ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 17
ಅಂತರಂಗದ ಭಾವಕ್ಕೆ ಬಂದ ಉತ್ತರಗಳು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರ ಬಳಿ ಬರುತ್ತಿದ್ದ ಭಕ್ತರ ಸಂಖ್ಯೆ ಅಪಾರವಾಗಿದ್ದಂತೆ ವಿಭಿನ್ನ ರೀತಿಯ ಗುರುಭಕ್ತರುಗಳೂ ಇರುತ್ತಿದ್ದುದನ್ನೂ ಕಾಣಬಹುದು. ಬಂದವರ ಭಕ್ತಿ, ಭಾವ, ಅವರ ಪರಿಶುದ್ಧತೆ, ಪರಿಪಕ್ವತೆಗೆ ಅನುಗುಣವಾಗಿ ಗುರುನಾಥರು ಕಂಡುಬರುತ್ತಿದ್ದರು.
"ಅವರವರ ಭಕುತಿಗೆ ಅವರವರ ಭಾವಕ್ಕೆ ಅವರವರ ತೆರನಾಗಿ ಇರುತಿಹನು ಶಿವಯೋಗಿ" ಎಂಬ ಮಾತನ್ನು ಗುರುನಾಥರಿಗಾಗಿಯೇ ರಚಿಸಿದಂತಿದೆ. ಅವರೊಂದು ಪರಿಶುಭ್ರ ಕನ್ನಡಿಯಾಗಿದ್ದರೆಂಬುದು ಅನೇಕರ ಅಭಿಪ್ರಾಯ.
ಅವರ ಬಳಿ ಸ್ವಾಮಿ ರಾಮಕೃಷ್ಣರ ಬಳಿ ಬಂದ ನರೇಂದ್ರನಂತಹ ಶಿಷ್ಯರೂ ಬರುತ್ತಿದ್ದರು. ಅವರು ಹೇಳಿದುದೇ ವೇದವಾಕ್ಯವೆಂದು ನಂಬಿ ಸರ್ವ ಜಂಜಾಟಗಳಿಂದ ಪಾರಾಗುವವರೂ ಬರುತ್ತಿದ್ದರು.
ಗುರುನಾಥರು ಮಾತ್ರ, ಎಲ್ಲರ ಮನ ಓದುವ ಜಾದೂಗಾರರಾಗಿದ್ದರು. ಆ ಮನದಲ್ಲಿ ಕುಹಕವಿಲ್ಲದ ಕೇವಲ ಪರಿಶುದ್ಧತೆ ಭಾವ ತುಂಬಿದೆ ಎಂಬುದರ ಅರಿವಾದಾಗ - ಶಿಷ್ಯನ ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಸಾಂದರ್ಭಿಕವೆಂಬಂತೆ - ಯಾರಿಗೋ ಹೇಳಿದಂತೆ ಉತ್ತರಗಳನ್ನು ನೀಡಿ ಸಂಶಯ ದೂರವಾಗಿಸುತ್ತಿದ್ದರು.
ಗುರುನಾಥರು ಒಮ್ಮೆ ಅವರಿಗಿಂತ ಚಿಕ್ಕವರಾದ ಅವರ ಬಂಧುಗಳ ಕಾಲು ಒತ್ತುತ್ತಾ ಸೇವೆ ಮಾಡುತ್ತಿರುವುದನ್ನು ಈ ಭಕ್ತರು ಕಂಡು - ಗುರುನಾಥರೇಕೆ ಈ ರೀತಿ ಸೇವೆ ಮಾಡುತ್ತಾರೆಂಬ ಸಂಶಯ ಮನದಲ್ಲಿ ಮೂಡಿತು. ಆದರೂ ಗುರುನಾಥರನ್ನು ಕೇಳುವ ದ್ರಾಷ್ಟ್ಯ ತೋರಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಗುರುನಾಥರು "ಭೂಮಿಗೆ ತಂದ ಮೇಲೆ ನಮ್ಮದು ಕೆಲವೊಂದು ಜವಾಬ್ದಾರಿಗಳು ಇರುತ್ತವಯ್ಯಾ, ಸೇವೆಯಾಗಿರಬಹುದು, ಸಲಹುವುದಾಗಿರಬಹುದು ಜವಾಬ್ದಾರಿಯಿಂದ ಕೆಲಸ ಮಾಡದೆ ಇದ್ದರೆ ಬಾಕಿ ಉಳಿಸಿಕೊಳ್ಳಬೇಕಾಗುತ್ತದೆ" ಎಂದುಬಿಟ್ಟರು.
ಮತ್ತೊಮ್ಮೆ ಗುರುನಾಥರು, ಈ ರೀತಿ ಅವಿರತ ಬರುವ ಭಕ್ತರ ಬಾಧೆಗಳನ್ನು ಸಂಕಷ್ಟವನ್ನೂ ದೂರ ಮಾಡುತ್ತಾರೆ. ಬಂದವರಿಗೆಲ್ಲಾ ಒಂದೊಂದು ಸುಲಭ ಮಾರ್ಗ ತೋರಿಸಿ ಉದ್ಧರಿಸುತ್ತಾರೆ. ಆದರೆ ತಮ್ಮವರನ್ನೇಕೆ, ತಮ್ಮ ಶಕ್ತಿ ಬಳಸಿ ಉದ್ಧರಿಸಿ ಸುಖ ಮುಖವಾಗಿಸಬಾರದು? ಎಂಬ ಚಿಕಿತ್ಸಕ ಪ್ರಶ್ನೆ ಆ ಭಕ್ತರಲ್ಲಿ ಮೂಡಿತು.
ಕೆಲ ಕ್ಷಣದಲ್ಲಿ ಗುರುನಾಥರ ಬಾಯಿಂದ ಬಂದ ಮಾತುಗಳೆಂದರೆ "ಅದೇನು ಮಹಾ ಅಲ್ಲ. ನನ್ನ ಬಳಿ ಬರುವ ಭಕ್ತರು ನಾನಿನ್ನು ಕಷ್ಟ ಸಹಿಸಲಾರೆ. ನೀನೆ ಗತಿ ಎಂದು ಬರುತ್ತಾರೆ, ಕರ್ಮಗಳನ್ನು ಮುಂದು ಹಾಕುವ, ನಾನೇ ಹೊರುವ ಮೂಲಕ ಅವರನ್ನು - ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಆದರೆ, ನಮ್ಮ ಸಮಸ್ಯೆಗಳೇ ಬೇರೆ ಯಾರೇ ಆಗಲಿ ಅವರವರ ಪ್ರಾರಬ್ಧಗಳನ್ನು, ಕರ್ಮವನ್ನು ಅನುಭವಿಸಿಯೇ ಸವೆಸಬೇಕು. ಅದನ್ನು ಮುಂದಕ್ಕೆ ಹಾಕಿದಷ್ಟೂ ಚಕ್ರಬಡ್ಡಿ, ಸುಸ್ತಿ ಬಡ್ಡಿಯ ಸಮೇತ ತೀರಿಸಬೇಕಾಗುತ್ತದೆ. ಅದಕ್ಕಾಗಿ ಸುಮ್ಮನಿದ್ದೇನೆ. ಎಲ್ಲ ಸವೆದಾಗ ಪ್ರಕಾಶ ಪ್ರಕಟವಾಗುತ್ತಯ್ಯಾ: ಎಂದು ಮಾರ್ಮಿಕವಾಗಿ ನುಡಿದರಂತೆ.
ಮತ್ತೊಂದು ಸಾರಿ ಅರ್ಹತೆಯಿಲ್ಲದವರು, ದೊಡ್ಡ ಹೆಸರಿನಿಂದ ಗುರುನಾಥರ ಮನೆ ಬಾಗಿಲಿಗೆ ಬಂದರು. ದೊಡ್ಡ ಪೀಠಾಧಿಪತಿಗಳು - ಕೂಡಲೇ ಗುರುನಾಥರು ಅವರನ್ನೂ ಸ್ವಾಗತಿಸಿ, ಸತ್ಕಾರ ಮಾಡಿ ನಮಿಸಿದರು. ಗೌರವ ತೋರಿದರು. ಇದನ್ನೆಲ್ಲಾ ನೋಡುತ್ತಿದ್ದ ಶಿಷ್ಯರ ಮನದಲ್ಲಿ, "ಅರ್ಹತೆ - ಪರಿಶುದ್ಧತೆ ಇಲ್ಲದವರಿಗೆ ನೇರವಾಗಿ, ಮುಖ ಮೋರೆ ನೋಡದೆ ಅಂದು ಬಿಡುವ ಗುರುನಾಥರು - ಹೀಗೇಕೆ ವರ್ತಿಸಿದರು. ಅದೂ ಅಲ್ಲದೆ ಒಳಗೆ ಕರೆದೊಯ್ದು ಅಂತರಂಗದ ಮಾತುಕತೆಗೂ ಅವಕಾಶ ಮಾಡಿಕೊಟ್ಟರಲ್ಲ" ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿದವು.
