ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 7
ಆಡಿ ಹುಸಿಯಾದ ಆ ಮಹಿಮರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ಸಖರಾಯಪಟ್ಟಣದಲ್ಲಿ ಒಂದು ಮರದ ಕೆಳಗೆ ಸಾಧಾರಣವಾಗಿ ಕುಳಿತುಕೊಳ್ಳುತ್ತಿದ್ದರು. ಬರುವ ಭಕ್ತರು ಅನೇಕ ಸಾರಿ ಅಲ್ಲಿಯೇ ಕುಳಿತು ತಮ್ಮ ಅಹವಾಲುಗಳನ್ನು ಅರ್ಪಿಸಿ, ಸಮಾಧಾನ ಪಡೆಯುತ್ತಿದ್ದರು. ಆ ಸ್ಥಳದಲ್ಲಿ ಯಾವಾಗಲೂ ಕುಳಿತುಕೊಳ್ಳುವ ಗುರುನಾಥರಿಗೆ ಒಬ್ಬ ತಾಯಿ ಕಾಫಿ, ತಿಂಡಿ, ತೀರ್ಥಗಳನ್ನು ತಂದುಕೊಟ್ಟು ಭಕ್ತಿ ಭಾವದಿಂದ ನಮಿಸಿ ಹೋಗುತ್ತಿದ್ದರು. ಊರಿನವರೇ ಆದ ಅವರಿಗೆ ಗುರುನಾಥರಲ್ಲಿ ಅದೆಂತಹದೋ ಪ್ರೀತಿ, ಗೌರವ, ಭಕ್ತಿ ಭಾವಗಳಿದ್ದವು.
ಕಾಲ ನಿಲ್ಲುತ್ತದೆಯೇ. ವೃದ್ಧಾಪ್ಯಕ್ಕೆ ಬಂದ ಆ ತಾಯಿಗೆ ತನ್ನ ಕೊನೆಯ ದಿನಗಳು ಸಮೀಪಿಸಿದಂತೆ ಅನ್ನಿಸಿತೋ ಏನೋ, ಕಾಲ ಯಾರನ್ನೂ ಬಿಡುವುದಿಲ್ಲ. ಇದು ನಮಗೂ ಗೊತ್ತಿದ್ದರೂ, ಇನ್ನೂ ಉಳಿದಿರುವ ಜವಾಬ್ದಾರಿಗಳು, ನಮ್ಮನ್ನು ನಂಬಿದವರ ಬಗ್ಗೆ ಇರುವ ಚಿಂತೆ, ಕಾಳಜಿ, ವಾತ್ಸಲ್ಯಗಳು ಅಷ್ಟು ಸುಲಭವಾಗಿ ಆ ಪರಮಾತ್ಮನ ಧ್ಯಾನದಲ್ಲಿ ಅಂತಿಮ ಘಳಿಗೆಯಲ್ಲೂ ಇರಲು ಬಿಡದು. ಆದರೆ ಕಾಲನಿಗಿದಾವುದರ ಪರಿವೆ ಇರದು. ಅಂತಹ ಒಂದು ಚಿಂತೆ ಗುರುನಾಥರ ಬಳಿ ಬರುವ ಆ ತಾಯಿಗಿತ್ತು. ಅದೆಂದರೆ, ಅವರ ಕಿರಿಮಗಳ ಮದುವೆಯದು.
ಒಮ್ಮೆ ಗುರುನಾಥರ ಬಳಿ ಅವರು ಮನದ ನೋವನ್ನು ತೋಡಿಕೊಂಡಿದ್ದರಂತೆ. ಭಕ್ತರಿಗಾಗಿಯೇ ಜನಿಸಿ ಬಂದ ಭಗವಂತ ನಮ್ಮ ಗುರುನಾಥರೆಂಬುದು ಅನೇಕರಿಗೆ ಅರಿವಾಗದು. ಅರಿವಾದರೂ ತಡವಾಗಿ ಕಾಲ ಮಿಂಚಿ ಹೋಗಿರುತ್ತದೆ.
