ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 23
ಕನಸಲ್ಲಿ ಬಂದು ಕಾಪಾಡಿದರು : - ಚಕ್ರದೊಳಗೆ ಸೇರಿದ ನಕಾರಾತ್ಮಕ ಚೈತನ್ಯ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಬೆಂಗಳೂರಿನವರಾದ ಆ ವ್ಯಕ್ತಿ ಅರೇಬಿಯಾದ ದೇಶವೊಂದರಲ್ಲಿ ಕೆಲಸದಲ್ಲಿದ್ದರು. ಅವರ ಸ್ನೇಹಿತರಲ್ಲಿ ಅನೇಕರು ಬೆಂಗಳೂರಿನಲ್ಲಿದ್ದು ಅವರಲ್ಲಿ ಕೆಲವರು ಗುರುನಾಥರ ಸಂಪರ್ಕದಲ್ಲಿದ್ದರು. ಹೊರದೇಶದಲ್ಲಿ ವಾಸಿಸುತ್ತಿದ್ದ ಆ ವ್ಯಕ್ತಿ ಅಲ್ಲಿಯೇ ಒಂದು ಕಾರನ್ನು ಕೊಂಡಿದ್ದರು. ಆದರೆ ಅದನ್ನು ತೆಗೆದುಕೊಂಡಾಗಿನಿಂದ ಮಾನಸಿಕ ಹಿಂಸೆ ಹಾಗೂ ಆ ಕಾರಿನಲ್ಲಿ ನೆಮ್ಮದಿಯ ಪ್ರಯಾಣ ಮಾಡಲಾಗುತ್ತಿರಲಿಲ್ಲ. ಅದರ ಕಾರಣವೂ ತಿಳಿಯಲಿಲ್ಲ.
ಈ ಮಧ್ಯೆ ಆ ವ್ಯಕ್ತಿಗೆ ಆಗಾಗ್ಗೆ ಕನಸಿನಲ್ಲಿ ಓರ್ವ ವಯೋವೃದ್ಧ ವ್ಯಕ್ತಿ ಬಂದು ಕಾಣಿಸಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ದಿನವೂ ಕನಸಿನಲ್ಲಿ ಬರುತ್ತಿದ್ದ ಆ ವ್ಯಕ್ತಿಯ ಚಿತ್ರವನ್ನು ಬರೆದ ಅವರು ಬೆಂಗಳೂರಿನ ಮಿತ್ರರಿಗೆ "ಅಂತಹವರು ಯಾರಾದರೂ ಇರುವರೇ?" ಎಂದು ಕೇಳಿ ಚಿತ್ರವನ್ನು ಕಳಿಸಿಕೊಟ್ಟರು. ಅದನ್ನು ನೋಡಿದ ಮಿತ್ರರು "ಅದು ಬೇರಾರೂ ಅಲ್ಲ. ಸಖರಾಯಪಟ್ಟಣದ ಗುರುನಾಥರು" ಎಂದು ತಿಳಿಸಿದರು. ಮಾತ್ರವಲ್ಲ ಗುರುನಾಥರನ್ನು ದರ್ಶನ ಮಾಡಿ ಹೊರದೇಶದಲ್ಲಿರುವ ಆ ಮಿತ್ರನ ಸಮಸ್ಯೆಯನ್ನು ಹಾಗೂ ಕನಸಿನ ಬಗ್ಗೆ ತಿಳಿಸಿದರು.
ಆಗ ಗುರುನಾಥರು "ಅವರ ಕಾರಿನ ಚಕ್ರವು ಲಾರಿಯಲ್ಲಿ ಬರುತ್ತಿರುವಾಗ ಲಾರಿ ಉರುಳಿ ಬಿದ್ದು ಅದರಲ್ಲಿ ಸಾಗಿಸುತ್ತಿದ್ದ ಚಕ್ರಗಳು ಅಲ್ಲೇ ಸನಿಹದಲ್ಲಿದ್ದ ಸ್ಮಶಾನದೊಳಗೆ ಬಿದ್ದವು. ಅದರಲ್ಲಿ ಒಂದು ನಕಾರಾತ್ಮಕ ಚೈತನ್ಯ ಸೇರಿಕೊಂಡಿದೆ. ಆ ಚಕ್ರವನ್ನು ತೆಗೆದು ಹೊಸ ಚಕ್ರ ಹಾಕಲು ಹೇಳಿ ಎಲ್ಲವೂ ಸರಿಹೋಗುವುದು" ಎಂದರು. ಅವರಂದಂತೆಯೇ ಮಾಡಲು ಎಲ್ಲವೂ ಸರಿಹೋಯ್ತು.
