ಒಟ್ಟು ನೋಟಗಳು

Sunday, March 12, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 3


ಒಂದು ಲೋಟ ಹಾಲು ಕುಡಿದರೆ ಏಳು ತಲೆಮಾರು ನಾನು ಕಾಪಾಡಬೇಕಯ್ಯ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ನಮಗೂ ಅವರಿಗೂ ಅದಾವ ನಂಟೋ... ನಮಗಂತೂ ತಿಳೀತಿಲ್ಲ... ಅವಧೂತರು ಆಗಾಗ್ಗೆ ಸಖರಾಯಪಟ್ಟಣದಿಂದ ಇಲ್ಲಿಗೆ ಬರುತ್ತಿದ್ದರು.....ಮಂಡಿಯ ಅನೇಕ ಮೂಟೆಗಳನ್ನು ಮುಟ್ಟಿ.... ಗೌಡರೇ ಎಷ್ಟು ಲಾಭ ಬರುತ್ತೇ.... ನನಗೆಷ್ಟು ಕೊಡುತ್ತೀರಿ ಎಂದು ತಮಾಷೆಯ ಮಾತನಾಡಿ ಹೊರಟು ಬಿಡುತ್ತಿದ್ದರು. ಬಹಳ ವರ್ಷಗಳ ಪರಿಚಯವಿರುವುದರಿಂದ ವೆಂಕಟಾಚಲಯ್ಯನವರೇ ಎಂದು ಹೆಸರು ಹಿಡಿದೇ ಕರೆಯುತ್ತಿದ್ವಿ... ಎಲ್ಲರಂತೆ ಸಹಜವಾಗಿ ಇದ್ದ ಅವರ ಮಹಿಮೆ ಇಷ್ಟು ಅಪಾರವಾದುದೆಂದು ಊಹಿಸುವುದೂ ನಮಗಾಗಿರಲಿಲ್ಲ. ಆದರೆ ಅವರು ಬಂದು ಒಂದರ್ಧ ಗಂಟೆ ಇಲ್ಲಿ ಇದ್ದು ಹೋದರೆಂದರೆ ನಾಮಗದೇನೋ ಶಾಂತಿ ಸಿಕ್ಕಂತಾಗುತ್ತಿತ್ತು ಎನ್ನುತ್ತಾರೆ ಶಿವಮೊಗ್ಗದ ಮಂಡಿಯ ವರ್ತಕರೊಬ್ಬರು. 

ಒಮ್ಮೆ ಈ ವರ್ತಕರ ಮಂಡಿಗೆ ಬಂದು, ಗುರುನಾಥರು ಸುತ್ತ ನೋಡಿ, ಅಲ್ಲಿ ಕುಳಿತಿದ್ದ ಒಬ್ಬ ಗುಮಾಸ್ತರ ಕಡೆಗೆ ನೋಡುತ್ತಾ ಇವರು ಈ ತಿಂಗಳ ಇಪ್ಪತ್ತೆಂಟರ ನಂತರ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಬಿಟ್ಟರಂತೆ. ಸ್ವಲ್ಪ ಆ ಗುಮಾಸ್ತರಿಂದ ಕಿರುಕುಳವಾದರೂ ಮಂಡಿಯ ಸಾಹುಕಾರರು ಇರಲಿ ಬಿಡಿ, ಹೋಗಲಿ ಬಿಡಿ.... ಎಂದು ಸುಮ್ಮನಿದ್ದರು. ಗುರುನಾಥರ ಮಾತನ್ನು ಎಲ್ಲ ಕೇಳಿಸಿಕೊಂಡರೂ, ಅಂತಹ ಆದ್ಯತೆ, ಆ ಮಾತಿಗೆ ಸಹ ಕಾರಣ ನೀಡಿರಲಿಲ್ಲ. ಆದರೆ ಗುರುನಾಥರು ಹೇಳಿದ ದಿನವೇ ಆ ಗುಮಾಸ್ತರು ನಿರ್ನಿಮಿತ್ತ ಜಗಳವಾಡಿಕೊಂಡು ಕೆಲಸ ಬಿಟ್ಟು ಹೋಗಿದ್ದರು. 

ಮತ್ತೊಂದು ದಿನ ಇದ್ದಕ್ಕಿದ್ದಂತೆ ಗುರುನಾಥರು, ತಾವು ನೋಡದೇ ಇರುವ ತೋಟದ ಬಗ್ಗೆ ಹೇಳುತ್ತಾ "ಅಲ್ಲೊಂದು ಕಲ್ಲು ಬಂಡೆ ಇದೆ. ಅದರ ಬಳಿ ಇನ್ನೊಂದಾರು ತಿಂಗಳು ಸುಳಿಯಬೇಡಿ. ಅಪಾಯವಿದೆ" ಎಂದು ಬಿಟ್ಟರು ಮಂಡಿಯ ಸಾಹುಕಾರರ ಮಗನಿಗೆ. ಅದನ್ನವರು ಪಾಲಿಸಿ ಸುರಕ್ಷಿತವಾಗಿದ್ದು ಈಗಲೂ ಗುರುನಾಥರನ್ನು ನೆನೆಯುತ್ತಾರೆ. 

ದೇವಾನುದೇವತೆಗಳಿಗೆ ಪೂಜೆ, ಪುನಸ್ಕಾರ, ಸತ್ಕಾರ ನೀಡಿ, ನಮ್ಮ ಬೇಡಿಕೆ ಸಲ್ಲಿಸೆಂದು ಬೇಡಿಕೊಂಡರೆ... ಭಕ್ತ ಪ್ರೇಮಿಯಾದ ಗುರುನಾಥರು ಹೀಗೆ ಪದೇ ಪದೇ ಬಂದು ಈ ಭಕ್ತರು ಬೇಡದಿದ್ದರೂ ಅವರ ಹಿತ ಚಿಂತನೆ ಸಾಧಿಸುತ್ತಿದ್ದುದನ್ನು ಕಂಡಾಗ ಗುರುನಾಥರ ಮಾತೊಂದು ನೆನಪಿಗೆ ಬರುತ್ತದೆ..... "ಇವನ ಮನೆಯ ಒಂದು ಲೋಟಾ ಹಾಲು ಕುಡಿದರೆ ಏಳು ತಲೆಮಾರುಗಳು ಇವನನ್ನು ರಕ್ಷಿಸುವ ಹೊಣೆ ನನ್ನ ಮೇಲಿರುತ್ತದೆ".

ಎಷ್ಟು ಸತ್ಯ, ಗುರುನಾಥರ ಆ ನುಡಿಗಳು. ಈ ಮಂಡಿ ಸಾಹುಕಾರರ ಅದಾವ ಹಿರಿಯರು ಭಕ್ತಿಯಿಂದ ಗುರುನಾಥರಿಗೆ ಹಾಲು ಅರ್ಪಿಸಿದ್ದರೋ..... ಹಿರಿಯರ ಪುಣ್ಯ..... ಇವರನ್ನು ಇಂದೂ ಕಾಪಾಡುತ್ತಿದೆ. ಇಂದೂ ಆ ಮಂಡಿಯ ಮಾಲೀಕರು ನಮ್ಮ ಈ ಸ್ಥಿತಿಗೆ ಗುರುನಾಥರೇ ಕಾರಣರು ಎಂದು ವಿನಮ್ರವಾಗಿ ಸ್ಮರಿಸುತ್ತಾರೆ.

ಗೌಡರೇ ನಮ್ಮ ಶಿಷ್ಯನ ಜವಾಬ್ದಾರಿ ನಿಮ್ಮದು 

ತರೀಕೆರೆಯ ಒಂದು ಮನೆಗೆ ಗುರುನಾಥರು ಪದೇ ಪದೇ ಬರುತ್ತಿದ್ದರು. ಒಮ್ಮೆ ಆ ಮನೆಯ ಒಬ್ಬರ ಮಗನಿಗೆ ಜ್ವರ, ಗಂಟಲು ಬೇನೆ ಬಂದು, ಉಳಿಯುವುದೇ ದುಸ್ತರವಾಯಿತು. ಮೆಗ್ಗಾನ್ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಆ ಖಾಯಿಲೆಯ ಔಷಧದ ಇಂಜೆಕ್ಷನ್ ಬೆಂಗಳೂರಿನಿಂದ, ಆ ದಿನಗಳಲ್ಲಿ ತರಿಸಬೇಕಿತ್ತು. ಸಾಮಾನ್ಯರಿಗದು ಕಷ್ಟ ಸಾಧ್ಯವಾಗಿತ್ತು.

