ಒಟ್ಟು ನೋಟಗಳು

Thursday, October 6, 2016

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಶ್ರೀ ಸದ್ಗುರು ಮಹಿಮೆ  

ಗ್ರಂಥ ರಚನೆ - ಚರಣದಾಸ

ಅಧ್ಯಾಯ  - 2

ಚೀಲಕ್ಕೊಂದು ಹೆಸರು 



ಅದು ಬಹುಶಃ 2002 ರ ಅಕ್ಟೊಬರ್ ಎನಿಸುತ್ತದೆ. ಅಲ್ಲಿಯವರೆಗೆ ಚರಣದಾಸನಾದ ನನಗೆ ಗುರುನಾಥರ ಮನೆಯಲ್ಲಿ ಇರಲು ಅಷ್ಟಾಗಿ ಅವಕಾಶವಿರಲಿಲ್ಲ. ಕಾರಣ ಗುರುನಾಥರಾಗಲೀ, ಅಮ್ಮನಾಗಲೀ ಅಷ್ಟು ಸುಲಭವಾಗಿ, ಪರೀಕ್ಷಿಸದೆ ಯಾರನ್ನೂ ಒಪ್ಪುತ್ತಿರಲಿಲ್ಲ. ಆದರೆ, ಅಕ್ಟೋಬರ್ ನಂತರ ನಿಧಾನವಾಗಿ ಮನೆಯ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸತೊಡಗಿದರು. 

ಚರಣದಾಸನಾದ ನಾನು ಗುರುನಾಥರ ಮನೆಯಲ್ಲಿ ಆಶ್ರಯ ಪಡೆದು ಕೆಲಕಾಲವಾಗಿತ್ತು. "ಅವನು ಮನೆಯಲ್ಲಿದ್ರೆ ನಾನು ಧೈರ್ಯವಾಗಿ ಎಲ್ಲಿಗೆ ಬೇಕಾದ್ರೂ ಹೋಗಿ ಬರಬಹುದಯ್ಯ" ಅಂತ ಆಗಾಗ್ಗೆ ಚರಣದಾಸನ ಕುರಿತು ಹೇಳುತ್ತಿದ್ದರಂತೆ. 

ಅದೊಂದು ದಿನ ನಾನು ಎಂದಿನಂತೆ ನನ್ನ ಕೆಲಸಗಳಲ್ಲಿ ಮಗ್ನನಾಗಿದ್ದೆ. ಗುರುನಾಥರು ಭಕ್ತರೋರ್ವರ ಕಾರಿನಲ್ಲಿ ಚಿಕ್ಕಮಗಳೂರು ತಲುಪಿ ಓರ್ವ ಭಕ್ತರ ಮನೆಗೆ ತೆರಳಿದ್ದರು. ಅವರೊಂದಿಗೆ ಸದಾಕಾಲ ಬಗಲಿಗೆ ಹಾಕುವ ಬಟ್ಟೆಯ ಚೀಲವಿರುತ್ತಿತ್ತು. ನಾನು ಅಲ್ಲಿಗೆ ಬಂದ ನಂತರ ಮಠ ಮಾನ್ಯಗಳಿಗೆ ತೆರಳುವಾಗ ಭಿಕ್ಷೆಯನ್ನು ಅದೇ ಚೀಲದಲ್ಲಿ ಹಾಕಿಕೊಡುತ್ತಿದ್ದರು. ನಾನು ಅದನ್ನು ಒಯ್ಯುತ್ತಿದ್ದೆ. ಚಿಕ್ಕಮಗಳೂರಿನಲ್ಲಿ ಕಾರಿನಿಂದ ಇಳಿದ ಗುರುನಾಥರು ಚೀಲವನ್ನು ಮರೆತು ಕಾರಿನಲ್ಲೇ ಬಿಟ್ಟಿಳಿದಿದ್ದರು. ಇದನ್ನು ಗಮನಿಸಿದ ಕಾರಿನ ಮಾಲೀಕ ತಿರುಗಿ ಬಂದು ಗುರುನಾಥರಿಗೆ ಚೀಲ ಹಿಂತಿರುಗಿಸಿದರಂತೆ. 

