ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 16
ಗುರುದರ್ಶನವಾಗದೇ ಊಟವಿಲ್ಲ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶಿವಮೊಗ್ಗದ ನಾಗಭೂಷಣ ಭಟ್ಟರಿಗೆ ಗುರುನಾಥರನ್ನು ನೋಡುವ ಹಂಬಲ. ಏಕೆಂದರೆ ನರೇಂದ್ರ ಅವರು ಸಿಕ್ಕಾಗಲೆಲ್ಲಾ ನಡೆಸುತ್ತಿದ್ದುದು ಗುರುನಾಥರ ಸಂಕೀರ್ತನವನ್ನೇ. ಅವರ ಪ್ರಭಾವದಿಂದಲೂ ಅನೇಕರು ಸಖರಾಯಪಟ್ಟಣದ ಯಾತ್ರೆಗೈದು, ಗುರುನಾಥರ ದರ್ಶನ ಪಡೆದು ಪುನೀತರಾಗಿದ್ದಾರೆ. ಗುರುವು ಎಲ್ಲರಾಗಲು ಸಾಧ್ಯವಿಲ್ಲವಾದರೂ, ಸದ್ಗುರುವಿನ ದರ್ಶನವಾಗುವ ದಾರಿ ತೋರಿಸಿದರೆ ಅದೇ ಒಂದು ದೊಡ್ಡ ಸೇವೆ. ದೀಪದಿಂದ ದೀಪ ಬೆಳಗಿಸಿ, ಸಾವಿರಾರು ಹಣತೆಯನ್ನು ಬೆಳಗಿಸಿದ ಮೊದಲ ಹಣತೆಗೆ ಧನ್ಯತಾ ಭಾವವೇ ಇರುವುದಲ್ಲದೆ ಇತರ ಹಣತೆಗಳ ಬೆಳಕನ್ನು ಅದು ನೋಡಿ ಕರುಬುವುದಿಲ್ಲ.
ಸಖರಾಯಪಟ್ಟಣವನ್ನು ಆ ಇಬ್ಬರೂ ತಲುಪಿದರು. ಗುರುನಾಥರ ದರ್ಶನವಾಗೇ ತೀರುತ್ತದೆಂದು ಬಂದವರಿಗೆ, ಗುರುನಾಥರ ದರ್ಶನವಾಗುವುದಿಲ್ಲ. ಅವರು ಬೇರೆ ಯಾವುದೋ ಕೆಲಸದಲ್ಲಿದ್ದಾರೆ, ಸಿಗುವುದಿಲ್ಲವೆಂದು ತಿಳಿದಾಗ - ಬೆಳಗಿನಿಂದ ಹಸಿವಿನಿಂದಿದ್ದ ಭಟ್ಟರು ತಿಂಡಿ ತಿನ್ನಲು ಇಚ್ಛಿಸಿದರು. ಹೋಟೆಲಿಗೂ ಹೋದರು. ನೀನು ತಿನ್ನೆಂದಾಗ ಇಲ್ಲ ಎಂದರು ನರೇಂದ್ರ.
ಮರಳಿ ಯತ್ನವ ಮಾಡು, ಎಂದು ಮನೆಗೆ ಬಂದು ಗುರುನಾಥರ ಪ್ರತೀಕ್ಷೆ ಮಾಡುತ್ತಾ ಕುಳಿತಾಯಿತು. ಆವಾಗಲೂ ಗುರುನಾಥರು ಸಿಗುವುದಿಲ್ಲ. ಯಾರದೋ ಸಾವಿನ ಮನೆಯಲ್ಲಿ ಅವರಿದ್ದಾರೆ ಎಂದು ತಿಳಿದು ಬಂದಿತು... ಆದರೂ ಉಪವಾಸದ ಹಠ ಮುಂದುವರೆದೇ ಇತ್ತು ನರೇಂದ್ರ ಅವರದು.
ಗುರುನಾಥರು ಯಾವುದೇ ಸಾವಿನ ವಿಚಾರ ತಿಳಿದಾಗ ಅಲ್ಲಿಗೆ ಧಾವಿಸಿ, ಎಲ್ಲ ಸಿದ್ಧತೆಗಳನ್ನು ಗಮನಿಸಿ, ಶವಕ್ಕೆ ಹೆಗಲು ನೀಡಿ, ಕಳಿಸಿ ಬರುವ ಶಿವನ ಬಿಟ್ಟಿಯ ಕೆಲಸವನ್ನೂ ಅನೇಕ ಸಾರಿ ಮಾಡಿದ ಉದಾಹರಣೆಗಳಿವೆ.
ಹಾಗಾಗಿ ನಾಗಭೂಷಣ ಭಟ್ಟರು ಮತ್ತೆ ಹೇಳಿದರು: "ನೀನು ತಿಂಡಿ ತಿನ್ನಯ್ಯಾ" ಎಂದು. ಆದರಿವರು ಕೇಳಬೇಕೇ?
ಅಷ್ಟು ಹೊತ್ತಿಗೆ ಅಲ್ಲೇ ಎದುರು ಮನೆಯಲ್ಲಿ ಗುರುನಾಥರು ಕಂಡರು. "ಬಾ ಬಾ ಬಾ, ಕರೆದರೂ. ಎಲ್ಲ ಬಿಚ್ಚಿಕೊಟ್ಟು ಬಿಡಬೇಕು" ಎಂದರು. ಎಲ್ಲ ನಿಮ್ಮದೇ ಗುರುಗಳೇ ಎಂದಾಗ, ಬಾ ಎಂದು ಸಾವಿನ ಮನೆಗೇ ಕರೆದೊಯ್ದರು. ಸತ್ತವರ ಗತ ಜೀವನದ ಒಳಿತು-ಕೆಟ್ಟ ವಿಚಾರಗಳನ್ನೆಲ್ಲಾ ಗುರುನಾಥರು ಆಡತೊಡಗಿದರು. ನನಗೆ ಹೆದರಿಕೆ ಯಾಯಿತು. ಇವರೆಲ್ಲಾ ಸೇರಿ ಗುರುನಾಥರಿಗೇನಾದರೂ ಮಾಡಿದರೆ? ಎಂಬ ಚಿಂತೆ.
ಅಷ್ಟು ಹೊತ್ತಿಗೆ ಸತ್ತವರ ಮೊಮ್ಮಗ ಮಾರುತಿ ಕಾರಿನಲ್ಲಿ ಬಂದ. ಗುರುನಾಥರೆಂದರು: "ನಿಮ್ಮಜ್ಜನ್ನ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಯ್ಯಾ ಸಂತಸವಾಗುತ್ತೆ. ಬಹಳ ಆಸೆ ಮನುಷ್ಯ..... ಒಂದಾಸೆನಾದರೂ ತೀರಲಿ" ಎಂದರು.
ಶವವನ್ನು ಸ್ಮಶಾನಕ್ಕೆ ಸಿದ್ಧ ಮಾಡಿದರು. ಗುರುನಾಥರು ಕೂಡಲೇ ಶವಕ್ಕೆ ಹೆಗಲು ನೀಡಿದವರು ಒಂದೂವರೆ ಮೈಲು ದೂರದ ಸ್ಮಶಾನದವರೆಗೆ ಶವ ಹೊತ್ತೇ ನಡೆದರು. ಬಾಕಿಯವರು ಅಲ್ಲೆಲ್ಲೋ ಹೆಗಲು ಬದಲಿಸಿಕೊಂಡರೂ ಗುರುನಾಥರು ಮಾತ್ರ ಒಬ್ಬರೇ ಹೊತ್ತರು.
ಶವ ದಹನವಾಗಿ ಇತ್ತ ಬರುತ್ತಲೇ ದೂರದಲ್ಲಿದ್ದ ಒಬ್ಬನಿಂದ ಒಂದು ಟವೆಲನ್ನು ಪಡೆದು, ತಮ್ಮ ವಸ್ತ್ರ ಕಳೆದು ಸ್ನಾನ ಮಾಡಿ ಆ ಟವೆಲನ್ನು ಸುತ್ತಿ ಹೊರಟೇ ಬಿಟ್ಟರು. ಜನಿವಾರ ಬದಲಿಸಲಿಲ್ಲ. "ಯಾರ ಯಾರದೋ ಕರ್ಮಕ್ಕೆ ನಾನ್ಯಾಕೆ ಜನಿವಾರ ಬದಲಿಸಬೇಕು. ಯಾರೋ ಬೇಡದವನೊಬ್ಬನನ್ನು ಊರಿಗೆ ತಂದು ಸೇರಿಸಿದ್ದೆ. ಇವತ್ತು ಅವನನ್ನ ಊರಿನಿಂದ ಹೊರಹಾಕಿ ಬಂದೆ. ನನ್ನ ಕೆಲಸವಾಯಿತು" ಎಂದರು ತಮ್ಮಷ್ಟಕ್ಕೆ ತಾವೇ.
