ಒಟ್ಟು ನೋಟಗಳು

Saturday, March 11, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 2


ಗುಡ್ಡವನ್ನು ಕಡ್ಡಿ ಮಾಡಿದ ಗುರುನಾಥರು 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಚಿಕ್ಕಮಗಳೂರಿನ ಸನಿಹದ ಹಿರೇಮಗಳೂರಿನ ಕೋದಂಡರಾಮ ದೇವಾಲಯ. ವಿಶಾಲ ಹೃದಯಿಗಳಾದ ಅರ್ಚಕರು ಎಲ್ಲರನ್ನೂ ಸಮಾನವಾಗಿ ಕಾಣುವವರು. ಹಾಗೇ ಸುಮ್ಮನೆ ದೇವಾಲಯದ ಬಳಿ ಬರುವ ಕೆಲ ಯುವಕರು ಅರ್ಚಕರ ಮಾತಿಗೆ ಬೆರಗಾದರು, ಸಂತಸಪಟ್ಟರು, ನಿತ್ಯ ಅವರೊಂದಿಗೆ ಇರತೊಡಗಿದರು. ಅರ್ಚಕರ ನೀತಿ ಮಾತುಗಳು, ಸತ್ಯ ಕಥೆಗಳು ಅವರಲ್ಲೇನೋ ಬದಲಾವಣೆ ತಂದಿರಬೇಕು. ಶಿಷ್ಯರಾಗಿ ಮಂತ್ರ ಕಲಿತರು, ಸಹಸ್ರನಾಮ ಹೇಳಿದರು, ವಿಷ್ಣು ಸ್ತೋತ್ರ ಮಾಡಿದರು. ಕೊನೆಗೆ ಕೋದಂಡರಾಮನ ರಥೋತ್ಸವದ ಪೂಜಾ ಕೈಂಕರ್ಯವನ್ನೂ ಮಾಡುವ ಕ್ಷಮತೆ ಬಂದಾಗ "ದೀಕ್ಷೆ ನೀಡಿ ಅವರಿಂದಲೇ ರಥೋತ್ಸವ ನಡೆಸುವ" ನಿರ್ಧಾರ ಮಾಡಿದರು ಅರ್ಚಕರು. 

ಗಾಳಿಯಲ್ಲಿ ಸುದ್ದಿ ಹರಡಿ ಓದಿ ಬಂದ ಮಡಿವಂತರೆಲ್ಲಾ ಧಮಕಿ ಹಾಕಿದರು. ಇದು ಅಸಾಧ್ಯ ಆಗಬಿಡುವುದಿಲ್ಲ ಎಂದರು ಕೆಲವರು.  ರಥೋತ್ಸವದ ಪ್ರಶಾಂತ ವಾತಾವರಣ, ಪ್ರಕ್ಷುಬ್ಧ ಸ್ಥಿತಿಗೆ ಬಂದು ನಿಂತಿತು. ಏನು ಮಾಡಬೇಕು? ಮುಂದೇನು? ಎಂದು ಎಲ್ಲ ಚಿಂತಿಸುತ್ತಿರುವಾಗ.... 

ಅದೋ ಅವರು ಬಂದೇ  ಬಿಟ್ಟರು ... "ಏನಯ್ಯಾ ಸಮಸ್ಯೆ... ಇಷ್ಟೇ ತಾನೇ.... ಬನ್ನಿರಯ್ಯಾ... ನಿಮಗೆಲ್ಲಾ ಕಂಕಣ ಕಟ್ಟೋಣ, ಸ್ನಾನ ಮಾಡಿರಯ್ಯಾ... ಓಹೋ ರಾಮನ ಸೇವೆ ಮಾಡುವ ನಿಮ್ಮಲ್ಲೆಲ್ಲಾ ಆ ರಾಮನೇ ತುಂಬಿದ್ದಾನಯ್ಯಾ" ಎಂದು ಆ ಎಲ್ಲಾ ಯುವಕರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಎಲ್ಲರ ಅಂತರಂಗದಲ್ಲಿ ಪರಮಾತ್ಮನಿದ್ದಾನೆಂದು ಓದಿದ್ದರೂ, ಕೇಳಿದ್ದರೂ ಕಾಣಲಾಗದೆ ತಕರಾರು ಮಾಡುತ್ತಾ ಅಲ್ಲಿ ನಿಂತಿದ್ದ ಮಂದಿ ಇವರು ನಮಸ್ಕರಿಸುತ್ತಿದ್ದಂತೆ ಎಲ್ಲರೂ ನಮಸ್ಕರಿಸಿದ್ದರು. ಪ್ರಕ್ಷುಬ್ಧ ವಾತಾವರಣ ಶಾಂತವಾಗಿ ರಾಮನ ಸೇವೆ ನಿರಾತಂಕವಾಗಿ ಸಾಗಿತ್ತು. 

