ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 21
ಗುರುನಾಥರಿಗೆ ಕೈತುತ್ತನ್ನಿತ್ತ ಮಹಾತಾಯಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರನ್ನು ನಿಕಟವಾಗಿ ಕಂಡ ಹೇಮಕ್ಕ, ತಮಗೆ ನೆನಪಿರುವ ಗುರುನಾಥರ ಲೀಲೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ಹೀಗೆ. "ಎಲ್ಲಿಂದ ಎಲ್ಲಿಗೆ ಅಂತರಂಗದ ಸಂಬಂಧಗಳು ಬೆಸೆದಿರುವುದೋ ಅರಿಯೆವು. ಮೊದಲು ನಮ್ಮ ಮನೆಯ ಸನಿಹವಿದ್ದ ಒಂದು ಮನೆಗೆ ಗುರುನಾಥರು ಬಂದು ಹೋಗುತ್ತಿದ್ದರು. ಅವರನ್ನು ನೋಡಿದಾಗ ಏನೋ ಒಂದು ಭಕ್ತಿಭಾವ ಅವರ ಬಗ್ಗೆ ಮೂಡುತ್ತಿತ್ತು. ಗುರುನಾಥರ ಮಾತನ್ನು ಪದೇ ಪದೇ ಕೇಳಬೇಕೆನಿಸುತ್ತಿತ್ತು ಎದುರು ಮನೆಯವರಲ್ಲಿ ಬೇಡಿಕೊಳ್ಳುತ್ತಿದ್ದೆ ಗುರುನಾಥರು ಬಂದಾಗ ತಿಳಿಸಬೇಕೆಂದು. ಕಾಲ ಕೂಡಿ ಬಂತು. ಗುರುನಾಥರ ಕೃಪಾದೃಷ್ಟಿ ನನ್ನ ಮೇಲಾಯ್ತು. ನಮ್ಮದೊಂದು ಸಣ್ಣ ಮನೆ. ಆಗ ನಾನು ಗರ್ಭಿಣಿಯಾಗಿದ್ದೆ. "ನಿನಗೆ ಜನಿಸುವವಳು ದೇವಿಯ ಅಂಶಳು - ಅಲ್ಲದೆ ಈ ಜಾಗದಲ್ಲಿ ಅಮ್ಮನವರ ಗುಡಿಯಾಗುತ್ತದೆ" ಎಂದು ಭವಿಷ್ಯ ನುಡಿದರು. 1980ರಲ್ಲಿ ಬೆಂಗಳೂರಿನಿಂದ ಭದ್ರಾವತಿಗೆ ಟ್ರಾನ್ಸ್ ಫರ್ ಆಗಿ ಬಂದೆವು. ಅಂತಹದೇನೂ ಸಿರಿತನವಿರಲಿಲ್ಲ. ಗುರುನಾಥರು ಬಂದಾಗಲೆಲ್ಲಾ "ಇದು ಆ ದೇವಿಯದೇ ಜಾಗ. ಇಲ್ಲಿ ಆಕೆಯ ಶಕ್ತಿಯು ಅಡಗಿದೆ. ಇಲ್ಲಿ ಅವಳು ನೆಲೆ ನಿಂತು ಪ್ರಸಿದ್ಧಳಾಗಿದ್ದಾಳೆ" ಎಂದಾಗ ಇದೆಲ್ಲವನ್ನೂ ನಾವು ಕಲ್ಪಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಗುರುನಾಥರು ಸರ್ವಸಮರ್ಥರು ಎಂದು ಸುಮ್ಮನಿದ್ದೆವು".
ಗುರುನಾಥರ ನೆನಪುಗಳು ಮನದಲ್ಲಿ ಉಕ್ಕಿಬಂದಾಗ, ಅವರೊಡನಿದ್ದಾಗ ಸವಿದ ಆನಂದದ ಕ್ಷಣಗಳಿಂದ - ಹೇಮಕ್ಕ ಮಾತನಾಡದ ಸ್ಥಿತಿ ತಲುಪಿದರು. ಭಾವುಕತೆಯ ಒತ್ತಡದಿಂದ ಕೆಲ ಕ್ಷಣಗಳಲ್ಲಿ ಹೊರ ಬಂದು ಮುಂದುವರೆಸಿದರು.
