ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 13
ಕಲಿಯುಗದ ಕಾಮಧೇನು - ಕಲ್ಪವೃಕ್ಷ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರ ಮಾತುಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಬೋಧೆಯನ್ನು ಕೊಡುವಂತಹದಾಗಿರುತ್ತಿತ್ತು. ಅದಕ್ಕೇ ಅಲ್ಲಿ ಅವರ ಬಳಿಯಲ್ಲಿ ಹೆಚ್ಚು ಸಮಯ ಕಳೆಯುವುದರಲ್ಲೇ ಆನಂದವಾಗುತ್ತಿತ್ತು. ಈ ರೀತಿ ಗುರುನಾಥರ ಬಳಿ ಹೆಚ್ಚು ಸಮಯವಿದ್ದು, ಅವರ ಆಗ್ರಹ, ಅನುಗ್ರಹಗಳೆರಡರ ಅನುಭವ ಪಡೆದು ಕೊನೆಗೆ "ನೀನೇ ಗತಿ" ಎಂದು ಗಟ್ಟಿಯಾದಾಗ "ಪೂರ್ಣ ಅನುಗ್ರಹ ಪಡೆದ" ಶಿವಮೊಗ್ಗದ ವಿಶ್ವೇಶ್ವರ ಶಾಸ್ತ್ರಿಗಳು, ಗುರುನಾಥರು ನಮ್ಮ ಸಂಸ್ಕೃತಿ, ನಿತ್ಯ ಕರ್ಮ, ಪ್ರತಿಯೊಬ್ಬನ ಧರ್ಮ-ಕರ್ಮಗಳ ಬಗ್ಗೆ ಅವರಿಗೆ ಕರುಣಿಸಿದ್ದನ್ನು ಇಂದಿಲ್ಲಿ ನಿತ್ಯ ಸತ್ಸಂಗಕ್ಕಾಗಿ ಹಂಚಿಕೊಂಡಿರುವುದನ್ನು ಅವರ ನುಡಿಯಲ್ಲೇ ಕೇಳೋಣ....
"ನನ್ನ ಬಳಿ ಇಷ್ಟೊಂದು ಕಷ್ಟ ತೋಡಿಕೊಂಡು ಬರುತ್ತೀರಲ್ಲಯ್ಯಾ .. ಒಂದು ಪ್ರಾರಬ್ಧ ಕರ್ಮವಾದರೆ ಇನ್ನೊಂದು ನಿತ್ಯ ಕರ್ಮದಿಂದ ನಾವು ವಿಮುಖರಾಗಿರುವುದು. ಒಂದು ಹೆಣ್ಣನ್ನೇ ನೋಡಿ. ಕುಂಕುಮ, ಅರಿಶಿಣ, ಬಳೆಯನ್ನು ಧರಿಸುವುದೇ ದೂರವಾಗಿ ಹೋಗಿದೆ. ಕುಂಕುಮವನ್ನು ಹಣೆಯ ಮೇಲೆಯೇ ಹಚ್ಚಬೇಕು.... ಹುಬ್ಬಿನ ನಡುವೆ ಸಣ್ಣದಾಗಿ ಚಂದನವನ್ನು ಹಚ್ಚಬೇಕು..... ಇದು ಆಕೆಯ ಬುದ್ಧಿಶಕ್ತಿಯನ್ನು ಜಾಗೃತಗೊಳಿಸಿ, ಬುದ್ಧಿವಂತೆಯಾಗಿಸುತ್ತದೆ. ಹೆಣ್ಣಿಗೆ ಕಪ್ಪು, ಕೆಂಪು, ಹಸಿರು ಬಳೆಗಳೇ ಶ್ರೇಷ್ಠ. ಎರಡೂ ಕೈಗೂ ಕನಿಷ್ಠ ಐದೈದು ಬಳೆಗಳನ್ನಾದರೂ ಇಡಬೇಕು. ಮುತ್ತೈದೆ ಎಂದರೆ ಅರಿಶಿನ, ಕುಂಕುಮ, ಬಲೇ, ಕಂಚುಕ, ಹೂವು, ಕಾಲುಂಗುರ, ಮಾಂಗಲ್ಯಗಳಿಂದ ಸುಶೋಭಿತಳಾದವಳೇ ಐದು ಮುತ್ತುಗಳ ಪಡೆದ ಮುತ್ತೈದೆ. ಬಳೆ ಬಿಚ್ಚೋಲೆ, ಮರದ ಜೊತೆ, ಅದರಲ್ಲಿರುವ ಧಾನ್ಯಗಳು ತವರಿನಿಂದ ಬಂದ ಭಾಗ್ಯಗಳು. ಆಕೆ ತನ್ನ ತವರನ್ನು ನಿರಂತರ ಸುಖವಾಗಿರಲೆಂದು ಆಶೀರ್ವದಿಸುತ್ತಾಳೆ. ಹೆಣ್ಣಿಗೆ ಪತಿ ಸೇವೆ, ತುಳಸಿ ಪೂಜೆ, ಮನೆಗೆ ಬಂದ ಅತಿಥಿಗಳ ಸತ್ಕಾರಗಳೇ ದೊಡ್ಡ ಧರ್ಮ... ಇವತ್ತು ಅವೆಲ್ಲಾ ನಶಿಸಿ ಹೋಗುತ್ತಿದೆ... ಇತರೆಯವರು ತಮ್ಮ ಸಂಸ್ಕೃತಿಗೆ ಬದ್ಧರಾಗಿದ್ದರೆ ನಾವಿದೆಲ್ಲಾ ಕಳೆದುಕೊಳ್ಳುತ್ತಿದ್ದೇವಲ್ಲಯ್ಯಾ.." ಎಂದು ನೊಂದುಕೊಳ್ಳುತ್ತಿದ್ದರು.
ಇನ್ನು ಗಂಡಸರ ನಿತ್ಯ ಕರ್ಮಗಳನ್ನು ಕುರಿತು ಅವರಾಡಿದ ಮಾತಿನ ಸಾರವನ್ನು ಶಾಸ್ತ್ರಿಗಳು ಹೀಗೆ ಹೇಳುತ್ತಾರೆ. "ಬ್ರಾಹ್ಮಣನಾದವನು ಹುಟ್ಟಿನಿಂದ ಬ್ರಾಹ್ಮಣನಾಗುವುದಿಲ್ಲ. ನಿತ್ಯ ಎರಡು ಹೊತ್ತು ಸಂಧ್ಯಾ ವಂದನೆಯನ್ನಾದರೂ ಮಾಡಲೇಬೇಕು. ಯಾರಿಗೆ ಎಷ್ಟು ಮಂತ್ರಗಳ ಉಪದೇಶವಿದ್ದರೂ 'ನಮಂತ್ರಃ ಪರಗಾಯತ್ರಿ, ನಮಾತೃ ಪರದೇವತಾಃ' ಎಂಬಂತೆ ಸಂಧ್ಯಾ ವಂದನೆಯನ್ನು ಮಾಡಬೇಕಾದಷ್ಟು ಅನಿವಾರ್ಯವಯ್ಯಾ" ಎನ್ನುತ್ತಿದ್ದರಂತೆ. ಅವರವರ ರೀತಿ ನೀತಿ ಧರ್ಮಗಳಿಗೆ ಅನುಸಾರವಾಗಿ ಗುರುನಾಥರು ಅತ್ಯಂತ ಸರಳವಾಗಿಯೂ, ಕೆಲವರಿಗೆ ಅತ್ಯಂತ ಕರ್ಮನಿರತರಾಗಿಯೂ ನಡೆಯಲು ಉಪದೇಶಿಸಿರುವುದು - ಗುರುನಾಥರ ಅಪಾರ ಭಕ್ತಿ ಸಮೂಹದ ವೈವಿಧ್ಯತೆಯನ್ನು ನೋಡಿದರೆ ಅರಿವಾಗುತ್ತದೆ.
ತಲೆಗೆಲ್ಲಾ ಒಂದೇ ಮಂತ್ರವೆಂದರಾಗದು. ಗುರುನಾಥರು ತಿಳಿಸಿದಂತೆ ನಡೆಯುವುದಷ್ಟೇ. ಅದನ್ನು ಟೀಕಿಸುವುದು ಯಾರಿಗೂ ಸಮ್ಮತವಲ್ಲ.
ಇನ್ನು ಪೌರೋಹಿತ್ಯವನ್ನು ಮನಸಾ ಭಗವಂತನ ಸೇವೆ ಎಂದು ಭಾವಿಸದೇ, ಅದನ್ನು ಕಮರ್ಷಿಯಲ್ ಆಗಿಸಿಕೊಂಡವರನ್ನು, ತಮ್ಮ ನಿತ್ಯ ಕರ್ಮಗಳಿಗೂ ವ್ಯವಧಾನವಿಲ್ಲದಂತೆ ದುಡಿಯುವವರನ್ನು ಕುರಿತು ಅವರಾಡಿದ ಮಾತುಗಳನ್ನು ಶಾಸ್ತ್ರಿಗಳ ಬಾಯಿಯಿಂದಲೇ ಕೇಳೋಣ... "ಪುರೋಹಿತರಾದವರೂ ಮೊದಲಿಗೆದ್ದು ಸ್ನಾನ, ಸಂಧ್ಯೆಗಳನ್ನು, ತಮ್ಮ ಮನೆಯ ದೇವರ ಪೂಜೆಯನ್ನು ಮೊದಲು ಮಾಡಲೇಬೇಕಯ್ಯಾ. ನಂತರ ತನ್ನ ಜೀವನೋಪಾಯವಾದ ಪೌರೋಹಿತ್ಯವನ್ನು ನಿಸ್ಪೃಹರಾಗಿ ಮಾಡಿದರೆ ಮಾತ್ರ ಪೌರೋಹಿತ್ಯದಿಂದ ಜೀವನವೂ ಸುಖಮಯವಾಗುತ್ತದೆ. ತೋರಿಕೆಗೆ ಮಂತ್ರಗಳನ್ನು ಜೋರಾಗಿ ಹೇಳಿ ಕರ್ಮನಿಷ್ಠೆ ಇಲ್ಲದೆ ತೆಗೆದುಕೊಳ್ಳುವ ದಾನ ದಕ್ಷಿಣೆಗಳಿಂದ, ಕರ್ತೃವಿಗೇನೋ ತನ್ನ ಕೆಲಸದಿಂದ ಸಮಾಧಾನ ದೊರೆತರೂ.. ಆ ಕರ್ಮವನ್ನು ಅನುಭವಿಸಬೇಕಾದವನು ತೆಗೆದುಕೊಂಡ ಪುರೋಹಿತನೇ. ಹಾಗಾಗಿಯೇ, ಅನೇಕ ಪುರೋಹಿತರುಗಳ ಮನೆ ಸಂಕಟ-ನೋವುಗಳಿಂದ ಬಳಲುತ್ತಿರುವುದು" ಎಂದರಂತೆ ಮಾರ್ಮಿಕವಾಗಿ.
ಗುರುನುಡಿಗಳನ್ನು ಆಲಿಸಿದ ಅನೇಕರಲ್ಲಿ ಮಹತ್ ಪರಿವರ್ತನೆಗಳಾಗಿರುವುದು ಎಲ್ಲೆಡೆ ಕಂಡು ಬರುವ ದೃಶ್ಯ. ಯಾರಿಗೆ ಎಲ್ಲಿ ಏನು ತಿಳಿಸಬೇಕೋ, ಅದನ್ನು ತಮ್ಮ ಮಾತುಗಳಲ್ಲಿ ಮಾರ್ಮಿಕವಾಗಿ ತಿಳಿಸುವುದು ಗುರುನಾಥರ ವೈಶಿಷ್ಟ್ಯ. ಯಾರು ತಪ್ಪನ್ನು ಮಾಡಿದವರೋ ಅವರು ತಿದ್ದಿಕೊಳ್ಳಲೊಂದು ಅವಕಾಶ ಒದಗಿಸುತ್ತಿದ್ದ ಕರುಣಾಳು ಗುರುನಾಥರು.