ಸ್ವಲ್ಪ ಹೊತ್ತಿನಲ್ಲಿ ಗುರುನಾಥರೆಂದರು. "ಅಂತರಂಗದಲ್ಲಿ ಸಂಭಾಷಣೆ, ಆದರ, ಗೌರವಾಗಳೇನೂ ನಡಿಯಲಿಲ್ಲಯ್ಯಾ. ನಾನು ಬಾಗಿಲು ಹಾಕಿ ಹಿಂತಿರುಗುವುದರಲ್ಲಿ ಅವರು ನನ್ನ ಕಾಲು ಹಿಡಿದಿದ್ದರು ಅಷ್ಟೇ. ಶಿಷ್ಟಾಚಾರವನ್ನು ಮೀರದೆ ಮನೆಗೆ ಬಂದವರನ್ನು ಆದರಿಸಿ ಸತ್ಕರಿಸುವುದು ನಮ್ಮ ಧರ್ಮವಲ್ಲವೆನಯ್ಯಾ" ಎನ್ನುತ್ತಾ ಒಬ್ಬ ಸಂಸಾರಿಯ ಜೀವನ ಧರ್ಮವೇನೆಂಬುದನ್ನು ಸರಳವಾಗಿ ತೋರಿಸಿದ್ದರು.
ಒಮ್ಮೆ ಈ ಭಕ್ತರು ಬೇರೊಬ್ಬರ ಸಹವಾಸ ಮಾಡುವುದರಲ್ಲಿ ನಿರತರಾಗಿದ್ದರು. ಆದರೂ ಮನಸ್ಸಿನಲ್ಲಿ ಇದರ ಪರಿಣಾಮವೇನಾಗಬಹುದು ಎಂಬ ಚಿಂತೆ ಇತ್ತು. ಶಿಷ್ಯರ ಮನದ ಮಾತನ್ನರಿತ ಗುರು "ನೋಡಯ್ಯಾ, ಆ ಸಹವಾಸ ಖಂಡಿತಾ ಬೇಡ. ನನಗೆ ಕೊಡಲಿ, ಸೌದೆ, ಬೆಂಕಿ ಕಂಡು ಬರುತ್ತಿದೆ. ದೂರವಿದ್ದಷ್ಟೂ ನಿನ್ನ ಸೌಖ್ಯವಿದೆಯಯ್ಯಾ" ಎಂದುಬಿಟ್ಟರು. ಶಿಷ್ಯರ ಗ್ರಹಚಾರ ಸರಿ ಇರಲಿಲ್ಲವೋ, ಯಾರದೋ ಋಣ ತೀರಿಸಬೇಕಿತ್ತೋ, ಅಂತೂ ಆ ಸಹವಾಸದಿಂದ ಲಕ್ಷಾಂತರಗಳನ್ನು ಕಳೆದುಕೊಂಡಿದ್ದು ಅಲ್ಲದೆ, ಸಾಕಷ್ಟು ಮಾನಸಿಕ, ದೈಹಿಕ ನೋವುಗಳನ್ನೂ ಅನುಭವಿಸಿ, ಮತ್ತೆ ಗುರುನಾಥರ ಪಾದ ಹಿಡಿದರು.
ಒಮ್ಮೆ ಎಡವಿದ ಮೇಲಾದರೂ ಬುದ್ಧಿ ಬಂದಿತು ಎಂಬಂತೆ, "ಗುರುನಾಥ ನೀನೇ ಗತಿ, ನೀನೇ ಮತಿ, ನೀನೇ ಸ್ವಾಮಿ" ಎಂದು ಹಾಡುತ್ತಾ ಅವರು ನಿಶ್ಚಿಂತರಾಗಿದ್ದಾರೆ. ಗುರುನಾಥರ ಒಂದೂ ಭಾವಚಿತ್ರವೂ ಅವರ ಬಳಿ ಇಲ್ಲ. ಆದರೆ ಹೃದಯದಲ್ಲಿ ಗುರುನಾಥರ ಭದ್ರ ನೆಲೆಯನ್ನವರು ಉಳಿಸಿಕೊಂಡಿದ್ದಾರೆ. "ಭಾವಚಿತ್ರ ಹಾಕಿಕೊಂಡು ನಾವಿಂಥವರ ಶಿಷ್ಯರೆಂದು ಜಗಜ್ಜಾಹೀರಾತು ಮಾಡಿಕೊಳ್ಳಬೇಕೆ?" ಎಂದು ಪ್ರಶ್ನಿಸುತ್ತಾರೆ. "ಲೋಕೋಭಿನ್ನರುಚಿ" ಎಂಬ ಮಾತಿದೆ - ಎಲ್ಲ ಪ್ರಶ್ನೆಗೆ ಅವರೇ ಉತ್ತರಿಸುತ್ತಾರೆ.
ಮಿತ್ರರೇ, ನಾಳಿನ ಸಂಚಿಕೆಗೆ ನಮ್ಮೊಂದಿಗಿರಿ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
Parama poojya venkatachala avadootarige nanna bhakti poorvaka namanagalu. Sarvarannu uddarisi ee kantaka dinda mukthi kottu manashanti honduvante asheervadisi. Sarve jano sukinobavantu.
ReplyDelete