ಒಟ್ಟು ನೋಟಗಳು

Friday, March 17, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 8


ಗುರುವನ್ನರಿಯುವುದು ಸುಲಭವಲ್ಲ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಖರಾಯಪಟ್ಟಣದ ಗುರುನಾಥರನ್ನು ಕಾಣಲು ಬರುವ ಪರ ಊರಿನವರು, ತಮ್ಮ ಕಷ್ಟಗಳನ್ನು ನಿವೇದಿಸಿಕೊಂಡು ನಂತರ ಸುಖ ಪಡೆದು, ಗುರುವಿಗೆ ನಮಿಸಿ ಹೊರಡುವುದು, ಕೆಲವರು ನಿರಂತರ ಗುರುವಿನೊಡನೆ ಒಡನಾಟವಿಟ್ಟುಕೊಳ್ಳುವುದು ಸಹಜ. ಆದರೆ ಗುರುನಾಥರು ಅದೆಷ್ಟು ಜನಕ್ಕೆ ಅರ್ಥವಾಗಿದ್ದರೋ ತಿಳಿಯದು. ಅವರಿರುವ ಅತಿ ಸರಳ ರೀತಿಯನ್ನು ಕಂಡರೆ, ಒಂದು ಪಂಚೆಯಷ್ಟೇ, ಮೇಲೊಂದು ಅಂಗವಸ್ತ್ರ, ಕಾಲಿಗೆ ಚಪ್ಪಲಿ ಹಾಕಿದರೆ ಹಾಕಿದರು, ಇಲ್ಲದಿದ್ದರೆ ಇಲ್ಲ. ಈ ರೀತಿಯಲ್ಲಿ ಗುರುನಾಥರು ಇರುತ್ತಿದ್ದುದು. ಡಾಂಭಿಕತೆಯಾಗಲೀ, ಅದ್ದೂರಿತನವಾಗಲೀ ಗುರುನಾಥರಿಗೆ ಸುತರಾಂ ಬೇಕಿರಲಿಲ್ಲ. ಅವರೊಂದು ಬಹುದೊಡ್ಡ ಶ್ರೀಮಂತ ಕುಟುಂಬದ ಹಿನ್ನೆಲೆಯಲ್ಲಿ ಬಂದಿದ್ದರೂ ಶ್ರೀಮಂತಿಕೆಯ ಸೋಂಕು ಅವರಿಗೆ ಇರಲಿಲ್ಲ. "ಶ್ರೀಮಂತನೆಂದರೆ ಬೀಗುವುದು ಅಲ್ಲವಯ್ಯಾ, ನೋವಿನಲ್ಲಿ ಇರುವವರಿಗೆ ಸಹಾಯ ಮಾಡಲು" ಎಂದು ಅವರು ಪದೇ ಪದೇ ಅನ್ನುತ್ತಿದ್ದರು. ಅವರ ಬಾಯಿಂದ ಅನೇಕ ಅಣಿ ಮುತ್ತುಗಳು, ಜೀವನ ಯೋಗ್ಯ ನುಡಿಗಳು ಬಂದರೂ, ಅದೆಷ್ಟು ಜನ ಅರ್ಥ ಮಾಡಿಕೊಂಡಿದ್ದರೋ... ಅವರ ಸರಳತೆ, ಸ್ನೇಹಪ್ರಿಯತೆ, ತಮಗಿಷ್ಟವಾದವರ ಜೊತೆ, ಯಾವಾಗಲೆಂದರೆ ಆವಾಗ ಬಂದು ಹೋಗುವುದು, ಆಶೀರ್ವದಿಸುವುದು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದೂ ಕಷ್ಟಸಾಧ್ಯವಾದ ಮಾತುಗಳೇ. 

ಹೀಗೆ ಗುರುನಾಥರ ನಿಕಟ ಸಂಪರ್ಕದಲ್ಲಿದ್ದ ನೀಲಕಂಠರಾಯರಿಗೆ ಗುರುನಾಥರು ಒಮ್ಮೆ ಸಿಕ್ಕಾಗ (ಅವರು ಪದೇ ಪದೇ ಗುರುದರ್ಶನ ಪಡೆದವರು ಗುರುನಾಥರೂ ಅವರ ಮನೆಗೆ ಅನೇಕ ಸಾರಿ ಬರುತ್ತಿದ್ದರು) "ಬಾರಯ್ಯಾ ನಾಡಿದ್ದು ಮಗಳ ಮದುವೆ ಇದೆ.... ಮತ್ತೆ ತಪ್ಪಿಸಬಾರದು... ಖಂಡಿತಾ ಬರಬೇಕು" ಎಂದರು ಪ್ರೀತಿಯಿಂದ ಆಮಂತ್ರಣ ನೀಡಿದರು. 

