ಒಟ್ಟು ನೋಟಗಳು

Tuesday, March 28, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 19

 

ನಿನ್ನ ಕೆಲಸ ನಿನಗೆ ದೇವರು 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುನಾಥರ ಭಕ್ತರೊಬ್ಬರು ನಿರಂತರ ಗುರು ಗುಣಗಾನ ಮಾಡುತ್ತಾ ಒಂದು ಮದುವೆಗಾಗಿ ಚಿಕ್ಕಮಗಳೂರಿನತ್ತ ಹೊರಟಿದ್ದರು. ಇವರ ಮಾತುಗಳನ್ನು ಕೇಳಿದ ಆ ವಾಹನದಲ್ಲಿ ಇದ್ದವರಿಗೆ ಗುರುನಾಥರನ್ನು ನೋಡುವ ಪ್ರಬಲ ಇಚ್ಛೆಯಾಯಿತು. ಮದುವೆಯ ಮುಹೂರ್ತ ಮುಗಿಸಿ, ಭರ್ಜರಿ ಊಟ ಮಾಡಿಕೊಂಡು ಗುರುದರ್ಶನಕ್ಕಾಗಿ ಎಲ್ಲರೂ ಸಖರಾಯಪಟ್ಟಣಕ್ಕೆ ಸಾಗಿದರು. ಗುರುನಾಥರ ಮನೆಯಲ್ಲೂ ಒಂದು ಪೂಜೆ ನಡೆದು ಬಂದವರಿಗೆಲ್ಲಾ ಊಟ ಹಾಕುವ ಸಿದ್ಧತೆ ನಡೆದಿತ್ತು. ಗುರುನಾಥರು ಬಂದವರನ್ನೆಲ್ಲಾ ಪ್ರಸಾದಕ್ಕೆ ಬನ್ನಿರೆಂದರೆ, ಆತ ತಾನೇ ಉಂಡ ಅವರು, ಬಹುಶಃ ಗುರುಪ್ರಸಾದದ ಮಹಿಮೆಯ ಅರಿವಿಲ್ಲದೆಯೇ - "ಇಲ್ಲ ಎಲ್ಲಾ ಆಗಿದೆ" ಎಂದು ಬಿಟ್ಟರು. ಗುರುನಾಥರು ಈ ಭಕ್ತರನ್ನು ವಿಶೇಷವಾಗಿ ಎಂಬಂತೆ "ಏನೋ ನೀನು?" ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. "ಗುರುವೇ ನೀವು ಹೇಳಿದಂತೆ" ಎಂದು ಅವರು ತೋರಿಸಿದ ಜಾಗದಲ್ಲಿ ಕುಳಿತು ಬಿಟ್ಟರು. ಎಲ್ಲ ಮಡಿಯುಟ್ಟು ಕುಳಿತವರ ಪಂಕ್ತಿಯಲ್ಲಿ ಪ್ಯಾಂಟು ಧರಿಸಿದ ಇವರನ್ನೂ ಕೂರಿಸಿದಾಗ ಯಾರ್ಯಾರಿಗೆ ಏನೇನು ಇರಿಸು ಮುರಿಸಾಯಿತೋ? ಆ ಭಕ್ತರ ಜೊತೆಗೆ ಬಂದವರು "ಇವನೇನು ಮನುಷ್ಯನೋ ಬಕಾಸುರನೋ? ಈಗ ಹೊಟ್ಟೆ ಬಿರಿಯೇ ಉಂಡು ಮತ್ತೆ ಗುರುನಾಥರು ಹಾಕಿಸಿದ, ಎರಡೆರಡು ಸಾಯಿ ಬಡಿಸಿದ ಎಲ್ಲವನ್ನೂ ತಿನ್ನುತ್ತಾ ಇದ್ದಾನಲ್ಲ" ಎಂದು ನೋಡಿರಬಹುದು. 

ಗುರುನಾಥರು ಅದೇ ಪ್ರೀತಿಯಿಂದ ಎಲ್ಲರಿಗೂ ಬಡಿಸುವುದರ ಜೊತೆಗೆ, ಬಡಿಸುವವರು ಅವರ ಬಳಿ ಬಂದಾಗ ಎರಡೆರಡು ಸಾರಿ ನಿಂತು ಹಾಕಿಸುತ್ತಿದ್ದರು. ಎಲೆಯ ಮೇಲೆ ಬಂದಿದ್ದನ್ನೆಲ್ಲಾ ಸ್ವೀಕರಿಸುತ್ತಾ "ಗುರುವೇ ನೀನೀಡಿದ ಪ್ರಸಾದ" ವೆಂದು ಭಾವಿಸಿ ಆ ಭಕ್ತರು ತಿಂದೇ ಬಿಟ್ಟರು. ಏನೂ ಆಗಲಿಲ್ಲ. ಬೇರೆಲ್ಲಾದರೂ ಹೀಗೆ ತಿನ್ನಲೂ ಸಾಧ್ಯವಿರಲಿಲ್ಲ. ತಿಂದರೆ ಅರಗಿಸಿಕೊಳ್ಳುವುದೂ ಕಷ್ಟ. ಗುರುಕೃಪೆ ಎಲ್ಲವನ್ನೂ ಅರಗಿಸಿತ್ತು. 

ಹೊರಡುವಾಗ ಒಂದು ಚೀಲಕ್ಕೆ ವಿಳ್ಳೇದೆಲೆ, ಅಡಿಕೆ, ಹೂವು ಪ್ರಸಾದ, ಜಿಲೇಬಿ, ಮಾಡಿದ ಇತರ ಭಕ್ಷ್ಯಗಳನ್ನೆಲ್ಲಾ ಒಂದು ರೀತಿ ತುಂಬಿಸಿ ಕಳಿಸಿದರು. ಅದನ್ನೂ ಇವರು ಅವರ ಮಿತ್ರರೊಬ್ಬರಿಗೆ ನೀಡಿದರು. ಗುರುನಾಥರು ಅವರ ಮನೆಗೆ ಆಗಾಗ ಬರತೊಡಗಿದರು. ಒಮ್ಮೆ ಗುರುನಾಥರು ಅವರ ಮನೆಗೆ ಬಂದಾಗ, ಈ ಭಕ್ತರು ಕೆಲಸದ ಮೇಲೆ ಹೋಗಿದ್ದರು. ತಮಗೆ ಗುರುನಾಥರನ್ನು ಪರಿಚಯಿಸಿದ ವ್ಯಕ್ತಿಗೆ ಫೋನು ಮಾಡಿ ಹೇಳಬೇಕೆಂದು ಅದೆಷ್ಟು ಸಾರಿ ಪ್ರಯತ್ನಿಸಿದರೂ ಗುರುನಾಥರು ಬಿಡಲಿಲ್ಲವಂತೆ. 

ಏನು ಕಾರಣವಿರಬಹುದು? ಈ ಬಕಾಸುರನಂತೆ ಉಂಡ ಭಕ್ತನ ಮೇಲೆ ಮುನಿಸೋ? ಏಕೆ ಇವರನ್ನು ಕರೆಸಲು ಬಿಡಲಿಲ್ಲ? ಗುರುವಿನ ಎಲ್ಲ ಕಾರ್ಯಗಳ ಹಿಂದೆ ಶಿಷ್ಯನ ಹಿತ ಚಿಂತನೆಯೇ ಮೂಲವಾಗಿರುತ್ತದೆ ಎಂಬುದನ್ನು ಅರಿಯುವುದು ಕಷ್ಟ. 

ಆ ಗುರುಭಕ್ತರು ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಸಾಮಾನ್ಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಅದೊಂದು ನಿಯತಕಾಲಿಕ ಪತ್ರಿಕೆಯನ್ನು ಮುದ್ರಿಸುವ ಮುದ್ರಣಾಲಯ. ಅದರ ಮ್ಯಾನೇಜರ್ ಅವರೇ ಮುಷ್ಕರದಲ್ಲಿ ಶಾಮೀಲಾಗಿ ಅಂದು ಪತ್ರಿಕೆ ಮುದ್ರಣವಾಗದಂತಹ ಪರಿಸ್ಥಿತಿ ನಿರ್ಮಿಸಿದ್ದರು. 

