ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 14
ಸರ್ವದೇವ ನಮಸ್ಕಾರಂ ಗುರುನಾಥಂ ಪ್ರತಿಗಚ್ಛತಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸಖರಾಯಪಟ್ಟಣದ ಗುರುನಾಥರ ಮನೆಗೆ ಬರುವ ಅಪಾರ ಭಕ್ತವರ್ಗದಲ್ಲಿ ನಮ್ಮ ನರೇಂದ್ರಣ್ಣನೂ ಒಬ್ಬರು. ನಿರಂತರ ಗುರುನಾಥರ ಒಡನಾಟ ಹೊಂದಿದ್ದ ಅವರಿಂದಲೂ ನಿತ್ಯ ಸತ್ಸಂಗಕ್ಕೆ ಜೋಳಿಗೆ ಹಿಡಿದಾಗ ಅನೇಕ ಸ್ವಾರಸ್ಯಕರ ಪ್ರಸಂಗಗಳ ಭಿಕ್ಷೆ ನೀಡಿದ್ದಾರೆ. ಅವುಗಳಲ್ಲಿ ಕೆಲವು ಹೀಗೆ..... "ನನಗೆ ಗುರುನಾಥರೆಂದರೆ ಭಯ ಮತ್ತು ಭಕ್ತಿ ಎರಡೂ ಸಮಸಮವಾಗಿಯೇ... ಏಕೆಂದರೆ ಒಬ್ಬ ಮಹಾನುಭಾವರು ಗುರುನಾಥರನ್ನು ಒಮ್ಮೆ ನೋಡಲು ಬಂದಿದ್ದರು.... ಗುರುನಾಥರು ಅವರಿಗೆ ದರ್ಶನ ಕೊಡಲು ಇಷ್ಟಪಡದೆ ಅಲ್ಲಿಂದ ಅವರನ್ನು ನಿರ್ಗಮಿಸಲು ಹೇಳಿದ ರೀತಿ ನನಗೆ ಎಂದೂ ಮರೆಯಲಾಗದ್ದು. ಯಾವತ್ತೂ ನನಗೆ ಆ ಪರಿಸ್ಥಿತಿ ಬರುತ್ತದೋ ಎಂಬ ಹೆದರಿಕೆ, ಒಂದು ರೀತಿ ನನ್ನನ್ನು ನಾನು ತಿದ್ದಿಕೊಂಡು, ಗುರುನಾಥರಿಗೆ ಪ್ರಿಯವಾಗಿ ಬದುಕುವಂತೆ ಪ್ರೇರೇಪಿಸಿದೆ. ಹೆದರಿಕೆ, ಭಯವಿಲ್ಲದೆ ಇದ್ದರೆ ಮನುಷ್ಯ ಮಂಗನಂತೆ ಚಂಚಲ ಮನಸ್ಸು ಎತ್ತೆತ್ತಲೋ ಓದಿ ಏನೇನೋ ಮಾಡಿಸುತ್ತದೆಯೋ... ಅದಕ್ಕೆ ಗುರುನಾಥರಂತಹ ಸದ್ಗುರುವಿನ ಸಂಗ ಅನಿವಾರ್ಯ..... ಇದು ಲಭಿಸುವುದೂ ಪೂರ್ವಜನ್ಮದ, ನಮ್ಮ ತಂದೆ ತಾಯಿಗಳು ಮಾಡಿದ ಪುಣ್ಯ ವಿಶೇಷದಿಂದ ಮಾತ್ರ ಸಾಧ್ಯ. ಜೊತೆಗೆ ನಮ್ಮ ಕರ್ಮವೂ ಕಳೆದಿರಬೇಕು. ಗುರುವಿನ ಕರುಣೆಯೂ ನಮಗಿರಬೇಕು" ಎನ್ನುತ್ತಾ ಒಂದು ಸ್ವಾರಸ್ಯಕರ ಘಟನೆಯನ್ನವರು ಹಂಚಿಕೊಂಡರು.
"ಅಂದು ಗುರುನಾಥರ ಮನೆಗೆ ಹೋಗಿದ್ದಾಗ ಎಲ್ಲೆಲ್ಲಿಂದಲೋ ಪ್ರಸಾದಗಳು, ಗುರುಗಳ ಆಶೀರ್ವಾದದ ಫಲ, ಮಂತ್ರಾಕ್ಷತೆಗಳು ಬಂದಿದ್ದವು. ಅದನ್ನವರು ಅಲ್ಲಿದ್ದವರಿಗೆಲ್ಲಾ ತಿಳಿ ಹೇಳಿ, ಹಂಚುತ್ತಿದ್ದರು".
"ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಂ... ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ" ಎಂಬ ಮಾತಿನಂತೆ ಎಲ್ಲೆಲ್ಲಿಯ ಮಹಾತ್ಮರುಗಳ, ಎಲ್ಲೆಲ್ಲಿಯ ಕ್ಷೇತ್ರಗಳ ಪ್ರಸಾದವೆಲ್ಲಾ ಗುರುನಾಥರ ಬಳಿ ಬಂದು - ಅವರು ನಮಗದನ್ನೆಲ್ಲಾ ನೀಡಿ - ನಮ್ಮನ್ನು ಪುನೀತಗೊಳಿಸುತ್ತಿದ್ದುದೇ ಗುರುನಾಥರ ವಿಶೇಷ. ಆ ಗುರುನಾಥರಿಗೆ ಒಂದು ಭಾವಶುದ್ಧವಾದ ನಮನಗೈದರೆ ಎಲ್ಲ ದೇವತೆಗಳಿಗೆ ಅದು ಸಲ್ಲುವುದರಲ್ಲಿ ಸಂಶಯವೇ ಇಲ್ಲ. ದತ್ತಾತ್ರೇಯರ, ಶ್ರೀಪಾದವಲ್ಲಭರ ಪ್ರತಿ ಸ್ವರೂಪವಾದ ಗುರುನಾಥರ ಮಾತೂ ಶ್ರೀಪಾದರ ಮಾತೂ ಒಂದೇ. ಶ್ರೀಪಾದ ವಲ್ಲಭರ ಚರಿತ್ರೆಯಲ್ಲಿ ಒಂದೆಡೆ ಅವರೇ ಹೇಳುವುದು ಹೀಗಿದೆ. "ಎಲ್ಲ ದೇವರಿಗೆ ಸಲ್ಲಿಸುವ ನಮನ ನನಗೇ ಸೇರುತ್ತದೆ - ನನ್ನನ್ನು ಪೂಜಿಸಿದರೆ ಎಲ್ಲ ದೇವಾನುದೇವತೆಗಳನ್ನು ಪೂಜಿಸಿದಂತೆ". ಎಷ್ಟು ಸುಲಭವಾಗಿ ಭಕ್ತರನ್ನು ಗುರುನಾಥರು ಉದ್ಧರಿಸುತ್ತಿದ್ದರು. ಕೆಲವರಿಗಷ್ಟೇ ಸಿಕ್ಕ ಸೌಭಾಗ್ಯವದು.
ಮತ್ತೆ ನರೇಂದ್ರಣ್ಣ ಮೂಲ ವಿಚಾರಕ್ಕೆ ಬಂದರು. "ಗುರುನಾಥರು ಪ್ರೀತಿಯಿಂದ ಪ್ರಸಾದ ವಿತರಿಸುತ್ತ, ಭಕ್ತಿಯೊಂದಿಗೆ ಕುಶಲೋಪರಿ ಮಾತನಾಡುವಾಗ ಮತ್ತೊಬ್ಬ ಆ ಊರಿನ ಭಕ್ತರು ಬಂದು ಒಂದು ದೊಡ್ಡ ಜಗದ್ಗುರು ಪೀಠದ ಗುರುಗಳು ನಮ್ಮ ಮನೆಗೆ ಬಂದಿದ್ದಾರೆ. ತಾವೂ ದಯಮಾಡಿ ಬರಬೇಕೆಂದು ವಿನಂತಿಸಿಕೊಂಡು ಹೋದರು.
ಗುರುನಾಥರಿಗೆ ಯಾರು ಬಂದರೇನು? ತಮ್ಮ ಭಕ್ತ ಸಮೂಹದ "ಸಂಕಟಹರಣ" ವ್ರತದಲ್ಲಿ ಅವರು ನಿರತರಾಗಿದ್ದರು. ಮತ್ತೆ ಒಂದೆರಡು ಬಾರಿ ಬಂದ ಆ ಊರಿನ ಭಕ್ತರು - ವಿನಂತಿಸಿಕೊಂಡು ಹೊರಟು ಹೋಗಿದ್ದರು. ಗುರುನಾಥರ ಭಕ್ತ ಜನ ಸಂಕಟಹರಣ ಕಾರ್ಯಕ್ರಮಕ್ಕೆ ಕೊನೆ ಎಲ್ಲಿ? ಎರಡು ಮೂರು ಗಂಟೆಗಳಾಗಿರಬಹುದು. ಇದ್ದಕ್ಕಿದ್ದಂತೆ ಆ ಜಗದ್ಗುರುಗಳೆನಿಸಿಕೊಂಡವರು ತಮ್ಮ ಶಿಷ್ಯ ಸಮೂಹ ಸಹಿತ ಗುರುನಾಥರ ಮನೆಗೇ ಆಗಮಿಸಿಬಿಟ್ಟರು.
