ಒಟ್ಟು ನೋಟಗಳು

Monday, March 13, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 4


ಪಾದುಕಾ ಪುರಾಣ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಗುರುನಾಥರ ಭಕ್ತರ ಮನೆಗಳಿಗೆ ಹೋದಾಗಲೆಲ್ಲಾ, ಅನೇಕ ಮನೆಗಳಲ್ಲಿ ಶ್ರೀ ವೆಂಕಟಾಚಲ ಅವಧೂತರು ನೀಡಿದ ವಸ್ತುಗಳು, ಅವರು ಸ್ಪರ್ಶ ಮಾಡಿ ನೀಡಿದ ಅಡಿಕೆ, ನಾಣ್ಯಗಳು, ಅವರುಟ್ಟಿದ್ದ ಬಟ್ಟೆಗಳನ್ನು ಬಹಳ ಜತನವಾಗಿ ಇಡುವುದು ಸಹಜ. ಆ ವಸ್ತುಗಳಲ್ಲೂ ಗುರುನಾಥರನ್ನು ಕಾಣುವ ವಿಶಾಲ ಗೌರವ ಭಾವ ಅವರದು. ಕೆಲವೊಮ್ಮೆ ಗುರುಗಳೇ ತಮ್ಮ ವಸ್ತುಗಳನ್ನು ಅವರ ಭಕ್ತರಿಗೆ ನೀಡಿದ್ದಿದೆ. ಇದ್ಯಾಕೆ ನಮಗೆ ಗುರುನಾಥರೇ ಎಂದಾಗ ಸಮಯ ಬಂದಾಗ ತಿಳಿಯುತ್ತದೆ ಎಂದಿದ್ದೂ ಇದೆ. 

ಅಂತಹ ಭಾವುಕ ಭಕ್ತ ಕುಟುಂಬ ಒಂದು, ನಿರಂತರ ಗುರುನಾಥರನ್ನು ಕಾಣಲು ಸಖರಾಯಪಟ್ಟಣಕ್ಕೆ ಹೋಗುತ್ತಿದ್ದರು. ಮಕ್ಕಳು ಮರಿಗಳೂ ತಂದೆ ತಾಯಿಯರಂತೆ ಗುರುನಾಥರ ಅವಿರತ ಭಕ್ತಿಯಲ್ಲಿ ಬೆಳೆದರು. ಅದಕ್ಕೆ ಗಾದೆ ಮಾತಿರುವುದು, "ತಾಯಿಯಂತೆ ಮಕ್ಕಳು ನೂಲಿನಂತೆ ಸೀರೆ" ಎಂದು. ಗುರುನಾಥರ ವಿಶೇಷವೇ ಅದು.... ತಾನೊಬ್ಬ ಬಂದರೆ ಸಾಲದು ಅವನ ಇಡೀ ಕುಟುಂಬವನ್ನು ಎಳೆದು ತಂದು ಉದ್ಧಾರ ಮಾಡುವ ರೀತಿ ಅನನ್ಯ. ಹೀಗೆ ಭಕ್ತರ ಮನೆಗಳಿಗೂ ಯಾವಾಗಲೆಂದರೆ ಅವಾಗ ಬರುತ್ತಿದ್ದ ಗುರುನಾಥರು ಈ ಕುಟುಂಬದವರ ಮನೆಗೂ ಬಂದು ಆಶೀರ್ವದಿಸಿ ಹೋಗುತ್ತಿದ್ದರು. 

ಹತ್ತಿರ ಇದ್ದಾಗ ನಮಗೆ ಅದರ ಬೆಲೆ ತಿಳಿಯುವುದಿಲ್ಲವೋ.... ಅಥವಾ ಇಲ್ಲೇ ಇದೆಯಲ್ಲ ಎಂಬುವ ಸದ್ಯಃತೃಪ್ತಿ. ಮುಂದಿನ ಯಾವ ಆಲೋಚನೆಗೂ ದಾರಿ ಮಾಡಿ ಕೊಡುವುದಿಲ್ಲವೋ ಹೇಳುವುದು ಕಷ್ಟ. ನಿರಂತರ ಗುರುನಾಥರ ಸಹವಾಸದ ಈ ಕುಟುಂಬದ ದಂಪತಿಗಳಿಗೂ ಎಲ್ಲ ಗುರು ಭಕ್ತರಿಗೆ ಆದಂತೆ ಗುರುನಾಥರ ವಿಯೋಗ ಭರಿಸಲಾರದ ದುಃಖ ತಂದಿತ್ತು. ದಿನ ಕಳೆಯುತ್ತಾ ಎಲ್ಲ ಮರೆಯುತ್ತದೆ. ಆದರೆ ಗುರು ವಿಯೋಗದ ಬಾಧೆ ಇವರನ್ನು ಕಾಡುತ್ತಲೇ ಇತ್ತು. ಗುರುನಾಥರು ತಮ್ಮೊಂದಿಗೆ ಇದ್ದಾಗಿನ ಘಟನೆಗಳನ್ನು ಮೆಲುಕು ಹಾಕುತ್ತಿದ್ದರು. ಒಮ್ಮೆ ಅವರಲ್ಲಿ ಒಂದು ಭಾವವು ಕ್ಷಣ ಮಾತ್ರದಲ್ಲಿ ಮಿಂಚಿ ಮಾಯವಾಗಿತ್ತು. ಅದೆಂದರೆ, "ಗುರುನಾಥರ ಒಂದು ಪಾದುಕೆಯನ್ನಾದರೂ ನಾವು ಪಡೆಯಬಾರದಿತ್ತೇ? ಎಂತಹ ಮೌಢ್ಯ ನಮ್ಮದು? ನಮಗಿಷ್ಟೂ ಕರುಣಿಸಬಾರದಿತ್ತೇ ಗುರುವೇ?" ಎಂದು ಅನನ್ಯವಾಗಿ ಮನದಲ್ಲೇ ಪ್ರಾರ್ಥಿಸಿದರು. 

ಹೇಗಿದೆ ನೋಡಿ, ನಮ್ಮ ಮೌಢ್ಯ, ಆಲಸ್ಯಕ್ಕೂ ನಾವು ಗುರುವನ್ನೇ ಗುರಿ ಮಾಡುವುದು ತಪ್ಪೇನಿದೆ ಇದರಲ್ಲಿ. ನಮ್ಮನ್ನು ಸರ್ವಸ್ವವಾಗಿ ಒಪ್ಪಿಕೊಂಡ ಮೇಲೆ ನಮ್ಮ ಎಲ್ಲವನ್ನೂ ನಡೆಸುವುದು ಅವನ ಕರ್ತವ್ಯವಲ್ಲವೇ ಎನ್ನುವ ವಾದವೂ ಇದೆ. ಅದು ಸರಿಯೂ ಹೌದು. ಆದರೆ ಅದರ ಹಿಂದೆ ಆ ನಿಷ್ಕಲ್ಮಶ ಪ್ರೀತಿ, ನಿಶ್ಚಲ ಭಾವವನ್ನು ಮಾತ್ರ ನಾವು ಗುರುನಾಥರಿಗೆ ಅರ್ಪಿಸಲೇ ಬೇಕು. ನಾವಿನ್ನೇನು ಕೊಡಲು ಸಾಧ್ಯ ಆ ಮಹಾಮಹಿಮರಿಗೆ. ಅವರೇನೂ ಮುಟ್ಟುತ್ತಲೇ ಇರಲಿಲ್ಲ. ಬರಿ ಕೊಡುವುದೊಂದೇ ಅವರ ಗುಣವಾಗಿದೆಯಲ್ಲಾ. 

ಆ ಕುಟುಂಬದ ಕೂಗು ಗುರುನಾಥರಿಗೆ ಕೇಳದೆ ಇರುತ್ತದೆಯೇ? "ಅಯ್ಯೋ ಹುಚ್ಚಪ್ಪ, ನಾನಿಲ್ಲಿ ಹೋಗಿದ್ದೇನೆ. ನಿನ್ನ ಭ್ರಾಂತಿ ಬಿಡು. ನಿನದೆಲ್ಲಾ ನನಗೆ ತಿಳಿದಿದೆ. ನನಗೇನು ಬೇಕೋ ಅದನ್ನು ನೀನು ನೀಡಿದಾಗ, ನಿನಗೆ ಬೇಕಾದ್ದನ್ನು ನಾನು ನೀಡದೇ ಇರುತ್ತೇನೆಯೇ?" ಎಂಬಂತೆ ಅವರ ಮನದಾಸೆಯನ್ನು ತೀರಿಸಿಯೇ ಬಿಟ್ಟರು ಗುರುನಾಥರು. 

ಪ್ರಿಯ ಓದುಗ ಭಕ್ತರೇ.... ಇದು ಹೇಗೆ ಎಂಬ ಭಾವ ನಿಮ್ಮ ಮನದಲ್ಲಿ ಪ್ರಶ್ನೆಯಾಗಿ ಉದ್ಭವಿಸಿದೆಯೇ.. ಕ್ಷಣ ನಿಲ್ಲಿರಿ... ಮುಂದೆ ಓದಿರಿ..... 

