ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 6
ಅವನಿರುವಾಗ ಇವರಿಗೇಕೆ ಚಿಂತೆ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೃಂಗೇರಿಗೂ ಗುರುನಾಥರಿಗೂ ಅದೇನೋ ಜನುಮ ಜನುಮದ ನಂಟು. ಈ ನಂಟನ್ನು ಬಂದ ಗುರು ಬಾಂಧವರಿಗೂ ಅಂಟಿಸಿ, ಜನುಮ ಜನುಮದ ಪಾಪ ತೊಳೆವ ಗುರುನಾಥರ ರೀತಿ ಯೋಚನೆಗೆ ನಿಲುಕದ್ದು. ಜೊತೆಗೆ ಏನಿದ್ದರೂ ಗುರು ಮಠಗಳಿಗೆ ಅರ್ಪಿಸಿ ತಾವು ಪಡೆದಂತೆ ಸಂಭ್ರಮಿಸುವುದು ಗುರುನಾಥರ ಒಂದು ವೈಶಿಷ್ಟ್ಯ.
ಅಂದು ಬೆಳಿಗ್ಗೆ ಮುಂಚೆಯೇ ತಮ್ಮ ಶಿಷ್ಯರನ್ನು ಕರೆದ ಗುರುನಾಥರು "ನೋಡಯ್ಯ ಶಾರದಾಂಬೆಗೆ ಪಂಚಾಮೃತ ಅಭಿಷೇಕಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಸಿದ್ಧಪಡಿಸಿಕೊಂಡು ಸಕಾಲಕ್ಕೆ ತಲುಪಿಸಿ ಬನ್ನಿ... ಸಮಯ ನಿಮ್ಮನ್ನು ಕಾಯಲ್ಲ" ಎಂದು ಅವಸರಿಸಿದರಂತೆ. ಗುರುನಾಥರ ಶಿಷ್ಯರಿಗೆ ಗುರುವಾಕ್ಯವೆಂದರೆ... ಮಹದಾಜ್ಞೆ. ಬಹಳ ತರಾತುರಿಯಲ್ಲಿ ಎಲ್ಲಾ ವಸ್ತುಗಳನ್ನು ಸಿದ್ಧ ಮಾಡಿಕೊಂಡು ಕಾರಿನಲ್ಲಿ ಆಗಲೇ ಶಿಷ್ಯರು ಧಾವಿಸಿದರು ಶೃಂಗೇರಿಯೆಡೆಗೆ.
ಎಂದಿನಂತೆ ಗುರುನಾಥರ ಮತ್ತೊಂದು ಶಿಷ್ಯವೃಂದದ ಜೊತೆಗೆ ಕುಳಿತು ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದ ಅವರು.. ಒಂದಷ್ಟು ಸಮಯದ ನಂತರ ಗಾಭರಿಯಾಗಿ "ಏನಯ್ಯಾ ಇದು... ಇವರಿಗೆ ಗೊತ್ತೇ ಆಗಿಲ್ಲವಲ್ಲಾ" ಎಂದರಂತೆ. ಅಕ್ಕಪಕ್ಕದವರೆಲ್ಲಾ ಏನೆಂದು ವಿಚಾರಿಸಿದಾಗ, ತಿಳಿದ ವಿಚಾರವೆಂದರೆ "ಶೃಂಗೇರಿಗೆ ಸಕಾಲಕ್ಕೆ ಹೋಗಿ ವಸ್ತುಗಳನ್ನು ತಲುಪಿಸುವ ಭರಾಟೆಯಲ್ಲಿ ಆ ಕಾರು ನಡೆಸುತ್ತಿರುವವರಿಗೆ ಕಾರಿನ ಗಾಳಿ ಪಂಚರ್ ಆಗಿರುವುದೇ ಅರಿವಿಗೆ ಬಂದಿಲ್ಲ... ನೋಡಿ ಎಂಥಾ ಕೆಲಸವಾಗಿಬಿಟ್ಟಿತು" ಎಂದರು ಗುರುನಾಥರು. ಸುತ್ತಮುತ್ತಲಿನವರು ಫೋನ್ ಮಾಡಿಬಿಡೋಣ ಆಕ್ಸಿಡೆಂಟ್ ಆಗಿಬಿಟ್ಟರೆ? ಎಂದು ಗಾಬರಿಯಾಗಿ ಸಲಹೆ ನೀಡಿದರು. ಆದರೆ ಸ್ವಸ್ಥ ಚಿತ್ತದಿಂದ ಗುರುನಾಥರು ಕ್ಷಣಕಾಲ ಸುಮ್ಮನಾದರು.
ಸ್ವಲ್ಪ ಹೊತ್ತಿಗೆ ಶೃಂಗೇರಿ ತಲುಪಿದ ಭಕ್ತರಿಂದ ಫೋನು ಬಂದಿತು. "ಸಮಯಕ್ಕೆ ಸರಿಯಾಗಿ ಎಲ್ಲಾ ತಲುಪಿಸಿದ್ದೇವೆ ಗುರುಗಳೇ.. ಆದರೆ ನಮ್ಮ ಕಾರಿನ ಟೈರ್ ಪಂಚರ್ ಆಗಿಬಿಟ್ಟಿದೆ... ಗೊತ್ತೇ ಆಗಲಿಲ್ಲ. ಅದು ಹೇಗೆ ಇಲ್ಲಿ ತನಕ ಬೆಂದೆವೋ.. ಈಗ ಟೈರ್ ಪಂಚರ್ ಹಾಕಿಸಿಕೊಂಡು ಬರುತ್ತೇವೆ" ಎಂದರು.
