ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 22
ಭಿಕ್ಷಾವಂದನೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಿವಾಸಕ್ಕೆ ಪ್ರತಿದಿನವೂ ನೂರಾರು ಜನರು ಬರುತ್ತಿದ್ದರಷ್ಟೇ.... ಭಕ್ತರ ಮನಸ್ಥಿತಿ ಹಾಗೂ ಪರಿಸ್ಥಿತಿಯನ್ನು ಸದಾ ಗಮನಿಸುತ್ತಿದ್ದ ಗುರುನಾಥರು ಭಕ್ತರು ತನಗಾಗಿ ತರುತ್ತಿದ್ದ ಎಲ್ಲಾ ವಸ್ತುಗಳನ್ನು ಅಲ್ಲಿ ನೆರೆದ ಭಕ್ತರಿಗೆ ಹಾಗೂ ಬೀದಿಯಲ್ಲಿ ಓಡಾಡುತ್ತಿದ್ದ ಜನರಿಗೆ ಹಂಚಿಸಿ ಬಿಡುತ್ತಿದ್ದರೇ ವಿನಃ ತಾವೇನನ್ನೂ ಸ್ವೀಕರಿಸುತ್ತಿದ್ದಿಲ್ಲ. ಹಾಗೆಯೇ ಕಾರು ಜೀಪುಗಳಲ್ಲಿ ಬರುತ್ತಿದ್ದ ಭಕ್ತರಿಗಿಂತ ಮೊದಲು ಆ ಕಾರಿನ ಚಾಲಕನ ಬೇಕು ಬೇಡಗಳನ್ನು ಪೂರೈಸುತ್ತಿದ್ದರು. ಇದೇಕೆ ಹೀಗೆಂದು ಕೇಳಿದವರಿಗೆ, "ಆಗ ಚಾಲನೆ ಮಾಡಿದ್ದರಿಂದ ತಾನೇ ನೀನು ಇಲ್ಲಿಯವರೆಗೆ ಬಂದಿದ್ದು?" ಎಂದು ಪ್ರಶ್ನಿಸುತ್ತಿದ್ದರು.
ಆ ನಮ್ಮೊಡೆಯ ಎಂದಿಗೂ ಹಸಿದವರಿಗೆ ಆಧ್ಯಾತ್ಮ-ವೇದಾಂತಗಳನ್ನು ಹೇಳಲಿಲ್ಲ.. ಬದಲಿಗೆ ಪ್ರತಿಯೊಬ್ಬರಿಗೂ ಲೌಕಿಕದ ಕರ್ತವ್ಯದಲ್ಲಿ ನಿರತರಾಗಿರಲು ತಿಳಿಸುತ್ತಿದ್ದರು.
"ಸ್ವಾಮಿ ಸಾಧನೆ ಮಾಡುವುದು ಹೇಗೆ?" ಎಂಬ ಭಕ್ತರೊಬ್ಬರ ಪ್ರಶ್ನೆಗೆ "ಎಂತದೂ ಇಲ್ಲ ಕಣಯ್ಯಾ. ಮಾಡುವ ಪ್ರತಿ ಕೆಲಸದಲ್ಲೂ ಗುರುವನ್ನೇ ಕಾಣತೊಡಗು ಸಾಕು. ಆಗ ಪ್ರತಿ ಕೆಲಸದಲ್ಲೂ ಶ್ರದ್ಧೆ, ನಿಷ್ಠೆ, ಪರಿಪೂರ್ಣತೆ ಸಾಧ್ಯವಾಗುತ್ತದೆ ಹಾಗೂ ನಮ್ಮ ಮನಸ್ಸು ದುರಾಲೋಚನೆಗಳಿಗೆ ಬಲಿಯಾಗುವುದಿಲ್ಲ" ಎಂದಿದ್ದರು.
ಹಾಗೆಯೇ ಸಮಸ್ಯೆಗಳನ್ನು ಹೊತ್ತು ಬರುತ್ತಿದ್ದ ಭಕ್ತರ ಮನದಿಂಗಿತವನ್ನು ಅರಿತು ಆರ್ಥಿಕವಾಗಿ, ಸಾಮಾಜಿಕವಾಗಿ ಬಸವಳಿದಿದ್ದವರನ್ನು ಮೊದಲು ಮಾತನಾಡಿಸಿ ಕಳಿಸುತ್ತಿದ್ದರು. ಒಮ್ಮೆ ನಾನು ಅದೇಕೆ ಹೀಗೆ ಎಂಬ ಭಾವದಿಂದ ದಿಟ್ಟಿಸಿ ನೋಡಲು ಗುರುನಾಥರು "ಏನಿಲ್ಲಯ್ಯಾ....... ನನ್ನಿಂದ ಏನೋ ಸಹಾಯವಾಗುತ್ತೆ ಅಂತ ಒಂದು ದಿನದ ಕೆಲಸಬಿಟ್ಟು ಬಂದಿರ್ತಾರೆ. ಅಂತಹವರಿಗೆ ಮೊದಲು ಸಹಾಯವಾಗ್ಬೇಕು ಕಣಯ್ಯಾ...... " ಎಂಬ ಮಾತು ಅವರ ಸಾಮಾಜಿಕ ಕಳಕಳಿಯ ಪ್ರತೀಕವೆನಿಸಿದೆ.
ಹಾಗೆಯೇ ಮತ್ತೊಮ್ಮೆ ಗುರುವಿನ ಮಹತ್ವವನ್ನು ವಿವರಿಸುತ್ತಾ "ಗುರು ಅಂದ್ರೆ ಗುರು ಅಷ್ಟೇ.... ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕಾದ್ರೆ ಗುರು ಕೃಪೆಯಿಂದ ಮಾತ್ರ ಸಾಧ್ಯ. ಹಾಗೆಯೇ ಕುಟುಂಬದಲ್ಲಿ ಒಬ್ಬ ಸನ್ಯಾಸಿಯಾದರೆ ಆತನ ತಂದೆಯ ಕಡೆಯ ಹನ್ನೆರಡು ತಲೆಮಾರು, ತಾಯಿ ಕಡೆಯ ಎಂಟು ತಲೆಮಾರು ಹಾಗೂ ಗುರುವಿನ ಮೂರು ತಲೆಮಾರು ಇರತಕ್ಕ ಕರ್ಮಗಳೆಲ್ಲ ಕ್ಷಯವಾಗುವುದು" ಎಂದರು. ಮತ್ತು ಮುಂದುವರೆದು "ಪ್ರತಿ ತಿಂಗಳು ದ್ವಾದಶಿಯಂದು ಗುರುದರ್ಶನ ಹಾಗೂ ಭಿಕ್ಷಾವಂದನೆ ನೀಡಿದರೆ ನಮ್ಮ ಹದಿನಾರು ತಲೆಮಾರು ಹೊಂದಿರುವ ಕರ್ಮಗಳೆಲ್ಲಾ ಕ್ಷಯವಾಗುವುದು" ಎಂದರು.
ಅಂತಹ ಗುರುವಿನ ಒಂದು ದೃಷ್ಟಿ ಬಿದ್ರೆ ಸಾಕು. ಆ ಗುರುವಿಗೆ ಎಂದಿಗೂ ಭಾರ ಕೊಡಬಾರದು ಕಣಯ್ಯಾ ... ಎನ್ನುತ್ತಿದ್ದರು..... ,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment