂತಿಸಬೇಡ ಕಣೋ ನಿನ್ನ ತಂಗಿ ಮದುವೆಯೂ ಇನ್ನು ಆರು ತಿಂಗಳೊಳಗೆ ಹೀಗೆಯೇ ಅದ್ದೂರಿಯಾಗಿ ನಡೆಯುವುದು" ಎಂದು ಅಭಯವಿತ್ತರು. 

ಇದಾಗಿ ಕೆಲವು ತಿಂಗಳ ನಂತರ ಬೆಂಗಳೂರಿನಲ್ಲಿ ವಾಸವಿರುವ ಚರಣದಾಸನಾದ ನನ್ನ ಎರಡನೇ ಅಕ್ಕನ ಮನೆಯ ಪಕ್ಕದಲ್ಲೇ ಇರುವ ಒಬ್ಬರ ಮನೆಯ ವ್ಯಕ್ತಿ ತಮಿಳುನಾಡಿನಲ್ಲಿ ಕೆಲಸಕ್ಕಿದ್ದರು. ಸೋದರಿಯ ಮನೆಗೆ ಬಂದವರು ಅಲ್ಲಿಯೇ ಇದ್ದ ಚರಣದಾಸನಾದ ನನ್ನ ತಂಗಿಯನ್ನು ನೋಡಿ ಬಾಂಧವ್ಯ ಬೆಳೆಸಲು ಅಪೇಕ್ಷಿಸಿದರು. ಗುರುನಾಥರ ಅನುಮತಿ ಪಡೆಯಬೇಕೆಂದು ನನ್ನ ಸಹೋದರಿ ತಿಳಿಸಲು ಅವರು, ಅಕ್ಕ ಮತ್ತು ಅಕ್ಕನ ಮಗನೊಂದಿಗೆ ಸಖರಾಯಪಟ್ಟಣಕ್ಕೆ ಬಂದರು. 

ಅಂದು ಭಾನುವಾರ. ಗುರು ದರ್ಶನಕ್ಕಾಗಿ ನೂರಾರು ಜನ ಸೇರಿದ್ದರು. ಚರಣದಾಸನಾದ ನಾನು ಸ್ನೇಹಿತರೊಂದಿಗೆ ಬಂದವರೆಲ್ಲರಿಗೂ ಊಟ ಬಡಿಸಿ, ಕೈ ತೊಳೆಸಿ, ಎಲೆ ಎತ್ತಿದೆನು. ಹಾಗೆ ಬಂದವರಲ್ಲಿ ಚರಣದಾಸನಾದ ನನ್ನ ಭಾವನಾಗುವವರೂ ಇದ್ದರಂತೆ. ನಂತರ ಅವರೆಲ್ಲರೂ ಗುರುದರ್ಶನಕ್ಕೆ ಒಳ ಹೋಗುವ ಸಮಯ. ಚರಣದಾಸನಾದ ನಾನು ಗುರುಗಳ ಮನೆಯ ಅಡಿಕೆಯನ್ನು ಹಾಕಿಕೊಂಡು ಶಿವಮೊಗ್ಗಕ್ಕೆ ಹೊರಟೆನು. 

ಭದ್ರಾವತಿ ಸಮೀಪ ಹೋಗುತ್ತಿರುವಾಗ ಕರೆಮಾಡಿದ ಗುರುನಾಥರು "ಅಯ್ಯಾ, ನಿನ್ನ ತಂಗಿಯೊಂದಿಗೆ ಬಾಂಧವ್ಯ ಬೆಳೆಸಲು ಇಚ್ಛಿಸಿದವರು ಇಲ್ಲಿಗೆ ಬಂದಿರುವರು. ನನಗೆ, ಅಮ್ಮ (ಗುರುಪತ್ನಿ) ಹಾಗೂ ನಿನ್ನ ಅತ್ತೆ (ಗುರುಗಳ ಸೋದರಿಯರು) ಎಲ್ಲರಿಗೂ ತುಂಬಾ ಒಪ್ಪಿಗೆಯಾಗಿದೆ. ನೀ ಏನ್ ಹೇಳ್ತೀಯಾ?" ಎಂದರು. ಅದಕ್ಕೆ ನಾನು "ಗುರುಗಳ ಇಚ್ಚೆನೇ ನಂದೂ ಕೂಡ" ಎಂದೆ. 

ಅಂದು ರಾತ್ರಿ ಅವರೆಲ್ಲರನ್ನೂ ಸಕಲ ಪೂಜಾ ಸಾಮಗ್ರಿಗಳನ್ನು ನೀಡಿ ತರೀಕೆರೆಯಲ್ಲಿ ಉಳಿದು ಬೆಳಿಗ್ಗೆ ಶಿವಮೊಗ್ಗ ಸಮೀಪದಲ್ಲಿರುವ ಅದ್ವೈತ ಪೀಠಕ್ಕೆ ಹೋಗಿ ಬನ್ನಿರೆಂದು ಗುರುನಾಥರು ಕಳಿಸಿಕೊಟ್ಟರು. ಮಂಡಿಗೆ ಅಡಿಕೆ ಹಾಕಿ ಚರಣದಾಸನಾದ ನಾನು ಸಖರಾಯಪಟ್ಟಣಕ್ಕೆ ಬಂದೆ. 