ಅದೇ ರೀತಿ ಮೈಸೂರಿನಲ್ಲಿ ವಾಸವಿದ್ದ ಓರ್ವರ ಮನೆಯ ಪಕ್ಕದವರು ಸದಾ ಗುರುನಾಥರ ಸಂಪರ್ಕದಲ್ಲಿದ್ದರು. ಆದರೆ ಇವರಿಗೂ ಗುರುನಾಥರನ್ನು ನೋಡಬೇಕೆಂಬ ಹಂಬಲವಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಿರಲು ಆ ಮನೆಯ ಮಗನಿಗೆ ಮದುವೆಯಾಯಿತು.
ಆತ ವಿದೇಶದಲ್ಲಿ ನೆಲೆಸಿದ್ದು ಹೆಂಡತಿಯನ್ನು ವೀಸಾ ಪಾಸ್ ಪೋರ್ಟ್ ಆಗಿರದ ಕಾರಣ ಆಕೆಯನ್ನು ಮೈಸೂರಿನಲ್ಲಿಯೇ ಬಿಟ್ಟು ತಾನೊಬ್ಬನೇ ವಿದೇಶಕ್ಕೆ ತೆರಳಿದರು. ಅವರ ಪತ್ನಿ ಎಷ್ಟೇ ಪ್ರಯತ್ನಿಸಿದರೂ ವೀಸಾ, ಇತ್ಯಾದಿಗಳನ್ನು ಪಡೆಯಲು ವಿಳಂಬವಾಗುತ್ತಿತ್ತು. ಇದರಿಂದ ಆಕೆ ಬಹಳ ಚಿಂತಾಕ್ರಾಂತರಾಗಿದ್ದರು. ಹೀಗಿರಲು ಗುರುನಾಥರ ಬಗ್ಗೆ ತಿಳಿದು ಅವರನ್ನು ದಿನವೂ ಪ್ರಾರ್ಥಿಸತೊಡಗಿದಳು.
ಒಂದು ರಾತ್ರಿ ಕನಸಿನಲ್ಲಿ ದರ್ಶನ ನೀಡಿದ ಗುರುನಾಥರು "ಮುಖ ಕಾಣದಂತೆ ಮುಚ್ಚಿಟ್ಟಿರುವ ನಮ್ಮಿಬ್ಬರ ಫೋಟೋವನ್ನು ತಿರುಗಿಸಿಡಮ್ಮಾ ಎಲ್ಲವೂ ಸರಿಯಾಗುವುದು" ಎಂದು ಹೇಳಿದರಂತೆ. ಬೆಳಿಗ್ಗೆ ಎದ್ದ ಆ ಮಹಿಳೆ ಕನಸಿನಲ್ಲಿ ಗುರುನಾಥರು ಹೇಳಿದಂತೆಯೇ ಹುಡುಕಲಾಗಿ ಅವರಿಬ್ಬರ ಫೋಟೋವೊಂದು ತಲೆಕೆಳಕಾಗಿ ಬಿದ್ದಿತ್ತು. ಆ ಫೋಟೋವನ್ನು ತೆಗೆದು ಸರಿಯಾಗಿಟ್ಟರಂತೆ. ಅಂದಿಗೆ ಸರಿಯಾಗಿ ಎರಡು-ಮೂರು ದಿನಗಳಲ್ಲಿ ವೀಸಾ ಪಾಸ್ ಪೋರ್ಟ್ ಕೈಸೇರಿ ಅವರು ವಿದೇಶಕ್ಕೆ ಹೋಗುವಂತಾಯಿತು. "ಅರಿತು ಮರೆತು ಒಮ್ಮೆ ಗುರುವೆಂದು ನೆನೆದರೆ ಗುರುತಿಟ್ಟು ಅವರಿಗೆ ಪರತತ್ವ ತೋರುವ" ಎಂಬ ಸಾಲು ಇಂತಹ ಘಟನೆಗಳಿಂದ ಮತ್ತೆ ಮತ್ತೆ ಸತ್ಯವಾಗುತ್ತದೆ ಅನಿಸುತ್ತದೆ........, , , , , , ,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment