ಒಟ್ಟು ನೋಟಗಳು

Saturday, March 18, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 9


ಬಾಳನ್ನೂ ಹಣ್ಣು ಮಾಡಿ ಸಮರ್ಪಿಸಿ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಬಂದವರು ಏನಾದರೂ ತಂದರೆ, ಅವರ ಅಂತರಂಗವನ್ನು ಅರಿತೇ ಗುರುನಾಥರು ಸ್ವೀಕರಿಸುತ್ತಿದ್ದುದು. ಅಹಂಭಾವದಿಂದ ತಂದದ್ದು, ಅನ್ಯ ಮಾರ್ಗಗಳಿಂದ ಗಳಿಸಿರುವುದನ್ನು ಮುಟ್ಟುವುದಿರಲಿ, ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅಂತಹವರಿಗೆ ನಿರ್ದಾಕ್ಷಿಣ್ಯವಾಗಿ ಮನೆಯೊಳಗೇ ಬಿಡದ ಅನೇಕ ಘಟನೆಗಳಿವೆ. ದಾನ ಕೊಡುವೆನೆಂದು ಬೀಗುವ ಸೋಗಿನ ದಾನಿಗಳಿಗೆ ಗುರುನಾಥರ ಮಾತಿನ ಛಡಿ ಏಟು ಅದೆಷ್ಟು ಬಿದ್ದಿದೆಯೋ? ಈ ಎಲ್ಲ ಹಿನ್ನೆಲೆಯಲ್ಲಿ ಭಕ್ತ ಸಮೂಹವನ್ನು ತಿದ್ದಿ ತೀಡಿ ಪರಿಶುದ್ಧ ಮೂರ್ತಿಗಳನ್ನಾಗಿಸುವ ಗುರು ಕರುಣೆಯೇ ಇಲ್ಲೆಲ್ಲಾ ಕಂಡುಬರುತ್ತಿತ್ತು. ಹಾಗಂತ ಪರಿಶುದ್ಧ ಭಾವದಿಂದ ಸಮರ್ಪಿಸುವ ಭಕ್ತರ ಮನೆಗೆ ಹೋಗಿ ಬೇಡಿ ಪಡೆದದ್ದಿದೆ. ಕೈತುತ್ತು ಉಂಡದ್ದಿದೆ. ಅಂತಹ ಕೈತುತ್ತು ನೀಡಿ ಆ ಮಹಾ ತಾಯಂದಿರುಗಳಿಗೆ, ಬೇಡಿ ಪಡೆದಾಗ ಗುರುನಾಥರಿಗೆ ನೀಡಿ ಧನ್ಯರಾದ ಆ ಅಕ್ಕತಂಗಿಯರಿಗೆ ಸಾವಿರ ನಮನಗಳನ್ನು ಮಾಡಿದರೂ ಸಾಲದು. 

ಒಮ್ಮೆ ಭದ್ರಾವತಿಯ ಸಹೋದರಿಯರಿಬ್ಬರು ಗುರುನಾಥರನ್ನು ನೋಡಲು ಹೊರಟರು. ಅನೇಕ ಸಾರಿ ಇವರು ಹೋಗಿ ಬಂದಿದ್ದರು. ತಮ್ಮನೆಂದರು "ಅಣ್ಣ ಗುರುಗಳಿಗೆ ದೊಡ್ಡ ದೊಡ್ಡ ಬಾಲೆಯ ಹಣ್ಣಿನ ಚಿಪ್ಪುಗಳನ್ನು ಕೊಡಬೇಕೆಂದು ತಂದಿದ್ದೇನೆ" . ಅನುಭವಿ ಅಣ್ಣನೆಂದರು "ನೀನು ಏನು ತಂದರೂ ಅವರು ತೆಗೆದುಕೊಳ್ಳಲ್ಲಪ್ಪಾ... ಯಾಕೆ ವೃಥಾ ಪರೀಕ್ಷೆ ಮಾಡ್ತೀಯಾ. ಶುದ್ಧ ಮನದ ಭಕ್ತಿಯೊಂದೇ ಅವರಿಗೆ ಬೇಕು". 

ಅಣ್ಣನ ಮಾತನ್ನು ಮಧ್ಯದಲ್ಲೇ ತುಂಡರಿಸಿದ ತಮ್ಮ ಹೀಗಂದರು. "ಅಣ್ಣಾ ಇಂತಹ ಬಾಳೆ ಹಣ್ಣು ಗುರುಗಳೇನು ಯಾರಾದರೂ ತೆಗೆದುಕೊಂಡೇ ತೀರುತ್ತಾರೆ. ಅದನ್ನು ನೋಡಿದರೇ ತಿನ್ನಬೇಕೆನಿಸುತ್ತೆ" ಎಂದರು ಗರ್ವದಿಂದ. 

ಇಬ್ಬರು ಬಹು ಮುಂಚೆ ಬೆಳಿಗ್ಗೆಗೆ ಗುರುನಾಥರ ಮನೆ ಸೇರಿದರು. ಅತಿಥಿಗಳಿಗೆ ಆದರೆ ಸತ್ಕಾರಗಳಾದವು. ಇನ್ನೂ ಅನೇಕ ಭಕ್ತರು ಬಂದು ಕುಳಿತರು. ಬಾಳೆ ಹಣ್ಣು ತಂದಿದ್ದ ಇವರು ಎದ್ದು ಅದನ್ನು ಗುರುಗಳಿಗೆ ಕೊಡಲು ಎದ್ದಾಗ, ಗುರುನಾಥರು ಸಂಜ್ಞೆ ಮಾಡುತ್ತಾ, "ಇರಲಿ ನಿಮ್ಮ ಹತ್ತಿರವೇ ಇರಲಿ, ನಾನು ಕೇಳುತ್ತೇನೆ" ಎಂದರು. 

