ಒಟ್ಟು ನೋಟಗಳು

Saturday, October 22, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 18

 

  ಒಂದು ಚಲನಚಿತ್ರದ ಕತೆ

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅವರದು ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ನೆಲೆ ನಿಂತಿದ್ದ ಅವಿಭಕ್ತ ಕುಟುಂಬ. ಅಕ್ಕ ಖ್ಯಾತ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಅವರ ಇಬ್ಬರು ತಮ್ಮಂದಿರು ಚಲನಚಿತ್ರಗಳ ಹಾಡುಗಳ ಧ್ವನಿಮುದ್ರಣ ಹಾಗೂ ಮಾರಾಟ ಕೇಂದ್ರವನ್ನು ಹೊಂದಿದ್ದರು. ಅಂದಿನ ಸ್ಥಿತಿಗೆ ಬರುವ ಮೊದಲು ಹಲವಾರು ತೊಂದರೆಗಳನ್ನು ಎದುರಿಸಿ ಈಗೀಗ ಅನುಕೂಲ ಸ್ಥಿತಿಗೆ ತಲುಪಿದ್ದರು. ಆದರೂ ಸಂಪೂರ್ಣ ಋಣಮುಕ್ತರಾಗಲು ಬಯಸಿದ್ದರು. ಆಗ ಗುರುನಾಥರ ಸಂಪರ್ಕವಿದ್ದ ಓರ್ವ ವ್ಯಕ್ತಿಯ ಸಹಕಾರದಿಂದ ಗುರುನಾಥರ ಸಂಪರ್ಕಕ್ಕೆ ಬಂದರು. 

ಒಮ್ಮೆ ಅವರು ಗುರುನಿವಾಸಕ್ಕೆ ಬಂದಾಗ, ಚಲನಚಿತ್ರ ಮಾಡಬೇಕೆಂಬ ಅವರ ಮನದ ಇಂಗಿತವನ್ನು ಅರಿತ ಗುರುನಾಥರು "ಆಯ್ತು, ನಿನ್ನನ್ನು ಋಣಮುಕ್ತನಾಗಿಸುತ್ತೇನೆ. ನಿಶ್ಚಿಂತೆಯಿಂದ ಇರು" ಎಂದು ತಿಳಿಸಿ ಸಿನಿಮಾ ನಿರ್ಮಾಣ ಮಾಡಲು ಹೇಳಿದರು. 

ಅಣ್ಣ ತಮ್ಮ ಇಬ್ಬರು ಚಲನಚಿತ್ರ  ನಿರ್ಮಾಣಕ್ಕಾಗಿ ರಾಜಸ್ತಾನ್ ಗೆ ತೆರಳಿ ಬಹುಶಃ ಹತ್ತು ದಿನ ಅಲ್ಲೇ ಇದ್ದರು ಎನಿಸುತ್ತದೆ. ಅವರ ಅಕ್ಕ ಗುರುನಾಥರ ಮನೆಯಲ್ಲೇ ಉಳಿದುಕೊಂಡಿದ್ದರು. 

ಪ್ರತಿ ದಿನ ಸಂಜೆ ರಾಜಸ್ಥಾನ್ ಗೆ ಕರೆ ಮಾಡಿಸಿ ಮಾತನಾಡುತ್ತಾ ಅಂದು ನಡೆದ ಘಟನೆ, ಚಲನಚಿತ್ರ ನಿರ್ಮಾಣದ ಬಗ್ಗೆ ಗುರುನಾಥರೇ ಹೇಳುತ್ತಿದ್ದರು. ಇದು ಅವರ ಸೋದರರು ಹಾಗೂ ಅಲ್ಲಿ ನೆರೆದಿದ್ದವರಿಗೂ ಆಶ್ಚರ್ಯ ಉಂಟು ಮಾಡಿತು. ತಾಯಿ ಮಗನ ಭಾವನಾತ್ಮಕ ಸಂಬಂಧಗಳ ಕತೆ ಹೊಂದಿದ್ದ ಆ ಚಲನಚಿತ್ರ ಇಪ್ಪತೈದು ವಾರ ಭರ್ತಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತು. 

ಆ ಚಲನಚಿತ್ರ ನೋಡಿದ ಮತ್ತೋರ್ವ ಖ್ಯಾತ ನಟರು "ಈ ಚಲನಚಿತ್ರದ ಪ್ರತಿ ಹಂತದಲ್ಲೂ ಯಾವುದೋ ಕಾಣದ ಅಗೋಚರ ಶಕ್ತಿ ಕಂಡುಬರುತ್ತಿದೆ" ಎಂದು ಉದ್ಗರಿಸಿದರು. 

ಆ ಸಿನಿಮಾದಿಂದ ಅವರಿಗೆ ಒಟ್ಟು ಬಹುಶಃ ಹದಿನೆಂಟು ಕೋಟಿಗೂ ಮೀರಿ ಲಾಭವಾಯ್ತು. ನಂತರ ಆ ಸೋದರರು ಸಖರಾಯಪಟ್ಟಣಕ್ಕೆ ಬಂದಾಗ  "ಇನ್ನು ಮುಂದೆ ನಾನು ಹೇಳುವ ತನಕ ಯಾವುದೇ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಕೂಡದು" ಎಂದು ಗುರುನಾಥರು ತಿಳಿಸಿದ್ದರು.

ಈ ಚಲನಚಿತ್ರ ಬಿಡುಗಡೆಗೆ ಮೊದಲು ಚಿತ್ರದ ಪ್ರಥಮ ಪ್ರತಿಯನ್ನು ಅದ್ವೈತ ಪೀಠದ ಶ್ರೀ ಶ್ರೀ ಗಳಿಂದ ಸ್ಪರ್ಶಿಸಿ ಅವರ ಕೃಪಾಶೀರ್ವಾದ ಪಡೆದು ಆನಂತರ ಬಿಡುಗಡೆ ಮಾಡಲು ತಿಳಿಸಿದರು.

ಸಿನಿಮಾ ಯಶಸ್ವಿಯಾದಾಗ "ಅದು ಶ್ರೀ ಶ್ರೀ ಗಳ  ಕೃಪಾಶೀರ್ವಾದದಿಂದ ಕಣಯ್ಯಾ" ಎಂಬ ಗುರುನಾಥರ ಮಾತು "ಎಲ್ಲವೂ ನೀನೇ ಆಗಿ, ಯಾವುದೂ ನೀನಲ್ಲವಾಗಿ ಇರುವುದೇ ನಿಜವಾದ ಗುರುತ್ವ" ಎಂಬ ಅವರ ಮಾತನ್ನು ಹಾಗೂ ವ್ಯಕ್ತಿ ಎಷ್ಟೇ ಶಕ್ತಿವಂತನಾಗಿದ್ದರೂ ವಿನಯವಂತನೂ ಆಗಿರಬೇಕೆಂಬುದನ್ನು ತಿಳಿಸುತ್ತದೆ. 

ಆ ನಂತರ ಯಾವಾಗ ಭರ್ತಿ ಹಣ ಕಾಣಲಾರಂಭಿಸಿತೋ ವ್ಯಕ್ತಿ ಮೈ ಮರೆಯಲಾರಂಭಿಸುವುದು ಸರ್ವೇ ಸಾಮಾನ್ಯ. ಈ ಸೋದರರೂ ಹಾಗೇ ಮಾಡಿದರು. ಮಾತ್ರವಲ್ಲ ಗುರುನಾಥರ ಸಲಹೆಯನ್ನು ಕಡೆಗಣಿಸಿ ಇನ್ನೊಂದು ಚಿತ್ರ ನಿರ್ಮಾಣಕ್ಕೆ ಚಿತ್ರಕತೆ ಸಿದ್ಧ ಮಾಡಿಕೊಂಡು ಕೇವಲ ಆಶೀರ್ವಾದ, ಒಪ್ಪಿಗೆ ಪಡೆಯಲು ಗುರು ನಿವಾಸಕ್ಕೆ ಬಂದರು. 

ಈ ಕುರಿತು ಗುರುನಾಥರು ಒಮ್ಮೆ ನನ್ನಲ್ಲಿ ಹೀಗೆ ಹೇಳಿದ್ದರು. "ಅವರೇ ಎಲ್ಲಾ ತೀರ್ಮಾನ ಮಾಡಿಕೊಂಡು ಕೇವಲ ನನ್ನ ಒಂದು ಮಾತಿಗಾಗಿ ಇಲ್ಲಿಗೆ ಬಂದಿದ್ದಾರಪ್ಪ.... ಅವರ ತೀರ್ಮಾನಕ್ಕೆ ಒಪ್ಪಿ ಸಹಿ ಹಾಕಲು ನಾನೇನು ರಾಜ್ಯಪಾಲನೇನಯ್ಯ ? ಅವರಿಗೆ ನೋವು ಮಾಡಬಾರದೆಂದು ಹೂಂ ಅಂದೆ. ನನಗೇನಯ್ಯ ಕಳಸ ಅಲ್ಲಿ? ಅಲ್ವೇ? ಅಂದಿದ್ರು. 

"ಹರ ಮುನಿದರೆ ಗುರು ಕಾಯಬಲ್ಲ. ಗುರು ಮುನಿದರೆ ಹರನೂ ಕಾಯಲಾರ" ಎಂಬುದಕ್ಕೆ ಸಾಕ್ಷಿ ಎಂಬಂತಿದೆ ಮುಂದಿನ ಘಟನೆ. ಗುರುವಿನ ಅನುಮತಿ ಇರದೇ ಆರಂಭಗೊಂಡ ಆ ಚಲನಚಿತ್ರ ಆರಂಭದಿಂದಲೂ ಕುಂಟುತ್ತಲೇ ಸಾಗಿ ಅವರು ಮೊದಲ ಚಲನಚಿತ್ರದಲ್ಲಿ ಗುರುವಿನ ಅನುಗ್ರಹದಿಂದ ಗಳಿಸಿದ್ದ ಹಣವೆಲ್ಲವನ್ನೂ ಕಳೆದುಕೊಂಡರು. ಮಾತ್ರವಲ್ಲ, ಇಂದು ಬಹುಶಃ ಚಲನಚಿತ್ರರಂಗದಿಂದಲೇ ದೂರವಾಗಿರುವರೆನಿಸುತ್ತದೆ. ಆ ಸೋದರರಿಗೆ ಈ ಸ್ಥಿತಿ ಬರಲು "ಗುರು ವಾಕ್ಯ ಪ್ರಮಾಣವೆಂಬುದನ್ನು ಬದಿಗೊತ್ತಿ ಮೈ ಮರೆತಿದ್ದೆ ಕಾರಣವಲ್ಲವೇ?"........ ,,,,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment