ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 12
ಬೆಸೆದ ಸಂಬಂಧ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರ ಅತ್ಯಂತ ಸನಿಹದ ಸಹವಾಸ ಹೊಂದಿದ್ದ ಭಕ್ತರೊಬ್ಬರು, ಅದೇನು ಗ್ರಹಚಾರವೋ, ಎಂಟು ವರ್ಷಗಳ ವನವಾಸ ಅನುಭವಿಸಿದರು. ಜೀವನ ಕಗ್ಗಂಟಾಯಿತು. ಲಕ್ಷಗಟ್ಟಲೇ ಸಾಲವಾಯಿತು. ಮಗನಿಗೆ ಅದೇನೋ ಮಂಕು ಕವಿದಂತಾಗಿತ್ತು.
ನಿರಂತರ ಅವರ ಮನೆಗೆ ಬರುತ್ತಿದ್ದ ಮತ್ತೊಬ್ಬ ಗುರುಗಳು, ತಮ್ಮ ಶಿಷ್ಯನ ಸಂಕಟ ನೋಡಲಾಗದೆ, ಕಡಿದು ಹೋದ ಗುರುನಾಥರ ಸಂಬಂಧವನ್ನು ಕೂಡಿಸಲು ಬಲವಂತದಿಂದ ಸಖರಾಯಪಟ್ಟಣಕ್ಕೆ ಕರೆದೊಯ್ದರು. ಕೆಲವೊಮ್ಮೆ ಗ್ರಹಚಾರ ಸರಿ ಇಲ್ಲದಿದ್ದಾಗ ಬೇಡದ ಈಗೋ ಬಂದು, ಎಲ್ಲ ಕೆಲಸಗಳನ್ನು ಮತ್ತಷ್ಟು ಕೆಡಿಸುತ್ತದೆ. ತಾನೇನೂ ಕೇಳಬಾರದೆಂದು ಇವರು ಹೋದಾಗ, "ಶಿಷ್ಯಾದಿಚ್ಛೇತ್ ಪರಾಜಯಂ" ಎಂಬ ಮಾತಿನಂತೆ ಗುರುನಾಥರೇ ಮಾತನಾಡಿಸಿ "ಎಲ್ಲಿ ಹೋಯಿತಾ.... ಕಳಕೊಂಡೆಯಾ.. ಈಗ ಬಂದೆಯಾ ಒಳ್ಳೆಯದಾಯಿತು" ಎಂದು ಮಾತನಾಡಿಸಿ, ಸಾಂತ್ವನ ಹೇಳಿ, ಅವರ ಮಗನನ್ನು ಒಂದು ಬೇರೆಡೆ ಕೂರಿಸಿ, ಅವನಿಗೊಂದು ಹಸಿರು ಬಟ್ಟೆಯನ್ನು ಹೊದಿಸಿ, ಮುಸಲ್ಮಾನ ಗುರುಗಳ ಬಳಿ ಇರುವಂತಹ ಒಂದು ಜಪಸರವನ್ನು ಅವನ ಕೈಗೆ ನೀಡಿದರು. ಎಲ್ಲಾ ಬೆರಗಾಗಿ ಇದೇನು ಮಾಡುತ್ತಿದ್ದಾರೆಂದು ಬಿಟ್ಟ ಕಣ್ಣು ಬಿಟ್ಟು ನೋಡುತ್ತಿದ್ದರು.
ಉರ್ದುವಿನ ಗಂಧಗಾಳಿ ಇಲ್ಲದ ಆ ಹುಡುಗ ಕುರಾನಿನ ಅನೇಕ ಶ್ಲೋಕಗಳನ್ನು ಮಂತ್ರಗಳನ್ನು ಪಟಪಟನೆ ಹೇಳತೊಡಗಿದ. ಆಶ್ಚರ್ಯ ಇವನೆಲ್ಲಿ ಕಲಿತನೆಂಬುದು ತಂದೆ ತಾಯಿಗಳಿಗೆ ತಿಳಿಯಲಿಲ್ಲ.
ನಂತರ ಗುರುನಾಥರು ಅವನನ್ನು ಉಪಶಮನಗೊಳಿಸಿ "ಇವನಿಗೆ ಮುಸಲ್ಮಾನ ಶಕ್ತಿಯ ಕೃತ್ರಿಮ ನಡೆದಿದೆ" ಎಂದು ಹೇಳಿ - ಬ್ರಾಹ್ಮಣರನ್ನು ಕರೆಸಿ ವಿರಜಾಹೋಮವನ್ನು ಮಾಡಿಸಿದರು. ತೀರ್ಥನಾರಾಯಣನ ಪೂಜೆಯನ್ನು ಮಾಡಿಸಿ, ಬಂಧನಗಳಿಂದ ಮುಕ್ತಗೊಳಿಸಿ "ಇವನಿಗೆ ಈಗ ಎಲ್ಲಾ ಸರಿಯಾಯಿತು. ನಿಮ್ಮ ಕಷ್ಟಗಳೆಲ್ಲಾ ಕರಗುವ ತಿನ ಬಂದಿದೆ. ಇನ್ನು ಹದಿನೈದು ದಿನದಲ್ಲಿ ಇವನಿಗೆ ಕೆಲಸವಾಗುತ್ತದೆ" ಎಂದು ಆಶೀರ್ವದಿಸಿದರು. ಕೃಷ್ಣನಿಂದ ಪಾಂಡವರು, ವನವಾಸಮುಕ್ತರಾದಂತೆ ಆಯಿತು ಇವರಿಗೆ.
ಕಷ್ಟದ ಸರಮಾಲೆಯಲ್ಲಿ ನಲುಗಿ, ನಗುವುದನ್ನೇ ಮರೆತ ಆ ಭಕ್ತರಿಗೆ, ಇನ್ನೂ ಗುರುನಾಥರ ನುಡಿಯ ಮೇಲೆ ನಂಬಿಕೆ ಬರಲಿಲ್ಲ. ನಮಗೆಂತಹ ಕೆಲಸ ಸಿಗುತ್ತೆ ಗುರುನಾಥರು ತಮಾಷೆ ಮಾಡುತ್ತಿದ್ದಾರೆ ಎಂದು ನಗು ಬಂದಿತು.
ಒಬ್ಬ ಗುರುವನ್ನು ನಾವು ಮರೆತರೂ, ಗುರುವಿನ ಮತ್ತೊಂದು ಸ್ವರೂಪ ಇವರನ್ನು ಮತ್ತೆ ಸರಿದಾರಿಗೆ ತಂದಿತ್ತು. ದಾರಿಯಲ್ಲಿ ಬಸ್ ನಲ್ಲಿ ಬರುವಾಗಲೇ ಇವರ ಮಗನ ಸ್ನೇಹಿತನಿಂದ ಫೋನ್ ಬಂದಿತು. "ನಾಳೆ ಒಂದು ಮೆಡಿಕಲ್ ಕಂಪೆನಿಯ ಇಂಟರ್ ವ್ಯೂ ಇದೆ. ಖಂಡಿತಾ ಬಾ" ಎಂದು. ಓದಿದ್ದು ಎಲೆಕ್ಟ್ರಿಕಲ್ ಇಂಟರ್ ವ್ಯೂ ಬಂದಿರುವುದು ಮೆಡಿಕಲ್ ಕಂಪೆನಿಯಿಂದ.
ಗುರುಗಳು ಏನೂ ಮಾಡಿಸಬಲ್ಲರು ಎಂದು ಮಾರನೇ ದಿನ ಅಂಜುತ್ತಲೇ ಇಂಟರ್ ವ್ಯೂಗೆ ಹೋದಾಗ ಪಾಸಾಯಿತು. ಫೈನಲ್ ಇಂಟರ್ ವ್ಯೂಗೆ ಬಾಂಬೆಗೆ ಹೋಗಬೇಕಿತ್ತು.