ಆಗ ಗುರುನಾಥರು ಅಲ್ಲಿದ್ದ ಭಕ್ತರನ್ನು ಕರೆದು "ಈ ಚೀಲಕ್ಕೊಂದು ಹೆಸರಿಡಬೇಕು. ಅದು ಸದಾಕಾಲ ನನ್ನೊಂದಿಗೇ ಇರುವುದು. ಏನೆಂದು ಕರೆಯಲಿ" ಎಂದು ಪ್ರಶ್ನಿಸಲು ನಿರುತ್ತರರಾದ ಆ ಭಕ್ತರು ನಕ್ಕರಂತೆ. ಆಗ ಗುರುನಾಥರು ಈ ಚೀಲಕ್ಕೆ "ಅವನ" ಹೆಸರಿಡುವ ಆಯ್ತಾ ? ಏಕೆಂದ್ರೆ ಅವನೂ ಕೂಡ ಈ ಚೀಲದಂತೆಯೇ ಸದಾ ನನ್ನೊಂದಿಗೆ ಇರುವನು. ಆದ್ದರಿಂದ ಆಯ್ತಾ? ಎಂದರಂತೆ. 

ಅಂದಿನಿಂದ ಚರಣದಾಸನ ಒರಟುತನ ಅಹಂಕಾರವನ್ನೆಲ್ಲ ಹಂತಹಂತವಾಗಿ ತಿದ್ದುತ್ತಾ ತನ್ನ ದೇಹಾನಂತರವೂ ರಕ್ಷಿಸುತ್ತಾ ಬರುತ್ತಿರುವ ಗುರು ಕಾರುಣ್ಯಕ್ಕೆ ಸರಿಸಾಟಿ ಕೇವಲ ಗುರು ಮಾತ್ರವಲ್ಲವೇ?. ತಾನು ದೇಹ ಬಿಡುವ ಕೆಲ ತಿಂಗಳ ಮುಂಚಿನಿಂದ ದೇಹಾಂತ್ಯ ಸಮೀಪ್ಯದವರೆಗೂ ಅವರು ಹೇಳುತ್ತಿದ್ದ ಮಾತು ಹೀಗಿತ್ತು: 

"ಅಯ್ಯಾ, ನೀ ಎಲ್ಲೇ ಹೋಗು ಬೆನ್ನತ್ತಿದ ಬೇತಾಳ, ಪಿಶಾಚಿಯಂತೆ ಸದಾ ನಿನ್ನೊಂದಿಗೆ ಇರುವೆ. ನೀ ಎಲ್ಲೇ ಹೋದ್ರೂ ಬಿಡೋದಿಲ್ಲ" ಎಂಬ ಅವರ ಮಾತುಗಳನ್ನು ಈಗೀಗ ಅಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಪ್ರತೀ ಆಪತ್ಕಾಲಗಳನ್ನು ದಾಟಿದಾಗಲೂ ಗುರು ಕಾರುಣ್ಯದ ನೆನಪಾಗಿ ನನಗೆ ಕಣ್ತುಂಬಿ ಬರುತ್ತದೆ. ಆದರೂ ಶಿಷ್ಯರೋದ್ಧಾರಕ್ಕಾಗಿ ತನ್ನ ಜೀವಿತವನ್ನೇ ಧಾರೆ ಎರೆದ ಗುರುನಾಥರಿಗೆ ನಾ ಏನ ನೀಡಿದೆ? ಎಂದು ಆಲೋಚಿಸಿದಾಗ ಭಯವಾಗುತ್ತದೆ. 

ಹಾಗೆಯೇ ಮತ್ತೊಮ್ಮೆ ಬಹುಶಃ 2009  ರಲ್ಲಿ ಎನಿಸುತ್ತದೆ. ಅಂದಿನ ಸರ್ಕಾರದಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿದ್ದ ಓರ್ವರ ಒತ್ತಾಯದ ಮೇರೆಗೆ ಚರಣದಾಸನಾದ ನಾನು ನನ್ನ ಕೆಲಸದ ವಿವರ ಅವರಿಗೆ ನೀಡಿದ್ದೆ. ಆದರೂ ಮನಸ್ಸು ಬೇಡವೆನ್ನುತ್ತಿತ್ತು. ಒಂದು ವಾರದ ನಂತರ ಅವರಿಗೆ ಕರೆ ಮಾಡಿದ ನಾನು, ನೀವು ನನ್ನ ಮೇಲೆ ತೋರಿದ ಕಾಳಜಿಗೆ ಅಭಾರಿ. ದಯಮಾಡಿ ಇನ್ನು ಮುಂದೆ ನನ್ನ ಕೆಲಸದ ವಿಚಾರಕ್ಕೆ ಬರಬೇಡಿ. ಅಗತ್ಯವಿದ್ದಲ್ಲಿ ನಾನೇ ತಿಳಿಸುತ್ತೇನೆ ಎಂದೆ. ನಂತರ ಈ ವಿಚಾರವನ್ನು ಗುರುನಾಥರಿಗೆ ತಿಳಿಸಿದೆ. ಅದಕ್ಕೆ ಅವರು "ಯಾಕಯ್ಯಾ ಹೀಗೆ ಹೇಳಿದೆ " ಎಂದರು. ನಾನು, "ಸಾರ್, ಅವರು ಸರ್ಕಾರದ ಉನ್ನತ ಅಧಿಕಾರದಲ್ಲಿದ್ದರೂ ಸಮಸ್ಯೆ ಪರಿಹಾರಕ್ಕಾಗಿ ನಿಮ್ಮಲ್ಲಿಗೆ ಬಂದಿದ್ದಾರೆ. ನಾನು ಹೊಳೆವ ದೀಪಕ್ಕೆ ಬಲಿಯಾಗಿ ನಿಜವಾದ ಸೂರ್ಯನನ್ನು ಕಳೆದುಕೊಳ್ಳಲು ಸಿದ್ಧನಿಲ್ಲ" ಎಂದು ನುಡಿದೆ. 