"ಗುರುನಾಥರು ಹೇಳಿದಂತೆ ನನಗೆ ಹೆಣ್ಣು ಮಗುವಾಯಿತು. ಇನ್ನು ಅಮ್ಮ ಅದು ಹೇಗೆ ಬರುತ್ತಾಳೋ ನಮಗೂ ತವಕ. ಇಷ್ಟರಲ್ಲಿ ಇಲ್ಲಿದ್ದ ನಾಲ್ಕಾರು ಬಾಡಿಗೆಯವರನ್ನು ಬಿಡಿಸಿ, ಮನೆಯನ್ನು ಯಾರಿಗೋ ಮಾರುವುದರಲ್ಲಿ ಓನರ್ ಇದ್ದರು. ಅದೇ ಸಮಯದಲ್ಲಿ ಗುರುನಾಥರು ನಮ್ಮ ಮನೆಗೆ ಬಂದವರು "ಹತ್ತು ಕೈ ಬದಲಾಗಲಿ.... ಸುಮ್ಮನಿರಿ... ಇದು ಅಮ್ಮನ ಸ್ಥಾನ. ಅವಳಿಗೇ ಅದು ಬಂದು ಸೇರುತ್ತದೆ. ಎಲ್ಲರೂ ದೇವಿಯ ಅರ್ಚನೆಗೆ ದೇವಾಲಯಕ್ಕೆ ಹೋಗುತ್ತಾರೆ. ಆದರೆ ನಿನ್ನ ಬಳಿ ಸೇವೆ ತೆಗೆದುಕೊಳ್ಳಲು ದೇವಿಯೇ ಬರುತ್ತಾಳೆ. ಈ ಮನೆ ದೇಗುಲವಾಗುತ್ತದೆ." ಎಂದರು ಗುರುನಾಥರು. 1991ನೇ ಇಸವಿ ಗುರುನಾಥರು ಶೃಂಗೇರಿಯಿಂದ ಪಾದುಕೆ ತಂದವರು ನಮ್ಮ ಮನೆಗೇ ಬಂದರು. ಸಣ್ಣ ಜಾಗದಲ್ಲಿ ಪೂಜೆ ಪುನಸ್ಕಾರಗಳಾಯಿತು. ನನ್ನನ್ನು ಬಾಯ್ತುಂಬಾ ಹೇಮಮ್ಮಾ, ಹೇಮಕ್ಕಾ ಎಂದು ಕರೆಯುತ್ತಿದ್ದರು. "ಕೈ ತುತ್ತು ಹಾಕು, ಕೈ ತುತ್ತಿನ ಮೇಲೆ ಪಕೋಡದ ಚೂರು ಇಡು" ಎಂದು ಕೇಳಿ ಊಟ ಮಾಡಿದರು. ಕೆಲವೊಮ್ಮೆ ಜಾಸ್ತಿ ಜನ ಅವರೊಂದಿಗೆ ಬಂದಾಗ ಎಲೆ ಹಾಕಿಸಿ ಬಡಿಸಲು ಹೇಳುತ್ತಿದ್ದರು. "ಅಮ್ಮ" ಎಂದು ಕೇಳಿ ನನ್ನ ಕೈ ತುತ್ತು ಪಡೆದು ಗುರುನಾಥರು, ನನ್ನ ಜನ್ಮವನ್ನು ಸಾರ್ಥಕಪಡಿಸಿದರು. ಅಂತಹ ಗುರು ಮುಂದೆ ಹುಟ್ಟುವುದಿಲ್ಲ, ಹಿಂದೆ ಹುಟ್ಟಿಲ್ಲವೇನೋ, ಎಂತಹ ಕರುಣಾಮಯಿ, ಪ್ರೇಮಮಯಿ, ಸರಳ ಜೀವಿ ನಮ್ಮ ಗುರುನಾಥರು". ಹೇಮಕ್ಕ ಮತ್ತೆ ಕೆಲ ಕ್ಷಣ ಭಾವುಕರಾಗಿ ಅಂದಿನ ದಿನಗಳ ಗುಂಗಿನಲ್ಲಿ ಮುಳುಗಿಬಿಟ್ಟರು. ಕೃಷ್ಣ ಪರಮಾತ್ಮನನ್ನು ಅನೇಕ ತಾಯಂದಿರು ಸಾಕಿ ಸಲಹಿದಂತೆ- ಶುದ್ಧ ಮನದ ಅನೇಕ ಭಕ್ತರಲ್ಲಿ ಕೈ ತುತ್ತು ಪಡೆದಿದ್ದಾರೆ. ಇತ್ತವರ ಭಾಗ್ಯವದು.