ಗುರುನಾಥರು ಗಡಬಡಿಸಿ, ಎದ್ದು ಆ ಗುರುವರ್ಯರನ್ನು ಅತ್ಯಂತ ಆದರ, ಪ್ರೀತಿಗಳಿಂದ ಬರಮಾಡಿಕೊಂಡರು. ಕುಶಲೋಪರಿಗಳನ್ನು ಅತ್ಯಂತ ವಿನಮ್ರರಾಗಿ ವಿಚಾರಿಸಿಕೊಂಡು, ಆದರ ಸತ್ಕಾರಗಳನ್ನು ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರು. "ಅಭ್ಯಾಗತ ಸ್ವಯಂ ವಿಷ್ಣು, ಅತಿಥಿ ದೇವೋಭವ" ಎಂಬಂತೆ.
ಇಷ್ಟೆಲ್ಲಾ ಆಗುತ್ತಿರುವಾಗ ನನ್ನ ಮನಸ್ಸಿನಲ್ಲಿ ಗುರುನಾಥರ ಈ ವರ್ತನೆಯನ್ನು ಕುರಿತು ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತಿತ್ತು. ಆಶ್ಚರ್ಯವೆಂದರೆ ನಾನು ಏನನ್ನೂ ಕೇಳದೆ, ನನಗವರು ಉತ್ತರಿಸಿ ಬಿಡುತ್ತಿದ್ದರು.
ಸ್ವಲ್ಪ ಸಮಯದ ನಂತರ ಪೀಠಾಧಿಪತಿಗಳು "ಅಂತರಂಗದ ವಿಚಾರ ನಿಮ್ಮೊಂದಿಗೆ ಮಾಡಬೇಕಿದೆ... ದಯವಿಟ್ಟು ಇವರನ್ನೆಲ್ಲಾ" ಎಂದು ಕೇಳುತ್ತಿದ್ದಂತೆ ನಾವೆಲ್ಲಾ ಹೊರ ನಡೆದೆವು. ಒಂದು ನಿಮಿಷವಾಗಿರಲಿಲ್ಲ. ಧಡ್ ಎಂದು ಬಾಗಿಲು ತೆರೆದುಕೊಂಡಿತು. ಜಗದ್ಗುರು ಪೀಠಸ್ಥರು ಬಾಗಿಲಿನಿಂದ ಹೊರ ಬಂದರು. ಅವರ ಶಿಷ್ಯರುಗಳೆಲ್ಲಾ ಅವರನ್ನು ಹಿಂಬಾಲಿಸಿದರು.
ಮತ್ತೆ ಗುರುನಾಥರು ತಮ್ಮ ಭಕ್ತ ವೃಂದದೊಂದಿಗೆ ಮಾತು ಪ್ರಾರಂಭಿಸಿದರು. ಜನಗಳು ಬರುತ್ತಿದ್ದರು. ಕೆಲಸವಾದ ನಂತರ ಹೊರಡುತ್ತಿದ್ದರು. ಬಂದವರಿಗೆಲ್ಲಾ ತಿಂಡಿ-ತೀರ್ಥಗಳ ಉಪಚಾರವಾಗುತ್ತಿತ್ತು.
"ಒಳಗೇನಾಯ್ತು ಗೊತ್ತಾ.,.. ಜಗದ್ಗುರು ಪೀಠ ಎಲ್ಲರೆದುರಿಗೆ ನಿಮಗೆ ನಮಸ್ಕರಿಸುವುದು ಪದ್ಧತಿಗೆ ಸಮ್ಮತವಲ್ಲಾ ಎಂದೆನ್ನುತ್ತಾ ದೀರ್ಘದಂಡ ನಮಸ್ಕಾರ ಮಾಡಿದ ಶ್ರೀಗಳು ಅಂತರಂಗದ ಕೆಲಸ ಮುಗಿಸಿ ಹೊರಬಂದರು. ಗೊತ್ತಾಯ್ತಾ.. ಗೊತ್ತಾಯಿತೇನೆಯ್ಯಾ...ನರೇಂದ್ರ.. ನಿನ್ನ ಹೆಸರು ಅದೇ ಅಲ್ಲವಾ ಎಂದರು ಗುರುನಾಥರು". ಗುರುನಾಥರ ಕೃಪಾ ಸಮುದ್ರದಲ್ಲಿ ಮಿಂದೆದ್ದ ನರೇಂದ್ರಣ್ಣ ಒಂದು ಕ್ಷಣ ಮೌನ ತಳೆದರು. ಇಂದಿನ ಸತ್ಸಂಗಕ್ಕೆ ಅಲ್ಪ ವಿರಾಮ ಹಾಕೋಣ. ಮಹನೀಯರೇ, ನಾಳೆ ಮತ್ತೆ ಇದೆ. ಇರುವಿರಲ್ಲಾ........,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Poojya venkatachala avadootarige nanna bhakti poorvaka namanagalu. Sarvarannu uddarisi asheervadisi Kaapadi Guruvarya. Sarve jano sukinobavantu.
ReplyDelete