ಒಟ್ಟು ನೋಟಗಳು

Monday, March 20, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 11


ಚಿಕಿತ್ಸಾ ಪ್ರಹಸನ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಆಂಬ್ಯುಲೆನ್ಸ್ ಮನೆ ತಲುಪಿದರೂ ಮೈ ಬೆವರುತ್ತಿತ್ತು. ತಾವು ಬದುಕಿ ಬಂದಿರುವುದು ಸತ್ಯವೆಂದು ನಂಬುವ ಸ್ಥಿತಿಯಲ್ಲಿರಲಿಲ್ಲ ನೀಲಕಂಠರಾಯರು. ಮನೆ ಮಂದಿಯೆಲ್ಲಾ ಗುರುನಾಥರ ಕರುಣೆಯನ್ನು ಸ್ಮರಿಸುತ್ತಾ, ಅವರನ್ನು ಕೊಂಡಾಡುತ್ತಾ, ಅಘಟಿತ ಘಟನೆಗಳ ಪವಾಡಕ್ಕೆ ಮೂಕ ವಿಸ್ಮಿತರಾಗಿದ್ದರು. 

ನೀಲಕಂಠರಾಯರದ್ದೋ ಆಡಿಸುವವರ ಕೈಗೂಸಿನ ಸ್ಥಿತಿ, ಎಲ್ಲದಕ್ಕೂ ಪರಾವಲಂಬಿ, ಸುಮ್ಮನೆ ಆಗಸ ನೋಡುತ್ತಾ ಮಲಗಿ ರೆಸ್ಟ್ ತೆಗೆದುಕೊಳ್ಳುವುದೇ  ಕೆಲಸ,ಗುರುನಾಥರನ್ನು ಸ್ಮರಿಸುವುದು. 

"ಕೈ ತೆಗೆಯುತ್ತಾರೆ, ಪರಾಧೀನನಾಗಲಿದ್ದೇನೆ.. ಮುಂದೇನು? ಮುಂದೇನು?" ದಿನಗಳು ಹೇಗೆ ಉರುಳಿದವು. ಜನ ಬರುವುದು, ಸಾಂತ್ವನ ಹೇಳುವುದು. ಅಸಹಾಯಕರಾಗಿದ್ದ ಇವರನ್ನು ಕಂಡ ಒಬ್ಬ ಗುರುಗಳು, ಸಾಧಕರು "ನೀಲಕಂಠರಾಯರೇ ನೀವೆದ್ದು ಓಡಾಡುತ್ತೀರಿ... ನಿಮಗಾಗಿ ನಾನು ನನ್ನ ತಪಸ್ಸನ್ನೇ ಈ ಮನೆಗೆ ಧಾರೆ ಎರೆಯುತ್ತೇನೆ" ಎಂದದ್ದೂ ಇದೆ. 

ದಿನಗಳು,  ಕಾಲ,ವಾರಗಳು ಉರುಳುತ್ತಿದ್ದವು. ಸೂರ್ಯ ಚಂದ್ರರು ಎಂದಿನಂತೆ ಬೆಳಗುತ್ತಿದ್ದರು. ಎಲ್ಲವೂ ಸಹಜವಾಗೇ ಸಾಗುತ್ತಿತ್ತು. 

ಅಂದು ರಾತ್ರಿ ಮೂರು ಗಂಟೆಯ ಸಮಯವಿರಬಹುದು. ಇದ್ದಕ್ಕಿದ್ದಂತೆ ಸ್ವಪ್ನವೋ, ಸುಷುಪ್ತಿಯೋ, ಜಾಗೃತವೋ ಅರಿಯದಂತಹ ಸ್ಥಿತಿಯಲ್ಲಿ, ನಾಲ್ಕು ಜನ ಮನೆಯ ಒಳ ಬಂದರು. ಅವರೇನೋ ಮಾತನಾಡಿಕೊಳ್ಳುತ್ತಿದ್ದುದು ಶಬ್ದ ಮಾತ್ರವಾಗಿ ಕೇಳಿ ಬರುತ್ತಿತ್ತು. ಹಾಸಿಗೆಯ ಬಳಿ ಬಂದು ಇವರನ್ನು ಎಬ್ಬಿಸಿ ನಡೆಸಿಕೊಂಡು ಮನೆಯಿಂದ ಸ್ವಲ್ಪ ದೂರ ಹೊರಗಡೆ ಕರೆದುಕೊಂಡು ಹೋಗಿ, ಏನೇನೋ ಸೊಪ್ಪು ಸದೆಯ ಚಿಕಿತ್ಸೆ ಮಾಡಿದರು. ಮತ್ತೆ ಸುಮಾರು ಐದು ಗಂಟೆ ಇರಬಹುದು. ಹಾಸಿಗೆಯವರೆಗೆ ನಡೆಸಿಕೊಂಡು ಬಂದು ಮಲಗಿಸಿ ಹೋದರಂತೆ. 