ಅಂದು ಆ ಮನೆಯೊಡತಿ ಬೇರೆಲ್ಲಿಗೋ ಹೋಗಿದ್ದರು. ಮನೆಯಾತ ಮನೆಯಲ್ಲಿದ್ದರು. ಬಾಗಿಲು ಬಡಿದ ಶಬ್ದವಾಯಿತು. ಇವರು ಹೋಗಿ ಬಾಗಿಲು ತೆರೆದಾಗ ಹಣ್ಣು ಹಣ್ಣು ಮುದುಕಿಯೊಂದು ನಿಂತಿತ್ತು. "ಏನಪ್ಪಾ ಅದೇನೋ ಗುರುಗಳದ್ದು ಪಾದುಕೆ ಬೇಕೆನ್ನುತ್ತಿದ್ದೆಯಲ್ಲಾ, ತಕೋಪ್ಪಾ ಇದು ಅವರೇ ಧರಿಸಿದ್ದು. ನಿನಗೆ ಕೊಡುತ್ತಿದ್ದೇನೆ" ಎಂದು ಎರಡು ಹವಾಯಿ ಚಪ್ಪಲಿಗಳನ್ನು ಅವರ ಮುಂದೆ ತನ್ನ ಕೈ ಚೀಲದಿಂದ ತೆಗೆದಿಟ್ಟಿತು. "ಅಜ್ಜಿ ಇದೆಲ್ಲಾ ನಿಂಗೆ ಹೇಗೆ ಗೊತ್ತು. ನಿನಗ್ಯಾರು ಹೇಳಿದರು?" ಎಂದು ಹೇಳುತ್ತಲೇ ಗುರುನಾಥರ ಪಾದುಕೆಗಳನ್ನು ದಿವ್ಯ ನಿಧಿಯಂತೆ, ತೆಗೆದುಕೊಂಡು, ತಲೆಯ ಮೇಲೆ ಇರಿಸಿಕೊಂಡು ಭಕ್ತಿ ಭಾವದಿಂದ ಒಳ ಹೋಗಿ, ಪೂಜ್ಯ ಸ್ಥಾನದಲ್ಲಿ ಅದನ್ನಿಟ್ಟು ಬಂದು ನೋಡುವುದರಲ್ಲಿ ಅಲ್ಲಿ ಯಾರೂ ಇರಲಿಲ್ಲ. ಬರಿಗಾಲಲ್ಲಿ ಗುರುನಾಥರಂತೆ ಬಂದ ಆ ಮುದುಕಿಗಾಗಿ ಸುತ್ತ ಮುತ್ತ ಎಲ್ಲಾ ತಿರುಗಾಡಿ, ಅಲ್ಲಿದ್ದ ಜನಗಳನ್ನೆಲ್ಲಾ ಕೇಳಿ, ಆ ಚಹರೆಯ ವಿವರ ಹೇಳಿದಾಗ "ಇಲ್ಲಿ ಯಾರೂ ಅಂತಹವರು ಕಾಣಲಿಲ್ಲ" ಎಂಬ ಉತ್ತರ ಬಂದಿತು. ಹಾಗೆಂದರೆ, ಆ ಮುದುಕಿ ಎಲ್ಲಿ? ಆ ರೂಪದಲ್ಲಿ ಬಂದವರು ಯಾರು? ಇವರ ಮನದ ಬಯಕೆ ಆ ಮುದುಕಿಗೆ ಹೇಗೆ ತಿಳಿಯಿತು. ತರ್ಕಕ್ಕೆ ಉತ್ತರವಿಲ್ಲ. ಹುಡುಕಾಟ ಬಿಟ್ಟು, ಭಾವನೆಯೊಳಗೆ ನೆಮ್ಮದಿ ಕಂಡರು ಆ ಭಕ್ತರು. ಆದರೆ ಗುರುನಾಥರ ಅಪಾರ ಕರುಣೆಯ ಅನುಭವ ಅವರ ನಿತ್ಯ ಸತ್ಯತೆಯ, ನಿರಂತರ ಇರುವಿಕೆಯ ಅನುಭವ ಅವರಿಗಾಗಿತ್ತು. ಮಾನ್ಯ ಓದುಗ ಭಕ್ತರೇ, ನಿತ್ಯ ಸತ್ಸಂಗಕ್ಕೆ ನಾಳೆಯೂ ಬರುವಿರಲ್ಲ.....,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।



For more info visit :  http://srivenkatachalaavadhoota.blogspot.in/

1 comment:

  1. Parama poojya venkatachala avadootarige nanna bhakti poorvaka namanagalu. Yellaranu sadaa kaala Kaapadi uddarisi asheervadisi Guruvarya. Sarve jano sukinobavantu.

    ReplyDelete