ಏಳು ಗಂಟೆ, ಎಂಟು ಗಂಟೆ, ಒಂಬತ್ತೂವರೆಯೂ ಆಗಿಬಿಟ್ಟಿತು. ಆಗ ಗುರುನಾಥರು ಮನೆಯ ಮುಂದಿನಿಂದ ಹಳ್ಳಿಯ ಹುಡುಗರು ಶಾಲೆಯ ಕಡೆಗೆ ಹೋಗುತ್ತಿದ್ದರು. ಬಾಳೆ ಹಣ್ಣು ತಂದವರ ಕಡೆ ನೋಡಿ... "ಬನ್ನಿ ಬಾಳೆ ಹಣ್ಣು ತಿನ್ನಿ" ಎಂದು ಹೊರ ನಡೆದರು. ಬೀದಿಯಲ್ಲಿ ಸಾಗುತ್ತಿದ್ದ ಮಕ್ಕಳಿಗೆಲ್ಲಾ ಒಂದೊಂದು ಹಣ್ಣನ್ನು ಕೊಡಿಸಿದರು. 

ಅಷ್ಟು ಉತ್ತಮವಾದ ಬಾಳೆಹಣ್ಣನ್ನು ಕಂಡೇ ಇರದ ಮಕ್ಕಳ ಮುಖವರಳಿತು. ಬಹಳ ಸಂತಸದಿಂದ ಹಣ್ಣನ್ನು ತಿಂದ ಮಕ್ಕಳ ಮುಖದಲ್ಲಿ ಸಂತೃಪ್ತಿಯ, ಆನಂದದ ಭಾವ ಕಂಡಿತು. 

"ನೋಡಿ ನೋಡಿ ಆ ಮಕ್ಕಳು ಅದೆಷ್ಟು ಸಂತಸ ಪಡ್ತಿದ್ದಾವೆ. ಅಲ್ಲಿ ಭಗವಂತನ ದರ್ಶನವಾಗುತ್ತಿದೆ... ಆನಂದದ ದರ್ಶನವಾಗುತ್ತಿದೆ. ಅದು ಬಿಟ್ಟು ನನಗೆ ಕೊಟ್ಟರೆ ಏನು ಪ್ರಯೋಜನ... ಆ ಹಳ್ಳಿಯ ಬಳಲಿದ ಬಡ ಮಕ್ಕಳಿಗೆ ಇದರ ಅವಶ್ಯಕತೆ ಇತ್ತು" ಎನ್ನುತ್ತಾ ಒಳ ನೆಡೆದರವರು. ಬಾಳೆ ಹಣ್ಣು ತಂದವರ ಕೈ ಖಾಲಿಯಾಗಿತ್ತು. "ಎಂತಹವರೂ ಇದನ್ನು ತೆಗೆದುಕೊಳ್ಳಲೇಬೇಕು "ಎಂಬ ಮಾತು ಸೋತಿತ್ತು. ಹೀಗೆ ಪರಮಾತ್ಮನೆಂದರೆ ಸ್ವಸ್ಥ ಆನಂದ ಸ್ವರೂಪಿ. ಮನಸ್ಸು ಮಾಡಿದರೆ ಎಲ್ಲೂ ಆತನನ್ನು ಕಾಣಬಹುದೆಂಬ ಸರಳ ಮಾರ್ಗವನ್ನೇ ತೋರಿಸಿದ್ದರು. 

ನಮ್ಮ ತಪ್ಪನ್ನು ನವಿರಾಗಿ ಖಂಡಿಸಿ, ಮನ ನೋಯದಂತೆ ತಿದ್ದುತ್ತಿದ್ದ ಗುರುನಾಥರು, ಜಗತ್ತು ತಿದ್ದುವ ಮಹಾ ಗುರುವಾಗಿದ್ದರೆಂದರೆ ಅತಿಶಯೋಕ್ತಿ ಏನಲ್ಲ. 

ಬಾಳೆ ಹಣ್ಣು ನೀಡುವ ಸಂದರ್ಭ ಬಂದಾಗ "ಬಾಳನ್ನು ಹಣ್ಣು ಮಾಡಿ ಅದನ್ನು ಪರಮಾತ್ಮನಿಗೆ ಅರ್ಪಿಸಿ" ಎಂದು ಮಾರ್ಮಿಕವಾಗಿ ಗುರುನಾಥರು ನುಡಿಯುತ್ತಿದ್ದುದನ್ನಿಲ್ಲಿ ಸ್ಮರಿಸಬಹುದಾಗಿದೆ. 

ಸನ್ಮಾನ್ಯ ಓದುಗ ಮಿತ್ರರೇ, ಅನಂತ ಕೋಟಿ ಶಿಷ್ಯರುಗಳಲ್ಲಿ ಅನಂತಾನಂತ ಅನುಭವಗಳು ತುಂಬಿವೆ. ಅನಂತನೆಂದರೆ ಅಂತ್ಯವಿಲ್ಲದ್ದಲ್ಲವೇ. ಅಂತ್ಯವಾಗದ ಗುರುಲೀಲೆ ಹೀಗೆ ಮುಂದುವರಿಯಲಿ, ನಿಮ್ಮ ಸಹಯೋಗದಿಂದ.. ನಾಳೆ ಅದೇನು ಕರುಣಿಸುವರೋ ಬನ್ನಿ ನಾಳೆ ಇಂದಾಗಿಸಲು......,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

1 comment:

  1. Poojya venkatachala gurugalige nanna poojya namanagalu. Yellarigu nimma aashirvaada haagu rakshe sadaa doreyali. Sarve jano sukinobavantu.

    ReplyDelete