ಇದು ಹೀಗೆ ಮಾರನೆಯ ದಿವಸವೂ ಸ್ವಪ್ನದಲ್ಲಿ - ಸ್ವಪ್ನದಂತೆ ಅವರುಗಳು ಬಂದರು, ಚಿಕಿತ್ಸೆ ಮಾಡಿ ಮತ್ತೆ ಮಂಚದಲ್ಲಿ ಮಲಗಿಸಿದರು. ಬೆಳಿಗ್ಗೆ ಎಷ್ಟೋ ಹೊತ್ತಿಗೆ  ಮೇಲೆ ಎಚ್ಚರವಾದಾಗ, ಯಾರ ಬಳಿ ಹೇಳಬೇಕು? ಯಾರಿದನ್ನು ನಂಬುತ್ತಾರೆ? ತಮ್ಮ ಆಪ್ತರ ಬಳಿ ಅಂದೇ ಹೇಳಿದ್ದರು ಇವರು. 

ಮಾರನೆಯ ದಿವಸ ಸ್ವಪ್ನದಲ್ಲಿ ಎಚ್ಚರವಾಗಿ ಇವರು ಸಮಯ ನೋಡಿದರೆ ಬೆಳಗಿನ ಐದಾಗಿದೆ. ಯಾರಿವರು ಈ ದಿನ ಬರಲಿಲ್ಲ ಎಂದು ಚಿಂತಿಸುತ್ತಿರುವಾಗ, ಆ ನಾಲ್ವರೂ ಬಂದರು. "ಇವತ್ತು ಕೊನೆಯ ದಿನ. ಅದಕ್ಕಾಗಿ ತಡವಾಯಿತು" ಎನ್ನುತ್ತಾ ಎಂದಿನಂತೆ ನಡೆಸಿಕೊಂಡು ಮನೆಯ ಹೊರ ಹೋಗಿ ಚಿಕಿತ್ಸೆ ಮಾಡಿ ಕರೆತಂದು ಮಲಗಿಸಿ "ಇವತ್ತು ನೀವು ಸ್ನಾನ ಮಾಡಿರಿ. ಸ್ನಾನ ಆದ ನಂತರ ಎಡಗೈನ ಮೇಲೆ ಉಬ್ಬಿರುವ ಭಾಗಗಳನ್ನೆಲ್ಲಾ ಬಲಗೈನಿಂದ ಕಿತ್ತು ತೆಗೆಯಿರಿ, ಎಲ್ಲ ಸರಿಯಾಗುತ್ತೆ. ನಿಮ್ಮ ಚಿಕಿತ್ಸೆ ಇಂದಿಗೆ ಮುಗಿದಿದೆ" ಎಂದು ನಡೆದರು. ಮತ್ತಿವರು ನಿದ್ರೆಯಲ್ಲೇ ಇದ್ದರು. ಕನಸೋ, ನನಸೋ, ಭ್ರಮೆಯೋ ಅರಿಯದಾದರು. 

ಬೆಳಿಗ್ಗೆ ಎಂದಿನಂತೆ ಎದ್ದ ಇವರ ಮಗ, ಬಾಗಿಲಿನ ಬೀಗ ತೆಗೆದಿರುವುದು, ಬಾಗಿಲು ತೆರೆಯದಿರುವುದನ್ನು ಕಂಡು, "ರಾತ್ರಿ ಬೀಗ ಹಾಕಿದ್ದನ್ನು ಯಾರು ತೆಗೆದರು, ಯಾಕೆ ತೆರೆದರು?" ಎಂದು ಕೇಳಿದಾಗ ಎಚ್ಚರವಾಗಿದ್ದ ನೀಲಕಂಠರಾಯರು "ಅದೇ ಅವರು ಬಂದಿದ್ದಾರಲ್ಲ. ಹೋಗುವಾಗ ಬಾಗಿಲು ಹಾಕುವುದನ್ನು ಮರೆತಿರಬೇಕು" ಎಂದರು. ಮತ್ತೆ ಯಾರು ಬಂದಿದ್ದು, ನಡೆದುದೇನೆಂದು ಕಥೆಯನ್ನೆಲ್ಲಾ ವಿವರಿಸಿ "ನನಗಿವತ್ತು ಸ್ನಾನ ಮಾಡಿಸು, ಇದನ್ನೆಲ್ಲಾ ಕಿತ್ತು ಹಾಕಲು ಅವರು ಹೇಳಿದ್ದಾರೆ" ಎಂದರು. 

"ಮಗ ನೀನದೆಲ್ಲೋ ಭ್ರಮೆ, ನೀರು ಬಿದ್ದರೆ ಮುಗೀತು ಕಥೆ.... ಸ್ವಪ್ನವನ್ನೆಲ್ಲಾ ನಂಬುತ್ತೀಯಲ್ಲಣ್ಣಾ" ಎಂದ. ಅಂತೂ ಹಠ ಮಾಡಿ ಸ್ನಾನ ಮಾಡಿಕೊಂಡು ಎಡಗೈನ ಊದಿದ ಭಾಗಗಳನೆಲ್ಲಾ ಒಂದೊಂದೇ ಕಿತ್ತು ಹಾಕಿದಾಗ, ಒಳ ಭಾಗದಲ್ಲಿ ಚರ್ಮ ಬೆಳೆದು ಕೈ ಸ್ವಾಧೀನಕ್ಕೆ ಬಂದಿತ್ತು.  ಇಂದು ಅವರು ಎಲ್ಲರಂತೆ ನಡೆದಾಡಿಕೊಂಡು ಗುರು ಸೇವೆಯಲ್ಲಿ ನಿರತರಾಗಿದ್ದಾರೆ. ಈ ಘಟನೆಯನ್ನು  ಶ್ರೀಕಾಂತ ಗುರುಗಳು "ಇದು ಗುರುನಾಥರದೇ ಪವಾಡ. ಕನಸಿನಲ್ಲಿ ಬಂದು ವೈದ್ಯ ಮಾಡಿದವರು ಅವರೇ. ಸಂಶಯ ಬೇಡ" ಎಂದರು. 

ಗುರುನಾಥರು  ಅಂದೂ ಅನೇಕ ಖಾಯಿಲೆಗಳಿಗೆ, ನುರಿತ ವೈದ್ಯರಂತೆ ಚಿಕಿತ್ಸೆ ನೀಡುತ್ತಿದ್ದರು. ಭಕ್ತರ ಉದ್ಧಾರಕ್ಕಾಗಿ ವೈದ್ಯರಾಗುತ್ತಿದ್ದರು. ಹೀಗಿರುವಾಗ... ಗುರುನಾಥರಿಗೆ ನೀಲಕಂಠರಾಯರ ಮನೆ ಎಂದರೆ ನೀಲಕಂಠರೆಂದರೆ... ಬಳಿ ಕರೆದು ಕೂರಿಸಿ ಆಶೀರ್ವದಿಸುತ್ತಿದ್ದರು. ಆ ಆಶೀರ್ವಾದದ ಫಲವೀರೀತಿ ಬಂದು ಉಳಿಸಿತೆಂದರೆ ಆಶ್ಚರ್ಯ ಪಡಬೇಕಿಲ್ಲ.... ಮಾನ್ಯರೇ ನಾಳಿನ ಸತ್ಸಂಗದಲ್ಲಿ ಗುರುನಾಥರ ಮತ್ತಾವ ಲೀಲಾಮೃತವನ್ನು ಪ್ರಸಾದಿಸುತ್ತಾರೋ... ಬರುತ್ತೀರಲ್ಲಾ...... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

1 comment:

  1. Parama poojya venkatachala avadootarige nanna bhakti poorvaka namanagalu. Swamy Sarvarigu arogya ayasu rakshe sahane samadhaana talme buddhi shreyasu santosha anugrahisi asheervadisi Guruvarya. Sarve jano sukinobavantu.

    ReplyDelete