"ಗುರುಗಳೇ ನಿಮ್ಮಲ್ಲಿ ನನ್ನದೊಂದು ವಿನಂತಿ. ನೀವು ಕೂಡಾ ನನಗಾಗಿ ಯಾರಿಗೂ ಕೈಮುಗಿಯಬೇಡಿ. ಆಗೋದಾದ್ರೆ ನೀವೇ ನನ್ನ ಕೆಲಸ ಮಾಡಿಕೊಡಿ. ಎಂತಹ ಪರಿಸ್ಥಿತಿ ಬಂದ್ರೂ, ಈ ಚರಣದಾಸನನ್ನು ನಿಮ್ಮ ದಾರಿಯಿಂದ ಬೇರ್ಪಡಿಸಬೇಡಿ" ಅಂದೆ. ಕ್ಷಣದಲ್ಲಿ ತಟ್ಟನೆ ನನ್ನ ಕೈ ಹಿಡಿದು ಅವರು ಅಂದು ವ್ಯಕ್ತಪಡಿಸಿದ ಪ್ರೀತಿ ಇಂದಿಗೂ ನನ್ನ ಕಣ್ಣಿನಲ್ಲಿ ನೀರು ತುಂಬುವಂತೆ ಮಾಡುತ್ತದೆ. 

ನನ್ನ ಕೈ ಹಿಡಿದ ಗುರುನಾಥರು ಮಹದಾನಂದದಿಂದ ನಗುತ್ತಾ "ಆಯ್ತು ಕಣಯ್ಯಾ. ನೀನೂ ಕೂಡ ಈ ವಿಚಾರದಲ್ಲಿ ಇನ್ನು ಮುಂದೆ ಯಾರನ್ನೂ ಕೇಳಬೇಕಿಲ್ಲ. ನೀನು ಗೆದ್ದೇ ಗೆಲ್ತೀಯ ಕಣಯ್ಯಾ. ಹೆದರಿಕೆ ಬೇಡ" ಅಂದ್ರು. ನಾಗರೀಕ ಸೇವೆಗೆ ಸೇರಲೇಬೇಕೆಂಬ ಅದಮ್ಯ ಹಂಬಲವಿದ್ದ ನನಗೆ ನಾನು ಬರೆದ ಪರೀಕ್ಷೆಗಳೆಲ್ಲವೂ ಭ್ರಷ್ಟ  ವ್ಯವಸ್ಥೆಯಿಂದಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. 

ಇದರಿಂದ ದಿಕ್ಕೆಟ್ಟು ಕುಳಿತಿದ್ದ ನನ್ನನ್ನು ಅನುಗಾಲವೂ ಆತ್ಮಸ್ಥೈರ್ಯ ನೀಡುತ್ತಾ ಗೆಲುವಿನ ಹಾದಿಯಲ್ಲಿ ಭರವಸೆಯ ಹೆಜ್ಜೆಯನ್ನಿಡಿಸುತ್ತಿರುವ ಗುರು ಕಾರುಣ್ಯಕ್ಕೆ ಸರಿಸಾಟಿ ಬೇರೇನೂ ಇಲ್ಲ. 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


For more info visit :  http://srivenkatachalaavadhoota.blogspot.in/

No comments:

Post a Comment