ಈ ಮಹಾಪುರುಷನಾರಪ್ಪ? ಎಂದು ಯೋಚಿಸುತ್ತಿದ್ದೀರಾ.. ಅವರು ಮತ್ಯಾರು ಅಲ್ಲ.... ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು. ಯಾರೂ ಕರೆಯದೆ, ಸಂಕಟದಲ್ಲಿದ್ದವರಿಗೆ ಸಹಕರಿಸಲು, ಸಮಾಜ ಸ್ವಾಸ್ಥ್ಯ ಕೆಡಲಿರುವುದನ್ನು ಅರಿತು, ಸರಳವಾಗಿ ಸಹಜವಾಗಿ ಸಮಸ್ಯೆಯನ್ನು ಬಗೆಹರಿಸಿ ಅಲ್ಲಿಂದ ಅದಾವಾಗಲೋ ಹೊರಟುಬಿಟ್ಟಿದ್ದರು ಗುರುನಾಥರು. ಇಂತಹ ಸುಂದರವಾದ ಗುರುಲೀಲೆಗಳಿಗೆ ಕೊನೆ ಮೊದಲಿಲ್ಲ. 

ಮತ್ತೊಂದೆಡೆ ಗುರುನಾಥರೇ ತಮ್ಮ ಶಿಷ್ಯರೊಬ್ಬರ ತೋಟದಲ್ಲಿ ತೆಂಗಿನ ಗಿಡಗಳನ್ನು ನೆಡುವ ಕೆಲಸ ಮಾಡಿದರು. ಅರ್ಜುನನ ಗಾಡಿಯ ಸಾರಥ್ಯವನ್ನು ಕೃಷ್ಣ ಪರಮಾತ್ಮನೇ ವಹಿಸಿದ ಮೇಲೆ ಇನ್ನೇನಿದೆ. ಭಕ್ತರ ಹಿತ ಚಿಂತಕರಾದ ಗುರುನಾಥರ ರೀತಿಯೇ ಹೀಗೆ. 

ಕೆಲ ವರ್ಷಗಳಲ್ಲಿ ತೆಂಗಿನ ತೋಟ ಬೆಳೆದು ಫಸಲು ಬಂದಿತು. ಮೊದಲ ಎಳನೀರಿನ ಗೊನೆಯನ್ನು ಗುರುನಾಥರಿಗೆ ಅರ್ಪಿಸಿ ಎಳೆನೀರು ಕುಡಿಸಬೇಕೆಂಬುದು, ತೋಟದ ಮಾಲೀಕರೂ, ಇವರ ಶಿಷ್ಯರೂ ಆದ ಆ ಭಕ್ತರ ಹಂಬಲ. 

ಗುರುನಾಥರನ್ನು ಅಂದು ಬೆಳಗಿನ ಹತ್ತರ ಸಮಯದಲ್ಲಿ ತೋಟಕ್ಕೆ ಕರೆದೊಯ್ದು ಆ ಭಕ್ತ ಶಿರೋಮಣಿ, ಎಳೆನೀರು ಕೊಚ್ಚಿ ಗುರುನಾಥರಿಗೆ ನೀಡುತ್ತಾ "ತೆಗೆದುಕೊಳ್ಳಿ" ಎಂದರು ಭಕ್ತಿಭಾವದಿಂದ. 

ಗುರುನಾಥರೆಂದರು.... ತಡಿಯಯ್ಯಾ ಅಲ್ಲಿ..... ದೂರದಲ್ಲಿ ಒಂದು ಅಜ್ಜಿ ಬರುತ್ತಿದ್ದಾರೆ... ಮೊದಲು ಆ ಅಜ್ಜಿಗೆ ಕೊಟ್ಟು ಬಾ ಎಂದರು. ಅಂತೆಯೇ ಅಜ್ಜಿಗೆ ಎಳೆನೀರು ಕೊಟ್ಟು ಬಂದ ನಂತರ ಗುರುನಾಥರು ಎಳೆನೀರು ಸ್ವೀಕರಿಸಿದರು. 

ಆ ಅಜ್ಜಿ ಯಾರು ಗೊತ್ತೇ ಓದುಗ ಭಕ್ತರೇ? ತನ್ನ ಇಳಿ  ವಯಸ್ಸಿನಲ್ಲೂ ತೆಂಗಿನ ಗಿಡಗಳಿಗೆ ನೀರೆರೆದು ಪೋಷಿಸಿದ ಕೂಲಿಯವಳು. "ನನಗಿಂತ ಮೊದಲು ಅವಳಿಗೆ ಇದರ ಮೇಲೆ ಹಕ್ಕಿದೆಯಯ್ಯಾ" ಎಂದಂದು ಗುರುನಾಥರು ಸುಮ್ಮನಾದರು. 

ತೋಟದೊಡೆಯನಿಗೊಂದು ಗುರುಪಾಠವಾಯಿತು. ಕೆಲಸಗರರ ಬಗ್ಗೆ ಅವರಲ್ಲಿದ್ದ ಭಾವನೆಯೇ ಬದಲಾಯಿತಂತೆ... ಹೇಗಿದೆ ಗುರುನಾಥರ ಲೇಲೆ. ಮೌನವಾದ ಉಪದೇಶಗಳು... ಮಾತು ಬೆಳ್ಳಿಯಾದರೆ, ಮೌನ ಬಂಗಾರ... ನಾಳೆ ನಮ್ಮೊಂದಿಗೆ ಇರುವಿರಲ್ಲ ಮುಂದಿನ ಘಟನೆಗೆ ಸಾಕ್ಷಿಯಾಗಲು....... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।



For more info visit :  http://srivenkatachalaavadhoota.blogspot.in/

1 comment:

  1. Parama poojya venkatachala avadootarige nanna poojya namanagalu. Yella kaaladalli Sarvarannu uddarisi asheervadisi Kaapadi Guruvarya. Hari om tatsat.

    ReplyDelete