ಇಂತಹ ಪರಿಸ್ಥಿತಿಯಲ್ಲಿದ್ದ ಗುರುನಾಥರ ಶಿಷ್ಯರಿಗೆ, ಗುರುನಾಥರು ಬಂದಿರುವ ಸುದ್ಧಿ ತಿಳಿದರೆ ಎಲ್ಲ ಬಿಟ್ಟು ಓಡಿ ಬರುತ್ತಿದ್ದುದು ನೂರಕ್ಕೆ ನೂರು ಸತ್ಯ. ಇದನ್ನೂ ಅಲ್ಲಿ ಕುಳಿತೇ ಗುರುನಾಥರು ಅರಿತಿದ್ದರು. 

ತಮ್ಮ ಜವಾಬ್ದಾರಿಯನ್ನು ಅರಿತ ಗುರುನಾಥರ ಶಿಷ್ಯರು, ಎಲ್ಲ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಪತ್ರಿಕೆಯ ಮುದ್ರಣ ನಿಗದಿತ ಅವಧಿಯಲ್ಲಾಗಿ ಪತ್ರಿಕೆ ಹೊರಬರುವಂತೆ ಅಲ್ಲಿದ್ದು ಶ್ರಮಿಸಿದರು. ಅಣ್ಣ ನೀಡುವ ಕಾಯಕಕ್ಕೆ ಗೌರವ ತಂದರು. 

ಮುಂದೆ ಇವರು ತಮ ಹುದ್ದೆಯಿಂದ ಬಡ್ತಿ ಹೊಂದಿ, ಆ ಜಾಗದ ಉನ್ನತ ಜವಾಬ್ದಾರಿಯ ಹುದ್ದೆ ಪಡೆದರು. ಈ ಹಿನ್ನೆಲೆಯಲ್ಲಿ ಗುರುನಾಥರ ಕೃಪೆಯೇ ಮೂಲ ಎನ್ನುವುದು ಇವರ ಭಾವನೆ. ಶಿಷ್ಯನ ಬಡ್ತಿ ಗುರುವಿಗೆ ಆನಂದ ತರದೇ?

ಅಂದು ಗುರುನಾಥರು ಬಂದಿರುವ ಒಂದು ಸಣ್ಣ ಸುದ್ದಿ ತಿಳಿದಿದ್ದರೆ, ಜವಾಬ್ದಾರಿಯನ್ನು ಬದಿಗೊತ್ತಿ ಇವರು ಓಡಿ ಬಿಡುತ್ತಿದ್ದರು. ತಮ್ಮ ಶಿಷ್ಯರು ಕರ್ತವ್ಯ ಪರಾಯಣರಾಗಿರಬೇಕೇ ಹೊರತು, ಕರ್ತವ್ಯ ಚ್ಯುತಿ ಮಾಡುವವರಾಗಿರಬಾರದು ಎಂಬುದೇ ಗುರುನಾಥರ ಭಾವ. "ಕರ್ಮಣ್ಯೇವಾಧಿಕಾರಸ್ಥೆ ಮಾ ಫಲೇಷು ಕದಾಚನ" ಎಂಬ ಗೀತೋಕ್ತಿಯಂತೆ ನಿಷ್ಕಾಮ ಕರ್ಮಾ ನಡೆದಾಗ ಗುರುನಾಥರು ಫಲ ದೊರಕಿಸದೆ ಇರುತ್ತಾರೆಯೇ? 

ಗುರುವಿನ ಮರ್ಮವರಿಯುವುದು ಅಸಾಧ್ಯ. ಎಲ್ಲ ನಡೆಯುವುದು ಅವರ ಇಚ್ಛೆಯಂತೆ, ನಾನು ಅವರ ಕೈನ ಸೂತ್ರದ ಗೊಂಬೆಗಳೆಂದರೆ ಯಾವುದೂ ಕಠಿಣವಾಗದು. ಮತ್ತೆ ಬನ್ನಿ ಓದುಗ ಮಿತ್ರರೇ.. ನಾಳಿನ ನಿತ್ಯ ಸತ್ಸಂಗಕ್ಕಾಗಿ... ಗುರುನಾಥರ ಕೃಪೆಗಾಗಿ....,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

1 comment:

  1. Poojya venkatachala swamy Avara paadagalige nanna bhakti poorvaka namanagalu. Swamy yellarigu manashanti honduvante asheervadisi Guruvarya. Sarve jano sukinobavantu.

    ReplyDelete