ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 152
ಗ್ರಂಥ ರಚನೆ - ಚರಣದಾಸ
ತಳ್ಳಲಾ ಸ್ವಾಮೀ ಗಾಡಿನಾ...... ?
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸದ್ಗುರು ಸ್ವರೂಪನು ಯಾವಾಗಲೂ ತನ್ನ ನಿಜ ಭಕ್ತರ ಉಸಿರಿಗೆ ಉಸಿರಾಗಿ, ಕಾವಲುಗಾರನಂತೆ ಕಾಪಾಡುವನು. ಕಣ್ಣ ರೆಪ್ಪೆಗಳು ಕಣ್ಣನ್ನು ಕಾಯುವಂತೆ.......
ಈಗ ಹೇಳ ಹೊರಟಿರುವ ವ್ಯಕ್ತಿ - ಗುರುನಾಥರ ಸಂಬಂಧ ಸುಮಾರು 25 ವರ್ಷ ಹಿಂದಿನದು. ಇತ್ತೀಚೆಗೆ ನನ್ನೊಂದಿಗೆ ಮಾತಿಗಿಳಿದ ಆತನ ಮಾತಿನಲ್ಲಿ ಯಾವುದೇ ಅಹಂಭಾವ, ಅತಿರೇಖಗಳು ಕಾಣಲಿಲ್ಲ. ಬದಲಿಗೆ ಸದಾನಂದ ಭಾವ ಕಾಣುತ್ತಿತ್ತು.
"ನೋಡಿ ಹಲವು ವರ್ಷದ ಹಿಂದೆ ನನ್ನ ಬಂಧು ಒಬ್ಬರ ಮದುವೆ ಸಮಾರಂಭಕ್ಕೆ ಚಪ್ಪರ ಹಾಕಲು ಸೋಗೆ ಇತ್ಯಾದಿ ಬೇಕಿತ್ತು. ನಾನು ಸಖರಾಯಪಟ್ಟಣದ ಒಬ್ಬರಲ್ಲಿ ಮಾತನಾಡಿ ತರಲು ಹೋದೆ. ಅದು ಗುರುಗಳ ತೋಟವೇ ಆಗಿತ್ತು. ಆದರೆ ನನಗೆ ಅವರು ಗುರುಗಳೆಂದು ಗೊತ್ತಿರಲಿಲ್ಲ. ಸರಕು ಸಾಗಣೆ ವಾಹನಕ್ಕೆ ಎಲ್ಲವನ್ನು ತುಂಬಿದ ನಂತರ ಅವರು "ನಾನೂ ಚಿಕ್ಕಮಗಳೂರಿಗೆ ಬರುತ್ತೇನೆ" ಎಂದರು. ನಾನು ಅವರಿಗೆ ಮುಂದೆ ಕೂರಲು ಹೇಳಲು ಅವರು "ಸ್ವಾಮೀ ಅಣ್ಣ ತಮ್ಮಂದಿರ ಮಧ್ಯೆ ನಾನು ಬರಲ್ಲ ಕಣಯ್ಯಾ" ಎಂದು ಹೇಳಿ ಸೋಗೆಯನ್ನು ಸರಿಸಿ ಜಾಗ ಮಾಡಿಕೊಂಡು ಹಿಂದೆಯೇ ಕುಳಿತರು. "ಸೋದರರ ಮಧ್ಯೆ ನಾ ಬರಲ್ಲ ಕಣಯ್ಯಾ" ಎಂಬ ಅವರ ಮಾತು ನನ್ನನ್ನು ಬಹಳ ಸೆಳೆಯಿತು.
ಆ ನಂತರ ನಮ್ಮೊಂದಿಗೆ ಅವರೂ ಚಿಕ್ಕಮಗಳೂರಿಗೆ ಬಂದರು. ನಮ್ಮ ಸಂಬಂಧಿಯೂ ಆದ ಮದುಮಗಳು ಮದುವೆ ಹಿಂದಿನ ದಿನ ವಿಪರೀತ ಜ್ವರದಿಂದ ಆಸ್ಪತ್ರೆಗೆ ಸೇರಿದ ವಿಷಯ ತಿಳಿದ ನಮ್ಮೊಂದಿಗಿದ್ದ 'ಅವರು' "ಅಯ್ಯಾ, ಆ ಹುಡುಗಿ ಮಲತಾಯಿ ಮಗಳಲ್ಲವೇ ಅವಳ ತಾಯಿಯ ಹೆಸರಿನಲ್ಲಿ ಮದುವೆ ಸೀರೆ ತಂದಿಲ್ವಲ್ಲಾ?" ಎನ್ನಲು ನಾವು ಹೌದೆಂದೆವು. ಆಗ ಅವರು "ಅವಳ ತಾಯಿಯ ಹೆಸರಿನಲ್ಲಿ ಸೀರೆ ತಂದಿಡಿ ಸಾಕು. ಆಕೆ ಹುಷಾರಾಗ್ತಾಳೆ" ಅಂದ್ರು. ನಾವು ತಡ ಮಾಡದೇ ಹಾಗೇ ಮಾಡಲು ಅವರಂದಂತೆಯೇ ಮಧುಮಗಳು ಆಶ್ಚರ್ಯಕರ ರೀತಿಯಲ್ಲಿ ಗುಣಮುಖಳಾದಳು. ವಿವಾಹ ಸಮಾರಂಭ ಸಾಂಗವಾಗಿ ನಡೆಯಿತು.
ಇದಾಗಿ ಸುಮಾರು ನಾಲ್ಕು ವರ್ಷದ ನಂತರ ಬಹುಶಃ 1998 ರಲ್ಲಿ ಅನ್ನಿಸುತ್ತೆ. ನಾನು ಶಿವಮೊಗ್ಗದಿಂದ ನನ್ನೂರಿನ ಕಡೆ ಬೈಕ್ ನಲ್ಲಿ ಬರುತ್ತಿದ್ದೆ. ಸಖರಾಯಪಟ್ಟಣದಿಂದ ಒಂದು ಕಿಲೋಮೀಟರ್ ಇರುವಾಗ ಬೈಕ್ ಕೆಟ್ಟುಹೋಗಿ ತಳ್ಳಿಕೊಂಡು ಬರುತ್ತಿದ್ದೆ. ಆಗ ಹಿಂದಿನಿಂದ "ತಳ್ಳಲಾ ಸ್ವಾಮೀ ಗಾಡಿನಾ?" ಎಂಬ ಧ್ವನಿ ಕೇಳಿ ಹೂಂ ಅಂದು ಹಿಂತಿರುಗಿ ನೋಡದೇ ಗಾಡಿಯೇರಿ ಕುಳಿತೆ. ಆತ ಮುಕ್ಕಾಲು ಕಿಲೋಮೀಟರ್ ಗಾಡಿಯನ್ನು ತಳ್ಳಿ "ಇನ್ನೂ ತಳ್ಳಲೇ?" ಎಂದರು. ನಾನು ಸಾಕು, ಧನ್ಯವಾದ ಎಂದೆ. ಅದಾಗಿ ಹಲವು ವರ್ಷದ ನಂತರ ಗುರುನಾಥರು "ನಾನೇ ಗಾಡಿ ತಳ್ಳಿದ್ದು ಕಣಯ್ಯಾ" ಎಂದು ನೆನಪಿಸಿದರು.
ನಾಮ ರೂಪ ಇಲ್ಲದವನು
ಏಕ ರೂಪವಾಗಿ ಹರಿಯುವ ನೀರಂತೆ ಆತನ ಮಾತು ಮುಂದುವರೆದಿತ್ತು. ಈ ಎಲ್ಲಾ ಘಟನೆಗಳ ನಂತರ ನನ್ನ ಮತ್ತು ಗುರುನಾಥರ ಸ್ನೇಹ ಮತ್ತಷ್ಟು ಗಾಢವಾಯಿತು. ಗುರುವೆಂದರೆ ಏನೆಂದು ಅರಿವಿಲ್ಲದ ನಾನು ಅವರೊಂದಿಗೆ ಸ್ನೇಹಿತನಂತೆಯೇ ಇರುತ್ತಿದ್ದೆ. ಕೆಲ ದಿನದ ನಂತರ ನಾನು ಶಿವಮೊಗ್ಗ ಸಮೀಪದ ಬಂಧುವೊಬ್ಬರ ಮದುವೆಗೆ ಹೋಗಬೇಕಾಯಿತು. ಗುರುನಾಥರು ನಮ್ಮೊಂದಿಗೆ ಸಾಗರ ಸಮೀಪದ ಅವರ ಬಂಧುಗಳ ಮನೆಗೆ ಹೊರಟರು. ನಾವೆಲ್ಲರೂ ಒಟ್ಟಿಗೆ ಕಾರಿನಲ್ಲಿ ಮುಂದುವರೆದೆವು.
ಮೊದಲು ಗುರುನಾಥರ ಬಂಧುಗಳ ಮನೆಗೆ ಹೋಗಿ ನಂತರ ನಮ್ಮ ಸಂಬಂಧಿಯ ಮದುವೆಗೆ ಹೋದೆವು. ಗುರುನಾಥ ಕೇವಲ ಪಂಚೆಯಲ್ಲಿದ್ದರು. ಅವರಿಗೆ ಯಾರೂ ಅವಮಾನಿಸಬಾರದೆಂಬ ಉದ್ದೇಶದಿಂದ ನಾವು "ಗುರುಗಳೇ ನೀವು ಕಾರಿನಲ್ಲೇ ಇರಿ, ನಾವು ಹೋಗಿ ಬರುತ್ತೇವೆ" ಎನ್ನಲು ಅವರು ಹೂಂ ಎಂದು ಅಲ್ಲೇ ಕುಳಿತರು. ಇದಕ್ಕೂ ಮೊದಲು ಗುರುನಾಥರು ಕಾರನ್ನು ನಿಲ್ಲಿಸಿ ಎರಡು ಹೂವಿನ ಹಾರ ತರಿಸಿ ಇಟ್ಟುಕೊಂಡಿದ್ದರು. ಅದ್ಯಾಕೆ ಅಂತ ನಮಗೆ ತಿಳಿಯಲಿಲ್ಲ.
ನಂತರ ನಾವು ಮದುವೆ ಛತ್ರಕ್ಕೆ ಹೋದೆವು. ಮಗುಮಗಳ ತಂದೆ ವಿಲಕ್ಷಣ ಗುಣದವನೂ, ಜಿಪುಣನೂ ಆಗಿದ್ದು ನಾವೆಲ್ಲರೂ ಅವರನ್ನು ಗೇಲಿ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆಯೇ ಗುರುನಾಥರು ಎರಡು ಹಾರದೊಂದಿಗೆ ಛತ್ರದೊಳಗೆ ಬಂದಿದ್ದನ್ನು ಕಂಡು ನಮಗೆ ಗಾಬರಿಯಾಯಿತು. ನೇರವಾಗಿ ಮದು ಮಕ್ಕಳನ್ನು ಸಮೀಪಿಸಿದ ಗುರುನಾಥರು ವಧು-ವರರಿಗೆ ಹಾರ ನೀಡಿ ಬದಲಾಯಿಸಲು ಹೇಳಿದರು, ಹಾಗೂ ಅವರು ಹಾಗೆಯೇ ಮಾಡಿದರು. ವಧು-ವರರು ಮಂಟಪವೇರುವ ಮೊದಲೇ ಹಾರ ಬದಲಾಯಿಸಿದ್ದು, ಅದೂ ಅಪರಿಚಿತರ ಸಮ್ಮುಖದಲ್ಲಿ.... ನಾ ಕಂಡ ಅಪರೂಪದ ಘಟನೆಯಾಗಿತ್ತು. ನಂತರ ಮಾಡುವೆ ನಡೆಯಿತು.
ಅದಾದ ನಂತರ ನಾವು ಗುರುಗಳೇ ನಡೆಯಿರಿ ಹೋಟೆಲ್ ನಲ್ಲಿ ಊಟ ಮಾಡುವ ಎನ್ನಲು "ಅಯ್ಯಾ, ಮದುವೆ ಮನೆಗೆ ಬಂದು ಊಟ ಮಾಡದೇ ಹೋಗಬಾರದು ಕಣಯ್ಯಾ.... " ಅಂದ್ರು.
ನಾ ಸುಮ್ಮನಾದೆ. ನಂತರ ಗುರುನಾಥರು ಒಂದು ಸಣ್ಣ ಬಾಳೆಎಲೆ ಹಿಡಿದು ಅಡುಗೆ ಮನೆಗೆ ಹೋಗಿ "ಅಯ್ಯಾ, ಏನಾದ್ರೂ ಕೊಡ್ರಯ್ಯಾ, ಹಸಿವಾಗುತ್ತಿದೆ" ಎಂದರು ಭಿಕ್ಷುಕನಂತೆ. ಅಲ್ಲಿದ್ದ ಭಟ್ಟರು ಕೂಡಲೇ ನಮಗೆ ನಾಲ್ಕು ಜನಕ್ಕೆ ಮಾತ್ರವೇ ಊಟ ಬಡಿಸಿದರು. ಜನರೆಲ್ಲಾ ಗುರುಗಳನ್ನು ಮುತ್ತಿಕೊಂಡರು.
ಮಧುಮಗಳ ತಂದೆ ಜಿಪುಣನಾಗಿದ್ದರೂ ಪ್ರತಿ ದಿನ ಸಂಜೆ ಜ್ಯೋತಿಷ್ಯ ಹೇಳುತ್ತಿದ್ದರು ಮತ್ತು ನಿಖರವಾಗಿ ಹೇಳುತ್ತಿದ್ದರು. ಆತ ಆ ಗುಂಪುಗಳನ್ನು ಭೇದಿಸಿ ಗುರುಗಳಿಗೆ ಒಂದು ಕಾಲು ರೂಪಾಯಿ, ತಾಂಬೂಲ ನೀಡಿ ನಮಸ್ಕರಿಸಿ ಮಾಯವಾದರು.
ಇಂದು ಈ ಎಲ್ಲಾ ಘಟನೆಗಳನ್ನು ನೆನೆದಾಗ ಮೇರು ಶಿಖರವೇ ತಾನಾಗಿದ್ದರೂ ನಾಮ ರೂಪಗಳ ಚೌಕಟ್ಟಿಗೆ ಸಿಗದೆ ಅವರ ಸರಳತೆ ಇಂದು ಕಾಣಲು ಸಾಧ್ಯವೇ.....? ಎಂದು ಪ್ರಶ್ನಿಸಿ, ನಕ್ಕು ಸುಮ್ಮನಾದರು ಆತ......,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala gurugalige nanna poojya namanagalu. Yellarigu Daari torisi olleyadaaguvante asheervadisi Guruvarya. Hari om tatsat.
ReplyDelete