ಅರಿಯದ ಜಾಗ, ಬಂಧುವೊಬ್ಬರ ನೆನಪಾಯಿತು. ಬಾಂಬೆಯ ಆ ಬಂಧುಗಳು ಸಹಕರಿಸಿದರು. ಎರಡು ಇಂಟರ್ ವ್ಯೂ ದಾಟಿ ಮೂರನೆಯದನ್ನು ಫೇಸ್ ಮಾಡುವಾಗ, ಆ ಭಕ್ತರ ಸೋದರಮಾವನೇ ಬಾಸ್. ಅಲ್ಲೂ ಪಾಸಾಗಿ ಫೈನಲ್ ಇಂಟರ್ ವ್ಯೂಗೆ ಹೋದಾಗ ಅಭ್ಯರ್ಥಿಯ ಬಾಲ್ಯ ಸ್ನೇಹಿತನೇ ಇಂಟರ್ ವ್ಯೂ ಅಧಿಕಾರಿ. ಮುಂದೇನು ಕೇಳಬೇಕು. ಗುರುನಾಥರು ಎಲ್ಲೆಡೆಯಲ್ಲಿ ಅನುಕೂಲ ಕಲ್ಪಿಸಿದ್ದರು. ಬಾಸೇ ಸ್ವತಃ ಪರಿಚಯಿಸಿಕೊಂಡು ಬಾಲ್ಯದ ಗೆಳೆತನವನ್ನು ಜ್ಞಾಪಿಸಿದರು.
ಎಲ್ಲಿಯೋ ಕುಳಿತು, ಏನೇನೋ ವಾತಾವರಣವನ್ನು ನಿರ್ಮಿಸಿ, ಭಕ್ತರಿಗೆ ಅನುಕೂಲಿಸುವ ಗುರುನಾಥರು, ಪವಾಡ ಸದೃಶ ಕೆಲಸವನ್ನು ಕರುಣಿಸಿದ್ದರಲ್ಲದೆ, ನೊಂದು ಬೆಂದ ತಮ್ಮ ಭಕ್ತರ ಪರಿವಾರವನ್ನು ಕೈ ಹಿಡಿದು ಉದ್ಧರಿಸಿದ್ದು ಹೀಗೆ. ಈಗ ಆ ಹುಡುಗ ಗುರುನಾಥರ ಭಕ್ತನಾಗಿ, ಅತ್ಯುನ್ನತ ಹುದ್ದೆಯನ್ನು ಆ ಕಂಪೆನಿಯಲ್ಲಿ ಪಡೆದು ಸುಖವಾಗಿದ್ದಾನೆ. ಗುರುಸೇವೆಯಲ್ಲಿ ನಿರತನಾಗಿದ್ದಾನೆ.
ಏನೇ ಓದಿರಲಿ. ಅದಕ್ಕೆ ಸಂಬಂಧವಿಲ್ಲದೆಡೆಯಲ್ಲಿಯೂ ಕೂರಿಸಿ, ಸಲಹಿದ ಗುರುಕಾರುಣ್ಯ ಹೇಗಿದೆ ನೋಡಿ. ಗುರುವಿನಿಂದ ದೂರವಾಗಿ ನಾವು ತೊಂದರೆ ಅನುಭವಿಸುವುದು ಮೇಲ್ನೋಟಕ್ಕೆ ಕಂಡರೂ ಗುರುವಿಗೂ ನಮಗಿಂತ ಅಧಿಕವಾದ ವ್ಯಥೆಯಾಗಿರುತ್ತೆ. ತಮ್ಮ ಶಿಷ್ಯ ಕಷ್ಟ ಪಡುವುದನ್ನು ಕಂಡು ಕಷ್ಟ ದೂರಮಾಡಲು ಗುರುವೂ ತವಕದಿಂದ ಇರುತ್ತಾನೆಂಬುದೆಲ್ಲ ಅರಿವಾಗುತ್ತೆ. ಓದುಗ ಪ್ರಿಯರೆ ಗುರು ಕಥಾನಕದ ಮುಂದಿನ ಪುಟವನ್ನು ನಾಳೆ ತೆರೆಯೋಣ... ಬರುವಿರಲ್ಲಾ...
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Poojya venkatachala gurugalige nanna bhakti poorvaka namanagalu. Sarvarigu Yella kaaladalli olleyadaaguvante asheervadisi Kaapadi Guruvarya. Sarve jano sukinobavantu.
ReplyDelete