ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 3
ಸುಮಂಗಲಿ ಪೂಜೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಮೂಲತಃ ತಮಿಳುನಾಡಿನವರಾದ ಆ ದಂಪತಿಗಳನ್ನು ಅಪರೂಪಕ್ಕೊಮ್ಮೆ ಗುರುನಿವಾಸದಲ್ಲಿ ನೋಡಿದ ನೆನಪು.
ತಮಿಳುನಾಡಿನ ಅದ್ವೈತ ಪೀಠದ ಯತಿಗಳಿಂದ ಮೊದಲ್ಗೊಂಡು ಹಲವಾರು ಯತಿಗಳ ಕೃಪಾಶೀರ್ವಾದ ಗಳಿಸಿದ್ದ ಆ ದಂಪತಿಗಳು ಗುರುನಾಥರ ಪರಮ ಭಕ್ತರಾಗಿದ್ದರು. ಒಮ್ಮೆ ತಮಿಳುನಾಡಿನ ಅವರ ನಿವಾಸದಲ್ಲಿ ಆ ದಂಪತಿಗಳಿಗೆ 60ನೇ ವರ್ಷದ ಶಾಂತಿ ಸಮಾರಂಭ ನಡೆದಿತ್ತು. ಸುಮಂಗಲಿ ಪೂಜೆಗೆ ಎಲ್ಲವೂ ಸಿದ್ಧವಾಗಿದ್ದು ಸುಮಂಗಲಿಯರನ್ನು ಆರತಿ ಮಾಡಿ ಒಳಗೆ ಕರೆದುಕೊಳ್ಳುವ ಸಮಯಕ್ಕೆ ಸರಿಯಾಗಿ ಸುಲಕ್ಷಣವಾದ, ಹರಕು ಸೀರೆಯುಟ್ಟ ಭಿಕ್ಷುಕಿಯೊಬ್ಬಳು ದಿಢೀರನೆ ಮನೆ ಮುಂದೆ ಬಂದು "ಅಮ್ಮಾ ನನಗೊಂದು ಸೀರೆ ಕೊಡಿ...... " ಎಂದು ಬೇಡಿಕೊಂಡಳು.
ಆ ತಾಯಿಗಾದರೋ ಕೊಡಬೇಕೆಂಬ ಆಸೆ. ಆದರೆ ಆಹ್ವಾನಿತರ ಸುಮಂಗಲಿ ಪೂಜೆ ಆಗದೆ ಬೇರಾರಿಗೂ ಕೊಡಬಾರದೆಂಬ ಹಿರಿಯರ ಆಗ್ರಹಕ್ಕೆ ಮಣಿದು ಆ ತಾಯಿ, ಆ ಭಿಕ್ಷುಕಿಯನ್ನು ಸಮೀಪಿಸಿ "ಅಮ್ಮಾ, ಇನ್ನು ಕೆಲ ಹೊತ್ತು ತಡೆದು ಬಾ..... ನಿಂಗೆ ಊಟ, ಬಟ್ಟೆ ಎಲ್ಲಾ ಕೊಡ್ತೀನಿ..... " ಎಂದು ವಿನಂತಿಸಿದರು. ಆದರೆ ಆ ಭಿಕ್ಷುಕಿಯ "ನಂಗೇನೂ ಬೇಡ ಉಡಲೊಂದು ಸೀರೆ ಸಾಕು .... ಕೊಡಿ .... " ಎಂಬ ಬೇಡಿಕೆ ಅರಣ್ಯರೋದನವಾಗಿತ್ತು.
ಸುಮಂಗಲಿ ಪೂಜೆ ಆದ ತಕ್ಷಣ ಆ ತಾಯಿ ಹೊರಗೆ ಬಂದು ಹುಡುಕಿದರೂ ಆ ಭಿಕ್ಷುಕಿ ಬರಲೇ ಇಲ್ಲ. ಇದರಿಂದ ನಿರಾಶರಾದ ಆ ತಾಯಿ ತನ್ನ ಪತಿಯೊಡನೆ ಕರ್ನಾಟಕದ ಹಲವು ಮಠ ಮಾನ್ಯಗಳನ್ನು ದರ್ಶಿಸಿ ನಂತರ ಗುರು ನಿವಾಸಕ್ಕೆ ಬಂದರು. ಅದೇ ಸಮಯಕ್ಕೆ ಸರಿಯಾಗಿ ಅಂದು ಸುಮಂಗಲಿ ಪೂಜಾ ಕಾಲಕ್ಕೆ ಮನೆ ಮುಂದೆ ಬಂದು "ಸೀರೆ ಕೊಡಿ" ಎಂದು ಕೇಳಿದ ಭಿಕ್ಷುಕಿಯ ತರಹವೇ ಇದ್ದ ಭಿಕ್ಷುಕಿಯೊಬ್ಬಳು ಗುರು ನಿವಾಸದ ಮುಂದೆ ಬರುವುದನ್ನು ಕಂಡ ಆ ದಂಪತಿಗಳು ತಮ್ಮ ತಪ್ಪಿನ ಅರಿವಾಗಿ ಹೌಹಾರಿದರು. ಅಲ್ಲೇ ಇದ್ದ ಗುರುನಾಥರು ಆ ಭಿಕ್ಷುಕಿಯನ್ನು ಮನೆ ಒಳಗೆ ಕರೆದು ಕೂರಿಸಿ ಆಕೆಗೆ ಹಾಲು, ಹೊದೆಯಲು ವಸ್ತ್ರ ನೀಡಿ, ಒಂದು ಸೀರೆ ತರಿಸಿ ಆ ದಂಪತಿಗಳನ್ನು ಕರೆದು ಅವರ ಕೈಯಿಂದಲೇ ಆ ಭಿಕ್ಷುಕಿಗೆ ಸೀರೆ ಕೊಡಿಸಿ ತಪ್ಪು ಸರಿಯಾಯ್ತಲ್ಲ ಈಗ?" ಎಂದು ನಕ್ಕರು.
ನಾವುಗಳು ಏನೇ ತಪ್ಪು ಮಾಡಿದರೂ ನಮ್ಮನ್ನು ತಿದ್ದಿ ಕಾಯುವ ಗುರು ಕರುಣೆಯನ್ನು ಕಂಡು ಆ ದಂಪತಿಗಳು ಕಣ್ಣೀರಿಗೆ ಶರಣಾದರು.
ಕೂಡಲೇ ಗುರುಗಳು "ಕೆಲವರ ಮನೇಲಿ 25 ಸೀರೆ ಇರುತ್ತೆ...... ಅವರನ್ನೇ ಮತ್ತೆ ಮತ್ತೆ ಕರೆದು ಸೀರೆ ನೀಡ್ತೇವೆ. ಅದೇ ಹರಕು ಸೀರೆಗೂ ಗತಿ ಇರದವರು ಬೇಡಿದ್ರೂ ನಮಗೆ ಕೊಡೊ ಮನಸ್ಸಾಗಲ್ಲ ಅಲ್ಲವೇ ? ....... " ಎಂದು ಪ್ರಶ್ನಿಸಿದರು. ಈ ಘಟನೆಯನ್ನು ತಿಳಿಸಿ "ಹೀಗೆ ಒಂದು ಘಟನೆಯಲ್ಲಿ ನಮ್ಮ ತಪ್ಪನ್ನು ತಿದ್ದಿ, ಜೊತೆ ಜೊತೆಗೆ ಸಮತ್ವ ಭಾವ ಹಾಗೂ ಸುಮಂಗಲೀ ಪೂಜೆಯ ಅರ್ಥಪೂರ್ಣ ವಿಧಾನವನ್ನು ತಿಳಿಸಿಕೊಟ್ಟು ಕಾಪಾಡಿದ ಆ ಗುರುವಿಗೆ ನಾವೇನು ಕೊಡಲು ಸಾಧ್ಯ ಅಲ್ಲವೇ?" ಎಂದು ಚರಣದಾಸನಾದ ನನ್ನನ್ನು ಪ್ರಶ್ನಿಸಿ ಮೌನವಾದರು ಆ ತಾಯಿ........ ,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment