ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 156
ಗ್ರಂಥ ರಚನೆ - ಚರಣದಾಸ
ಕೊನೆಯ ಮಾತು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ಭೌತಿಕ ಶರೀರವನ್ನು ಬಿಡುವ ಕೆಲವೇ ವರ್ಷಗಳ ಹಿಂದೆ ನಡೆದ ಘಟನೆ ಇದು. ಒಮ್ಮೆ ಗುರುನಾಥರು ಚಿಕ್ಕಮಗಳೂರಿನಲ್ಲಿದ್ದ ಸಂದರ್ಭ. ಗುರುನಾಥರೊಂದಿಗೆ ಸಲುಗೆಯಿಂದಿದ್ದ ವ್ಯಕ್ತಿಯೊಬ್ಬರು ಬಂದು "ಗುರುನಾಥರೇ, ನಂಗದೆಲ್ಲಾ ಗೊತ್ತಿಲ್ಲ. ಇಂದು ನಂಗೆ ನೀವ್ಯಾರು? ನಿಮ್ಮ ಸ್ಥಿತಿ ಏನು?" ಅಂತ ಹೇಳಲೇಬೇಕೆಂದು ಒತ್ತಾಯಿಸತೊಡಗಿದರು.
ತುಸು ಹೊತ್ತು ಸುಮ್ಮನಿದ್ದ ಗುರುನಾಥರು "ಆಯ್ತು ಬಾ ನನ್ನೊಂದಿಗೆ..... " ಎಂದು ಹೇಳಿ ಆ ವ್ಯಕ್ತಿಯೊಂದಿಗೆ ಏಕಾಂತವಾಗಿದ್ದು, ಹೀಗೆ ಹೇಳಿದರು. ಅದರ ಆಯ್ದ ಭಾಗವನ್ನು ನಾನು ಇಲ್ಲಿ ದಾಖಲಿಸುತ್ತಿದ್ದೇನೆ. "ನಾನು ಯಾರ್ಯಾರ ಮನೆಗೆ ಹೋಗಿ ಬಂದಿರುವೆನೋ, ಅಲ್ಲಿಗೆ ಯಮ ಬರಬೇಕಾದರೂ ನನ್ನ ಅನುಮತಿ ಬೇಕು... ಪಂಚಭೂತಗಳೂ ಇದರ ಅಣತಿ ಇರದೇ ಏನನ್ನೂ ಮಾಡಲು ಅಸಾಧ್ಯ....ನನ್ನನ್ನು ಯಾರು ನಿಜ ಭಕ್ತಿಯಿಂದ ಪ್ರಾರ್ಥಿಸುವರೋ, ಅವರ ಬೇಡಿಕೆ ಏನೇ ಇರಲಿ, ಅದು ಈಡೇರುವುದು. ಆ ಶಕ್ತಿಯನ್ನು ಈಶ್ವರನು ನೀಡಿರುವನು". ಇದು ನನ್ನ ಕೊನೆಯ ಜನ್ಮ".
ಅದೇ ರೀತಿ ದೇಹ ಬಿಡುವ ಕೆಲವೇ ದಿನದ ಮೊದಲು ಗುರುನಾಥರು ಹೇಳಿದ ಮಾತಿನ್ನೂ ನನ್ನ ಮನದಲ್ಲಿದೆ: "ನೋಡ್ರಯ್ಯ, ನಾನು ದೇಹ ಬಿಟ್ಟ ಹನ್ನೊಂದನೆಯ ದಿನ ಉತ್ತರದ ಕಡೆಯಿಂದ ಒಬ್ಬ ಸನ್ಯಾಸಿ ಬರುತ್ತಾರೆ. ಆತ ನಾನ್ಯಾರೆಂದು ಹೇಳುತ್ತಾರೆ. ಆ ನಂತರ ದೇಹ ಗುರುವೆಂದು ನಂಬಿದವರು ಅವರ ಹಿಂದೇನೇ ಹೋಗಬಹುದು. ಹಾಗೆ ಭಾವ ಗುರುವನ್ನು ನಂಬಿದವರು ಇಲ್ಲೇ ಉಳೀತಾರೆ". ಅದು ಹಾಗೆಯೇ ನಡೆಯಿತು. ಉಳಿದವರಾರು? ಹೋದವರಾರು? ಯೋಚಿಸಬೇಕಾದ್ದು ನಿಜ ಭಕ್ತರಾದ ನಮ್ಮೆಲ್ಲರ ಕರ್ತವ್ಯ ತಾನೇ?......... ,,,,,,
ಪರಿಸಮಾಪ್ತಿ
ಗುರುವೆಂಬ ಅನಂತ ಸಾಗರದಲ್ಲಿ ಈಜುವುದೆಂದರೆ ಸುಲಭದ ಮಾತಲ್ಲ. ನಾನು ಈ ಸಾಗರದಲ್ಲಿ ತೇಲುತ್ತಿರುವೆನೆಂಬ ಅಹಂಭಾವವೂ ನನಗೆ ಬೇಡ. ಪೂರ್ವ ಜನ್ಮ ಸುಕೃತವೋ, ಇನ್ಯಾವುದೋ ಕಾರಣವಾಗಿ ನನಗೆ ಗುರುವಿನ ಪದಸೇವೆ ಮಾಡುವ ಅಲ್ಪ ಅವಕಾಶ ದೊರಕಿದ್ದು ನನ್ನ ಮಹಾ ಭಾಗ್ಯವೆಂಬುದು ನನ್ನ ದೃಢ ನಂಬಿಕೆ. ಕಾರಣ ಪದಸೇವೆ ಎಂದರೆ ಗುರು ತೋರಿಸಿದ ದಾರಿಯಲ್ಲಿ ಕಣ್ಣು ಮುಚ್ಚಿ ನಡೆಯುವುದು. ಇಲ್ಲಿ ನಾನು ನಡೆಯಲಿಲ್ಲ. ನಡೆಸಿದವ ನನ್ನೊಡೆಯ. ಹಾಗಾಗಿ, ಕಲ್ಲು ಮುಳ್ಳು ತಪ್ಪು ಒಪ್ಪುಗಳೆಲ್ಲ ಅವನಿಗೆ ಸಮರ್ಪಿತ.
ಗುರುನಾಥರು ದೇಹ ಬಿಡುವ ಮುನ್ನ ಹೇಳಿದ ಒಂದು ಮಾತನ್ನು ದಾಖಲಿಸುತ್ತಾ ಈ ಚರಿತ್ರೆಗೆ ಅಲ್ಪ ವಿರಾಮ ಹೇಳುತ್ತಿದ್ದೇನೆ.
"ಈ ದೇಹ ಬಿಟ್ಟ ನಂತರವೂ ನನ್ನ ಸಮಾಧಿಯಲ್ಲಿನ ಶಕ್ತಿ ಈಗಿನ ಕೆಲವು ಪಟ್ಟು ಹೆಚ್ಚು ಕಣಯ್ಯಾ" ಎಂಬ ಮಾತು ಈಗಲೂ ನನ್ನ ಕಿವಿಗಳಲ್ಲಿ ಮಾರ್ದನಿಸುತ್ತಿವೆ.
ಈ ಚರಿತಾಮೃತದಲ್ಲಿ ಹೇಳುವ ವಿಚಾರ, ಘಟನೆಗಳು ಕೇವಲ ಕೆಲವು ಮಾತ್ರ. ಇನ್ನು ಹೇಳಬೇಕಿದ್ದು, ಹೇಳಲಾರದ ಅನುಭವ ಜನ್ಯ ಘಟನೆಗಳು ಸಾಗರದಷ್ಟಿವೆ. ಒಂದಂತೂ ನನ್ನ ಅನುಭವಜನ್ಯ ಸತ್ಯ. ಅದೆಂದರೆ, ಸದ್ಗುರು ಒಮ್ಮೆ ಕೈ ಹಿಡಿದನೆಂದರೆ ಜನ್ಮಜನ್ಮಾಂತರದಲ್ಲೂ ಜೊತೆಗಿದ್ದು ನಮ್ಮನ್ನು ಭಾವಸಾಗರ ದಾಟಿಸುವನು. ಆ ಕಾರ್ಯದಲ್ಲೇ ಗುರುವಿಗೆ ಮಹದಾನಂದ. ಗುರುವೆಂಬುದು ದೇಹವಲ್ಲ, ಅದೊಂದು ಶುದ್ಧ ಪರಿಶುದ್ಧ ಭಾವ. ಗುರು ದೇಹ ಬಿಟ್ಟನೆಂದರೆ ಹಾಕಿದ ಅಂಗಿ ತೆಗೆದಿರಿಸಿ ಬೇರೆ ಅಂಗಿ ತೊಟ್ಟಂತೆ. ಅಥವಾ ಪರಿಮಿತಿಯನ್ನು ಮೀರಿ ಅನಂತದಲ್ಲಿ ನೆಲೆಗೊಂಡಂತೆ.
ದೇಹ ಬಿಟ್ಟನೆಂದರೆ ನಮ್ಮನ್ನು ಅಗಲಿದರೆಂದು ಅರ್ಥವಲ್ಲ. ಎಲ್ಲರ ಪರಿಶುದ್ಧ ಭಾವಕ್ಕೂ ಸನಿಹವಾದರೆಂದರ್ಥ. ಗುರುವಿನಿಂದ ಮುಟ್ಟಲ್ಪಟ್ಟ ಈ ನಮ್ಮ ದೇಹ,ಬುದ್ಧಿ, ಮನಸ್ಸನ್ನು ಪರಿಶುದ್ಧವಾಗಿರಿಸಿಕೊಳ್ಳುವುದು ದೊಡ್ಡತನ.
"ಶಿಷ್ಯ ಹ್ಯಾಗಿರಬೇಕಪ್ಪ ಅಂದ್ರೆ ಗುರು ಹುಡುಕಿಕೊಂಡು ಬರಬೇಕು. ಆ ನಡವಳಿಕೆಯಲ್ಲೇ ಗುರುವನ್ನು ಕಾಣಬೇಕು" ಎಂಬ ಗುರುನಾಥರ ಮಾತು ಇಲ್ಲಿ ಪ್ರಸ್ತುತವೆನಿಸುತ್ತದೆ. ಆ ಸದ್ಗುರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಿಜವಾದ ಆರಾಧನೆ. ಅದುವೇ ಚೈತ್ಯನ್ಯಾರಾಧನೆ. ಇದುವೇ ಶಿಷ್ಯನೆಂದು ಕರೆದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ಲಕ್ಷಣವಾಗಬೇಕು. ಆಗ ಮಾತ್ರ ಸದ್ಗುರು ಭುವಿಗೆ ಬಂದ ಉದ್ದೇಶ ಸಾರ್ಥಕ. ಆ ಹೊಣೆ ಶಿಷ್ಯರೆನಿಸಿಕೊಂಡ ಪ್ರತಿಯೊಬ್ಬರ ಮೇಲೂ ಇದೆ ಎಂದು ಅರಿತು ನಡೆದರೆ ನಮ್ಮ ಜೀವನ ಪರಿಪೂರ್ಣ.......,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna bhakti poorvaka namanagalu. Poojyare yellarigu nimma aashirvaada haagu rakshe sadaa doreyali yendu beduva nimma obba bhakta. Hari om tatsat.
ReplyDelete