"ನಾಡಿದ್ದು ಮಗಳ ಮದುವೆ ಇದೆ. ಇವರು ನೋಡಿದರೆ ಹೀಗೆ ಎಲ್ಲೆಂದರಲ್ಲಿ ಇನ್ನು ತಿರುಗಾಡುತ್ತಿದ್ದಾರೆ. ಮದುವೆ ಅದು ಹೇಗೆ ಆಗುತ್ತೋ... ನಾವೂ ಒಂದಿಷ್ಟು ಹಣ ತೆಗೆದುಕೊಂಡು ಹೋಗಿ ಸಹಾಯ ಮಾಡಬೇಕು.. ಮನೆ ಕಡೆ ಇವರಿಗೆ ಅದೆಷ್ಟು ಜವಾಬ್ದಾರಿ ಇದೆಯೋ.... ಹೇಗಾದರಾಗಲಿ ಒಂದಿಷ್ಟು ಹಣ ಒಯ್ಯುವುದು ಒಳಿತು" ಎಂದು ಮಾತನಾಡಿಕೊಂಡ ನೀಲಕಂಠರಾಯರು ಹಾಗೂ ಅವರ ಸಹೋದರರು ಮದುವೆಗೆ ಒಂದು ದಿನ ಮುಂಚೆಯೇ ತೀರ್ಥಹಳ್ಳಿಗೆ ಬೆಳಿಗ್ಗೆಯೇ ಭದ್ರಾವತಿಯಿಂದ ಪ್ರಯಾಣಿಸಿದರು. ದೇವಸ್ಥಾನದಲ್ಲಿ ಮದುವೆ ಎಂದು ತಿಳಿದ ಇವರ ಭಾವನೆಯೇ ಬೇರೆಯಾಗಿತ್ತು. ಬಸ್ಸಿನಿಂದ ಇಳಿದವರೇ ಹೋಟೆಲಿನಲ್ಲಿ ತಿಂಡಿ ತಿಂದರು. ಏಕೆಂದರೆ ಮದುವೆ ಮನೆಯಲ್ಲಿ ತಮಗೇನು ಸಿಗುತ್ತದೆ ಎಂಬ ಭರವಸೆ ಇಲ್ಲ. 

ರಸ್ತೆಯಲ್ಲಿ ಸಿಕ್ಕ ಗುರುಗಳು "ಓಹೋ ಬಂದುಬಿಟ್ಟಿರಲ್ಲಾ ದೇವಸ್ಥಾನಕ್ಕೆ ಹೋಗಿ... ನಾನೀಗ ಬರುತ್ತೇನೆಂದು" ಎತ್ತಲೋ ನಡೆದರು. ಮದುವೆಯ ಮಂಟಪದೊಳಗೆ ಹೋದ ಇವರು ಮೊದಲು ಸಾಗಿದ್ದು ಸ್ಟೋರ್ ರೂಮಿಗೆ... ಅಲ್ಲಿರುವ ವಸ್ತುಗಳ ರಾಶಿ ರಾಶಿ ಕಂಡು ದಂಗಾಗಿ ಹೋದರು. ಈ ಇಬ್ಬರು ಅಷ್ಟೋತ್ತಿಗೆ ಅಲ್ಲಿರುವುದು ಸಾಲದೆಂದು ಒಂದು ಲಾರಿಯಲ್ಲಿ ವಸ್ತುಗಳು ಬಂದವು. ಆಗಿನ ಕಾಲದಲ್ಲಿ ಮದುವೆಯ ಛತ್ರವನ್ನು ಅತ್ಯಂತ ಅದ್ಧೂರಿಯಿಂದ ಸಿಂಗರಿಸಲಾಗುತ್ತಿತ್ತು. ಮದುವೆಯ ಮನೆಯಲ್ಲಿ ತಯಾರಾಗುತ್ತಿದ್ದ ಭಕ್ಷ್ಯ ಭೋಜ್ಯಗಳ ತಯಾರಿ ನೋಡಿದ ಈ ಅಣ್ಣ ತಮ್ಮಂದಿರು ಆಶ್ಚರ್ಯಚಕಿತರಾದರು. 

ಅದೇನು ಅಚ್ಚುಕಟ್ಟು, ಅದೇನು ವೈಭವ, ಅದೆಂತಹ ಆದರ, ಆತಿಥ್ಯ, ಬಂದವರಿಗೆಲ್ಲಾ "ಅಬ್ಬಾ ನಾವೆಂತಹ ಮೂರ್ಖರು.. ಸೂರ್ಯನಿಗೆ ಮೇಣದ ಬತ್ತಿಯ ಬೆಳಕು ಕೊಡಲು ಬಂದಂತೆ, ಕುಬೇರನಿಗೆ ಚಿಲ್ಲರೆ ಪುಡಿಗಾಸಿನ ಸಹಾಯ ಮಾಡಲು ಬಂದಂತೆ ಆಯಿತಲ್ಲಾ... ಗುರುವೇ ಕ್ಷಮಿಸು ತಂದೆ, ನಿನ್ನನ್ನು ಅರಿಯಲಾರದ ಮೂರ್ಖರು ನಾವಾದೆವು... ನಮ್ಮ ಮೌಢ್ಯ ಹರಿಸು" ಎಂದು ನೀಲಕಂಠರಾಯರು ಮನದಲ್ಲೇ ಬೇಡಿಕೊಂಡರು. ಮುಂದೆ ಇವರು ತಂದ ವಸ್ತ್ರ ಉಡುಗೊರೆಯ ದುಪ್ಪಟ್ಟನ್ನು ಗುರುಗಳು ಇವರಿಗೆ ನೀಡಿಸಿದುದಲ್ಲದೆ, ಊರಿಗೆ ಹೋಗಲು ಚಾರ್ಜನ್ನು ಕೊಡಿಸಿ ಕಳಿಸಿದರಂತೆ.

ಮೇಲೆ ಕಾಣುವುದೇ ಬೇರೆ... ಒಳಗಿರುವುದೇ ಬೇರೆ. ಆಯಾಚಿತವಾಗಿ ಗುರು ಸಾಮರ್ಥ್ಯದ ಒಂದು ಮುಖದ ಅರಿವು ಅವರಿಗಾಯಿತು. ಸಂಸಾರಕ್ಕೆ ಅಂಟಿಯೂ, ಅಂಟದಂತಿದ್ದರೂ ಕರ್ತವ್ಯ ಪರಾಯಣತೆ ಎಂದರೆ ಏನೆಂಬ ಕರ್ಮತತ್ವದ ಅರಿವು ಗುರುನಾಥರ ಮನೆಯ ಆ ಮದುವೆ ಇವರಿಗೆ ತಿಳಿಸಿತ್ತು. ಎಲ್ಲರ ಮನವರಿತರೂ ಗುರುನಾಥರು ಅದೇ ಪ್ರೇಮಭಾವದಿಂದ, ಮತ್ತೊಂದು ದಿನ ಉಳಿಸಿಕೊಂಡು ಇವರನ್ನು ಬೀಳ್ಕೊಟ್ಟರು. ಬೀಗರು ಬಿಜ್ಜರ ಮಹಾಪೂರದಲ್ಲೂ ಗುರುನಾಥರು ಭಕ್ತರನ್ನು ಅದೇ ಪ್ರೇಮದಿಂದ ಕಂಡಿದ್ದರು. ಮೊನ್ನೆ ಸಿಕ್ಕಿದ ನೀಲಕಂಠರಾಯರು "ಎಂತಹ ದೊಡ್ಡ ತಪ್ಪು ನಮ್ಮಿಂದಾಗಿತ್ತು. ಆದರೂ ಗುರುನಾಥರು ನಮ್ಮ ಮೇಲೆ ಅದೇ ಪ್ರೇಮಧಾರೆಯನ್ನು ಎಂದೆಂದೂ ಹರಿಸುತ್ತಿದ್ದರು. ನನ್ನ ತಪ್ಪು ಪ್ರಕಟಿಸಿ, ಮನ್ನಿಸೆಂದು ಬೇಡಲು ನನಗಿದೊಂದು ಅವಕಾಶ ಒದಗಿಸಿದರೇನೋ" ಎಂದು ಗದ್ಗತಿತರಾಗಿ ನುಡಿದರು. ಗುರುಕೃಪೆ ಕರುಣೆ ಎಂದರೆ ಇದೇ ಅಲ್ಲವೇ, ಆ ಕರುಣಾಸಾಗರನ ಇನ್ನೂ ಅನೇಕ ಬಿಂದುಗಳ ಅಮೃತ ಆಸ್ವಾದನೆಗೆ ನಾಳೆಯೂ ನಮ್ಮೊಂದಿಗಿರಿ... ಸ್ವಾಮಿ.....,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

1 comment:

  1. Parama poojya venkatachala avadootarige nanna bhakti poorvaka namanagalu. Swamy Sarvarigu arogya ayasu rakshe sahane samadhaana talme buddhi shreyasu santosha anugrahisi asheervadisi. Sarve jano sukinobavantu.

    ReplyDelete