ಈ ಎಲ್ಲ ಮಾತುಗಳು ನನಗಾಗಿಯೇ, ನನ್ನ ಮನಸ್ಸಿನಲ್ಲಿ ಮೂಡಿದ್ದು ಪ್ರಶ್ನೆಗಳ ಉತ್ತರಕ್ಕಾಗಿಯೇ ಎಂಬುದು ನನಗೆ ಗೊತ್ತಾಗಿ ಹೋಯಿತು.
ಈ ಹಿಂದೆ ಗುರುಗಳು ಯಾಕೆ ಹೀಗೆ ದಿಟ್ಟವಾಗಿ ಆ ಸತ್ತವರ ಬಗ್ಗೆ ಮಾತನಾಡಿದರು? ಇಷ್ಟೆಲ್ಲಾ ಬೈದರೂ ಗುರುನಾಥರೇ ಏಕೆ ಶವ ಹೊತ್ತರು? ನನ್ನೀ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಗುರುನಾಥರ ಬಾಯಿಂದಲೇ ಕೇಳಿದೆ.
ನಂತರ ನಮ್ಮನ್ನೆಲ್ಲಾ ಮನೆಗೆ ಕರೆತಂದು ಎಲ್ಲರಿಗೂ ಊಟ ಹಾಕಿಸಿದರು. ಬರುವಾಗ ಮತ್ತೊಂದು ಅದ್ಭುತವನ್ನು ದಯಪಾಲಿಸಿದರು. ನನ್ನೆದುರಿಗೆ ಉಟ್ಟ ಪಂಚೆಯನ್ನು ಎಸೆದು ಮಂಜ ನೀಡಿದ ಟವೆಲನ್ನು ಉಟ್ಟಿದ್ದರು. ಅಲ್ಲಿ ಸಿಕ್ಕವರಿಗೆಲ್ಲಾ ಸೊಂಟದ ಗಂಟಿನಿಂದ ದ್ರಾಕ್ಷಿಯನ್ನು ತೆಗೆತೆಗೆದು ಕೊಡುತ್ತಿದ್ದರು. "ಇದೇನಿದು ದ್ರಾಕ್ಷಿ ಎಲ್ಲಿಂದ ಬಂತು? ಖಾಲಿ ಟವೆಲ್ ಅನ್ನು ಅವನು ಕೊಟ್ಟಿದ್ದ" ಎಂದು ನನ್ನ ಮನದಲ್ಲಿ ಪ್ರಶ್ನೆ ಮೂಡುತ್ತಿದ್ದಂತೆ "ಸುಮ್ಮನಿರೋ ನನಗೆ ಗ್ಯಾಸ್ಟ್ರಿಕ್ ಅಂತ ಸೊಂಟದ ಗಂಟಿನಲ್ಲಿ ದ್ರಾಕ್ಷಿ ಇಟ್ಟುಕೊಂಡಿರುತ್ತೇನೆ" ಎಂದರು. ನಾನು ಸುಮ್ಮನಿರದೆ "ಎಲ್ಲಿ ಗುರುಗಳೇ ಎಲ್ಲ ಖಾಲಿ ಇತ್ತಲ್ಲ.. ಅದೆಲ್ಲಿತ್ತು" ಎಂದಾಗ "ನೋಡಿಬಿಟ್ಯಾ... ಮಾತನಾಡದೇ ಸುಮ್ಮನಿರು" ಎಂದರು. ಮತ್ತೆ ಕೈನಲ್ಲಿ ಎರಡು ದ್ರಾಕ್ಷಿಗಳನ್ನು ಹಿಡಿದು ಮನೆ ಕಡೆ ನಡೆಯುತ್ತಾ, ಎದುರಿಗೆ ಬಂದ ಇಬ್ಬರು ಮಕ್ಕಳ ಬಾಯಿಗೆ ಅದನ್ನಿಟ್ಟರು.
ಗುರುನಾಥರ ಬಳಿ ಬಂದಾಗಲೆಲ್ಲ ನರೇಂದ್ರ ಅವರಿಗೆ ಹೊಸ ಹೊಸ ವಿಚಿತ್ರ ಅನುಭವಗಳು ಆಗುತ್ತಲೇ ಹೋಗಿದೆ.... ಅದು ನಮ್ಮ ನಿತ್ಯ ಸತ್ಸಂಗಕ್ಕೆ ಸಿಗುತ್ತಲೇ ಬಂದಿರುವುದೂ ಆ ಗುರುನಾಥರ ಕೃಪೆಯೇ. ನಾಳೆ ಸೇರೋಣವೇ?....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Poojya venkatachala avadootarige nanna bhakti poorvaka namanagalu. Yella kaaladalli Sarvarigu asheervadisi uddarisi Kaapadi Guruvarya. Sarve jano sukinobavantu.
ReplyDelete