ಅಂದು ಅದೇನು ಟ್ಯೂಬ್ ಲೆಸ್ ಟೈರ್ ನ ಕಾಲವಲ್ಲ ಅದು. ಗುರುನಾಥರ ಪಕ್ಕದಲ್ಲಿದ್ದವರಿಗೆಲ್ಲ "ಸಧ್ಯ ಸುಖವಾಗಿ ತಲುಪಿದರಲ್ಲ" ಎಂಬ ನೆಮ್ಮದಿ. ಆದರೆ ಅವರು ಹೇಗೆ ತಲುಪಿದರು? ಗಾಳಿಯಿಲ್ಲದ ಟೈರು, ಕಾರನ್ನು ಹೇಗೆ ಅವಘಡವಿಲ್ಲದೆ ಮುಟ್ಟಿಸಿತು? ಎಂಬ ಅನುಮಾನ ಮನದಲ್ಲಿ ಕಾಡುತ್ತಲೇ ಇತ್ತು.
ಗುರುನಾಥರಿಗೆ ಅರಿಯದುದು ಯಾವುದು? ಅಸಾಧ್ಯವಾದುದು ಏನಿದೆ. ಗುರುನಾಥರು ಭಕ್ತರ ಮನದ ಸಂಶಯಕ್ಕೆ ಉತ್ತರವೆಂಬಂತೆ - ಎಲ್ಲರೆದುರಿಗೆ ತಮ್ಮ ಕೈಯನ್ನು ಬಿಚ್ಚಿ ತೋರಿಸಿದರು. ಗುರುನಾಥರ ಕೈನಿಂದ ಸಣ್ಣ ಕಲ್ಲು ಮುಳ್ಳುಗಳು ಉದುರಿದವು. ಅಂಗೈಯೆಲ್ಲಾ ತರಚಿ ಗಾಯವಾಗಿತ್ತು.
ಗುರುನಾಥರು ಬಾಯಿ ಬಿಟ್ಟು ಹೇಳಬೇಕಿರಲಿಲ್ಲ. ತಮ್ಮ ಕೈಮೇಲೆ ಕಾರನ್ನು ಓಡಿಸಿ ... ತಮ್ಮ ಬಲದಿಂದ ಇಲ್ಲಿ ಕುಳಿತೇ... ಭಕ್ತರನ್ನೆಲ್ಲಾ ರಕ್ಷಿಸಿದ್ದರು.
ಗುರುನಾಥರಿಗೆ ಇಂತಹ ಪ್ರಸಂಗಗಳು ಸರ್ವೇ ಸಾಮಾನ್ಯ. ಆದರೆ ಇದು ತಮ್ಮ ಆತ್ಮ ಬಲದಿಂದ ಆಗಿದೆ ಎಂದು ಎಂದೂ ತಿಳಿಸದೇ, ತಮಗೂ ಇದಕ್ಕೂ ಏನು ಸಂಬಂಧವೇ ಇಲ್ಲ ಎನ್ನುವಂತೆ ಸರಳವಾಗಿ ಇದ್ದು ಬಿಡುತ್ತಿದ್ದರು. ಅಂತಹ ಪುಣ್ಯಾತ್ಮರು ನಮ್ಮ ಅವಧೂತರು.
ಅಸಾಧಾರಣ ಶಕ್ತಿ ಆ ಪರಮಾತ್ಮನಿಂದ ಗುರುನಾಥರಿಗೆ ಒದಗಿದ್ದರೂ, ಅದು ಭಕ್ತರ ರಕ್ಷಣೆಗೆ ಮಾತ್ರ ಬಳಕೆಯಾಗುತ್ತಿತ್ತು. ಪುಣ್ಯಾತ್ಮರಾದವರಿಗೆ ಜಗತ್ತಿನ ಎಲ್ಲ ಜೀವ ಜಂತುಗಳ ಆಗುಹೋಗುಗಳು, ದೇಶ, ಕಾಲ, ದೂರಗಳನ್ನು ಮೀರಿ ಅರಿವಾಗುತ್ತದೆ. ಅದರ ಮೇಲಿವರ ಪ್ರಭುತ್ವವೂ ಇರುತ್ತದೆ ಎಂಬ ಸಚ್ಚಿದಾನಂದೇಂದ್ರ ಸರಸ್ವತಿ ಮಹಾಸ್ವಾಮಿಗಳ ಮಾತನ್ನಿಲ್ಲಿ ಸ್ಮರಿಸಬಹುದಾಗಿದೆ.
ಗುರುಚರಿತ್ರೆಗೆ ಕೊನೆ ಮೊದಲೆಲ್ಲಿದೆ? ಪ್ರಿಯ ಓದುಗ ಬಾಂಧವರೇ, ನಾಳೆ ಮತ್ತೆ ಇನ್ನೊಂದಿಷ್ಟು ಹಂಚಿಕೊಳ್ಳೋಣವೇ? ಬರುವಿರಲ್ಲಾ ಸತ್ಸಂಗದ ಜೊತೆಗೆ ಇರುವಿರಲ್ಲವೇ?........
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Parama poojya venkatachala gurugalige e shuba somavaarada saashtaanga pranaamagalu. Sarvarannu Yella kaaladalli uddarisi asheervadisi Kaapadi Guruvarya. Sarve jano sukinobavantu.
ReplyDelete