ಶ್ರಾದ್ಧ ಮಾಡಬೇಕೆಂದು ಅವಸರಿಸಿ ಹೋಗುವವರಿಗೆ ಗುರುನಾಥರು ಗೇಲಿ ಮಾಡುತ್ತಾ "ಜೀವಂತವಿದ್ದಾಗ ತಂದೆ ತಾಯಿಗಳ ಸೇವೆ ಮಾಡದೇ, ಒಂದು ಹನಿ ನೀರು ಕೊಡದೇ, ಧರ್ಮೋದಕ ಬಿಡುವುದು ನೀರು ಚೆಲ್ಲಿದಂತೆ, ಶ್ರಾದ್ಧ ಮಾಡುವುದು ನಮ್ಮ ರುಚಿಗೆ ವಡೆ ಮಾಡಿಕೊಂಡು ತಿಂದಂತೆ" ಎಂದು ಅನ್ನುತ್ತಿದ್ದರು.
"ಮನೆಯಲ್ಲಿ ಇಂದು ಶ್ರಾದ್ಧ ಮಾಡುವವರು ಎಷ್ಟು ಜನರಿದ್ದೀರಿ" ಎಂದು ಪ್ರಶ್ನಿಸುತ್ತಿದ್ದರಂತೆ. ಬೇರೆ ಬೇರೆ ಸಮಾರಂಭಗಳಿಗೆಲ್ಲಾ ಮನೆಯಲ್ಲಿ ಜಾಗವಿದೆ. ಜನ್ಮದಾತರ ಶ್ರಾದ್ಧ ಮಾಡಲು ಮಾಡಿ ನೀರು ಸಿಗುವುದಿಲ್ಲ, ಜಾಗ ಸಾಲದು, ಅನುಕೂಲವಿಲ್ಲ ಎಂಬ ಕಾರಣ ಒಡ್ಡಿ ಪಿತೃಗಣಗಳೂ ಅವರ ಮನೆಗೆ ಬಂದು ಹರಸಲಾಗದಂತೆ ಮಾಡಿಕೊಂಡವರಿಗೆ ಒಳಿತು ಹೀಗಾಗಲು ಸಾಧ್ಯ?" ಎಂದು ಪ್ರಶ್ನಿಸಿದ್ದಿದೆ. ಸಾಮೂಹಿಕ ಶ್ರಾದ್ಧಗಳು ನಡೆಯುವ ಈ ದಿನಗಳು, ಶ್ರದ್ಧಾ ರಹಿತವಾಗಿ "ಪ್ರಸಾದ ಕೊಟ್ಟುಬಿಡಿ - ನಮಗೆ ಪುರುಸೊತ್ತಿಲ್ಲ" ಎನ್ನುವ ಜನಗಳು - ಎಂತಹ ವೈಪರೀತ್ಯದ ದಿನ ಬಂದಿದೆ?
ಆದರೂ ಗುರುನಾಥರ ದರ್ಶನ ಮಾತ್ರದಿಂದ, ಅವರ ನಾಮಸ್ಮರಣೆ, ಅವರ ಸೇವೆ ಮಾಡುವುದರಿಂದ ಭಕ್ತ ಕೋಟಿಯ ಉದ್ಧಾರಗೈದ ಗುರುನಾಥರು ಕಲಿಯುಗದ ಕಾಮಧೇನು - ಕಲ್ಪವೃಕ್ಷವಾದರು... ಇವರ ಸದ್ವಿಚಾರಗಳು ನಿತ್ಯ ಸತ್ಸಂಗ ನಿರಂತರವಾಗಿರಲಿ.. ನಾಳೆಯೂ ನಮ್ಮೊಂದಿಗೆ ಇರುವಿರಲ್ಲವೇ ಮಿತ್ರರೇ?.....,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Parama poojya venkatachala avadootarige nanna saashtaanga pranaamagalu. Sarvarigu e kantaka dinda mukthi kottu manashanti honduvante asheervadisi Guruvarya. Hari om tatsat.
ReplyDelete