ಇದ್ದಕ್ಕಿದ್ದಂತೆ ಗುರುನಾಥರು ಮೆಗ್ಗಾನ್ ಆಸ್ಪತ್ರೆಯ ಒಂದು ಕೊಠಡಿಗೆ ಬಂದರು. ಅಲ್ಲಿ ಮೂರು ಜನ ರೋಗಿಗಳಿದ್ದರು. ಒಬ್ಬ ತರೀಕೆರೆಯ ಭಕ್ತರ ಮಗ, ಮತ್ತಿಬ್ಬರು ಶಿವಮೊಗ್ಗದ ಮಂಡಿಯ ಓನರ್ ಹಾಗೂ ಅವರ ಪತ್ನಿ.

ಗುರುನಾಥರು ಬಂದವರೇ ಏನಾಗುವುದಿಲ್ಲ ಹೆದರಬೇಡಿ ಒಳ್ಳೆಯದಾಗುತ್ತದೆ ಎಂದು ಆಶೀರ್ವದಿಸಿ ಜೊತೆಗೊಂದು ಜವಾಬ್ದಾರಿಯನ್ನೂ ವಹಿಸಿದರು. "ನೀವು ಬೆಂಗಳೂರಿನಿಂದ ಈ ದುಬಾರಿ ಇಂಜೆಕ್ಷನ್ ತರಿಸಿ, ಅಲ್ಲಿರುವ ಆ ಹುಡುಗನಿಗೂ ಹಾಕಿಸಿ, ನಿಮಗೊಂದು ಜವಾಬ್ದಾರಿ ಹೊರಿಸುತ್ತಿದ್ದೇನೆ" ಎಂದರು.

ತರೀಕೆರೆಯ ಪೇಶೆಂಟ್, ಡಾಕ್ಟರ್ ಏನು ಬರೆದು ಕೊಡುತ್ತಾರೋ ಎಂದು ಕಾಯುತ್ತಿದ್ದರು. ಆದರೆ ಗುರುನಾಥರು ಆಗಲೇ ಚಿಕಿತ್ಸೆ ಮಾಡಿಸಿ ಬಿಟ್ಟಿದ್ದರು. ವಿಷಯ ತಿಳಿದು ಅವರು ಗೌಡರ ಬಳಿ "ನಾವೆಷ್ಟು ಹಣ ಕೊಡಬೇಕು" ಎಂದು ಕೇಳಿದಾಗ.... ವೆಂಕಟಾಚಲಯ್ಯನವರನ್ನು ಕೇಳಿ ಎಂದಂದು ಸುಮ್ಮನಾದರು.

ಹೇಗಿದೆ ಗುರುನಾಥರ ಕೃಪೆ? ತನ್ನವರ ಒಂದು ನಿಶ್ಕಲ್ಮಷ ಪ್ರಾರ್ಥನೆ ಗುರುನಾಥರು ಏನೆಲ್ಲಾ ಮಾಡಿಬಿಟ್ಟರಲ್ಲಾ.. ಓದುಗ ಮಿತ್ರರೇ ಇನ್ನೂ ಅಪಾರವಿದೆ ಗುರುಚರಿತ್ರೆ. ಆದಿ ಅಂತ್ಯವೆಲ್ಲಿದೆ? ನಾಳಿನ ಸತ್ಸಂಗಕ್ಕೆ ಸಿದ್ಧರಾಗಿರಿ....


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।



For more info visit :  http://srivenkatachalaavadhoota.blogspot.in/

1 comment:

  1. Poojya gurugalaada venkatachala Avara Divya charanamruta galige nanna saashtaanga pranaamagalu. Poojyare yellarigu nimma aashirvaada haagu rakshe sadaa doreyali. Sarve jano sukinobavantu.

    ReplyDelete