ಒಟ್ಟು ನೋಟಗಳು

Friday, October 14, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 9

 

ಪೋಲಿಯೋ ಪೀಡಿತನಿಗೆ ಆಶೀರ್ವಾದ 

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಬಯಲು ಸೀಮೆಯವರಾದ ಆ  ಕುಟುಂಬದವರು ಸಾಕಷ್ಟು ಸಿರಿವಂತರು. ಹಾಗೂ ಕುಟುಂಬದ ಹೆಚ್ಚಿನ ಮಂದಿ ವೈದ್ಯರಾಗಿದ್ದರು. ವೈದ್ಯ ದಂಪತಿಗಳಿಗೆ ಒಬ್ಬ ಮಗಳು ಹಾಗೂ ಎರಡನೆಯದು ಗಂಡು ಮಗು. ಗಂಡು ಮಗು ಜನಿಸಿ ಮೂರು ತಿಂಗಳಾದರೂ ಮಗು ಚಲಿಸುತ್ತಿರಲಿಲ್ಲ. ದಂಪತಿಗಳು ಸಾಕಷ್ಟು ವೈದ್ಯರನ್ನು ನೋಡಿದ್ದು ಆಯಿತು. ಆದ್ರೆ ಪರಿಣಾಮ ಮಾತ್ರ ಶೂನ್ಯ. ಆ ಮಗುವಿನ ತಾಯಿಗೆ ನಮ್ಮ ಕುಟುಂಬದಲ್ಲಿ ಇಂತಹ ಮಗು ಹುಟ್ಟಿತಲ್ಲ ಎಂಬ ಚಿಂತೆ ಇತ್ತು. ಹೀಗಿರಲು ಒಮ್ಮೆ ಗುರುನಾಥರ ಬಗ್ಗೆ ಕೇಳಿದ ದಂಪತಿಗಳು ಬಂದು ತಮ್ಮ ಕಷ್ಟ ನಿವೇದಿಸಿಕೊಂಡರು. 

ಆಗ ಅವರನ್ನು ಸಂತೈಸಿದ ಗುರುನಾಥರು "ಆ ಮಗುವಿನಿಂದಾಗಿ ನಿಮ್ಮ ಬಾಳು ಬೆಳಗುವುದು. ಅವನಿಗೆ ಹದಿನಾರು ವರ್ಷ ಏಳು ತಿಂಗಳು ಹದಿಮೂರು ದಿನವಾಗುವವರೆಗೆ ಸುಮ್ಮನಿರಿ. ಅವನಿಗೆ ಅವಲೋಕನ ಪ್ರಾಪ್ತಿಯಾಗುವುದು" ಎಂದರು. ಆ ನಂತರ ಒಂದು ದಿನ ಅವರ ಮನೆಗೆ ಹೋಗಿ ನೋಡಲು ಆ ಮಗು ಬರೀ ಹಾಸಿಗೆ ಮೇಲೆ ಮಲಗಿಸಿದ್ದನ್ನು ಕಂಡ ಗುರುನಾಥರು, "ನಿಮ್ಮ ಮನೆ ಅಟ್ಟದಲ್ಲಿ ಒಂದು ಕೆಂಪು ಬಣ್ಣದ ಕಾಟನ್ ಸೀರೆ ಇದೆ. ಅದನ್ನು ತಂದು ಕೊಡು" ಎನ್ನಲು ಆ ಮಗುವಿನ ತಾಯಿ: "ನಾವುಗಳಾರೂ ಕಾಟನ್ ಬಟ್ಟೆ ಬಳಸುವುದಿಲ್ಲ" ಎಂದರು. ಆಗ ಗುರುನಾಥರು: "ಹೋಗಿ ನೋಡಮ್ಮ. ಅಲ್ಲೇ ಇದೆ. ಕೆಂಪು ಕಾಟನ್ ಸೀರೆ. ಆ ಮಗುವನ್ನು ಅದರ ಮೇಲೆ ಮಲಗಿಸು" ಎಂದರು. 

ಆ ತಾಯಿ ಮೇಲೆ ಹೋಗಿ ಹುಡುಕಲು ಅವರೆಂದಂತೆಯೇ ಕೆಂಪು ಕಾಟನ್ ಸೀರೆ ಇತ್ತು. ನಂತರ ಆ ಮಗುವನ್ನು ಅದರ ಮೇಲೆ ಮಲಗಿಸಿದರು. ಇಂದು ಆ ಬಾಲಕ ಬಹುಶಃ 24-25 ವರ್ಷದವನಾಗಿದ್ದು ಗುರುನಾಥರು ಹೇಳಿದಂತೆಯೇ ಸನ್ಯಾಸಿಯಾಗಿ ಲೋಕ ಕಲ್ಯಾಣದಲ್ಲಿ ತೊಡಗಿಸಿಕೊಂಡು ಲೋಕ ಪ್ರಸಿದ್ಧಿ ಆಗಿರುವರು.