ಗುರುಪ್ರಸಾದ ಕರುಣಿಸಿದರೆ ತಿಳಿಯದ ನನ್ನ ಮೌಢ್ಯ
"ನಾಲ್ಕು ದಿನಗಳ ಕೆಳಗೆ ಒಂದು ಪಂಚೆಯನ್ನು ದಾನ ತೆಗೆದುಕೊಂಡೆಯಲ್ಲಾ ಹೇಮಮ್ಮ". ಗುರುನಾಥರಿಗೆ ನಾನು ತೆಗೆದುಕೊಂಡಿದ್ದು ಅದು ಹೇಗೆ ತಿಳಿಯಿತು? ಎಂದು ಚಿಂತಿಸುತ್ತಿರುವಲ್ಲಿ "ಅದನ್ನು ತೆಗೆದುಕೊಂಡು ಬಾ" ಎಂದರು. ನಾನು ಬೀರುವಿನಿಂದ ತೆಗೆದುಕೊಂಡು ಬಂದೆ. ತಾವು ಉಟ್ಟಿದ್ದ ಪಂಚೆಯನ್ನು ಬಿಚ್ಚಿ ಹಾಕಿ ಆ ಹೊಸ ಪಂಚೆಯನ್ನುಟ್ಟುಕೊಂಡ ಗುರುನಾಥ ಹಳೆಯದನ್ನು ನನಗಿತ್ತರು.
ಅರಿಯದ ಮೂಢಳಾದ ನಾನು "ಇದನ್ನು ಏನು ಮಾಡಲಿ ಗುರುನಾಥರೇ? ಮಡಿಸಿ ಮಡಿ ಮಾಡಿ ಕೊಡಲಾ?" ಎಂದು ಕೇಳಿದೆ. "ಬೇಡ ಇಲ್ಲೇ ಇರಲಿ. ಯಾಕಾಗಿ ಇಲ್ಲಿಟ್ಟು ಕೊಳ್ಳುವುದು". ಪೂರ್ವಾಪರಗಳ ಅರಿವಿಲ್ಲದೇ ಮತ್ತೆ ಕೇಳಿದೆ. "ಅದು ಸಮಯ ಬಂದಾಗ ಗೊತ್ತಾಗುತ್ತದೆ" ಎಂದರು. "ಎಲ್ಲಿಡಲಿ ಇದನ್ನು? ಎಲ್ಲಿ ಜತನವಾದ ವಸ್ತುಗಳನ್ನು ಇಡುತ್ತೀಯೋ ಅಲ್ಲಿಡು" ಎಂದಾಗ ನಾನು ಬೀರುವಿನಲ್ಲಿಟ್ಟ ಅವರುಟ್ಟ ಶೇಷ ವಸ್ತ್ರವನ್ನು ನಾನು ಮರೆತೇಬಿಟ್ಟಿದ್ದೆ. ಈಗ ನನಗನಿಸುತ್ತದೆ, ಗುರುನಾಥರು ನನ್ನ ಮೇಲೆ ಅದೆಷ್ಟು ಕರುಣೆ ಇಟ್ಟಿದ್ದರು ಎಂದು. ದೇವಿ ಬರುವ ಜಾಗಕ್ಕೆ ಜಗದ್ಗುರುಗಳ ಪಾದುಕೆ ತಂದರು. ದೇವಿ ಸಾನ್ನಿಧ್ಯ ದೊರಕುವ ಮೊದಲೇ ತಮ್ಮ ಶೇಷ ವಸ್ತ್ರವನ್ನು ಇಲ್ಲಿಟ್ಟು ಗುರು ಸಾನ್ನಿಧ್ಯವನ್ನು ಕರುಣಿಸಿದ್ದರು. ಅದು ಅವರನ್ನು ಕಳಕೊಂಡ ಮೇಲೆ ನನಗೆ ಅರಿವಾಯಿತು. ಆ ವಸ್ತ್ರವನ್ನು ಆರಾಧನೆಯಲ್ಲಿ ಪೂಜೆಗೆ ಇಡುವ ಕಾಲ ಬಂದಿತ್ತು. ಅವರು ದೇಹತ್ಯಾಗ ಮಾಡಿದ ನಂತರ ಒಂದು ಸಣ್ಣ ಆರಾಧನೆ ಮಾಡಬೇಕು, ಇಲ್ಲಿನ ಭಕ್ತರೆಲ್ಲಾ ಸೇರಿ ಗುರುನಾಥರ ಸ್ಮರಣೆ ಮಾಡಬೇಕೆಂದು ಅಂದು ಬೆಳಿಗ್ಗೆ ಚಿಂತಿಸುತ್ತಿದ್ದಾಗ, ಗುರುನಾಥರು ಮೆತ್ತಗೆ ತಲೆಯ ಹಿಂಭಾಗವನ್ನು ತಟ್ಟಿ "ನನ್ನ ವಸ್ತ್ರವನ್ನು ಕೊಟ್ಟಿದ್ದೆನಲ್ಲಾ ಮರೆತು ಬಿಟ್ಟೆಯಾ.... ಅದನ್ನು ಬಳಸುವ ಕಾಲ ಈಗ ಬಂದಿದೆ" ಎಂದು ಹೇಳಿದಂತೆ ಆಯಿತು.
ಹೀಗೆ ಗುರುನಾಥರು, ಮರೆವಿನ ಮದ್ದಾಗಿ, ದಡ್ಡರ ಬುದ್ಧಿಮತ್ತೆಯಾಗಿ, ಆರ್ತರ ಆಧಾರವಾಗಿ - ಪ್ರಸಾದ ಕರುಣಿಸಿ, ಎಂದೆಂದೂ ನಿನ್ನೊಂದಿಗೆ ನಾನಿದ್ದೇನೆ ಎಂದು ಸಮಾಧಾನ ನೀಡುತ್ತಿದ್ದಾರೆ. ಲೋಕದ ಕಣ್ಣಿಗೆ, ಆರಾಧನೆ ನಡೆದರೂ ಇಲ್ಲಿಯೇ, ಈ ಮನೆಯಲ್ಲಿಯೇ ಅವರಿದ್ದಾರೆಂಬುದನ್ನು ಅನೇಕ ಸಾರಿ ಸಾಕ್ಷೀಕರಿಸಿದ್ದಾರೆ". ಹೇಮಮ್ಮಾ ಮತ್ತೆ ಕೆಲ ಹೊತ್ತು ಭಾವ ಪ್ರಪಂಚದಲ್ಲಿ ಮುಳುಗಿದರು.
ಪ್ರಿಯ ಓದುಗ ಮಿತ್ರರೇ ಗುರು ನರನಲ್ಲ, ಗುರು ದೇಹವಲ್ಲ, ಭಾವ, ಅಲ್ಲವೇ?
ನಮ್ಮ ನಿಮ್ಮನ್ನು ಈ ರೀತಿ ಸಂಯೋಜಿಸಿ ಸತ್ಸಂಗ ನಡೆಸುತ್ತಿರುವವರೂ, ಸತ್ಸಂಗಕ್ಕೆ ನಿರಂತರ ಗ್ರಾಸ ಒದಗಿಸುತ್ತಿರುವವರೂ ಅವರೇ ಎಂಬುದು ನಿಜವಲ್ಲವೇ? ಬನ್ನಿ ನಾಳೆಯ ಸತ್ಸಂಗಕ್ಕೆ - ನಿತ್ಯ ಸತ್ಸಂಗ ನಿರಂತರವಾಗಲಿ... ,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।