ಮರುದಿನ ಬೆಳಿಗ್ಗೆ ಎಂದಿನಂತೆ ಗುರುನಾಥರು ಪಾದುಕೆಗಳಿಗೆ ಆರತಿ ಮಾಡಿ ಗಂಟೆ ಬಾರಿಸಿದರು. ಆನಂತರ ಅತ್ತೆಯಂದಿರಿಗೆ (ಗುರುನಾಥರ ಸೋದರಿ) ಕರೆ ಮಾಡಿಸಿ ಅವರ ಆಶೀರ್ವಾದ ಕೇಳಿಸಿದರು. 

ನಂತರ ಆಯಾಸವಾಗಿದೆ ಎಂದು ಮಲಗಿದ್ದು ಸುಮಾರು ಮಧ್ಯಾನ್ಹ ಹನ್ನೆರಡು ಗಂಟೆಗೆ ಎದ್ದು ಸೀದಾ ದೇವ ಮಂದಿರಕ್ಕೆ ಹೋಗಿ ಗಂಟೆ ಬಾರಿಸಿದರು. ಸಾಮಾನ್ಯವಾಗಿ ಈ ರೀತಿ ಎರಡು ಬಾರಿ ಗಂಟೆ ಬಾರಿಸಿದರೆಂದರೆ ಯಾವುದೋ ಮಹತ್ವದ ಘಟನೆ ನಡೆವುದೆಂಬುದು ಅಲ್ಲಿದ್ದ ನನಗೆ ಆದ ಅನುಭವ. 

ನಂತರ ಹೊರಬಂದು ಚರಣದಾಸನಾದ ನನ್ನ ಮೇಲೆ ವಿನಾ ಕಾರಣ ರೇಗಾಡತೊಡಗಿದರು. "ನಿನ್ನ ತಂಗಿ ಮದುವೆಗೂ ನನಗೂ ಏನು ಸಂಬಂಧನೋ? ನಿಂಗೆ ಬೇಕಾದರೆ ಹೋರಾಡಲು ಸಿದ್ಧನಾಗು" ಎಂದು ಮುಂತಾಗಿ  ಕೂಗಾಡಿದರು. ಈ ಬೈಗುಳದ ಒಳಮರ್ಮ ಅರಿತಿದ್ದ ಚರಣದಾಸನಾದ ನಾನು ಮೌನವಾಗಿ ಹೊರತು ನಿಂತೆ. ಸುಮಾರು 3-30 ಕ್ಕೆ ಶಿವಮೊಗ್ಗ ತಲುಪಿದೆ. 

ಆಗ ಕರೆ ಮಾಡಿಸಿದ ಗುರುನಾಥರು ಅಲ್ಲಿನ ಗುರು ಬಂಧು ಓರ್ವರ ಮನೆಗೆ ಹೋಗಲು ಹೇಳಿದರು. ಅಲ್ಲಿಯೇ ಧಾರೆ ಸೀರೆ, ಪಂಚೆ, ಒಂದಷ್ಟು ಸೀರೆ, ಶಲ್ಯ, ಭಿಕ್ಷಾ ಸಾಮಾನು, ತಾಳಿ ಸರ, ಉಂಗುರ ಕೊಳ್ಳಲು ಹೇಳಿದರು. ಚರಣದಾಸನಾದ ನನ್ನ ಸಂಗಡ ಅವರೇ ನೀಡಿದ ಐನೂರು ರೂಪಾಯಿ ಬಿಟ್ಟು ಬೇರಾವ ಹಣವೂ ಇರಲಿಲ್ಲ. ಆದ್ದರಿಂದ ಆ ಗುರು ಬಂಧುವಿಗೆ ವ್ಯವಸ್ಥೆ ಮಾಡಲು ತಿಳಿಸಿದರು. 

ಚರಣದಾಸನಾದ ನಾನು ಸಕಲ ಸಾಮಗ್ರಿಗಳೊಂದಿಗೆ ಸಂಜೆ ಆರರ ಸುಮಾರಿಗೆ ನಾವು ಅದ್ವೈತ ಪೀಠ ತಲುಪಿ ಭಾವನಾಗುವವರನ್ನು ಪರಿಚಯ ಮಾಡಿಕೊಂಡೆ. 

ಅದಾಗಿ ಕೆಲ ಹೊತ್ತಿಗೆ ಅಕ್ಕ, ಭಾವ, ತಮ್ಮ ಹಾಗೂ ತಂಗಿ ಬೆಂಗಳೂರಿನಿಂದ ಬಂದರು. 

ಚರಣದಾಸನಾದ ನಾನು ಗುರು ನಿವಾಸದಿಂದ ಹೊರಡುವಾಗ ಗುರುನಾಥರು "ಅದ್ವೈತ ಪೀಠದ ಗುರುಗಳ ಸಮ್ಮುಖದಲ್ಲಿ ತಾಂಬೂಲ ವಿನಿಮಯ ಮಾಡಿಕೊಳ್ಳಿ. ಆ ನಂತರ ಕುಳಿತು ದಿನಾಂಕ ನಿಶ್ಚಯ ಮಾಡುವ" ಎಂದಿದ್ದರು. 

ಕೆಲ ಹೊತ್ತಿಗೆ ಸಿಂಹಾಸನಾಸೀನರಾದ ಶ್ರೀ ಶ್ರೀ ಗಳು ಮಧು ಮಕ್ಕಳನ್ನು ಹಸೆಮಣೆಯಲ್ಲಿ ಕೂರಿಸಿ ಮಧುಮಗಳಿಗೆ ಅರಿಶಿನ, ಕುಂಕುಮ, ಬಳೆ ತೊಡಿಸಲು ಹೇಳಿದರು. ಸೋದರಿಯರು ಆ ಕೆಲಸ ಮಾಡಿದರು. 

ನಂತರ ಬಳೆ, ಧಾರೆಸೀರೆ, ಉಂಗುರ ಪ್ರತಿಯೊಂದನ್ನು ಕೇಳಿ ಪಡೆದು ತಾನೇ ಅರಿಶಿನ ಕುಂಕುಮ ಹಚ್ಚಿ ನಂತರ ವಧುವರರಿಗೆ ನೀಡಿದರು. 

ಕೊನೆಯದಾಗಿ "ತಾಳಿ ಇದೆಯೋ?" ಎಂದರು. ತೆಗೆದುಕೊಟ್ಟೆ. ತಕ್ಷಣವೇ ಎದ್ದು ನಿಂತ ಶ್ರೀ ಶ್ರೀಗಳು "ಇನ್ನೇಕೆ ತಡ" ಎಂದವರೇ "ಮಾಂಗಲ್ಯಮ್ ತಂತು ನಾನೇನ.. ..... ... ಮಂತ್ರ ಹೇಳಿದರು. ವಾರ ವಧುವಿಗೆ ತಾಳಿ ಕಟ್ಟಿಯೂ ಆಯ್ತು. ಈ ಎಲ್ಲಾ ಪ್ರಕ್ರಿಯೆ ಬಹುಶಃ ಹತ್ತು ಹದಿನೈದು ನಿಮಿಷದಲ್ಲಿ ಮುಗಿದಿತ್ತು. 

ಅದು ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಬರುವ ಶ್ರೇಷ್ಠ ಘಳಿಗೆ, ಮುಹೂರ್ತವೆಂದು ಆ ನಂತರ ತಿಳಿದು ಬಂತು. 

ಮದುವೆಯಾದ ಮರುದಿನ ನಾವು ವರನ ಮನೆ ನೋಡಿದ್ದು, ಹಾಗೂ ಅವರೆಲ್ಲರೂ ವಧುವಿನ ಮನೆ ನೋಡಿದ್ದು ಮದುವೆಯಾದ ಮೂರು ತಿಂಗಳ ನಂತರವಷ್ಟೇ .... !!!!

ಇಲ್ಲಿ ಸಾಮಾನ್ಯ ಸಂಪ್ರದಾಯದ ಯಾವ ಪ್ರಕ್ರಿಯೆಗಳೂ ಪಾಲನೆಯಾಗಿರಲಿಲ್ಲ. "ಅವಧೂತರಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಇಡೀ ಪ್ರಕೃತಿ ಅವರ ವಶದಲ್ಲಿರುತ್ತದೆ. ಆನೆ ನಡೆದದ್ದೇ ದಾರಿ ಎಂಬಂತೆ ಅವರ ಜೀವನ" ಎಂಬ ಮಹಾತ್ಮರೊಬ್ಬರ ಮಾತು ಇಂತಹ ಘಟನೆಗಳನ್ನು ನೋಡಿದಾಗ ನಿಜವೆನಿಸುತ್ತದೆ. 

ಗುರು ಕೃಪಾಶೀರ್ವಾದದಿಂದ ಇಂದು ಅವರಿಬ್ಬರೂ ಸುಖವಾಗಿರುವರು. ಇಂತಹ ಕರುಣಾಸಾಗರ ಗುರುಮೂರ್ತಿಗೆ ಹೋಲಿಕೆ ಉಂಟೆ ? ...... ,,,,,,,,,,,,,,,,



ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

For more info visit :  http://srivenkatachalaavadhoota.blogspot.in/

No comments:

Post a Comment