ಆದರೆ ಆ ತಾಯಿಗಿವರ ಮೇಲೆ ತುಂಬು ಭರವಸೆ ಭಾವಶುದ್ಧಿಯ ಪ್ರೀತಿಯ ಬೇಡಿಕೆಗೆ ಒಲಿದ ಗುರುನಾಥರು "ಆಯಿತು ತಾಯಿ, ಆ ಮಗುವಿನ ಬಗ್ಗೆ ನಿಮಗೆ ಚಿಂತೆ ಬೇಡ. ಅವಳನ್ನು ನನ್ನ ಮಗಳಂತೆ ರಕ್ಷಿಸುತ್ತೇನೆ. ಆ ಜವಾಬ್ದಾರಿ ನನಗಿರಲಿ. ನೀವು ನಿಶ್ಚಿಂತರಾಗಿರಿ" ಎಂದಾಗ.... ಆ ತಾಯಿಯು ಇಹದ ಚಿಂತೆಯಿಂದ ಮುಕ್ತರಾಗಿ ಪರದ ಚಿಂತೆಯಲ್ಲಿ ನಿರತರಾದರೇನೋ? ಕೆಲ ದಿನದಲ್ಲೇ ಜೀವನ್ಮುಕ್ತರೂ ಆದರು.
ಆ ಶಾಲೆ, ಅಲ್ಲಿಗೆ ಆ ಹೆಣ್ಣು ಮಗಳು ಹೋಗುತ್ತಿರುವಾಗ... ಒಬ್ಬ ವ್ಯಕ್ತಿಯ ದೃಷ್ಟಿ ಆಗಾಗ್ಗೆ ಆ ಹೆಣ್ಣು ಮಗಳ ಮೇಲಿರುತ್ತಿತ್ತು. ಅವಳ ಚಲನವಲನಗಳನ್ನು ಅವರು, ಬೇಕು ಬೇಡಗಳನ್ನವರು ಗಮನಿಸುತ್ತಿದ್ದರು. ಆಗಾಗ್ಗೆ ಮಧ್ಯಾನ್ಹ ತಿಂಡಿ ತೆಗೆದುಕೊಂಡು ಹೋಗಿ ಆ ಹೆಣ್ಣು ಮಗಳಿಗೆ ಸ್ಕೂಲಿನ ಜವಾನರ ಮೂಲಕ ಕಳಿಸಿ ಕೊಡುತ್ತಿದ್ದರು. ಏನೂ ಅರಿಯದ ಆ ಹೆಣ್ಣು ಮಗಳಿಗೆ ಈ ಮನುಷ್ಯರೇಕೆ ನನ್ನನ್ನು ಹೀಗೆ ಹಿಂಬಾಲಿಸುತ್ತಾರೆ? ನನ್ನ ರಕ್ಷಣೆಗೇಕೆ ಕಾಳಜಿ ವಹಿಸುತ್ತಾರೆ? ನನಗೇಕೆ ತಿಂಡಿ ತಂದುಕೊಡುತ್ತಾರೆ ಎಂದು ಚಿಂತಿಸುತ್ತಿದ್ದುದಲ್ಲದೇ, ಅವರು ಆ ಬಾಗಿಲ ಬಳಿ ಕಾಯುತ್ತಿದ್ದರೆ - ಅವರ ಕಣ್ಣು ತಪ್ಪಿಸಿ ಇನ್ನೊಂದು ಗೇಟಿನಿಂದ ಹೊರ ಹೋಗಲು ಪ್ರಯತ್ನಿಸಿದರೆ - ಆ ವ್ಯಕ್ತಿ ಅಲ್ಲಿಯೂ ಹಾಜರಾಗುತ್ತಿದ್ದರು. ಇದರ ಮರ್ಮವರಿಯದ ಆಕೆಗೆ, ತಮ್ಮ ಸ್ನೇಹಿತೆಯರೆದುರು ಮುಜುಗರದ ಅನುಭವವಾಗಿದ್ದೂ ಇದೆ. ಮುಂದೆ, ಕಾಲೇಜಿಗೆ ಹೋದಾಗಲೂ ಅವರು ಹೀಗೆಯೇ ಬೆಂಗಾವಲಿಗರಾಗಿದ್ದರು. ಯಾರವರು ... ಯಾರವರು? ಅವರೇ ನಮ್ಮ ಗುರುನಾಥರು. ಆ ತಾಯಿಗೆ ಕೊಟ್ಟ ಮಾತಿನಂತೆ.... ತಮ್ಮ ಮಗಳಂತೆ ಎಲ್ಲ ಕ್ಷಣಗಳಲ್ಲೂ ಕಾಪಾಡಿ, ಮದುವೆಯನ್ನೂ ಮಾಡಿಸಿ, ಮುಂದಿನ ಜೀವನದ ಎಲ್ಲ ಕ್ಷಣಗಳಲ್ಲೂ 'ಮೇಟಿಕಂಬದಂತೆ' ರಕ್ಷಿಸಿದ ಗುರುನಾಥರನ್ನು ಆ ಹೆಣ್ಣು ಮಗಳು ಈಗ ಗೌರವದಿಂದ ಸ್ಮರಿಸುತ್ತಾರೆ. ನನ್ನ ಜೀವನವೇ ಗುರುನಾಥರು ನೀಡಿದ ಭಿಕ್ಷೆಯೆಂಬ, ಸೌಜನ್ಯತೆ ಅವರಲ್ಲಿದೆ.
ಮುಂದೆ ಅವರು ಬೇರೆ ಊರಿಗೆ ವರ್ಗವಾಗುವ ಸಮಯ ಬಂದಾಗ - ಆರು ತಿಂಗಳ ಮೊದಲೇ ಖಾಲಿಯಾಗಿದ್ದ ಮನೆ - ಆರು ತಿಂಗಳೂ ಖಾಲಿ ಇದ್ದು - ಇವರಿಗೇ ದೊರೆತಾಗ, ತಮ್ಮ ಮಗುವಿಗೆ ಪ್ರತಿಷ್ಠಿತ ಶಾಲೆಯಲ್ಲಿ ಒಂದು ಸೀಟು ಉಳಿದಿದ್ದು, ಅದು ಇವರ ಮಗುವಿಗೆ ದೊರೆತಾಗ - ಇವೆಲ್ಲದರ ಹಿಂದೆ ಗುರುನಾಥರದ್ದೇ ಕೈವಾಡ, ಕೃಪಾ ಛತ್ರವಿದೆ. ಇಲ್ಲದಿದ್ದರೆ ಹೊಸ ಊರಿನಲ್ಲಿ, ಪರಿಚಯವಿಲ್ಲದ ಸ್ಥಳದಲ್ಲಿ ನಾನೇನು ಮಾಡಲು ಸಾಧ್ಯವಿತ್ತು? ಎಂದು ವಿನಮ್ರರಾಗಿ ಗುರುನಾಥರಿಗೆ, ಭಾವನಮನ ಅರ್ಪಿಸುತ್ತಾರೆ. ತಾಯಿಗಿತ್ತ ಒಂದು ಮಾತಿಗೆ... ಅದೆಂತಹ ಜವಾಬ್ದಾರಿಯನ್ನೂ ಹೊತ್ತರಲ್ಲ ಗುರುನಾಥರು ಎಂದು ಆಶ್ಚರ್ಯವಾಗುತ್ತದೆ. ಗುರುನಾಥರ ಈ ಲೀಲೆ ಭಕ್ತಗಣಕ್ಕೊಂದು ಅನೌಪಚಾರಿಕ ಪಾಠವಿದ್ದಿರಬಹುದು.
ಗುರುವೆಂದರೇ ಹೀಗೆ...... ಎಲ್ಲ ಸದ್ಗುರುಗಳ ವಿಧಾನವೂ ಇದೆ. "ಆಡಿ ಹುಸಿ ಬೇಡ. ಓಡಿ ಹೋಗಿ ಸಿಗಬೇಡ' ಎಂದು ಪದೇ ಪದೇ ಹೇಳುತ್ತಿದ್ದ ಹೊಳಲೂರಿನ ಹನುಮಂತಪ್ಪ ಗುರುಗಳ ಮಾತನ್ನಿಲ್ಲಿ ಸ್ಮರಿಸಬಹುದಾಗಿದೆ. ಆಡಿದಂತೆ ನಡೆಯುವುದು ಸುಲಭವಲ್ಲ. ಇಂದೂ ಗುರುನಾಥರ ಶ್ರೀರಕ್ಷೆ ಅವರಿಗೆ ದೊರೆಯುತ್ತಲೇ ಇದೆ ಎಂದ ಮೇಲೆ ಗುರುವಿಗೆ ಕೊನೆ ಎಲ್ಲಿ? ... ಓದುಗ ಬಾಂಧವರೇ 'ಗುರುಗುಣ ಲಿಖ್ಯಾನಜಾಯ್' ಎಂದು ಕಬೀರರು ಹೇಳಿದ್ದಾರೆ. ಗುರು ಮಹಿಮೆ ಮುಗಿಸಲಾರದ್ದು. ಭಾವುಕ ಓದುವವರು ನೀವಿರುವುದರಿಂದ ಗುರುನಾಥರು ಬರೆಸುತ್ತಿದ್ದಾರೆ... ನಾಳಿನ ಸತ್ಸಂಗಕ್ಕೆ ಬರುವಿರಲ್ಲಾ.... !!
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Poojya Guruvarya venkatachala Avara Divya charanamruta galige nanna bhakti poorvaka namanagalu. Swamy Yellarigu sadaa kaala nimma aashirvaada haagu rakshe doreyali. Hari om tatsat.
ReplyDelete