ಸತ್ತ ಮಗುವಿಗೆ ಜೀವ ನೀಡಿದ್ದು: 
ಒಮ್ಮೆ ಗುರುನಾಥರು ಬೆಂಗಳೂರಿನಲ್ಲಿ ಇದ್ದ ಸಂದರ್ಭ. ಮೂಲತಃ ಹಿರೇ ಮಗಳೂರು ಸಮೀಪದವರಾದ ದಂಪತಿಗಳು ಗುರುನಾಥರ ದರ್ಶನಕ್ಕಾಗಿ ಬಂದರು. ತುಂಬಾ ಅನುಕೂಲಸ್ತರಾದ ಆ ದಂಪತಿಗಳು ಅಂದು ತುಂಬಾ ಗಾಬರಿಗೊಂಡಿದ್ದರು. ಅವರಿಗೆ ಒಂದು ಗಂಡು ಮಗುವಿತ್ತು. ಉತ್ತರ ಕರ್ನಾಟಕ ಪ್ರದೇಶದವರಾದ ಅವರು ಮಲೆನಾಡಿನಲ್ಲಿ ನೆಲೆಸಿದ್ದು ವ್ಯಾಪಾರ ವ್ಯವಹಾರಗಳಿಂದಾಗಿ ಬಹಳ ಸಿರಿವಂತರೂ ಆಗಿದ್ದರು. ಬೆಂಗಳೂರಿನಲ್ಲಿಯೂ ವ್ಯಾಪಾರ, ಮುದ್ರಣ ಕೇಂದ್ರ ಸ್ಥಾಪಿಸಿದ್ದ ಅವರು ಅಲ್ಲಿಯೂ ನೆಲೆ ಕಂಡುಕೊಂಡಿದ್ದರು. ದರ್ಶನಕ್ಕೆ ಬಂದ ದಂಪತಿಗಳನ್ನು ಸಂತೈಸಿದ ಗುರುನಾಥರು ಬಂದ ಕಾರಣವನ್ನು ಕೇಳಿದರು.

ಆಗ ಅವರು ಹೀಗೆ ಹೇಳತೊಡಗಿದರು: "ಸ್ವಾಮಿ ನನ್ನ ಪತ್ನಿ ಗರ್ಭಿಣಿಯಾಗಿದ್ದು ಇತ್ತೀಚೆಗೆ ನಾವು ಹಾವೇರಿ ಸಮೀಪದ ಅಗಡಿ ಆನಂದ ವನದ ಭಗವಾನರ ಸಮಾಧಿ ದರ್ಶನ ಮಾಡಿ ಕಾರಿನಲ್ಲಿ ವಾಪಸ್ಸಾಗುತ್ತಿರುವಾಗ ಕಾರು ಅಪಘಾತವಾಗಿ ಹೊಟ್ಟೆಗೆ ಏಟು ಬಿತ್ತು . ನಂತರ ವೈದ್ಯರಲ್ಲಿ ಪರೀಕ್ಷಿಸಿದಾಗ ಮಗು ಹೊಟ್ಟೆಯಲ್ಲಿಯೇ ಸತ್ತಿದೆ ಎಂದು ತಿಳಿಸಿದ ವೈದ್ಯರು ಆಪರೇಷನ್ ಮಾಡಿ ಮಗುವನ್ನು ಹೊರತೆಗೆಯಲು ತಿಳಿಸಿದರು. ಈಗ ನಮಗೇನು ಮಾಡಬೇಕೆಂದು ತಿಳಿಯುತ್ತಿಲ್ಲ. ನಮಗೆ ನೀವೇ ಗತಿ" ಎಂದು ದುಃಖದಿಂದ ನುಡಿದರು.

ಆಗ ಗುರುನಾಥರು ಆ ದಂಪತಿಗಳ ಮನೆಗೆ ಹೋಗಿ ತನ್ನ ಶಿಷ್ಯರಲ್ಲಿ ವೇದ ಮಂತ್ರ ತಿಳಿದಿದ್ದ ಕೆಲವರನ್ನು ಕರೆಸಿ ಅರುಣ ಪ್ರಶ್ನೆಯ ಕೆಲ ಶ್ಲೋಕ ಪಠಿಸಲು ತಿಳಿಸಿದರು. ಹೀಗೆ ಹಲವು ಬಾರಿ ಪಠಿಸಿದ ನಂತರ ಆ ಮಹಿಳೆಗೆ ಹೊಟ್ಟೆಯಲ್ಲಿದ್ದ ಶಿಶು ಅಲುಗಾಡಿದ ಅನುಭವ ಆಯ್ತು. ಆಕೆ ಈ ವಿಚಾರವನ್ನು ತಕ್ಷಣವೇ ಅಲ್ಲೇ ಇದ್ದ ಗುರುನಾಥರಿಗೆ ತಿಳಿಸಿದರು. ಆಗ ಗುರುನಾಥರು "ಇನ್ನು ಚಿಂತೆ ಬಿಡು. ಆ ಮಗುವಿಗೆ ಭಗವಾನರ ಹೆಸರಿಡು" ಎಂದು ಹೇಳಿ ಅಲ್ಲಿಂದ ಹೊರಟರು.

ಇಂದು ಆ ಮಗು ಬಹುಶಃ ಪಿಯುಸಿ ಓದುತ್ತಿದ್ದು ಗುರು ಕಾರುಣ್ಯದಿಂದ ಆರೋಗ್ಯವಾಗಿರುವರು. ಇಂತಹ ಹಲವು ಪವಾಡ ತೋರಿಸಿದ್ದ ಗುರುನಾಥರು ಎಂದೂ ತಾನೇನೂ ಅಲ್ಲವೆಂದೂ ಎಲ್ಲವೂ ಈಶ್ವರ ಕೃಪೆ ಎಂದು ಹೇಳುತ್ತಿದ್ದರು. ಇಂತಹ ಔದಾರ್ಯ ತುಂಬು ನಡವಳಿಕೆ ನಿಜವಾದ ಗುರುವಿಗೆ ಮಾತ್ರವೇ ಸಾಧ್ಯವೆನಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment